ಮಾಣಿ: ಸರಕಾರಿ ಜಾಗದಲ್ಲಿ ರಸ್ತೆ ನಿರ್ಮಾಣ – ಖಾಸಗಿ ವ್ಯಕ್ತಿಯಿಂದ ತಡೆ – ಸಾರ್ವಜನಿಕರಿಂದ ಪ್ರತಿಭಟನೆ – ರಸ್ತೆ ನಿರ್ಮಾಣ

0

ವಿಟ್ಲ: ಎಂಟು ತಿಂಗಳ ಹಿಂದೆ ಸರಕಾರಿ ಜಾಗದಲ್ಲಿ ನಿರ್ಮಾಣ ಮಾಡಲಾಗಿರುವ ಲಕ್ಕಪ್ಪಕೋಡಿ – ಕಡೆಕ್ಕಾನ – ಬಲ್ಯ – ಬರಿಮಾರು ಸಂಪರ್ಕ ರಸ್ತೆಯನ್ನು ಮುಚ್ಚಿ ಖಾಸಗಿ ವ್ಯಕ್ತಿಗಳು ತಡೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಜೆಸಿಬಿಯ ಮುಖಾಂತರ ಮುಚ್ಚಿದ್ದ ರಸ್ತೆಯನ್ನು ತೆರವುಗೊಳಿಸಿದ ಘಟನೆ ಆ‌.9ರಂದು ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡೆಕ್ಕಾನ ಎಂಬಲ್ಲಿ ನಡೆದಿದೆ.

ಸುಮಾರು ಎಂಟು ತಿಂಗಳ ಹಿಂದೆ ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಜಾಗದಲ್ಲಿ ಲಕ್ಕಪ್ಪಕೋಡಿ – ಕಡೆಕ್ಕಾನ – ಬಲ್ಯ – ಬರಿಮಾರು ಸಂಪರ್ಕ ರಸ್ತೆಯನ್ನು ಸ್ಥಳೀಯ ನಿವಾಸಿಗಳು ಸೇರಿಕೊಂಡು ನಿರ್ಮಾಣ ಮಾಡಿದ್ದರು‌. ರಸ್ತೆಯ ಆರಂಭದ 130 ಮೀಟರ್ ರಸ್ತೆ ಸರಕಾರಿ ಜಾಗವಾಗಿದ್ದರು ಆ ಜಾಗವನ್ನು ಸ್ಥಳೀಯ ನಿವಾಸಿಗಳಾದ ಪ್ರಸನ್ನ ಕಾಮತ್ ಹಾಗೂ ಅವರ ಸಹೋದರರು ನಮ್ಮ ಪಟ್ಟ ಜಾಗ ಎಂದು ಹೇಳಿ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಬಳಿಕ ಸಾರ್ವಜನಿಕರು ನಿರ್ಮಿಸಿದ ರಸ್ತೆಯನ್ನು ಜಿಸಿಬಿ ತಂದು ಮುಚ್ಚಿದ್ದರು. ಈ ಬಗ್ಗೆ ಆಕ್ಷೇಪ ವ್ತಕ್ತ ಪಡಿಸಿದ ಸ್ಥಳೀಯ ನಿವಾಸಿಗಳು ಹಾಗೂ ರಸ್ತೆಯ ಫಲಾನುಭವಿಗಳು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಬಳಿಕ ಜಿಲ್ಲಾಧಿಕಾರಿಯವರು ರಸ್ತೆ ನಿರ್ಮಿಸುವಂತೆ ತಹಶೀಲ್ದಾರ್ ರವರಿಗೆ ಆದೇಶ ನೀಡಿದ್ದರು. ಅದರಂತೆ ಅಧಿಕಾರಿಗಳ ತಂಡ ರಸ್ತೆ ತೆರವು ಮಾಡಿತ್ತು. ಈ ಮಧ್ಯೆ ಪ್ರಸನ್ನ ಕಾಮತ್ ಸಹೋದರರು ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ ಕೋರ್ಟ್ ನಲ್ಲಿ ಕೇಸು ಇರುವುದಾಗಿ ಮಾಹಿತಿ ನೀಡಿ. ಆ ಬಳಿಕ ಆ ರಸ್ತೆಯನ್ನು ಅವರು ಪುನಃ ಏಕಾ ಏಕಿಯಾಗಿ ಮುಚ್ಚಿದ್ದರು.

ಈ ಮಧ್ಯೆ ಆ.9ರಂದು ಬೆಳಗ್ಗೆ ರಸ್ತೆಯ ಫಲಾನುಭವಿಗಳು ಹಾಗೂ ಸಾರ್ವಜನಿಕರು ಸೇರಿಕೊಂಡು ಕಡೆಕ್ಕಾನದಲ್ಲಿ ಸೇರಿ ಪ್ರತಿಭಟನೆ ನಡೆಸಿ ಜೆಸಿಬಿ ಮುಖಾಂತರ ತಡೆಯನ್ನು ತೆರವುಗೊಳಿಸಿ ರಸ್ತೆ ನಿರ್ಮಿಸಿದರು. ಈ ವೇಳೆ ಎರಡೂ ಕಡೆಯವರು ಸ್ಥಳದಲ್ಲಿ ಜಮಾವಣೆಯಾಗಿದ್ದು ಪರಿಸ್ಥಿತಿ ಹದಗೆಡುವ ಬಗ್ಗೆ ಮಾಹಿತಿ ಅರಿತ ವಿಟ್ಲ ಪೊಲೀಸ್ ಠಾಣಾ ಎಸ್. ಐ. ವಿದ್ಯಾ ಕೆ.ಜೆ.ರವರ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಸದ್ರಿ ರಸ್ತೆ ನಿರ್ಮಿಸುವ ಜಾಗ ಸರಕಾರಿಯಾಗಿದ್ದು ಅಲ್ಲಿ ರಸ್ತೆ ನಿರ್ಮಿಸುವಂತೆ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯವಾಗಿತ್ತು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಕೆಲಸ ನಿಲ್ಲಿಸುವಂತೆ ಪಟ್ಟು:
ಸ್ಥಳಕ್ಕೆ ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸುತ್ತಿದ್ದಂತೆ ಅಲ್ಲಿಗೆ ಬಂದ ಪ್ರಸನ್ನ ಕಾಮತ್ ರವರು ಜೆಸಿಬಿ ಕೆಲಸ ಮಾಡುತ್ತಿರುವುದನ್ನು ನಿಲ್ಲಿಸುವಂತೆ ಪಟ್ಟುಹಿಡಿದರು. ಈ ವೇಳೆ ಆಕ್ರೋಶಗೊಂಡ ಅಲ್ಲಿ ಸೇರಿದ್ದ ರಸ್ತೆಯ ಫಲಾನುಭವಿಗಳ ಸಹಿತ ಸಾರ್ವಜನಿಕರು ಕೆಲಸ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ನಾವುಗಳು ಯಾರದೋ ಪಟ್ಟ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿಲ್ಲ. ನಾವುಗಳು ಸರಕಾರಿ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿದ್ದೇವೆ. ಈ ಜಾಗದಿಂದಾಗಿ ರಸ್ತೆ ನಿರ್ಮಾಣ ಮಾಡಿದಲ್ಲಿ‌ ಹಲವಾರು ಮನೆಯವರಿಗೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ನಾವು ಏನೇ ತೊಂದರೆಗಳು ಬಂದರು ರಸ್ತೆ ನಿರ್ಮಿಸಿಯೇ ಸಿದ್ದ ಎಂದು ಪಟ್ಟು ಹಿಡಿದರು.

ಇತ್ತಂಡಗಳ ಮಧ್ಯೆ ನಡೆದ ಮಾತುಕಥೆ -ರಸ್ತೆಗೆ ಜಾಗಬಿಟ್ಟು ಕೊಡುವ ಭರವಸೆ
ಈ ಮಧ್ಯೆ ಸ್ಥಳೀಯ ಮಖಂಡರ ಸಹಿತ ಸಾರ್ವಜನಿಕರ ಹಾಗೂ ರಸ್ತೆ ಫಲಾನುಭವಿಗಳ ನಡುವೆ ನಡೆದ ಮಾತುಕಥೆ ಬಳಿಕ ಪ್ರಸನ್ನ ಕಾಮತ್ ರವರ ಪುತ್ರ ಪ್ರಜ್ವಲ್ ಕಾಮತ್ ರವರು ಅತ್ತ ಕಡೆಯಿಂದ ರಸ್ತೆ ನಿರ್ಮಿಸಿಕೊಂಡು ಬಂದು ಆರು ತಿಂಗಳೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸಿದಲ್ಲಿ ಈ ಜಾಗವನ್ನು ಬಿಟ್ಟುಕೊಡುವುದಾಗಿ ತಿಳಿಸಿದರು. ಇದಕ್ಕೆ ರಸ್ತೆಯ ಫಲಾನುಭವಿಗಳ ಸಹಮತ ವ್ಯಕ್ತಪಡಿಸಿ ರಸ್ತೆ ನಿರ್ಮಿಸುವುದಾಗಿ ಭರವಸೆ ನೀಡಿದರು‌.

ವರ್ಗ ಜಾಗ ರಸ್ತೆಗೆ ಬಿಟ್ಟು ಕೊಟ್ಟ ಸ್ಥಳೀಯರು:
ರಸ್ತೆ ಪ್ರಾರಂಭವಾಗುವ ಸರಕಾರಿ ಜಾಗವು ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರುತ್ತದೆ ಆದರೂ ಆ ಬಳಿಕ ಸ್ಥಳಗಳೆಲ್ಲವೂ ಬರಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವುದಾಗಿತ್ತು.ಆರಂಭದ ರಸ್ತೆಯ ಬಳಿಕ ಸಿಗುವ ವರ್ಗ ಜಾಗದ ಮಾಲಕರಾದ ವಿಷ್ಟು ಭಟ್, ಮೋಹನ್ ಕುಮಾರ್, ವಾಳ್ಟರ್ ಮಸ್ಕರೇನಸ್ ರವರ ಈಗಾಗಲೇ ತಮ್ಮ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಬೇಕಾದಷ್ಟನ್ನು ಬರಿಮಾರು ಗ್ರಾಮಪಂಚಾಯತ್ ಗೆ ಬಿಟ್ಟು ಕೊಟ್ಟಿರುವುದಾಗಿ ತಿಳಿಸಿದ್ದಾರೆ.


ನೇರಳಕಟ್ಟೆ ವ್ಯವಸಾಯ ಸೇವ ಸಹಕಾರ‌ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಚೌಟ, ಒಬಿಸಿ ಮೋರ್ಛದ ರಾಜ್ಯ ಕಾರ್ಯಕಾರಿ ಸದಸ್ಯ ದಿನೇಶ್ ಅಮ್ಟೂರು, ಮಾಜಿ ಜಿ.ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್, ಬಿಜೆಪಿ ಮುಖಂಡರಾದ ಬರಣಿಕೆರೆ ಸುಬ್ರಹ್ಮಣ್ಯ ಭಟ್, ಗಣೇಶ್ ರೈ ಮಾಣಿ, ನಾರಾಯಣ ಭಟ್ ಬಪ್ಪಕೋಡಿ, ಮಾಣಿ ಗ್ರಾಮ ಪಂಚಾಯತ್ ಸದಸ್ಯರಾದ ನಾರಾಯಣ ಶೆಟ್ಟಿ ತೋಟ, ಸಾರ್ವಜನಿಕರಾದ ಎಡ್ವರ್ಡ್ ಮಾರ್ಟೀಸ್, ರಸ್ತೆ ಫಲಾನುಭವಿಗಳಾದ ವಾಲ್ಟರ್ ಮಸ್ಕರೇನಸ್, ಚೆನ್ನಪ್ಪ ಮೂಲ್ಯ, ವಿಷ್ಣು ಭಟ್, ರಾಧಾ, ಸುಬ್ಬಣ್ಣ ಕಾಂಬ್ಲಿ, ಸುರೇಶ್ ಪೂಜಾರಿ ಬಲ್ಯ, ಹರೀಶ್ಚಂದ್ರ ಕಡೆಕ್ಕಾನ, ಮಾಧವ ಕಡೆಕ್ಕಾನ, ಶಿವಪ್ಪ ಪೂಜಾರಿ ಬಲ್ಯ ಸೇರಿದಂತೆ ಹಲವಾರು ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here