ಕಡಬ: ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಕದಡುವ ರೀತಿಯಲ್ಲಿ ಹೊಡೆದಾಟ ನಡೆಸುತ್ತಿದ್ದ ಆರೋಪದಲ್ಲಿ ಕುಂತೂರಿನ ಇಬ್ಬರು ಯುವಕರ ವಿರುದ್ಧ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜುನೈದ್(23ವ.)ಹಾಗೂ ನಿತಿನ್(24ವ.)ಎಂಬವರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ.7ರಂದು ಇವರಿಬ್ಬರು ಕುಂತೂರು ಮಸೀದಿಯ ಬಳಿ ಸಾರ್ವಜನಿಕ ರಸ್ತೆ ಬದಿಯಲ್ಲಿ ಒಬ್ಬರಿಗೊಬ್ಬರು ಕೈ ಮಿಲಾಯಿಸಿಕೊಂಡು ಸಾರ್ವಜನಿಕರಿಗೆ ಭಯ ಉಂಟು ಮಾಡುವ ರೀತಿಯಲ್ಲಿ ವರ್ತಿಸುತ್ತಿರುವುದನ್ನು ರೌಂಡ್ಸ್ ಕರ್ತವ್ಯದಲ್ಲಿದ್ದ ಕಡಬ ಠಾಣೆ ಎಸ್.ಐ.ಅವರು ಗಮನಿಸಿ ಜೀಪು ನಿಲ್ಲಿಸಿ ವಿಚಾರಿಸುತ್ತಿರುವಾಗಲೇ ಅವರಿಬ್ಬರು ಮತ್ತೆ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿ ಹೊಡೆದಾಟ, ತಲ್ಲಾಟಕ್ಕೆ ಮುಂದಾಗಿದ್ದರು. ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಪ್ರತಿಷ್ಠೆಯಿಂದ ಕೈ-ಕೈ ಮಿಲಾಯಿಸಿ ಹೊಡೆದಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಕದಡುವ ರೀತಿಯಲ್ಲಿ ಹೊಡೆದಾಟ ಮಾಡಿದ ಆರೋಪದಲ್ಲಿ ಇಬ್ಬರ ವಿರುದ್ಧವೂ ಕಡಬ ಪೊಲೀಸರು ಕಲಂ: 160 ಐಪಿಸಿ-1860ಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.