ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಿಂದ ಪಂಜ ಮೂಲಕ ಪುತ್ತೂರು ಮಂಜೇಶ್ವರಕ್ಕೆ ಸಂಪರ್ಕಿಸುವ ಹೆದ್ದಾರಿ ಸಂಪರ್ಕ ಕಡಿತದ ಭೀತಿ ಎದುರಿಸುತ್ತಿದೆ. ರಸ್ತೆಯ ಸಮೀಪವೇ ಕುಮಾರಧಾರ ನದಿ ಬಳಿಯಲ್ಲಿ ಮಣ್ಣು ಸಡಿಲಗೊಂಡು ಯಾವುದೇ ಕ್ಷಣದಲ್ಲಿ ಕುಸಿದು ಕುಮಾರಧಾರ ನದಿ ನೀರಿನ ಪಾಲಾಗುವ ಸಾಧ್ಯತೆ ಇದೆ. ಕಳೆದ ತಿಂಗಳು ಸುರಿದ ಭಾರೀ ಮಳೆಗೆ ಈ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು.ಈ ರಸ್ತೆಯ ಕುಸಿತವಾದರೆ ಅಸುಪಾಸಿನ ಮನೆಗಳಿಗೂ ಹಾನಿಯಾಗುವ ಸಾಧ್ಯತೆಗಳಿದೆ. ಇದೇ ಭಾಗದಲ್ಲಿ ಕಳೆದ ವರ್ಷ ಮಳೆಗಾಲದಲ್ಲಿ ಮನೆ ಕುಸಿದು ಎರಡು ಪುಟ್ಟಮಕ್ಕಳು ಸಾವನ್ನಪ್ಪಿದ ದುರ್ಘಟನೆ ನಡೆದಿತ್ತು.
ಸುಬ್ರಹ್ಮಣ್ಯ -ಪುತ್ತೂರು ಮಂಜೇಶ್ವರ ಸಂಪರ್ಕಿಸುವ ರಸ್ತೆಯಲ್ಲಿ ಕುಮಾರಧಾರ ಬಳಿ ಸೇತುವೆ ಇದ್ದು ಈ ಸೇತುವೆಯು ವರ್ಷಂಪ್ರತಿ ಹಲವಾರು ಬಾರಿ ಮುಳುಗಡೆಯಾಗಿ, ಪುತ್ತೂರು,ಬಳ್ಪ, ಪಂಜ,ನಿಂತಿಕಲ್ಲು,ಬೆಳ್ಳಾರೆ ಭಾಗದಿಂದ ಬರುವ ಹಲವಾರು ವಿದ್ಯಾರ್ಥಿಗಳಿಗೆ, ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತದೆ.
ಈ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಸುಳ್ಯದ ಶಾಸಕರು ಗಮನಹರಿಸಿ ಸೇತುವೆ ಹಾಗೂ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಬೇಕು ಹಾಗೂ ಭೂ ಕುಸಿತಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು.ಇಲ್ಲದಿದ್ದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಪುತ್ತೂರು ಮಂಜೇಶ್ವರ ಕರ್ನಾಟಕ ರಾಜ್ಯ ಹೆದ್ದಾರಿ ಸಂಪರ್ಕ ರಸ್ತೆಯು ಕಡಿತ ಗೊಳ್ಳುವ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.