ಉಪ್ಪಿನಂಗಡಿ: ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರೂ, ಮತ್ತೆ ಮತ್ತೆ ಪ್ರಶ್ನೆಗಳ ಸುರಿಮಳೆಗೈಯುತ್ತಾ ತನ್ನ ಮೇಲೆಯೇ ವ್ಯರ್ಥಾ ಆರೋಪ ಗ್ರಾಮ ಸಭೆಯಲ್ಲಿ ಕೇಳಿ ಬಂದಾಗ ಒತ್ತಡಕ್ಕೆ ಸಿಲುಕಿ ವಿಚಲಿತರಾದ ವೈದ್ಯಾಧಿಕಾರಿ ಕುಸಿದು ಬಿದ್ದು, ಆಸ್ಪತ್ರೆಗೆ ದಾಖಲಾದ ಘಟನೆ ಆ.9ರಂದು ನಡೆದ ಗೋಳಿತ್ತೊಟ್ಟು ಗ್ರಾಮ ಸಭೆಯಲ್ಲಿ ನಡೆದಿದೆ.
ಗ್ರಾ.ಪಂ. ಅಧ್ಯಕ್ಷ ಜನಾರ್ದನ ಗೌಡ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯೆದ್ಯಾಧಿಕಾರಿ ಡಾ. ಶಿಶಿರ ಇಲಾಖೆಯ ಮಾಹಿತಿ ನೀಡುತ್ತಿದ್ದಾಗ, ಗ್ರಾಮಸ್ಥ ಡೀಕಯ್ಯ ಪೂಜಾರಿ ಅವರು ಕಳೆದ ಎಪ್ರಿಲ್‌ನಲ್ಲಿ ಗೋಳಿತ್ತೊಟ್ಟು ಗ್ರಾಮದ ಮಮತಾ ಎಂಬ ವಿದ್ಯಾರ್ಥಿನಿಯು ಚಿಕಿತ್ಸೆಗಾಗಿ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ತೆರಳಿದವರು ಅಲ್ಲಿ ಮೃತಪಟ್ಟಿದ್ದಾರೆ. ಅವರ ಸಾವಿಗೆ ಕಾರಣ ಏನು ಎಂದು ಪ್ರಶ್ನಿಸಿದರಲ್ಲದೆ, ನೀವಿಲ್ಲಿ ಸೂಕ್ತ ಚಿಕಿತ್ಸೆ ನೀಡಿಲ್ಲ ಎಂದು ಆರೋಪಿಸಿದರು. ಅದಕ್ಕೆ ವೈದ್ಯಾಧಿಕಾರಿಯವರು ಉತ್ತರಿಸಿ, ಮಮತಾ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದಾಗ ಅವರ ಆರೋಗ್ಯ ಸ್ಥಿತಿ ತೀರಾ ಬಿಗಡಾಯಿಸಿತ್ತು. ತಕ್ಷಣವೇ ನಾನು ಅವರನ್ನು ಪುತ್ತೂರಿಗೆ ಕಳುಹಿಸಿಕೊಟ್ಟಿದ್ದೇನೆ. ಆ ಸಮಯಕ್ಕೆ ಆಂಬುಲೆನ್ಸ್ ಇಲ್ಲಿರಲಿಲ್ಲ. ದೂರದಲ್ಲಿದ್ದ ಅದನ್ನು ನಾನು ಕರೆದಿದ್ದು, ದೂರದಲ್ಲಿದ್ದ ಅದು ಬರುವ 20 ನಿಮಿಷಗಳ ಅವಧಿಯಲ್ಲಿ ನಾನು ಆ ಹುಡುಗಿಗೆ ತಕ್ಷಣಕ್ಕೆ ಬೇಕಾದ ತುರ್ತು ಚಿಕಿತ್ಸೆಯನ್ನು ನೀಡಿದ್ದೇನೆ. ಬಳಿಕ ಆಕ್ಸಿಜನ್ ಇದ್ದ ಆಂಬುಲೆನ್ಸ್‌ನಲ್ಲಿ ನಾನು ಆಕೆಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಅಲ್ಲಿ ಅವಳು ಮೃತಪಟ್ಟಿದ್ದಾಳೆ ಎಂಬ ಮಾಹಿತಿ ನನಗೆ ಬಂದಿದೆ. ಆಕೆ ಸುಮಾರು 2-3 ತಿಂಗಳ ಹಿಂದೆಯೇ ಅನಾರೋಗ್ಯದಿಂದಿದ್ದಳು. ಇದರಿಂದಾಗಿ ಆಕೆ ಕಾಲೇಜಿಗೂ ರಜೆಯನ್ನು ಹಾಕಿದ್ದಳು ಎಂಬ ಮಾಹಿತಿಯನ್ನು ಕೂಡಾ ನಾನು ಕಾಲೇಜಿನಿಂದ ತಿಳಿದುಕೊಂಡಿದ್ದೇನೆ. ಈಕೆಯ ಸಮಸ್ಯೆಯ ಬಗ್ಗೆ ಮನೆಯವರು ನನ್ನಲ್ಲಿಗೆ ಬಂದಾಗ ಮಾನಸಿಕ ತೊಂದರೆ ಇದೆ ಅಂದಿದ್ದಾರೆ. ಈ ಮೂರು ತಿಂಗಳ ಅವಧಿಯಲ್ಲಿ ಒಂದು ವಾರ ಅವಳು ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದಾಳೆ. ಅಲ್ಲಿ ಅವಳಿಗೆ ಚಿಕಿತ್ಸೆ ನೀಡಿದ ವೈದ್ಯರು ಮಾನಸಿಕ ಅನಾರೋಗ್ಯದ ಕುರಿತಾಗಿ ಚೀಟಿಯಲ್ಲಿ ಉಲ್ಲೇಖಿಸಿ, ಮಾತ್ರೆಗಳನ್ನು ನೀಡಿದ್ದಾರೆ. ಇದಲ್ಲದೇ, ಆಕೆಯ ಮನೆಯವರು ಆಕೆಗೆ ಹಳ್ಳಿ ಮದ್ದು ನೀಡುವಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆ ಎನ್ನುವುದು ತಿಳಿದು ಬಂದಿದೆ. ಇಷ್ಟೆಲ್ಲಾ ಆದ ಬಳಿಕ ಆಕೆಯನ್ನು ನನ್ನ ಬಳಿಗೆ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದು ಕೊನೆಯ ಸಮಯದಲ್ಲಿ. ನಾನು ಪರೀಕ್ಷಿಸುವಾಗ ಆಕೆಯ ಆರೋಗ್ಯದ ಪರಿಸ್ಥಿತಿ ತೀರಾ ಬಿಗಡಾಯಿಸಿತ್ತು. ಆದ್ದರಿಂದ ತಕ್ಷಣವೇ ಅಕೆಯನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಆದರೂ ಇದಕ್ಕೆ ತೃಪ್ತಿಗೊಳ್ಳದ ಡೀಕಯ್ಯ, ಆಕೆಗೆ ಕೊರೋನಾನಾ? ಡೆಂಗ್ಯೂನಾ? ಆಕೆ ಹೇಗೆ ಸತ್ತದ್ದು ಎಂದು ನಮಗೆ ಬೇಕು. ಅಲ್ಲಿ ಅವಳ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕೂಡಾ ಮಾಡಿಲ್ಲ. ಇವರು ಬಡವರೆಂದು ನೀವು ಈ ರೀತಿ ಮಾಡಿದ್ದೋ? ಎಂದು ಪ್ರಶ್ನೆಗಳ ಸುರಿಮಳೆಗೈದರು. ಅದಕ್ಕೆ ವೈದ್ಯಾಧಿಕಾರಿಯರು ಆಕೆಯನ್ನು ನನ್ನಲ್ಲಿಗೆ ಕರೆದುಕೊಂಡು ಬಂದಾಗಿನಿಂದ ಪುತ್ತೂರಿಗೆ ಕರೆದುಕೊಂಡು ಹೋಗುವವರೆಗೆ ಓರ್ವ ವೈದ್ಯಳಾಗಿ ತನ್ನಿಂದ ಏನು ಮಾಡಲು ಸಾಧ್ಯವಿತ್ತೋ? ಆ ಪ್ರಥಮ ಚಿಕಿತ್ಸೆಯನ್ನು ನಾನು ನೀಡಿದ್ದೇನೆ. ಅವಳು ಇಲ್ಲಿ ಮೃತಪಟ್ಟಿಲ್ಲ. ಹಾಗಾಗಿ ಅವಳು ಯಾವ ಕಾಯಿಲೆಯಿಂದ ಮೃತಪಟ್ಟಳು ಎಂಬ ಅಂಶದ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು. ಆಗಲೂ ತೃಪ್ತರಾಗದ ಡೀಕಯ್ಯ ಪೂಜಾರಿ ಕೇಳಿದ ಪ್ರಶ್ನೆಗಳನ್ನೇ ಮತ್ತೆ ಮತ್ತೆ ಕೇಳುತ್ತಾ ಉತ್ತರಕ್ಕಾಗಿ ಪಟ್ಟು ಹಿಡಿದರಲ್ಲದೆ, ವೈದ್ಯರ ಮೇಲೆ ವೃರ್ಥಾ ಆರೋಪಗಳನ್ನು ಮಾಡತೊಡಗಿದರು. ಗ್ರಾಮಸ್ಥ ಗಿರೀಶ್ ಕೂಡಾ ಇದಕ್ಕೆ ಸಾಥ್ ನೀಡಿದರು. ವೈದ್ಯರು ಎಷ್ಟೇ ಸಮಜಾಷಿಕೆ ನೀಡಿದರೂ, ಕೇಳುವ ಸ್ಥಿತಿ ಇವರದ್ದಾಗಿರಲಿಲ್ಲ. ಇದೇ ವಿಷಯವು ಮುಂದುವರಿದಾಗ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯೂ ಕೂಡಾ ವೈದ್ಯರ ನೆರವಿಗೆ ಬಂದಿದ್ದು, ಅವರು ಎದ್ದು ನಿಂತು, ಅಂದು ಆ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ, ನಾವು ಕೂಡಾ ಅಲ್ಲೇ ಇದ್ವಿ. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದವರು, ಆಕೆ ಸ್ವಲ್ಪ ಸುಸ್ತಾಗಿದ್ದಾಳೆ ಅಷ್ಟೇ. ಆಕೆಗೆ ಡ್ರಿಪ್ ಮಾತ್ರ ನೀಡಿ. ಆಕೆಗೆ ಇಂಜೆಕ್ಷನ್, ರಕ್ತಪರೀಕ್ಷೆ ಇಂತದ್ದನ್ನೆಲ್ಲಾ ಮಾಡಬೇಡಿ ಎಂದಿದ್ದರು. ಆದರೂ ವೈದ್ಯರೂ ಆಕೆಯನ್ನು ಪರೀಕ್ಷಿಸಿ, ಆಕೆಯನ್ನು ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿಗೆ ಕಳುಹಿಸಿಕೊಟ್ಟಿದ್ದಾರೆ ಎಂದರು.
ಇಷ್ಟೆಲ್ಲಾ ಆಗುವಾಗ ಒತ್ತಡಕ್ಕೆ ಒಳಗಾಗಿ ವಿಚಲಿತರಾದ ವೈದ್ಯಾಧಿಕಾರಿ ಡಾ. ಶಿಶಿರ ಅವರು ವೇದಿಕೆಯ ಮೇಲಿದ್ದ ಟೇಬಲ್‌ನಲ್ಲಿದ್ದ ನೀರು ಕುಡಿದು, ಸೀದಾ ಸಭಾಂಗಣದಿಂದ ಗ್ರಾ.ಪಂ. ಕಚೇರಿಯ ಕೊಠಡಿಯೊಳಗೆ ಹೋದವರು, ಅಲ್ಲೇ ನೆಲದಲ್ಲಿ ಕುಸಿದು ಬಿದ್ದರು. ಬಳಿಕ ಅವರನ್ನು ಚಿಕಿತ್ಸೆಗಾಗಿ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದರಿಂದ ಸಭೆಯಲ್ಲಿ ಕೆಲಕಾಲ ಗೊಂದಲ ನಿರ್ಮಾಣವಾಯಿತಾದರೂ, ಬಳಿಕ ಸಭೆ ಮುಂದುವರಿಯಿತು.
ಆಲಂತಾಯ ಗ್ರಾಮದ ಶಿವಾರು ರಸ್ತೆಯ ಪಾಲೇರಿ ಎಂಬಲ್ಲಿ ಕಾಲು ಸಂಕ ಅನುಮೋದನೆಗೊಂಡಿದ್ದು, ಅದಕ್ಕೆ ೧೨ ಲಕ್ಷ ರೂಪಾಯಿ ಹಣ ಮಂಜೂರಾಗಿದೆ. ಆದರೆ ಅಲ್ಲಿ ಯಾವುದೇ ಕಾಲು ಸಂಕ ನಿರ್ಮಾಣ ಮಾಡಿಲ್ಲ. ಬದಲಾಗಿ ಮೂರು ಮೋರಿಗಳನ್ನು ಹಾಕಲಾಗಿದೆ. ಮೂರು ಮೋರಿಗೆ ೧೨ ಲಕ್ಷ ರೂಪಾಯಿ ವ್ಯಯವಾಗಿದೆಯೇ ಎಂದು ಗ್ರಾಮಸ್ಥ ರಘುನಾಥ ಎಂಬವರು ಪ್ರಶ್ನಿಸಿದರು. ಅಲ್ಲದೇ, ಪಾಲೇರಿ ಬಳಿಯೇ 100 ಮೀಟರ್‌ನಷ್ಟು ಜಲ್ಲಿಯನ್ನು ರಸ್ತೆಗೆ ಹಾಕಲಾಗಿದೆ. ಅದು ಹಾಕಿ ಮೂರು ತಿಂಗಳಾದರೂ, ಅಲ್ಲಿ ಯಾವುದೇ ಡಾಮರು ಕಾಮಗಾರಿ ನಡೆದಿಲ್ಲ. ಇದರಿಂದ ಅಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆಯಿರುವುದು ಹಾಗೂ ವಿದ್ಯುತ್ ಬಿಲ್‌ನಲ್ಲಿ ಇಂಧನ ಚಾರ್ಚ್ ಅನ್ನು ಗ್ರಾಹಕರ ಮೇಲೆ ಹಾಕುವುದರ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿ ಎನ್. ಎನ್. ರಾಜಗೋಪಾಲ್ ಮಾರ್ಗದರ್ಶಿ ಅಧಿಕಾರಿಯಾಗಿ ಸಭೆಯನ್ನು ಮುನ್ನಡೆಸಿದರು. ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಶೋಭಲತಾ, ಸದಸ್ಯರಾದ ಬಾಬು ಪೂಜಾರಿ, ಕು. ಗುಲಾಬಿ ಕೆ., ಜಾನಕಿ, ಸಂಧ್ಯಾ, ನೋಣಯ್ಯ ಗೌಡ, ಎ.ಜೆ. ಜೋಸೆಫ್, ಶೃತಿ ಪಿ., ವಾರಿಜಾಕ್ಷಿ, ಪ್ರಜಲ, ಬಾಲಕೃಷ್ಣ ಗೌಡ, ಸವಿತಾ ಕೆ., ಹೇಮಲತಾ, ಪದ್ಮನಾಭ ಪೂಜಾರಿ, ಶಿವಪ್ರಸಾದ್ ಎಸ್.ಎಸ್. ಉಪಸ್ಥಿತರಿದ್ದರು. ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಗ್ರಾ.ಪಂ. ಪಿಡಿಒ ಜಗದೀಶ ನಾಯ್ಕ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಾವತಿ ವಂದಿಸಿದರು.