ಬೆಳ್ಳಾರೆ: ಬೆಳ್ಳಾರೆ ಗ್ರಾ.ಪಂ.ನ ನೂತನ ಅಧ್ಯಕ್ಷರಾಗಿ ನಮಿತಾ ಎಲ್. ರೈ, ಉಪಾಧ್ಯಕ್ಷರಾಗಿ ವೀಣಾ ಮೂಡಾಯಿತೋಟ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷತೆಗೆ ಸಾಮಾನ್ಯ ಮಹಿಳೆ ,ಉಪಾಧ್ಯಕ್ಷತೆಗೆ ಪ.ಜಾ.ಮಹಿಳೆಗೆ ಮೀಸಲಾತಿ ನಿಗದಿಯಾಗಿತ್ತು.
ಅಧ್ಯಕ್ಷತೆಗೆ ನಮಿತಾ ಎಲ್ ರೈ ಅವರ ನಾಮಪತ್ರಕ್ಕೆ ಹಾಲಿ ಅಧ್ಯಕ್ಷ ಚಂದ್ರಶೇಖರ ಪನ್ನೆ ಸೂಚಕರಾಗಿದ್ದರೆ, ಉಪಾಧ್ಯಕ್ಷ ಸ್ಥಾನದ ವೀಣಾ ಮೂಡಾಯಿತೋಟ ಅವರ ನಾಮಪತ್ರಕ್ಕೆ ಹಾಲಿ ಉಪಾಧ್ಯಕ್ಷೆ ಗೌರಿ ನೆಟ್ಟಾರು ಸೂಚಕರಾಗಿದ್ದರು. ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಡಾ. ರಾಮಚಂದ್ರ ಅವರು ಅವಿರೋಧ ಆಯ್ಕೆಯ ಘೋಷಣೆ ಮಾಡಿದರು.
ಆಯ್ಕೆ ಪ್ರಕ್ರಿಯೆಯ ಬಳಿಕ ಅಧ್ಯಕ್ಷ ಚಂದ್ರಶೇಖರ ಪನ್ನೆ, ಉಪಾಧ್ಯಕ್ಷೆ ಗೌರಿ ನೆಟ್ಟಾರು ,ವಿಪಕ್ಷ ಸದಸ್ಯರಾದ ಅನಿಲ್ ರೈ ಚಾವಡಿಬಾಗಿಲು,ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಬಿಜೆಪಿ ಮುಖಂಡರಾದ ರಾಮಕೃಷ್ಣ ಭಟ್ ಕುರುಂಬುಡೇಲು ಹಾಗೂ ಶ್ರೀನಾಥ್ ರೈ ಬಾಳಿಲ ಅವರು ನೂತನ ಅಧ್ಯಕ್ಷ, ಉಪಾಧ್ಯಕ್ಷರಾದ ನಮಿತಾ ರೈ ,ವೀಣಾ ಮೂಡಯಿತೋಟ ಅವರನ್ನು ಅಭಿನಂದಿಸಿ ಮಾತನಾಡಿದರು.
ಗ್ರಾ.ಪಂ. ಸದಸ್ಯರಾದ ಎನ್.ಎಸ್.ಡಿ. ವಿಠಲದಾಸ್, ಭವ್ಯ ರವಿಕುಮಾರ್, ಜಯಶ್ರೀ ಪಡ್ಪು, ಶ್ವೇತಾ ನೆಟ್ಟಾರು, ನಸೀಮಾ ಪಳ್ಳಿಮಜಲು, ದಿನೇಶ್ಚಂದ್ರ ಹೆಗ್ಡೆ ಉಪಸ್ಥಿತರಿದ್ದರು. ಗ್ರಾ.ಪಂ.ಪ್ರಭಾರ ಕಾರ್ಯದರ್ಶಿ ತಿರುಮಲೇಶ್ವರ ಹಾಗೂ ಲೆಕ್ಕ ಸಹಾಯಕಿ ಸುಶೀಲಾ ಅವರು ಆಯ್ಕೆ ಪ್ರಕ್ರಿಯೆಯಲ್ಲಿ ಸಹಕರಿಸಿದರು.