ರೂ.92 ಸಾವಿರ ನಿವ್ವಳ ಲಾಭ, ಲೀಟರಿಗೆ 36 ಪೈಸೆ ಬೋನಸ್, ಶೇ.5 ಡೆವಿಡೆಂಡ್ .
ನಿಡ್ಪಳ್ಳಿ; ತಂಬುತ್ತಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ 2022-23 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಆ.1 ರಂದು ಸಂಘದ ಅಧ್ಯಕ್ಷೆ ಶಶಿಕಲಾ ವೈ ಇವರ ಅಧ್ಯಕ್ಷತೆಯಲ್ಲಿ ಸಂಘದ ಆವರಣದಲ್ಲಿ ನಡೆಯಿತು.
ವರದಿ ಸಾಲಿನಲ್ಲಿ ಸಂಘವು 1,21,282 ಲೀ. ಹಾಲು ಖರೀದಿಸಿ ಸುಮಾರು 3,336 ಲೀ. ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ.ಪಶು ಆಹಾರ, ಲವಣ ಮಿಶ್ರಣ, ನೆಕ್ಕು ಬಿಲ್ಲೆ ಮುಂತಾದವುಗಳ ಮಾರಾಟ ಮತ್ತೀತರ ಮೂಲಗಳಿಂದ ಒಟ್ಟು ವರದಿ ಸಾಲಿನಲ್ಲಿ ರೂ. 1,74,32,000 ವ್ಯವಹಾರ ನಡೆಸಿ 96 ಸಾವಿರ ನಿವ್ವಳ ಲಾಭ ಗಳಿಸಿದ್ದು ಸದಸ್ಯರ ಪ್ರತಿ ಲೀಟರ್ ಹಾಲಿಗೆ 35 ಪೈಸೆ ಬೋನಸ್ ಹಾಗೂ ಶೇ.5 ಡೆವಿಡೆಂಡ್ ನೀಡುವುದೆಂದು ಸಭೆಗೆ ತಿಳಿಸಿದರು.ಸಂಘದಲ್ಲಿ ಒಟ್ಟು 149 ಮಂದಿ ಸದಸ್ಯರಿದ್ದು ಪ್ರಸ್ತುತ ಸಾಲಿನಲ್ಲಿ 90 ಮಂದಿ ಹಾಲು ಪೂರೈಸಿದ್ದಾರೆ.
ಸಂಘದ ಕಾರ್ಯದರ್ಶಿ ತೇಜಸ್ವಿನಿ.ಡಿ ಸಾಮಾನ್ಯ ಸಭೆಯ ನೋಟಿಸನ್ನು ಓದಿ ದಾಖಲಿಸಿ ಹಿಂದಿನ ಸಭೆಯ ನಡವಳಿಕೆಗಳನ್ನು ಓದಿ ಸ್ವೀಕರಿಸಿದರು. ವಿಸ್ತರಣಾಧಿಕಾರಿ ಮಾಲತಿ ಲೆಕ್ಕಪರಿಶೋಧನಾ ವರದಿಯ ಪರಿಶೀಲನೆ,ಮಂಜೂರಾತಿ ಮತ್ತು ಅನುಪಾಲನಾ ವರದಿ ಪರಿಗಣಿಸಿ ನಿವ್ವಳ ಲಾಭ ವಿಲೇವಾರಿ ಮತ್ತು ವಿತರಣೆ, ಮುಂದಿನ ಸಾಲಿನ ಯೋಜನೆಗಳ ಮತ್ತು ಕಾರ್ಯಚಟುವಟಿಕೆಗಳ ಅನುಮೋದನೆ, ಮುಂದಿನ ಸಾಲಿನ ಅಂದಾಜು ಆಯವ್ಯಯ ಪಟ್ಟಿಯನ್ನು ಸಭೆಯ ಮುಂದೆ ವಾಚಿಸಿ ಮಂಜೂರಾತಿ ಪಡೆಯಲಾಯಿತು. ಮುಂದಿನ ಸಾಲಿಗೆ ಅನೀಶ್.ಪಿ.ಎ ಇವರನ್ನು ಲೆಕ್ಕಪರಿಶೋಧಕರಾಗಿ ನೇಮಿಸುವುದು ಮತ್ತು ಸಂಭಾವನೆ ನಿಗದಿ ಪಡಿಸುವ ಕುರಿತು ನಿರ್ಣಯಿಸಲಾಯಿತು.ಸಂಘದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯವಾದ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಬೈಲಾ ತಿದ್ದುಪಡಿ;
ಇದುವರೆಗೆ ನಿಡ್ಪಳ್ಳಿ ಗ್ರಾಮದ ತಂಬುತ್ತಡ್ಕ, ಕತ್ತಲಕಾನ, ನುಳಿಯಾಲು, ಬಂಟಾಜೆ, ಮುಂಡೂರು, ಬೆಟ್ಟಂಪಾಡಿ ಗ್ರಾಮದ ಅಡ್ಯೆತ್ತಿಮಾರು, ಕೂವೆಂಜ, ನಾಕಪ್ಪಾಡಿ ಸಂಘದ ವ್ಯಾಪ್ತಿಗೆ ಇತ್ತು. ಬೆಟ್ಟಂಪಾಡಿ ಗ್ರಾಮದ ಕಕ್ಕೂರಿನಲ್ಲಿ ನೂತನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಸ್ಥಾಪನೆಯಾಗುತ್ತಿದ್ದು ಇನ್ನು ಮುಂದೆ ನಾಕಪ್ಪಾಡಿ ಕಕ್ಕೂರು ಸಂಘದ ವ್ಯಾಪ್ತಿಗೆ ಒಳಪಡುತ್ತದೆ ಎಂದು ವಿಸ್ತರಣಾಧಿಕಾರಿ ಮಾಲತಿ ತಿಳಿಸಿದರು.
ದ.ಕ ಹಾಲು ಒಕ್ಕೂಟದ ಪಶುವೈದ್ಯಾಧಿಕಾರಿ ಡಾ.ಅನುದೀಪ್ ಮಾತನಾಡಿ ಹಸುಗಳ ಪೋಷಣೆ ಮತ್ತು ಬರುವ ವಿವಿಧ ರೋಗ ಲಕ್ಷಣಗಳ ಬಗ್ಗೆ ಮತ್ತು ಅದರ ಹತೋಟಿ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.
ವಿಸ್ತರಣಾಧಿಕಾರಿ ಮಾಲತಿ ಮಾತನಾಡಿ ಸಂಘದ ಸದಸ್ಯರು ಗುಣಮಟ್ಟದ ಹಾಲು ಪೂರೈಸುವುದು ಮತ್ತು ಹೆಚ್ಚು ಹಸುಗಳ ಸಾಕಣೆ ಮಾಡುವುದು ಹಾಗೂ ಹಸು ಸಾಕಾಣಿಕೆಯಲ್ಲಿ ಸದಸ್ಯರು ಅನುಸರಿಸ ಬೇಕಾದ ರೀತಿ ನಿಯಮಗಳ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿ ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ಹೇಳಿದರು. ಸಂಘದ ಅಭಿವೃದ್ಧಿ ಮತ್ತು ಹಾಲಿನ ಉತ್ಪಾದನೆ, ಗುಣಮಟ್ಟ ಹೆಚ್ಚಿಸಲು ಕೆ.ಎಂ.ಎಪ್ ಪಶು ಆಹಾರ,ಲವಣ ಮಿಶ್ರಣವನ್ನು ಜಾಸ್ತಿ ಉಪಯೋಗ ಮಾಡುವ ಬಗ್ಗೆ ತಿಳಿಸಿದರು.ಅಧ್ಯಕ್ಷೆ ಶಶಿಕಲಾ. ವೈ ಮಾತನಾಡಿ ಸದಸ್ಯರು ಉತ್ತಮ ಹಾಲು ಹಾಕಿ ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ವಿನಂತಿಸಿದರು.
ಸಂಘದ ಉಪಾಧ್ಯಕ್ಷೆ ಅರುಣಾ ಎಮ್, ನಿರ್ದೇಶಕಿ ವೇದಾವತಿ, ರಮಾ.ಕೆ, ಚಂದ್ರಾವತಿ, ಬೇಬಿ, ಜಯ, ಶಶಿಕಲಾ. ಕೆ, ವಿನುತಾ, ಜಲಜಾಕ್ಷಿ ಕೆ.ಎ, ಬಾಲಕ್ಕ, ದೇವಕಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ತೇಜಸ್ವಿನಿ.ಡಿ ಪ್ರಾರ್ಥಿಸಿ, ವಂದಿಸಿದರು. ಸಹಾಯಕಿ ಸುಮತಿ.ಎನ್, ಚಂದ್ರಶೇಖರ ಪ್ರಭು ಮತ್ತೀತರರು ಸಹಕರಿಸಿದರು.
ಬಹುಮಾನ ವಿತರಣೆ;
ವರದಿ ಸಾಲಿನಲ್ಲಿ ಅತೀ ಹೆಚ್ಚು ಹಾಲು ಹಾಕಿದ ಹೇಮ ಮಾಲಿನಿ ಕತ್ತಲಕಾನ ಪ್ರಥಮ, ಸಂಘದ ಅಧ್ಯಕ್ಷೆ ಶಶಿಕಲಾ.ವೈ ದ್ವಿತೀಯ ಹಾಗೂ ನಿರ್ದೇಶಕಿ ವೇದಾವತಿ ಕಾನ ತೃತೀಯ ಸ್ಥಾನ ಪಡೆದುಕೊಂಡರು. ಇವರಿಗೆ ಅತಿಥಿಗಳು ಬಹುಮಾನ ನೀಡಿ ಗೌರವಿಸಿದರು. ಅಲ್ಲದೆ ಹಾಲು ಪೂರೈಸಿದ ಎಲ್ಲಾ ಸದಸ್ಯರಿಗೂ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.