34 ನೆಕ್ಕಿಲಾಡಿ ಗ್ರಾ.ಪಂ-ಅಧ್ಯಕ್ಷರಾಗಿ ಸುಜಾತ ರೈ, ಉಪಾಧ್ಯಕ್ಷರಾಗಿ ಹರೀಶ್‌ ಡಿ ಆಯ್ಕೆ

0

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾ.ಪಂ.ನ ಅಧ್ಯಕ್ಷರಾಗಿ ಸುಜಾತ ರೈ ಅಲಿಮಾರ್ ಹಾಗೂ ಉಪಾಧ್ಯಕ್ಷರಾಗಿ ಹರೀಶ್ ಡಿ. ಆಯ್ಕೆಯಾಗಿದ್ದಾರೆ.


ಇಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲಾತಿ ಬಂದಿತ್ತು. ಒಟ್ಟು 11 ಸದಸ್ಯ ಬಲವಿದ್ದು, ಎಲ್ಲರೂ ಬಿಜೆಪಿ ಬೆಂಬಲಿತರಾಗಿ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾದವರು. ಆದರೆ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸದಸ್ಯರಾದ ಪ್ರಶಾಂತ್ ಎನ್., ಸ್ವಪ್ನ ಗಾಣಿಗ, ವಿಜಯಕುಮಾರ್, ಹರೀಶ್ ಕೆ. ಅವರು ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದರು. ಇಂದು ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯೆ ಸುಜಾತ ಆರ್. ರೈ ಹಾಗೂ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಸ್ವಪ್ನ ಗಾಣಿಗ ನಾಮಪತ್ರ ಸಲ್ಲಿಸಿದ್ದರು.

ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯ ಹರೀಶ್ ಡಿ., ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಹರೀಶ್ ಕೆ., ವಿಜಯಕುಮಾರ್ ನಾಮಪತ್ರ ಸಲ್ಲಿಸಿದ್ದರು. ಬಳಿಕ ಸ್ವಪ್ನ ಗಾಣಿಗರವರು ತನ್ನ ನಾಮಪತ್ರವನ್ನು ಹಿಂದೆಗೆದುಕೊಂಡಿದ್ದು, ಅಧ್ಯಕ್ಷೆಯಾಗಿ ಸುಜಾತ ಆರ್. ರೈ ಅವಿರೋಧವಾಗಿ ಆಯ್ಕೆಯಾದರು.

ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರದಲ್ಲಿ ವಿಜಯಕುಮಾರ್ ಅವರು ಮಾತ್ರ ತನ್ನ ನಾಮಪತ್ರವನ್ನು ಹಿಂದೆಗೆದುಕೊಂಡಿದ್ದು, ಇಲ್ಲಿ ಬಿಜೆಪಿ ಬೆಂಬಲಿತ ಸದಸ್ಯ ಹರೀಶ್ ಡಿ. ಹಾಗೂ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿರುವ ಹರೀಶ್ ಕೆ. ಅವರ ಮಧ್ಯೆ ನೇರ ಸ್ಪರ್ಧೆ ನಡೆಯಿತು. ಚುನಾವಣೆ ನಡೆದು, ಮತ ಎಣಿಕೆ ಆದಾಗ ಹರೀಶ್ ಕೆ. 4 ಮತಗಳನ್ನು ಪಡೆದು ಪರಾಭವಗೊಂಡರೆ, 7 ಮತಗಳನ್ನು ಪಡೆದ ಹರೀಶ್ ಡಿ. ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಗ್ರಾ.ಪಂ. ಪಿಡಿಒ ಸತೀಶ್ ಬಂಗೇರ ಹಾಗೂ ಲೆಕ್ಕ ಸಹಾಯಕ ದೇವಪ್ಪ ಸಹಕರಿಸಿದರು.

LEAVE A REPLY

Please enter your comment!
Please enter your name here