ಗ್ರಾ.ಪಂ.ಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ದಿನಾಂಕ ನಿಗದಿ

0

ಆ.11ರಿಂದ ಆ.19ರ ತನಕ ವಿವಿಧ ದಿನಗಳಲ್ಲಿ ಚುನಾವಣೆ

ಪುತ್ತೂರು:ತಾಲೂಕಿನ 22 ಗ್ರಾಮ ಪಂಚಾಯತ್‌ಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಈಗಾಗಲೇ ಮೀಸಲಾತಿ ನಿಗದಿಯಾಗಿದ್ದು ಆಯ್ಕೆಗೆ ಚುನಾವಣಾಧಿಕಾರಿಗಳ ನೇಮಕ ಪೂರ್ಣಗೊಂಡು ಇದೀಗ ಚುನಾವಣೆ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.


ಚುನಾವಣೆ ನಡೆಸಲು ಕರ್ನಾಟಕ ಪಂಚಾಯತ್‌ರಾಜ್ ನಿಯಮ 1995ರ ನಿಯಮ 3ರಂತೆ ತಹಶೀಲ್ದಾರ್ ದರ್ಜೆಗಿಂತ ಕಡಿಮೆಯಿಲ್ಲದ ಅಧಿಕಾರಿಗಳನ್ನು ನೇಮಕಗೊಳಿಸಿ ಜಿಲ್ಲಾಧಿಕಾರಿಯವರು ಆದೇಶಿಸಿದ್ದರು.ನೇಮಕಗೊಳಿಸಲಾದ ಅಧಿಕಾರಿಗಳು ಆದೇಶ ಪ್ರತಿ ತಲುಪಿದ ಕೂಡಲೇ ಸೂಚಿಸಲಾಗಿರುವ ಗ್ರಾಮ ಪಂಚಾಯತ್‌ಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯನ್ನು ನಡೆಸಲು ದಿನಾಂಕವನ್ನು ನಿಗದಿಪಡಿಸಿ ಸದಸ್ಯರುಗಳಿಗೆ ಸಾಕಷ್ಟು ಕಾಲಾವಕಾಶ ನೀಡಿ ಸಭೆಯ ತಿಳುವಳಿಕೆ ನೋಟೀಸು ಜಾರಿಮಾಡಿ ಚುನಾವಣೆಯನ್ನು ನಡೆಸಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಿ ತಹಶೀಲ್ದಾರ್ ಮೂಲಕ ವರದಿ ಸಲ್ಲಿಸುವಂತೆ ಆದೇಶಿಸಲಾಗಿತ್ತು.ಇದೀಗ ಆಯ್ಕೆಗೆ ದಿನಾಂಕ ನಿಗದಿ ಪಡಿಸಲಾಗಿದೆ.


ಆರ್ಯಾಪು, 34-ನೆಕ್ಕಿಲಾಡಿ, ನರಿಮೊಗರು ಗ್ರಾ.ಪಂ.ಗಳಿಗೆ ಆ.11ರಂದು, ಅರಿಯಡ್ಕ, ಕುಡಿಪ್ಪಾಡಿ, ಒಳಮೊಗ್ರು, ಬೆಟ್ಟಂಪಾಡಿ ಹಾಗೂ ನಿಡ್ಪಳ್ಳಿ ಗ್ರಾ.ಪಂ.ಗಳಿಗೆ ಆ.14ರಂದು,ಬಲ್ನಾಡು, ಉಪ್ಪಿನಂಗಡಿ, ಕಬಕ, ಕೆಯ್ಯೂರು, ಪಾಣಾಜೆ ಗ್ರಾ.ಪಂ.ಗಳಿಗೆ ಆ.16ರಂದು,ಮುಂಡೂರು, ಕೋಡಿಂಬಾಡಿ, ಬನ್ನೂರು ಗ್ರಾ.ಪಂ.ಗಳಿಗೆ ಆ.17ರಂದು, ಕೊಳ್ತಿಗೆ, ಹಿರೇಬಂಡಾಡಿ, ಕೆದಂಬಾಡಿ ಗ್ರಾ.ಪಂ.ಗಳಿಗೆ ಆ.೧೮ರಂದು, ನೆಟ್ಟಣಿಗೆ ಮುಡ್ನೂರು, ಬಜತ್ತೂರು, ಬಡಗನ್ನೂರು ಗ್ರಾ.ಪಂಗಳಲ್ಲಿ ಆ.19ರಂದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗಳು ನಡೆಯಲಿದೆ. ನಿಡ್ಪಳ್ಳಿ ಗ್ರಾ.ಪಂ ಹೊರತು ಪಡಿಸಿ ಉಳಿದಂತೆ ಎಲ್ಲಾ ಗ್ರಾ.ಪಂಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಆಯ್ಕೆ ಪ್ರಕ್ರಿಯೆಗಳು ಪ್ರಾರಂಭಗೊಳ್ಳಲಿದೆ.ಬೆಳಿಗ್ಗೆ 10 ಗಂಟೆಯಿಂದ 12ರ ತನಕ ನಾಮಪತ್ರ ಸಲ್ಲಿಕೆ, 12ರಿಂದ 12.15ರ ತನಕ ನಾಮಪತ್ರ ಪರಿಶೀಲನೆ ನಡೆಯಲಿದೆ.12.15-02.30ರ ತನಕ ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ಅವಕಾಶವಿರುತ್ತದೆ.12.30ರಿಂದ ಸದಸ್ಯರ ಸಭೆ ನಡೆಯಲಿದ್ದು ಯಾವುದೇ ಸ್ಥಾನಕ್ಕೂ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ ಆ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಆ.14ರಂದು ನಿಡ್ಪಳ್ಳಿ ಗ್ರಾ.ಪಂನಲ್ಲಿ ಅಪರಾಹ್ನ 2.30ರಿಂದ ಆಯ್ಕೆ ಪ್ರಕ್ರಿಯೆಗಳು ಪ್ರಾರಂಭಗೊಳ್ಳಲಿದೆ. 2.30-4.30 ನಾಮಪತ್ರ ಸಲ್ಲಿಕೆ, 4.30-4.45ರ ತನಕ ನಾಮಪತ್ರ ಪರಿಶೀಲನೆ ನಡೆದು, 4.45-5.೦೦ರ ತನಕ ನಾಮಪತ್ರ ಹಿಂಪಡೆಯಲು ಅಂತಿಮ ಅವಧಿಯಿರುತ್ತದೆ.5 ಗಂಟೆಯಿಂದ ಸದಸ್ಯರ ಸಭೆ ನಡೆಯಲಿದ್ದು ಯಾವುದೇ ಸ್ಥಾನಕ್ಕೂ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ ಆ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

LEAVE A REPLY

Please enter your comment!
Please enter your name here