ಪುತ್ತೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ದಟ್ಟನೆಯ ನಡುವೆ ಶಾಲಾ ಕಾಲೇಜು ವಿದ್ಯಾರ್ಥಿಗಳು ರಸ್ತೆ ಕ್ರಾಸ್ ಮಾಡಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಪುತ್ತೂರು ಕುಂಬ್ರ ಬೆಳ್ಳಾರೆ ರಾಜ್ಯ ಹೆದ್ದಾರಿಯಲ್ಲಿ ಬರುವ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳು ಪ್ರತಿ ನಿತ್ಯ ಭಯದಲ್ಲೇ ರಸ್ತೆ ದಾಟಬೇಕಾಗಿದೆ. ಹೌದು…ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರಿನಲ್ಲಿ ಸರಿ ಸುಮಾರು 852 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ ಬಹುಪಾಲು ವಿದ್ಯಾರ್ಥಿಗಳು ಬಸ್ಸುಗಳಲ್ಲಿ ಬರುತ್ತಿದ್ದಾರೆ.ಬೆಳಿಗ್ಗೆ ಮತ್ತು ಸಂಜೆಯ ಹೊತ್ತಲ್ಲಿ ಮಕ್ಕಳಿಗೆ ರಸ್ತೆ ದಾಟುವುದೇ ಒಂದು ಸಾಹಸವಾಗಿದೆ. ಪ್ರತಿ ನಿತ್ಯ ಈ ರಸ್ತೆಯಲ್ಲಿ ಸಿಕ್ಕಾಪಟ್ಟೆ ವಾಹನಗಳು ಸಂಚರಿಸುತ್ತಿರುವುದರಿಂದ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕೆಯ್ಯೂರು ಶಾಲಾ ಬಳಿ ರಸ್ತೆಗೆ ಬ್ಯಾರಿಕೇಡ್ ಅಳವಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬ್ಯಾರಿಕೇಡ್ ಕೊಡುಗೆ ಬೇಕಾಗಿದೆ
ಪ್ರತಿ ನಿತ್ಯ ಮಾಡಾವು, ತಿಂಗಳಾಡಿ ಇತ್ಯಾದಿ ಭಾಗಗಳಿಂದ ಕೆಪಿಎಸ್‌ಗೆ ಮಕ್ಕಳು ಬರುತ್ತಿದ್ದು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಬ್ಯಾರಿಕೇಡ್ ಅಳವಡಿಸುವ ಅಗತ್ಯವಿದೆ. ಆದರೆ ಶಾಲಾ ವತಿಯಿಂದ ಬ್ಯಾರಿಕೇಡ್ ಅಳವಡಿಸುವುದು ಅಸಾಧ್ಯ. ಆದ್ದರಿಂದ ಯಾವುದಾದರೂ ಸಂಘ ಸಂಸ್ಥೆ, ಟ್ರಸ್ಟ್ ಅಥವಾ ದಾನಿಗಳಿಂದ ಬ್ಯಾರಿಕೇಡ್ ಕೊಡುಗೆ ಬೇಕಾಗಿದೆ. ಮಕ್ಕಳ ಮೇಲಿನ ಕಾಳಜಿ ಮತ್ತು ಸುರಕ್ಷತೆಯ ದೃಷ್ಟಿಯಿಂದ ಬ್ಯಾರಿಕೇಡ್ ಅನ್ನು ಕೊಡುಗೆಯಾಗಿ ನೀಡುವವರು ಶಾಲಾ ಮುಖ್ಯಗುರುಗಳನ್ನು ಸಂಪರ್ಕಿಸಬಹುದಾಗಿದೆ.