ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಭಾರೀ ಅವ್ಯವಹಾರ ಆರೋಪ

0

ಸಾರ್ವಜನಿಕ ದೂರು:ಕಚೇರಿಗೆ ಶಾಸಕರ ದಿಢೀರ್ ಭೇಟಿ-ಅಧಿಕಾರಿ ತರಾಟೆಗೆ
ಕಚೇರಿಯಲ್ಲಿಲ್ಲದ ಸಿಡಿಪಿಒಗೆ ಮೊಬೈಲ್ ಕರೆ ಮಾಡಿ ತರಾಟೆಗೆತ್ತಿಕೊಂಡ ಶಾಸಕರು

ಪುತ್ತೂರು:ಇಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಭಾರೀ ಅವ್ಯವಹಾರ ನಡೆಯುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರು ಆ. 8ರಂದು ಸಂಜೆ ದಿಢೀರ್ ಸಿಡಿಪಿಒ ಕಚೇರಿಗೆ ಭೇಟಿ ನೀಡಿದ್ದಾರೆ.ಈ ಸಂದರ್ಭ ಅಧಿಕಾರಿ ಶ್ರೀಲತಾ ಅವರು ಕಚೇರಿಯಲ್ಲಿರಲಿಲ್ಲ.ದೂರವಾಣಿ ಕರೆ ಮಾಡಿದಾಗ, ತಾನು ಬೆಳ್ತಂಗಡಿಗೆ ಹೋಗಿರುವುದಾಗಿ ತಿಳಿಸಿದರು.ಶಾಸಕರು ಫೋನ್ ಕರೆ ಮೂಲಕವೇ ಅಧಿಕಾರಿಣಿಯನ್ನು ತರಾಟೆಗೆತ್ತಿಕೊಂಡ ಘಟನೆ ವರದಿಯಾಗಿದೆ. ಇಲಾಖೆಯಿಂದ ಅಂಗನವಾಡಿಗೆ ಆಹಾರ ವಿತರಣೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ.ಖಾಸಗಿ ವ್ಯಕ್ತಿಗಳ ಜೊತೆ ಒಪ್ಪಂದ ಮಾಡಿಕೊಂಡು ಆಹಾರ ತಯಾರಿಕಾ ವ್ಯವಸ್ಥೆಯನ್ನು ಗುತ್ತಿಗೆ ನೀಡಿದ್ದೀರಿ, ಫುಡ್ ಸರಿಯಾಗಿ ವಿತರಣೆಯಾಗುತ್ತಿಲ್ಲ ಮತ್ತು ಗುಣಮಟ್ಟವೂ ಇಲ್ಲ.ಅರ್ಧಕ್ಕರ್ಧ ಫುಡ್ ಮಾತ್ರ ವಿತರಣೆ ಮಾಡಲಾಗುತ್ತಿದೆ,ಎಲ್ಲವೂ ನಿಮ್ಮ ಇಷ್ಟದಂತೆ ಮಾಡುತ್ತೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕರು,ಸರಕಾರದ ಸುತ್ತೋಲೆಯಂತೆ ಇಲ್ಲಿ ವ್ಯವಹಾರ ನಡೆಯಬೇಕು’ ಎಂದು ಸೂಚಿಸಿದರು ಎಂದು ತಿಳಿದುಬಂದಿದೆ.


ಭ್ರಷ್ಟಾಚಾರವನ್ನು ಸಹಿಸುವ ಪ್ರಶ್ನೆಯೇ ಇಲ್ಲ-ಅಶೋಕ್ ಕುಮಾರ್ ರೈ:
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಭಾರೀ ಅವ್ಯವಹಾರ ನಡೆಯುತ್ತಿದೆ ಎಂದು ಸಾರ್ವಜನಿಕರಿಂದ ಪದೇ ಪದೇ ದೂರುಗಳು ಬರುತ್ತಿವೆ.ನಾನು ಶಾಸಕನಾಗಿ ಎರಡು ತಿಂಗಳಷ್ಟೆ ಕಳೆದಿದೆ.ಬಹುತೇಕ ಎಲ್ಲಾ ಅಧಿಕಾರಿಗಳು ನನ್ನನ್ನು ಶಾಸಕನೆಂಬ ನೆಲೆಯಲ್ಲಿ ಭೇಟಿಯಾಗಿ ಇಲಾಖೆಗೆ ಸಂಬಂಧಿಸಿದ ವಿಚಾರಗಳ ಕುರಿತು ಮಾತುಕತೆ ನಡೆಸಿದ್ದಾರೆ.ಆದರೆ ಸಿಡಿಪಿಒ ಅವರು ಬರಲೇ ಇಲ್ಲ.ಇಲಾಖೆಗೆ ಸಂಬಂಧಪಟ್ಟ ಯಾವುದೇ ಮಾಹಿತಿಯನ್ನು ನನ್ನ ಜೊತೆ ಹಂಚಿಕೊಂಡಿಲ್ಲ,ಅವ್ಯವಹಾರದ ದೂರಿನ ಬಗ್ಗೆ ಕೇಳೋಣ ಎಂದು ಕಚೇರಿಗೆ ಕರೆದರೆ ಪದೇ ಪದೇ ತಪ್ಪಿಸಿಕೊಳ್ಳುತ್ತಿದ್ದಾರೆ.ಜನರಿಗೆ ನಾನು ಏನೆಂದು ಉತ್ತರಕೊಡಬೇಕು.ನಾನು ಕರೆದ ಯಾವುದೇ ಸಭೆಗೂ ಬಾರದೆ ತಪ್ಪಿಸಿಕೊಳ್ಳುತ್ತಿದ್ದಾರೆ.ಆಹಾರ ತಯಾರಿಕೆಯನ್ನು ಟೆಂಡರ್ ಕರೆಯದೆ ಅವರಿಗಿಷ್ಟ ಬಂದವರಿಗೆ ಗುತ್ತಿಗೆ ನೀಡಿ ಅದರಲ್ಲಿ ಅಧಿಕಾರಿ ಮತ್ತು ಮಂಗಳೂರಿನ ಒಬ್ಬ ಗುತ್ತಿಗೆದಾರ ಸೇರಿ ಕೋಟಿ ಕೋಟಿ ಲೂಟಿ ಹೊಡೆದಿದ್ದಾರೆ.ಮಕ್ಕಳ ಆಹಾರ ವಿತರಣೆಯಲ್ಲಿ ಇವರು ಗೋಲ್‌ಮಾಲ್ ಮಾಡಿದ್ದಾರೆ.ಕೇಳಿದರೆ ಉಡಾಫೆಯಿಂದ ಉತ್ತರಿಸುತ್ತಾರೆ.ಪ್ರಕರಣವನ್ನು ನಾನು ಗಂಭೀರವಾಗಿ ಪರಿಗಣಿಸಿದ್ದು ನಡೆದಿರುವ ಅವ್ಯವಹಾರವನ್ನು ತನಿಖೆ ಮಾಡಿಸುತ್ತೇನೆ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯೂ ಆಗಬೇಕಿದೆ.ಬಡ ಮಕ್ಕಳಿಗೆ, ಗರ್ಭಿಣಿ-ಬಾಣಂತಿ ಮಹಿಳೆಯರಿಗೆ ಕೊಡಬೇಕಾದ ಫುಡ್ ವಿತರಣೆಯಲ್ಲಿ, ತಯಾರಿಕೆಯಲ್ಲಿ ಇವರು ಲೂಟಿ ಹೊಡೆಯುತ್ತಾರಂದ್ರೆ ಅದನ್ನು ಸಹಿಸಲು ಸಾಧ್ಯವೇ ಇಲ್ಲ.ಭ್ರಷ್ಟಾಚಾರವನ್ನು ನಾನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ಸಿಡಿಪಿಒ ಮೊಬೈಲ್ ಸ್ವಿಚ್‌ಡ್ ಆಫ್
ಆರೋಪದ ಕುರಿತು ಪ್ರತಿಕ್ರಿಯೆಗಾಗಿ ಸಿಡಿಪಿಒ ಶ್ರೀಲತಾ ಅವರನ್ನು ಸಂಪರ್ಕಿಸಲೆಂದು ಅವರ ಮೊಬೈಲ್‌ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿತ್ತು.

LEAVE A REPLY

Please enter your comment!
Please enter your name here