ಸದಾ ಬಾಗಿಲು ಮುಚ್ಚಿಯೇ ಇರುವ ಪಶು ಚಿಕಿತ್ಸಾ ಕೇಂದ್ರ- ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಪರಿತಪಿಸುತ್ತಿರುವ ಪಶುಗಳು
ಸುಧಾಕರ ಕಾಣಿಯೂರು
ಕಾಣಿಯೂರು: ಹೈನುಗಾರಿಕೆ ಅವಲಂಬಿಸಿರುವ ಅದೇಷ್ಟೋ ಕುಟುಂಬಗಳಿವೆ. ಪಶುಗಳು ಅನಾರೋಗ್ಯಕ್ಕೆ ತುತ್ತಾದರೆ ಸಕಾಲಕ್ಕೆ ಚಿಕಿತ್ಸೆ ಕೊಡಿಸಲು ಪರದಾಡುವ ಸನ್ನಿವೇಶ. ಜಾನುವಾರುಗಳಿಗೆ ಚಿಕಿತ್ಸೆ ನೀಡುವುದಕ್ಕೆ ಪಶು ಆಸ್ಪತ್ರೆ ಇದ್ದರೂ ಕೂಡ ಇಲ್ಲಿ ವೈದ್ಯಾಧಿಕಾರಿಗಳೇ ಇಲ್ಲ. ವೈದ್ಯರು ಇಲ್ಲದೇ ಜಾನುವಾರುಗಳಿಗೆ ಸಮರ್ಪಕ ಚಿಕಿತ್ಸೆ ಸಿಗದೇ ನರಳಾಡುವಂತಹ ಪರಿಸ್ಥಿತಿ. ಇದು ಕಡಬ ತಾಲೂಕಿನ ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಮಣ ಗ್ರಾಮದ ಬೈತಡ್ಕದಲ್ಲಿ ಪಶು ಸಂಗೋಪನಾ ಇಲಾಖೆಯ ಪಶು ಚಿಕಿತ್ಸಾ ಕೇಂದ್ರವಿದ್ದರೂ, ಅಲ್ಲಿ ಪಶು ಪರೀಕ್ಷರ ಕೊರತೆಯಿಂದ ಪಶು ಆಸ್ಪತ್ರೆ ಬಳಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪಶು ಚಿಕಿತ್ಸಾಲಯ ಸದಾ ಬಾಗಿಲು ಮುಚ್ಚಿಯೇ ಇರುತ್ತದೆ.
ಪಶು ಆಸ್ಪತ್ರೆಯಲ್ಲಿ ಪರೀಕ್ಷಕರ ಜೊತೆಗೆ ಸಿಬ್ಬಂದಿಗಳ ಕೊರತೆಯೂ ಇದೆ. ಈ ಬಗ್ಗೆ ಹಲವಾರು ಬಾರಿ ಗ್ರಾಮ ಸಭೆ, ಸಾಮಾನ್ಯ ಸಭೆಗಳಲ್ಲಿ ನಿರ್ಣಯ ಮಾಡಿ ಸಂಬಂಧಪಟ್ಟವರಿಗೆ ಬರೆದರೂ ಇಷ್ಟರವರೆಗೂ ಇಲ್ಲಿನ ಸಮಸ್ಯೆ ಬಗೆಹರಿದಿಲ್ಲ. ಪಶು ಆಸ್ಪತ್ರೆಯಲ್ಲಿ ಪಶು ವೈದ್ಯಕೀಯ ಪರೀಕ್ಷಕರು ಇಲ್ಲದೇ ಅನಾರೋಗ್ಯಕ್ಕೆ ತುತ್ತಾದ ದನಕರುಗಳಿಗೆ ಸಮರ್ಪಕ ಚಿಕಿತ್ಸೆ ದೊರೆಯದೇ ಪಶುಗಳು ಪರಿತಪಿಸುತ್ತಿವೆ. ಇಲ್ಲಿದ್ದ ಪಶು ವೈದ್ಯಕೀಯ ಪರೀಕ್ಷಕರು ವರ್ಷಗಳ ಹಿಂದೆ ವರ್ಗಾವಣೆಗೊಂಡ ಬಳಿಕ ವಾರದಲ್ಲಿ ಒಂದು ದಿವಸ ವೈದ್ಯಕೀಯ ಪರೀಕ್ಷಕರು ಬರುತ್ತಿದ್ದರು. ಆದರೆ ಅವರು ನಿವೃತ್ತಿಯಾದ ಬಳಿಕ ಇದೀಗ ವೈದ್ಯರು ಬರದೇ ಇರುವುದರಿಂದ ಜಾನುವಾರುಗಳಿಗೆ ಸರಿಯಾದ ಚಿಕಿತ್ಸೆ ಸಿಗದಂತಾಗಿದೆ. ಪಶು ವೈದ್ಯಕೀಯ ಪರೀಕ್ಷಕರ ಹಾಗೂ ಇಲ್ಲಿರುವ ಸಿಬ್ಬಂದಿ ಕೊರತೆಯಿಂದ ಜಾನುವಾರುಗಳಿಗೆ ಪಶು ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸಲು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣವೇ ಇಲ್ಲಿನ ಪಶು ಆಸ್ಪತ್ರೆಗೆ ಪಶು ಪರೀಕ್ಷಕರ ಹಾಗೂ ಸಿಬ್ಬಂದಿಗಳನ್ನು ನೇಮಕಮಾಡಬೇಕು ಎಂದು ಗ್ರಾಮಸ್ಥರು
ಆಗ್ರಹಿಸುತ್ತಿದ್ದಾರೆ.
ಬೈತಡ್ಕದಲ್ಲಿರುವ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಲ್ಲಿ ಪಶು ವೈದ್ಯಕೀಯ ಪರೀಕ್ಷಕರ ಮತ್ತು ಸಿಬ್ಬಂದಿಗಳ ಕೊರತೆಯಿದೆ. ಈಗಾಗಲೇ ಒಬ್ಬರು ಸುಳ್ಯದಿಂದ ಕಡಬ ಪಶು ವೈದ್ಯಕೀಯ ಆಸ್ಪತ್ರೆಗೆ ವರ್ಗಾವಣೆಗೊಂಡು ಬಂದಿದ್ದಾರೆ. ಬರುವ ತಿಂಗಳಿನಿಂದ ಅವರನ್ನು ನಿಯೋಜನೆ ಮೇರೆಗೆ ಬೈತಡ್ಕ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಕ್ಕೆ ಕಳುಹಿಸಲಾಗುವುದು. –
ಡಾ.ಅಜಿತ್ ,ಪಶು ವೈದ್ಯಾಧಿಕಾರಿ, ಪಶು ವೈದ್ಯಕೀಯ ಆಸ್ಪತ್ರೆ ಕಡಬ
ಬೈತಡ್ಕದಲ್ಲಿರುವ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳು ಇಲ್ಲದಿರುವುದರಿಂದ ಗ್ರಾಮಸ್ಥರಿಗೆ ತುಂಬಾ ಕಷ್ಟವಾಗಿದೆ. ಗೋವುಗಳಿಗೆ ಯಾವುದೇ ತೊಂದರೆಯಾದರೂ ನಾವು ಪಂಜ ಅಥವಾ ಭಕ್ತಕೋಡಿ ಪಶು ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ಎದುರಾಗಿದೆ. ಸಂಬಂಧಪಟ್ಟ ಗ್ರಾಮ ಪಂಚಾಯತ್, ಜನಪ್ರತಿನಿಧಿಗಳು, ಅಧಿಕಾರಿಗಳು ತಕ್ಷಣ ಈ ಸಮಸ್ಯೆಯನ್ನು ಬಗೆಹರಿಸಬೇಕು.
– ಜಗದೀಶ್ ಅಗಳಿ