ನಮ್ಮ ಇಲಾಖೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ- ಯಾವುದೇ ರೀತಿಯ ತನಿಖೆ ನಡೆಸಬಹುದು

0

ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆಯ ಅವ್ಯವಹಾರದ ಆರೋಪಕ್ಕೆ ಸಿಡಿಪಿಓ ಸ್ಪಷ್ಟನೆ

ಪುತ್ತೂರು: ಮಹಿಳಾ ಪೂರಕ ಪೌಷ್ಟಿಕ ಆಹಾರ ಘಟಕದ ಮೂಲಕ ಅಂಗನವಾಡಿಗೆ ಆಹಾರ ಸರಬರಾಜು ಆಗುತ್ತಿದೆ. ಅದರಲ್ಲಿ ನಮಗೆ ಹಸ್ತಕ್ಷೇಪ ಮಾಡುವಂತಿಲ್ಲ. ಆಹಾರ ಸರಬರಾಜಿನಲ್ಲಿ ಯಾವುದೇ ರೀತಿಯ ಅವ್ಯವಹಾರ ಆಗಿಲ್ಲ. ಆರೋಪ ಸತ್ಯಕ್ಕೆ ದೂರವಾದುದು. ಇದರ ಬಗ್ಗೆ ಯಾವುದೇ ರೀತಿಯ ತನಿಖೆ ನಡೆಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಸ್ಪಷ್ಟಣೆ ನೀಡಿದ್ದಾರೆ.

ಮಹಿಳಾ ಪೂರಕ ಪೌಷ್ಟಿಕ ಆಹಾರ ಸರಬರಾಜು ಘಟಕದ ಜಿಲ್ಲಾ ಮಟ್ಟದಲ್ಲಿ ಟೆಂಡರ್ ಆಗಿ ನಡೆದು ಅಲ್ಲಿಂದಲೇ ಅಂಗನವಾಡಿ ಕೇಂದ್ರಗಳಿಗೆ ಆಹಾರ ಸರಬರಾಜು ಆಗುತ್ತದೆ. ಇದರಲ್ಲಿ ಹಸ್ತ ಕ್ಷೇಪ ಮಾಡದಂತೆ ಇಲಾಖೆಯಿಂದ ಸ್ಪಷ್ಟ ನಿರ್ದೇಶನವಿದೆ. ಅದರಂತೆ ನಾವು ಕರ್ತವ್ಯ ನಿರ್ವಹಿಸಿದ್ದೇವೆ. ಗುಣಮಟ್ಟ ಮತ್ತು ಪರಿಮಾಣದ ಬಗ್ಗೆ ಮಾತ್ರ ನಮಗೆ ನಿಯಂತ್ರಣವಿದೆ. ಹೊರತು ಟೆಂಡರ್ ಬದಲಾಯಿಸಲು ನಮಗೆ ಅವಕಾಶವಿಲ್ಲ. ಆಹಾರ‌ ಸರಬರಾಜನ್ನು ಬದಲಾಯಿಸಲು ನಮಗೆ ಅವಕಾಶವಿಲ್ಲ. ಆಹಾರ ಗುಣಮಟ್ಟದ ಬಗ್ಗೆ ನಾವು ಸಾರ್ವಜನಿಕರಿಂದ ಮಾಹಿತಿ ಪಡೆದುಕೊಳ್ಳುತ್ತೇವೆ. ಆಹಾರ ಗುಣಮಟ್ಟದಲ್ಲಿರುವ ಬಗ್ಗೆ ಸಾರ್ವಜನಿಕ ರಿಂದ ದೂರು ಬಂದಾಗ ಪರಿಶೀಲನೆ ನಡೆಸುತ್ತೇವೆ. ಅಲ್ಲದೇ ಖುದ್ದು ನಾವೇ ಪರಿಶೀಲನೆ ನಡೆಸುತ್ತೇವೆ. ಗುಣಮಟ್ಟ ಸರಿಯಿಲ್ಲದಿದ್ದರೆ ಹಿಂದಕ್ಕೆ ಕಳುಹಿಸಲು ಅವಕಾಶವಿದೆ.


ಸಾರ್ವಜನಿಕವಾಗಿ ಗುರುತಿಸಿಕೊಂಡಿರುವ ನಮ್ಮ‌ ಇಲಾಖೆಯಲ್ಲಿ ಅವ್ಯಹಾರ ನಡೆಯಲು ಸಾಧ್ಯವಿಲ್ಲ. ಅದಕ್ಕೆ ಅವಕಾಶವೇ ಕೊಡುವುದಿಲ್ಲ. ಇಲಾಖೆಯಲ್ಲಿ ಯಾವುದೇ ರೀತಿಯ ಅವ್ಯವಹಾರಗಳಿದ್ದರೆ ಮಾಹಿತಿ ನೀಡುವಂತೆ ನಾನೇ ಬಹಿರಂಗವಾಗಿ ಹೇಳಿಕೆ ನೀಡಿದ್ದೇನೆ. ಸಮಯ, ಸಂದರ್ಭಕ್ಕನುಗುಣವಾಗಿ ಆಹಾರ ಸರಬರಾಜು ಮಾಡುವುದನ್ನು ಬದಲಾಯಿಸಲು ನಮಗೆ ಅವಕಾಶವಿಲ್ಲ. ಇದನ್ನೇ ಆಧಾರವಾಗಿಟ್ಟುಕೊಂಡು ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಿದರೆ ಹೇಗೆ? ಅದರ ಪ್ರಕ್ರಿಯೆಗಳು ಜಿಲ್ಲಾ ಮಟ್ಟದಲ್ಲಿ ನಡೆಯುತ್ತದೆ. ಅದಕ್ಕೆ ಸಮಿತಿಯಿದೆ. ಗುಣಮಟ್ಟ ಹಾಗೂ ಪರಿಮಾಣದ ಬಗ್ಗೆ ಮೇಲುಸ್ತುವಾರಿ ಮಾತ್ರ ನಮ್ಮ ಇಲಾಖೆ ಮೂಲಕ ನಡೆಯುತ್ತದೆ.


ಪುತ್ತೂರು ಹಾಗೂ ಕಡಬ ತಾಲೂಕುಗಳ ಚಾರ್ಜ್ ನನಗಿದ್ದು ಹಲವು ಸಭೆಗಳಲ್ಲಿ ಭಾಗವಹಿಸಬೇಕಿದೆ. ಮಹಿಳೆ ಮತ್ತು ಮಕ್ಕಳ‌ ದೌರ್ಜನ್ಯ ತಡೆಗೆ ಸಂಬಂಧಿಸಿದ ಜವಾಬ್ದಾರಿಯೂ ಇದೆ. ಫೀಲ್ಡ್ ವರ್ಕ್ ಗಳೂ ಇದೆ. ಹೀಗಾಗಿ ಶಾಸಕರು ಕಚೇರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಕಚೇರಿಯಲ್ಲಿರಲಿಲ್ಲ. ಪಾರದರ್ಶಕವಾಗಿ ಸೇವೆ ಸಲ್ಲಿಸುತ್ತಿರುವ ನಮ್ಮ ಇಲಾಖೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ನೋವುಂಟು ಮಾಡಿದೆ. ನಮ್ಮ ಇಲಾಖೆಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ. ಇದರ ಬಗ್ಗೆ ಯಾವುದೇ ರೀತಿಯ ತನಿಖೆ ನಡೆಸಿ ಸಾಬೀತುಪಡಿಸಬಹುದು. ಸುದ್ದಿ ಬಿಡುಗಡೆಯಿಂದ ಜನಸ್ನೇಹಿ ಇಲಾಖೆ ಎಂಬ ಗೌರವ ಪುರಸ್ಕಾರ ಪಡೆದಿರುವ ನಮ್ಮ ಇಲಾಖೆಯಲ್ಲಿ ಅವ್ಯವಹಾರ ನಡೆಯಲು ಸಾಧ್ಯವಿಲ್ಲ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here