ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ, ಹರೇಕಳ ಹಾಜಬ್ಬ ಸಹಿತ ನಾಲ್ವರಿಗೆ ಸಹ್ಯಾದ್ರಿ ಸಿರಿ ಪ್ರಶಸ್ತಿ ಪ್ರದಾನ
ಪುತ್ತೂರು: ಒಳಮೊಗ್ರು ಗ್ರಾಮದ ಕೈಕಾರ ಸಹ್ಯಾದ್ರಿ ಫ್ರೆಂಡ್ಸ್ ನಿಂದ ಏಳನೇ ವರ್ಷದ ಆಟಿದ ತಿಂಗೊಳ್ಡ್ ಕೆಸರ್ ಡೊಂಜಿ ದಿನ ವಿವಿಧ ಕ್ರೀಡಾಕೂಟಗಳು ಹಾಗೂ ಸಹ್ಯಾದ್ರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕೈಕಾರ ಪಳ್ಳತ್ತಾರು ಧೂಮಾವತಿ ದೈವಸ್ಥಾನದ ಬಳಿಯ ಗದ್ದೆಯಲ್ಲಿ ಆ. 13ರಂದು ನಡೆಯಲಿದೆ.
ಕಾರ್ಯಕ್ರಮವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ದೀಪ ಪ್ರಜ್ವಲಿಸಲಿದ್ದಾರೆ. ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಒಳಮೊಗ್ರು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಳ್ಳತ್ತಾರು, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಸಹಿತ ಹಲವು ಮಂದಿ ಗಣ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಅಧ್ಯಕ್ಷತೆ ವಹಿಸಲಿದ್ದಾರೆ. ಬಿಜೆಪಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಆರ್ಯಾಪು ಗ್ರಾ.ಪಂ ಸದಸ್ಯ ಬೂಡಿಯಾರು ಪುರುಷೋತ್ತಮ ರೈ, ಸೀತಾರಾಮ ರೈ ಕೈಕಾರ ಸೇರಿದಂತೆ ಹಲವು ಮಂದಿ ಗಣ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ.
ವಿವಿಧ ಕ್ರೀಡಾಕೂಟ: ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಪುರುಷರಿಗೆ ವಾಲಿಬಾಲ್, ಹಗ್ಗಜಗ್ಗಾಟ ವಿಶೇಷವಾಗಿ ನಡೆಯಲಿದ್ದು ವಾಲಿಬಾಲ್ ನಲ್ಲಿ ಪ್ರಥಮ ರೂ.5001, ದ್ವಿತೀಯ ರೂ.4001, ಹಗ್ಗಜಗ್ಗಾಟದಲ್ಲಿ ಪ್ರಥಮ ರೂ.4001, ದ್ವಿತೀಯ ರೂ.3001, ತೃತೀಯ ರೂ.20001, ಚತುರ್ಥ ರೂ.1001. ನಗದು ಹಾಗೂ ಸಹ್ಯಾದ್ರಿ ಟ್ರೋಫಿ ನೀಡಲಾಗುವುದು. ಉಳಿದಂತೆ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ನಡೆಯುವ ಕ್ರೀಡಾಕೂಟದಲ್ಲಿ ಹಿಮ್ಮುಖ ಓಟ, ಕೆಸರುಗದ್ದೆ ಓಟ, ಹಾಳೆ ಎಳೆತ, ಉಪ್ಪುಮೂಟೆ, ಗೋಣಿಚೀಲ ಓಟ, ಡೊಂಕ ಓಟ, ನಿಧಿ ಶೋಧನೆ, ಅಪ್ಪಂಗಾಯಿ, ಮೂರುಕಾಲಿನ ಓಟ, ಅಡ್ಡಕಂಬ ನಡಿಗೆ ಹಾಗೂ ಮಹಿಳೆಯರು ಮತ್ತು ಪುರುಷರಿಗೆ ಮಡಿಕೆ ಒಡೆಯುವುದು ಮತ್ತು ಕಂಬ ಸುತ್ತು ಓಟ ಸ್ಪರ್ಧೆಗಳು ನಡೆಯಲಿದೆ ಎಂದು ಸಹ್ಯಾದ್ರಿ ಫ್ರೆಂಡ್ಸ್ ಕ್ಲಬ್ ನ ಪ್ರಕಟಣೆ ತಿಳಿಸಿದೆ.
ಸಹ್ಯಾದ್ರಿ ಸಿರಿ ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಜಲ ಭಗೀರಥ ಅಮೈ ಮಹಾಲಿಂಗ ನಾಯ್ಕ, ಅಕ್ಷರ ಸಂತ ಹರೇಕಳ ಹಾಜಬ್ಬ, ಪುತ್ತೂರು ಪ್ರಜ್ಞಾ ಆಶ್ರಮವಿಶೇಷ ಚೇತನರ ಪಾಲಕ ಅಣ್ಣಪ್ಪ ವಿ.ಯಂ., ಕಲಾಕ್ಷೇತ್ರದ ಸಾಧಕ ದೀಪಕ್ ರೈ ಮತ್ತು ಇಂಡಿಯಾ ಬುಕ್ ರೆಕಾರ್ಡ್ ನಲ್ಲಿ ಆರಾಧ್ಯ ರೈ ತೊಟ್ಲರವರಿಗೆ ‘ಸಹ್ಯಾದ್ರಿ ಸಿರಿ ಪ್ರಶಸ್ತಿ’ ಹಾಗೂ ಬೊಳುವಾರು ಹಿ.ಪ್ರಾ ಶಾಲಾ ಶಿಕ್ಷಕಿ ಮೋನಿಕಾ ಮಾಡ್ತರವರನ್ನು ಗೌರವಪೂರ್ವಕ ಸನ್ಮಾನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.