ಸಾವಿರಾರು ಸಂಖ್ಯೆಯಲ್ಲಿ ಸೇರಿದ ಸಾರ್ವಜನಿಕರಿಂದ ಕಡಬದಲ್ಲಿ ಮೌನ ಮೆರವಣಿಗೆ
ಕಡಬ: ಕಳೆದ 11 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಕಾಲೇಜು ವಿದ್ಯಾರ್ಥಿನಿ ಕು| ಸೌಜನ್ಯಳನ್ನು ಅತ್ಯಾಚಾರವೆಸಗಿ ಬರ್ಬರವಾಗಿ ಹತ್ಯೆಗೈದ ಕೊಲೆ ಪಾತಕಿಗಳನ್ನು ಪತ್ತೆ ಹಚ್ಚಿ ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ನೇತೃತ್ವದಲ್ಲಿ ವಿವಿಧ ಸಮುದಾಯ, ಸಂಸ್ಥೆಗಳ ಕೂಡುವಿಕೆಯಿಂದ ನಡೆದ ಮೌನ ಮೆರವಣಿಗೆ ಹಾಗೂ ಕಡಬ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ ಘಟನೆ ಆ.2ರಂದು ನಡೆಯಿತು.
ಕಡಬ ಶ್ರೀಕಂಠಸ್ವಾಮಿ ಶ್ರೀ ಮಹಾಗಣಪತಿ ಸ್ವಾಮಿ ದೇವಸ್ಥಾನದಿಂದ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಮೌನ ಮೆರವಣಿಗೆ ಯ ಮೂಲಕ ಕಡಬ ತಾಲೂಕು ಕಛೇರಿಗೆ ಆಗಮಿಸಿದರು. ಕಡಬ ತಾಲೂಕು ಕಛೇರಿಯಲ್ಲಿ ಮನವಿ ಸಲ್ಲಿಸುವುದಕ್ಕೂ ಮೊದಲು ಮಾತನಾಡಿದ ಪ್ರಮುಖರು, ಕು| ಸೌಜನ್ಯಳನ್ನು ಅತ್ಯಂತ ಹೀನಾಯವಾಗಿ, ಬರ್ಬರವಾಗಿ ಕೊಲೆಗೈದ ಪಾತಕಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸುತ್ತೇವೆ. 11 ವರ್ಷಗಳ ಕಾಲ ನಿರಾಪರಾಧಿ ಸಂತೋಷ್ ರಾವ್ ಅವರನ್ನು ಅಪರಾಧಿಯಾಗಿ ಬಿಂಬಿಸಿ ಅವರ ಜೀವನವನ್ನು ಹಾಳು ಮಾಡಲಾಗಿದೆ. ಈ ಕೊಲೆಯ ರಕ್ಷಣೆಯಲ್ಲಿ ಎಷ್ಟೆ ಪ್ರಭಾವಿಗಳಿದ್ದರು ಅವರಿಗೆ ಶಿಕ್ಷೆ ನೀಡಬೇಕು, ದೈವ ದೇವರ ಪರಶುರಾಮ ಸೃಷ್ಟಿಯ ಈ ಪುಣ್ಯ ತುಳುನಾಡಿನಲ್ಲಿ ಇಂತಹ ಕೃತ್ಯ ನಡೆದಿರುವುದನ್ನು ಯಾರು ಸಹಿಸುವುದಿಲ್ಲ, ಕು| ಸೌಜನ್ಯ ಪ್ರಕರಣವನ್ನು ತನಿಖೆ ನಡೆಸಿದ ತನಿಖಾಧಿಕಾರಿಗಳನ್ನೆ ಮರು ತನಿಖೆ ಮಾಡಿದರೆ ಮಾತ್ರ ಸತ್ಯ ಹೊರಬೀಳಬಹುದು. ಒಕ್ಕಲಿಗ ಗೌಡ ಸೇವಾ ಸಂಘದ ನೇತೃತ್ವದಲ್ಲಿ ಸಮಾಜದ ಎಲ್ಲಾ ಬಾಂಧವರ ಜತೆಗೂಡಿ ನಡೆಸಿದ ಮೌನ ಮೆರವಣಿಗೆ ಇಂದು ಸಾಂಕೇತಿಕವಾಗಿ ನಡೆದಿದೆ. ಈ ಮೆರವಣಿಗೆ ಯಾವುದೇ ಪೂರ್ವ ತಯಾರಿ ನಡೆಸಿಲ್ಲ, ಕೇವಲ ವಾಟ್ಸಾಪ್ ಸಂದೇಶಕ್ಕೆ ಸಾವಿರಾರು ಜನ ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಸೌಜನ್ಯಳ ನಿಜವಾದ ಕೊಲೆ ಆರೋಪಿಗಳನ್ನು ಪತ್ತೆಹಚ್ಚದಿದ್ದರೆ ಉಗ್ರ ರೂಪದಲ್ಲಿ ಪ್ರತಿಭಟನೆ ನಡೆಸಲಾಗುವುದು ಪ್ರಮುಖರು ಎಚ್ಚರಿಸಿದರು. ಕೊನೆಗೆ ಕಡಬ ಉಪ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಒಕ್ಕಲಿಗ ಗೌಡ ಸೇವಾ ಸಂಘದ ನೇತೃತ್ವದಲ್ಲಿ ನಡೆದ ಮೌನ ಮೆರವಣಿಗೆಯಲ್ಲಿ ಸಮಾಜದ ವಿವಿಧ ವರ್ಗದ ಬಂಧುಗಳು, ಪ್ರಮುಖರು, ಮಹಿಳೆಯರು ಭಾಗವಹಿಸಿದ್ದರು. ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು, ಕಡಬ ಜಿ.ಪಂ. ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಮಾಜಿ ಜಿ.ಪಂ. ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಕಾಂಗ್ರೆಸ್ ಮುಖಂಡ ಬಾಲಕೃಷ್ಣ ಬಳ್ಳೇರಿ ಮಾತನಾಡಿದರು. ಕಡಬ ಉಪ ತಹಸೀಲ್ದಾರ್ ಗೋಪಾಲ್ ಕೆ. ಅವರು ಮನವಿ ಸ್ವೀಕರಿಸಿದರು.