ಕಾಂಚನ ಶ್ರೀ ಲಕ್ಷ್ಮೀನಾರಾಯಣ ಹಿ.ಪ್ರಾ.ಶಾಲೆಯಲ್ಲಿ ಪೋಷಕರ ಸಭೆ

0

ನೆಲ್ಯಾಡಿ: ಶ್ರೀ ಲಕ್ಷ್ಮಿ ನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಾಂಚನ ಇಲ್ಲಿ ಆ.7ರಂದು ಪೋಷಕರ ಸಭೆ ನಡೆಯಿತು.


ಸಂಪನ್ಮೂಲ ವ್ಯಕ್ತಿ ಶ್ರೀ ರಾಮಕುಂಜೇಶ್ವರ ಕ.ಮಾ.ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್‌ರವರು ಮಾತನಾಡಿ, ವಿದ್ಯಾರ್ಥಿಗಳೊಂದಿಗೆ ಪೋಷಕರು ಬೆರೆಯಬೇಕು. ವಿದ್ಯಾರ್ಥಿಗಳ ಆಟದಲ್ಲಿ ನಾವೂ ಭಾಗಿಯಾಗಿ ಆನಂದಿಸಬೇಕು. ವಿದ್ಯಾರ್ಥಿಗಳು ಬಹಳ ಬುದ್ಧಿವಂತರು. ಅವರ ವ್ಯಕ್ತಿತ್ವ ವಿಕಸಿತ ವಾಗುವಲ್ಲಿ ಪೋಷಕರು ಸಹಕಾರ ನೀಡಬೇಕು ಎಂದು ಹೇಳಿದರು. ಕಾಂಚನ ಪ್ರೌಢಶಾಲಾ ಮುಖ್ಯಗುರು ರಮೇಶ್ ಮಯ್ಯರವರು ಮಾತನಾಡಿ, ಪ್ರೌಢಶಾಲೆಯಲ್ಲಿ ಬೇರೆ ಬೇರೆ ಪಠ್ಯೇತರ ಚಟುವಟಿಕೆಗಳು ನಡೆಯುತ್ತಿದ್ದು ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಶಿಕ್ಷಕರ ಬಗ್ಗೆ ಭಯ ಬೇಕು. ಹೆದರಿಕೆ ಇರಬಾರದೆಂದು. ವಿಷಯವಾರು ನುರಿತ ಶಿಕ್ಷಕರ ತಂಡ ನಮ್ಮಲ್ಲಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಸಹಕಾರ ಅಗತ್ಯ ಎಂದು ಹೇಳಿದರು. ಪೋಷಕ ಮೋಹನ್‌ಚಂದ್ರ ಪದಕ ಮಾತನಾಡಿ, ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಇದಕ್ಕೆ ಮುಖ್ಯಗುರು ಹಾಗೂ ನುರಿತ ಶಿಕ್ಷಕರೆಲ್ಲರೂ ಕಾರಣರಾಗಿದ್ದಾರೆ. ಮುಖ್ಯ ಶಿಕ್ಷಕರು ಪ್ರತಿ ಮಗುವಿನ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಸುಪ್ರೀತಾ ಕುಳ್ಳಾಜೆಯವರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಸೌಲಭ್ಯಗಳು ಸಿಗುತ್ತವೆ. ಅದರ ಸದುಪಯೋಗವನ್ನು ನಮ್ಮ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಹೇಳಿದರು. ಶಾಲಾ ಮುಖ್ಯಗುರು ಲಕ್ಷ್ಮಣಗೌಡರವರು ಶಾಲಾ ಸೌಲಭ್ಯಗಳು, ಸಂಸ್ಥೆಯಿಂದ ಸಿಗುವ ಸೌಲಭ್ಯ, ಇಲಾಖೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಕಲಿಕೆಯಲ್ಲಿ ಪೋಷಕರು ಸಹಕಾರ ನೀಡಬೇಕೆಂದು ಹೇಳಿದರು.


ಸನ್ಮಾನ:
ಕಳೆದ ವರ್ಷ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಚರಣ್, ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಜ್ಞಾನೇಶ್ ಹಾಗೂ ದಾನಿ ಯಾದವ ನೆಕ್ಕರೆಯವರಿಗೆ ಶಾಲಾ ವತಿಯಿಂದ ಫಲ ಪುಷ್ಪ, ಹೂ, ಹಾರ, ಸ್ಮರಣಿಕೆ ಹಾಗೂ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರ ಪರಿಚಯವನ್ನು ಶಿಕ್ಷಕಿಯರಾದ ಯಕ್ಷಿತ, ಮಹಾಲಕ್ಷ್ಮೀ ಹಾಗೂ ಭಾಗ್ಯಲಕ್ಷ್ಮೀ ವಾಚಿಸಿದರು. ಸನ್ಮಾನಿತರಾದ ಜ್ಞಾನೇಶ್‌ರವರು ಮಾತನಾಡಿ ಶಾಲೆಯ ದಾಖಲಾತಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಪರಿಸರ ಗೀತೆ, ರಸಪ್ರಶ್ನೆ ಸೇರಿದಂತೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ವಿಜೇತರ ಪಟ್ಟಿಯನ್ನು ಶಿಕ್ಷಕಿ ಹೇಮಾವತಿ ವಾಚಿಸಿದರು. ಈ ಸಂದರ್ಭದಲ್ಲಿ ಶಾಲೆಯ ವಿವಿಧ ಸಂಘಗಳ ಉದ್ಘಾಟನೆ ನಡೆಯಿತು.


ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಪ್ರಸಾದ್, ಕಾಂಚನ ವಿಕ್ರಂ ಯುವಕ ಮಂಡಲದ ಅಧ್ಯಕ್ಷ ರಾಮಚಂದ್ರ ಕಾಂಚನ, ಬಜತ್ತೂರು ಗ್ರಾ.ಪಂ.ಉಪಾಧ್ಯಕ್ಷೆ ಸ್ಮಿತಾ, ಸದಸ್ಯ ಗಂಗಾಧರ ಗೌಡ ಮೇಲೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಸುಮಾ ಡಿ.ನಿರೂಪಿಸಿದರು. ಶಿಕ್ಷಕಿ ವಂದನಾ ಸ್ವಾಗತಿಸಿ, ಕಂಪ್ಯೂಟರ್ ಶಿಕ್ಷಕಿ ಸೌಮ್ಯ ವಂದಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಲಘು ಉಪಹಾರ ಮತ್ತು ಪೋಷಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಇಬ್ಬರು ವಿದ್ಯಾರ್ಥಿಗಳ ದತ್ತು ಸ್ವೀಕಾರ:
ಕಾಂಚನ ವಿಕ್ರಂ ಯುವಕ ಮಂಡಲದ ವತಿಯಿಂದ ಶಾಲೆಯ ಇಬ್ಬರು ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡ ಅವರ ಶೈಕ್ಷಣಿಕ ವರ್ಷದ ಖರ್ಚನ್ನು ಯುವಕ ಮಂಡಲದ ಅಧ್ಯಕ್ಷ ರಾಮಚಂದ್ರರವರು ವಿದ್ಯಾರ್ಥಿಗಳ ಪೋಷಕರಿಗೆ ಹಸ್ತಾಂತರಿಸಿದರು. ಯಾದವ ನೆಕ್ಕರೆ ಅವರು ಕೊಡುಗೆಯಾಗಿ ನೀಡಿದ್ದ 40 ಊಟದ ತಟ್ಟೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಶಾಲಾ ಆಡಳಿತ ಮಂಡಳಿ ವತಿಯಿಂದ ನೀಡಲಾದ ಉಚಿತ ನೋಟ್ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

LEAVE A REPLY

Please enter your comment!
Please enter your name here