ಪುತ್ತೂರಿಗೆ ಮೆಡಿಕಲ್ ಕಾಲೇಜು ಪ್ರಸ್ತಾಪನೆಯಿದೆ ಮುಖ್ಯಮಂತ್ರಿಯವರೇ ತೀರ್ಮಾನಿಸುತ್ತಾರೆ-ದಿನೇಶ್ ಗುಂಡೂರಾವ್

0

ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ, ಸರಕಾರಿ ಆಸ್ಪತ್ರೆಗೆ ಭೇಟಿ


ಪುತ್ತೂರು:ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಮೆಡಿಕಲ್ ಕಾಲೇಜುಗಳಾಗಬೇಕು ಎಂಬ ಪ್ರಸ್ತಾವನೆಗಳಿವೆ.ಮಂಗಳೂರಿನಲ್ಲಿ ಸಾಕಷ್ಟು ಖಾಸಗಿ ವೈದ್ಯಕೀಯ ಕಾಲೇಜುಗಳಿರುವುದರಿಂದ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಆಗಬೇಕು ಎನ್ನುವ ಪ್ರಸ್ತಾವನೆಯಿದೆ.ಅದು ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಕ ಆಗಬೇಕಿದ್ದು ಇದನ್ನು ಮುಖ್ಯಮಂತ್ರಿಗಳೇ ತೀರ್ಮಾನ ಮಾಡುತ್ತಾರೆ.ಹೀಗಾಗಿ ನಾನು ಆರೋಗ್ಯ ಸಚಿವನಾಗಿ ಅಲ್ಲ, ಜಿಲ್ಲಾ ಉಸ್ತುವಾರಿ ಸಚಿವನಾಗಿ ಮೆಡಿಕಲ್ ಕಾಲೇಜಿನ ಬೇಡಿಕೆಯ ವಿಚಾರದಲ್ಲಿ ಮುಖ್ಯಮಂತ್ರಿಗಳ ಜತೆಗೆ ಮಾತನಾಡುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.


ಆ.11ರಂದು ಪುತ್ತೂರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯ ಪ್ರಾರಂಭದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಅಂದಾಜುಪಟ್ಟಿ ಆಗಿದೆ.ಈಗಾಗಲೇ ಆಗಿರುವಲ್ಲಿ ಹೊಸ ಕಟ್ಟಡಗಳು ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ. ಅಲ್ಲಿ ಸಿಬ್ಬಂದಿ, ವೈದ್ಯರು, ಸಲಕರಣೆಗಳ ಕೊರತೆಯಿದೆ. ಸಮುದಾಯ ಆರೋಗ್ಯ ಕೇಂದ್ರಗಳು, ಆಸ್ಪತ್ರೆಗಳಲ್ಲಿರುವ ಕೊರತೆಗಳನ್ನು ಭರ್ತಿ ಮಾಡಲು ಈ ವರ್ಷ ಆಯ ವ್ಯಯದಲ್ಲಿ ತಿಳಿಸಲಾಗಿದೆ ಎಂದರು.


ತಾಲೂಕು ಆಸ್ಪತ್ರೆಗಿಂತ ಮೇಲ್ಮಟ್ಟದಲ್ಲಿರುವ ಪುತ್ತೂರಿನ ಸರಕಾರಿ ಆಸ್ಪತ್ರೆ ಬಗ್ಗೆ ವಿಶೇಷ ಗಮನ ನೀಡಲಾಗುವುದು.ಹೊಸ ಕಟ್ಟಡದ ಪ್ರಸ್ತಾವನೆಗೆ ಮಂಜೂರಾತಿಗೆ ಆದೇಶ ನೀಡಲಾಗುವುದು.ಇಲ್ಲಿನ ಸರಕಾರಿ ಆಸ್ಪತ್ರೆಯ ಕಟ್ಟಡಕ್ಕೆ 125 ವರ್ಷಗಳ ಇತಿಹಾಸವಿದ್ದು ಅದನ್ನು ಉಳಿಸಿಕೊಂಡು ಹೊಸ ಕಟ್ಟಡ ನಿರ್ಮಿಸಲಾಗುವುದು, ಹೊಸ ಕಟ್ಟಡದಲ್ಲಿ ಐಸಿಯು, ಮಾಡ್ಯುಲರ್, ಹೊಸ ಶವಾಗಾರ, ಲ್ಯಾಬ್‌ಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು.ಸಿಬ್ಬಂದಿಗಳ ಕೊರತೆ ನೀಗಿಸಲು ಹೊರಗುತ್ತಿಗೆಯಲ್ಲಿ ನೇಮಕ ಮಾಡಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಹಲವು ವರ್ಷಗಳಿಂದ ನೇಮಕಾತಿಯಾಗದೇ ಸಿಬ್ಬಂದಿಗಳ ಸಮಸ್ಯೆಯಿದೆ.ಪುತ್ತೂರಿನಲ್ಲಿಯೂ 5 ಮಂದಿ ಲ್ಯಾಬ್ ಟೆಕ್ನಿಷಿಯನ್ ಕೊರತೆಯಿದೆ. ಹಲವು ಕಡೆಗಳಲ್ಲಿ ಹುದ್ದೆ ಖಾಲಿಯಿದೆ.ಸಿಬ್ಬಂದಿಗಳ ಕೊರತೆ ರಾಜ್ಯದಲ್ಲಿಯೇ ದೊಡ್ಡ ಸಮಸ್ಯೆಯಿದೆ.ಕೆಲವು ಕಡೆ ಹೊರಗುತ್ತಿಗೆಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗಿದೆ.ಉಳಿದಿರುವ ಕಡೆ ನೇಮಕಾತಿ ಮಾಡಲಾಗುವುದು. 500 ಮಂದಿ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು.ಇದರಲ್ಲಿ ಸಂಪೂರ್ಣ ಭರ್ತಿ ಮಾಡಲು ಸಾಧ್ಯವಿಲ್ಲ.ಸರಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ ಎಂದರು.


ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು,ಹೆಲ್ತ್‌ನ್ಯೂಟ್ರಿಷಿಯನ್ ಸರ್ವೆ ಕಾರ್ಯಗಳು ಶೇ.60ರಷ್ಟು ಆಗಿದೆ.ಅಂಗನವಾಡಿಗಳನ್ನು ಸೇರಿಸಿಕೊಂಡು ಉಳಿದಿರುವುದನ್ನು ಪೂರ್ಣಗೊಳಿಸಬೇಕು. ಯಶಸ್ವಿನಿ ಯೋಜನೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಅವಕಾಶ ಇಲ್ಲದಿರುವ ಬಗ್ಗೆ ವಿಚಾರಿಸಲಾಗುವುದು ಎಂದರು.
ಅಂಗನವಾಡಿಗಳಿಗೆ ಕಳಪೆ ಮೊಟ್ಟೆ ವಿತರಣೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಂಗನವಾಡಿಗಳಿಗೆ ಗುಣ ಮಟ್ಟದ ಮೊಟ್ಟೆ ಸರಬರಾಜು ಮಾಡುವ ನಿಟ್ಟಿನಲ್ಲಿ ವಿಭಾಗೀಯ ಮಟ್ಟದಲ್ಲಿ ಟೆಂಡರ್ ಆಗಿದೆ.ಅವರ ಮೂಲಕ ಸರಬರಾಜು ಆಗಲಿದೆ ಎಂದರು.


ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಬಗ್ಗೆ ಮಾತನಾಡಿದ ಸಚಿವರು ಕೆಲವು ಕಡೆ ಮಾತ್ರ ಪ್ರಾಥಮಿಕ ಆರೋಗ್ಯ ಕೇಂದ್ರಗಳು 24 ಗಂಟೆ ಕಾರ್ಯನಿರ್ವಹಿಸುತ್ತಿದೆ.ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ಅರೆ ವೈದ್ಯಕಿಯ ಸಿಬ್ಬಂದಿಗಳ ಕೊರತೆಯಿದೆ.ಎಂಬಿಬಿಎಸ್ ಆದ ವಿದ್ಯಾರ್ಥಿಗಳು ಒಂದು ವರ್ಷ ಕಡ್ಡಾಯ ಕಾರ್ಯನಿರ್ವಹಿಸಬೇಕಾಗಿದ್ದು ಅವರನ್ನು ಖಾಲಿ ಇರುವ ಕೇಂದ್ರಗಳಿಗೆ ಕೌನ್ಸಿಲಿಂಗ್ ಮೂಲಕ ನೇಮಕ ಮಾಡಿಕೊಳ್ಳಲಾಗುವುದು.ಹೀಗಾಗಿ ವೈದ್ಯರ ಕೊರತೆಯಾಗುವುದಿಲ್ಲ. ಫಾರ್ಮಸಿಸ್ಟ್, ಲ್ಯಾಬ್ ಟಿಕ್ನಿಷಿಯನ್ ಕೊರತೆಯಿದೆ.ಅರೆ ವೈದ್ಯಕೀಯ ಸಿಬ್ಬಂದಿ ಕೊರತೆಯಿಲ್ಲ.ಈ ವರ್ಷ 5 ಕಡೆ ಸಿಟಿ ಸ್ಕ್ಯಾನ್ ಹಾಗೂ 15 ಕಡೆ ಎಂಆರ್‌ಐ ಸ್ಕ್ಯಾನ್ ವ್ಯವಸ್ಥೆ ನೀಡಲಾಗುವುದು.ಮುಂದಿನ ವರ್ಷ ಇತರ ಕೇಂದ್ರಗಿಗೂ ಖಂಡಿತಾ ನೀಡಲಾಗುವುದು ಎಂದು ಸಚಿವರು ತಿಳಿಸಿದರು.


ಪ್ಲಾಟಿಂಗ್ ಸಮಸ್ಯೆ ಬಗ್ಗೆ ವಿಶೇಷ ಸಭೆ: ಬಡವರಿಗೆ ತೊಂದರೆಯಾಗದಂತೆ 94ಸಿ, 94ಸಿಸಿ ಹಕ್ಕುಪತ್ರಗಳನ್ನು ತ್ವರಿತವಾಗಿ ವಿತರಿಸಲು ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ.ಪ್ಲಾಟಿಂಗ್ ಬಗ್ಗೆ ಕಂದಾಯ ಇಲಾಖೆಯಲ್ಲಿ ತಾಂತ್ರಿಕ ಸಮಸ್ಯೆಗಳಿರುವುದರಿಂದ ಕಂದಾಯ ಸಚಿವರು, ಶಾಸಕರು, ಭೂ ದಾಖಲೆಗಳ ಇಲಾಖೆ ಜಿಲ್ಲಾಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.


ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆಯ ಬಗ್ಗೆ ಮೆಚ್ಚುಗೆ:
ಬಳಿಕ ನಡೆದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಗ್ಯ ಇಲಾಖೆ ಪುತ್ತೂರಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಸರಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳ ಬಗ್ಗೆ ತಾಲೂಕು ವೈದ್ಯಾಧಿಕಾರಿಗಳು, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಲ್ಲಿ ಸಚಿವರು ಮಾಹಿತಿ ಪಡೆದುಕೊಂಡರು.ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ ಇಲಾಖೆಯ ಕಾರ್ಯಕ್ರಮಗಳು, ಅದರ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು.ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಆಶಾಜ್ಯೋತಿ ಸರಕಾರಿ ಆಸ್ಪತ್ರೆಯಲ್ಲಿರುವ ಸೇವೆಗಳ, ಕೊರತೆಗಳ ಬಗ್ಗೆ ಸಚಿವರ ಗಮನಕ್ಕೆ ತಂದರು.ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಶಿರಾಡಿ, ಪಾಲ್ತಾಡಿ ಹಾಗೂ ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬರುವ ಜನರ ಪ್ರಮಾಣ ತೀರಾ ಕಡಿಮೆಯಿದ್ದು ಇದರ ಬಗ್ಗೆ ಪರಿಶೀಲನೆ ನಡೆಸುವಂತೆ ತಾಲೂಕು ವೈದ್ಯಾಧಿಕಾರಿಗಳಿಗೆ ಸಚಿವರು ಸೂಚಿಸಿದರು.ಇಲಾಖೆಯಲ್ಲಿ ಪ್ರಮುಖವಾಗಿ ಟೆಕ್ನಿಷಿಯನ್, ಫಾರ್ಮಸಿಸ್ಟ್, ಕಿರಿಯ ಅರೋಗ್ಯ ಸಹಾಯಕಿಯ ಕೊರತೆ, ವಾಹನದ ಕೊರತೆಗಳ ಬಗ್ಗೆ ವೈದ್ಯಾಧಿಕಾರಿಗಳು ಸಚಿವರ ಗಮನಕ್ಕೆ ತಂದರು.


ಸನ್ಮಾನ: ಸಭೆಯಲ್ಲಿ ಸಚಿವ ದಿನೇಶ್ ಗಂಡೂ ರಾವ್ ಹಾಗೂ ಶಾಸಕ ಅಶೋಕ್ ಕುಮಾರ್ ರೈಯವರನ್ನು ತಾಲೂಕು ವೈದ್ಯಾಧಿಕಾರಿಗಳ ಕಚೇರಿ ವತಿಯಿಂದ ಸನ್ಮಾನಿಸಿ, ಗೌರವಿಸಿದರು.


ಸರಕಾರಿ ಆಸ್ಪತ್ರೆಗೆ ಭೇಟಿ: ಪ್ರಗತಿ ಪರಿಶೀಲನಾ ಸಭೆಯ ಪ್ರಾರಂಭದಲ್ಲಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ದಿನೇಶ್ ಗುಂಡೂರಾವ್ ಆಸ್ಪತ್ರೆಯ ಕಾರ್ಯವೈಖರಿಯ ಬಗ್ಗೆ ಮಾಹಿತಿ ಪಡೆದುಕೊಂಡರು.ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾಜ್ಯೋತಿ ಮಾಹಿತಿ ನೀಡಿದರು. ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಆರೋಗ್ಯವನ್ನು ಸಚಿವರು ವಿಚಾರಿಸಿದರು.


ಆರೋಗ್ಯ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ಡಾ.ರಾಜೇಶ್ವರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿ ಡಾ.ಕಿಶೋರ್ ಕುಮಾರ್, ಜಿ.ಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಆನಂದ್, ಸಹಾಯಕ ಆಯುಕ್ತ ಗಿರೀಶ್‌ನಂದನ್, ತಹಶೀಲ್ದಾರ್ ಜೆ.ಶಿವಶಂಕರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಬದ್ರುದ್ದೀನ್, ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ನವೀನ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಸರಕಾರಿ ಅಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here