ಯಾರಾಗಲಿದ್ದಾರೆ ಮುಂಡೂರು ಗ್ರಾ.ಪಂ ಅಧ್ಯಕ್ಷ..?

0

ಬಾಲಕೃಷ್ಣ ಪೂಜಾರಿ, ಚಂದ್ರಶೇಖರ್ ಎನ್‌ಎಸ್‌ಡಿ ಹೆಸರು ರೇಸ್‌ನಲ್ಲಿ
ಉಪಾಧ್ಯಕ್ಷ ಹುದ್ದೆಗೆ ಪುತ್ತಿಲ ಪರಿವಾರದ ಯಶೋದ ಆಯ್ಕೆ ಬಹುತೇಕ ಖಚಿತ

  • ವರದಿ: ಯೂಸುಫ್ ರೆಂಜಲಾಡಿ


ಪುತ್ತೂರು: ಗ್ರಾಮ ಪಂಚಾಯತ್‌ಗಳ ಎರಡನೇ ಅವಧಿಗೆ ಮೀಸಲಾತಿ ಪ್ರಕಟಗೊಂಡಿದ್ದು ಮುಂಡೂರು ಗ್ರಾ.ಪಂಗೆ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆ ಮೀಸಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಯಶೋಧ ಅಜಲಾಡಿ ಮಾತ್ರ ಇರುವುದರಿಂದ ಅವರೇ ಉಪಾಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತಗೊಂಡಿದೆ. ಆದರೆ ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎನ್ನುವುದು ಸದ್ಯದ ಪ್ರಶ್ನೆ ಮತ್ತು ಕುತೂಹಲ. ಆ.16ರಂದು ಅಧ್ಯಕ್ಷ/ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಮೊದಲ ಅವಧಿಗೆ ಹಿಂದುಳಿದ ವರ್ಗ ಬಿ ಮಹಿಳಾ ಮೀಸಲಾತಿಯಲ್ಲಿ ಪುಷ್ಪಾ ಎನ್ ಅಧ್ಯಕ್ಷರಾಗಿ ಮತ್ತು ಪ.ಜಾತಿ ಮಹಿಳಾ ಮೀಸಲಾತಿಯಲ್ಲಿ ಪ್ರೇಮಾ ಎಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.


ಅಧ್ಯಕ್ಷ ಕುರ್ಚಿ ಯಾರಿಗೆ..?:
ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮೀಸಲು ಬಂದ ಕಾರಣ ಕೆಲವರ ಹೆಸರು ಮುನ್ನಲೆಗೆ ಬಂದಿದೆ. ಮುಂಡೂರು ಗ್ರಾ.ಪಂನಲ್ಲಿ ಸದ್ಯ ಬಿಜೆಪಿ ಬೆಂಬಲಿತರು ಬಹುಮತ ಹೊಂದಿದ್ದು ಒಟ್ಟು ಇರುವ 20 ಸದಸ್ಯರ ಪೈಕಿ 12 ಮಂದಿ ಸದಸ್ಯರು ಬಿಜೆಪಿ ಬೆಂಬಲಿತರು. ಹಾಗಾಗಿ ಅಧ್ಯಕ್ಷ ಗದ್ದುಗೆ ಏನಿದ್ದರೂ ಅದು ಬಿಜೆಪಿ ಬೆಂಬಲಿತ ಸದಸ್ಯರಿಗೆ ಎನ್ನುವುದು ಸ್ಪಷ್ಟ. ಆದರೆ ಯಾರಿಗೆ ಎನ್ನುವುದು ಈಗಿರುವ ಕುತೂಹಲ.


ಬಾಲಕೃಷ್ಣ, ಚಂದ್ರಶೇಖರ್ ಹೆಸರು ಮುಂಚೂಣಿಯಲ್ಲಿ:
ಸದ್ಯ ಬಾಲಕೃಷ್ಣ ಪೂಜಾರಿ ಕುರೆಮಜಲು ಮತ್ತು ಚಂದ್ರಶೇಖರ್ ಎನ್‌ಎಸ್‌ಡಿ ಸರ್ವೆದೋಳಗುತ್ತು ಅವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಪ್ರಬಲವಾಗಿ ಕೇಳಿ ಬರುತ್ತಿದೆ. ಬಾಲಕೃಷ್ಣ ಅವರು 2ನೇ ಬಾರಿ ಗ್ರಾ.ಪಂ ಸದಸ್ಯರಾಗಿ ಆಯ್ಕೆಯಾಗಿರುವುದರಿಂದ ಅನುಭವದ ಆಧಾರದಲ್ಲಿ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆನ್ನುವ ಮಾತು ಒಂದೆಡೆ ಕೇಳಿ ಬಂದರೆ, ಮೊದಲ ಅವಧಿಯಲ್ಲಿ ಮುಂಡೂರು ಗ್ರಾಮದ ಪುಷ್ಪಾ ಎನ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದ ಕಾರಣ ಈ ಬಾರಿ ಸರ್ವೆ ಗ್ರಾಮಕ್ಕೆ ಅಧ್ಯಕ್ಷ ಸ್ಥಾನ ನೀಡಬೇಕು, ಹಾಗಾಗಿ ಚಂದ್ರಶೇಖರ್ ಎನ್‌ಎಸ್‌ಡಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವ ಆಗ್ರಹ ಇನ್ನೊಂದೆಡೆ ಕೇಳಿ ಬಂದಿದೆ.


ಕಾಂಗ್ರೆಸ್ ಬೆಂಬಲಿತರು ಏನು ಮಾಡ್ತಾರೆ..?:
ಅತ್ತ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಾರೋ ಇಲ್ಲವೋ ಎಂಬುವುದು ತಿಳಿದು ಬಂದಿಲ್ಲ. ಬಿಜೆಪಿ ಬೆಂಬಲಿತ 12 ಮಂದಿ ಸದಸ್ಯರು ಇದ್ದು ಕಾಂಗ್ರೆಸ್ ಬೆಂಬಲಿತರಾಗಿ 7 ಸದಸ್ಯರು ಮಾತ್ರ ಇದ್ದಾರೆ. ಮಹಮ್ಮದ್ ಆಲಿ ಮತ್ತು ರಸಿಕಾ ರೈ ಮೇಗಿನಗುತ್ತು ಅವರು ಯಾವುದೇ ಪಕ್ಷದ ಬೆಂಬಲವಿಲ್ಲದೇ ಚುನಾಯಿತರಾಗಿದ್ದವರು, ಅದರಲ್ಲಿ ಮಹಮ್ಮದ್ ಆಲಿಯವರು ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದರು. ಇನ್ನು ಕಾಂಗ್ರೆಸ್ ಬೆಂಬಲಿತ ಸದಸ್ಯರು ಸ್ಪರ್ಧಿಸಿದರೂ ಗೆಲುವು ಕಷ್ಟಸಾಧ್ಯ, ಹಾಗಾಗಿ ಅವರು ಸ್ಪರ್ಧೆ ಮಾಡುವುದಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದೆ. ಈ ಬಾರಿ ವಿಭಿನ್ನ ವಾತಾವರಣವಿದ್ದು ಪುತ್ತಿಲ ಪರಿವಾರ ಮತ್ತು ಬಿಜೆಪಿ ಮಧ್ಯೆ ಹೊಂದಾಣಿಕೆ ಹೇಗಿದೆ ಎನ್ನುವ ಬಗ್ಗೆಯೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ಕುತೂಹಲದಿಂದಿದ್ದು, ಆ ಬಳಿಕ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಕಾಂಗ್ರೆಸ್ ಬೆಂಬಲಿತರೂ ಅಧ್ಯಕ್ಷತೆಗೆ ಸ್ಪರ್ಧೆ ಮಾಡುವುದೇ ಆದಲ್ಲಿ ಕಮಲೇಶ್, ಮಹಮ್ಮದ್ ಆಲಿ ಮತ್ತು ದೀಪಿಕಾ ಕಲ್ಲಗುಡ್ಡೆ ಅವರ ಹೆಸರು ಕೇಳಿ ಬರುತ್ತಿದ್ದು ಅದರಲ್ಲಿ ಕಮಲೇಶ್ ಅವರ ಹೆಸರು ಅಂತಿಮವಾಗಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಸಂಪರ್ಕಿಸಿದಾಗ `ನಾವು ಅಧ್ಯಕ್ಷ ಹುದ್ದೆಗೆ ಸ್ಪರ್ಧೆ ವಿಚಾರವಾಗಿ ಏನನ್ನೂ ಆಲೋಚಿಸಿಲ್ಲ, ನಮಗೆ ಸದಸ್ಯ ಬಲ ಕಡಿಮೆ ಇದೆ. ನಮಗೆ ಅವಕಾಶಗಳೂ ಕಡಿಮೆ ಇದೆ, ಹಾಗಾಗಿ ಅದರ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಮುಂಡೂರು ಗ್ರಾ.ಪಂಗೆ ಎರಡನೇ ಅವಧಿಗೆ ಯಾರು ಅಧ್ಯಕ್ಷರಾಗಲಿದ್ದಾರೆ ಎನ್ನುವ ಕುತೂಹಲ ಮೂಡಿದ್ದು ಆ.16ರಂದು ಸ್ಪಷ್ಟ ಉತ್ತರ ದೊರೆಯಲಿದೆ.

ಬಿಜೆಪಿ ವರ್ಸಸ್ ಪುತ್ತಿಲ ಪರಿವಾರ:
ಕಳೆದ ಬಾರಿ ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಮೇಲುಗೈ ಸಾಧಿಸಿದಾಗ ಎಲ್ಲರ ಒಮ್ಮತದ ತೀರ್ಮಾನದಂತೆ ಪುಷ್ಪಾ ಎನ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಈಗಿನ ಚಿತ್ರಣ ಕಳೆದ ಬಾರಿಗಿಂತ ಭಿನ್ನವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಅವರ ಪರವಾಗಿ ಮುಂಡೂರು ಗ್ರಾ.ಪಂನ ಹಾಲಿ ಅಧ್ಯಕ್ಷೆ ಸಹಿತ ಐದು ಮಂದಿ ಸದಸ್ಯರು ಗುರುತಿಸಿಕೊಂಡಿದ್ದರು. ಅದರಲ್ಲಿ ಓರ್ವರಾದ ಯಶೋಧ ಅಜಲಾಡಿ ಅವರು ಉಪಾಧ್ಯಕ್ಷರಾಗಿ ಆಯ್ಕೆಗೊಳ್ಳುವುದು ಖಚಿತಗೊಂಡಿದೆ. ಇನ್ನು ಬಿಜೆಪಿ ಮತ್ತು ಪುತ್ತಿಲ ಬಳಗದಲ್ಲಿ ಗುರುತಿಸಿಕೊಂಡಿದ್ದ ಸದಸ್ಯರು ಒಗ್ಗಟ್ಟು ಪ್ರದರ್ಶಿಸಿ ಓರ್ವರನ್ನು ಒಮ್ಮತದಲ್ಲಿ ಆಯ್ಕೆ ಮಾಡಿದಲ್ಲಿ ಯಾವುದೇ ಗೊಂದಲವಿಲ್ಲದೇ ಅಧ್ಯಕ್ಷರ ಆಯ್ಕೆ ನಡೆಯಬಹುದು. ಹಾಗೊಂದು ವೇಳೆ ಆಗದೇ ಇದ್ದರೆ ಅಧ್ಯಕ್ಷರ ಆಯ್ಕೆ ಕುತೂಹಲಕಾರಿಯಾಗಲಿದೆ. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪುತ್ತಿಲ ಪರಿವಾರದಲ್ಲಿ ಪ್ರಬಲವಾಗಿ ಗುರುತಿಸಿಕೊಂಡಿರುವ ಬಾಲಕೃಷ್ಣ ಪೂಜಾರಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಪುತ್ತಿಲ ಬಳಗ ಪ್ಲಾನ್ ಹಾಕಿಕೊಂಡಿದೆ ಎನ್ನಲಾಗುತ್ತಿದೆಯಾದರೂ ಖಚಿತಗೊಂಡಿಲ್ಲ. ಹಾಗೊಂದು ವೇಳೆ ಆದಲ್ಲಿ ಬಾಲಕೃಷ್ಣ ಪೂಜಾರಿ ಅವರು ಅಧ್ಯಕ್ಷ ಹುದ್ದೆಗೆ ಬ್ಯಾಟ್ ಬೀಸುವುದು ಪಕ್ಕಾ ಆಗಲಿದೆ. ಆದರೆ ಬಿಜೆಪಿ ಬೆಂಬಲಿತ ಉಳಿದ ಸದಸ್ಯರ ಬೆಂಬಲ ಅಗತ್ಯವಾಗಿ ಬೇಕಾಗಿದೆ. ಇನ್ನೊಂದು ಮಾಹಿತಿ ಪ್ರಕಾರ ಸರ್ವೆ ಭಾಗದಿಂದ ಗೆದ್ದಿರುವ ಚಂದ್ರಶೇಖರ್ ಎನ್‌ಎಸ್‌ಡಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಯೋಚನೆ ಬಿಜೆಪಿ ಮಾಡಿಕೊಂಡಿದೆ ಎನ್ನಲಾಗಿದೆ. ಹಾಗೊಂದು ವೇಳೆ ಚಂದ್ರಶೇಖರ್ ಎನ್‌ಎಸ್‌ಡಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದೇ ಆದಲ್ಲಿ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡವರ ಬೆಂಬಲ ಅಗತ್ಯವಾಗಿ ಬೇಕಾಗಿದೆ. ಬಾಲಕೃಷ್ಣ ಪೂಜಾರಿ ಮತ್ತು ಚಂದ್ರಶೇಖರ್ ಎನ್‌ಎಸ್‌ಡಿ ಪೈಕಿ ಒಬ್ಬರು ಅಧ್ಯಕ್ಷರಾಗುವುದು ಪಕ್ಕಾ ಎನ್ನುವ ಮಾತುಗಳು ಗ್ರಾ.ಪಂ ವ್ಯಾಪ್ತಿಯಲ್ಲಿ ಕೇಳಿ ಬಂದಿದೆ. ಬೆಂಬಲಿತರು ಬಿಜೆಪಿ ಮತ್ತು ಪುತ್ತಿಲ ಪರಿವಾರ ಬೆಂಬಲಿತ ಸದಸ್ಯರ ನಿರ್ಧಾರ ಏನಿರಬಹುದು ಎಂದು ಕಾಂಗ್ರೆಸ್ ಬೆಂಬಲಿತ ಸದಸ್ಯರು ಕಾದು ನೋಡುವ ತಂತ್ರ ಅನುಪರಿಸಿ ಅಧ್ಯಕ್ಷತೆಗೆ ಸ್ಪರ್ಧೆ ಮಾಡುವ ಕುರಿತು ನಿರ್ಧರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಂಡೂರು ಗ್ರಾ.ಪಂಗೆ ೨ನೇ ಬಾರಿ ಚುನಾಯಿತನಾಗಿದ್ದು ಇದೀಗ ಹಿಂದುಳಿದ ವರ್ಗ ಎ ಮೀಸಲಾತಿ ಪ್ರಕಟಗೊಂಡಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶ ಇದೆ. ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಹೌದು. ಆದರೆ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ದನಾಗಿರುತ್ತೇನೆ.
-ಬಾಲಕೃಷ್ಣ ಪೂಜಾರಿ, ಸದಸ್ಯರು

ಮುಂಡೂರು ಗ್ರಾ.ಪಂಗೆ ಪ್ರಥಮ ಬಾರಿ ಚುನಾಯಿತನಾಗಿದ್ದು ಇದೀಗ ಹಿಂದುಳಿದ ವರ್ಗ ಎ ಮೀಸಲಾತಿ ಪ್ರಕಟಗೊಂಡಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶ ನನಗಿದೆ. ಈ ಬಾರಿ ಸರ್ವೆ ಭಾಗಕ್ಕೆ ಅಧ್ಯಕ್ಷ ಸಿಗಬೇಕು ಎನ್ನುವ ಆಗ್ರಹ ಕೂಡಾ ಇದ್ದು ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಆದರೆ ಹೈಕಮಾಂಡ್ ತೀರ್ಮಾನಕ್ಕೆ ಬದ್ದನಾಗಿzನೆ.
-ಚಂದ್ರಶೇಖರ್ ಎನ್‌ಎಸ್‌ಡಿ, ಸದಸ್ಯರು

LEAVE A REPLY

Please enter your comment!
Please enter your name here