ಆಟಿ ತಿಂಗಳು ಹಿರಿಯರಿಗೆ ಆರೋಗ್ಯದ ಬಲವರ್ಧನೆಯಾಗಿತ್ತು-ದಿನೇಶ್ ಶೆಟ್ಟಿ
ಪುತ್ತೂರು: ಹಿಂದಿನ ಕಾಲದ ಹಿರಿಯರು ಪ್ರಕೃತಿಯನ್ನು ನಂಬಿದವರು ಮಾತ್ರವಲ್ಲ ಪ್ರಕೃತಿದತ್ತವಾದ ತಿನಸುಗಳನ್ನು ತಿಂದು ಬದುಕಿದ್ದವರು. ವರ್ಷದ ಹನ್ನೆರಡು ತಿಂಗಳೂ ಕೂಡ ವಿಶೇಷವಾಗಿತ್ತು ಆದರೆ ಆಟಿ ತಿಂಗಳು ಮಾತ್ರ ಮನುಷ್ಯನ ಆರೋಗ್ಯದ ಬಲವರ್ಧನೆ ತಿಂಗಳಾಗಿತ್ತು ಎಂದು ರಾಜ್ಯಶಾಸ್ತ್ರ ಉಪನ್ಯಾಸಕ ದಿನೇಶ್ ಶೆಟ್ಟಿ ಅಳಿಕೆರವರು ಹೇಳಿದರು.
ಆ.11ರಂದು ಮಹಾವೀರ ವೆಂಚರ್ಸ್ ನಲ್ಲಿ ರೋಟರಿ ಕ್ಲಬ್ ಪುತ್ತೂರು ಇದರ ವತಿಯಿಂದ ನಡೆದ ತುಳುವೆರ ಆಟಿದ ಕೂಟದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಜಾಗತಿಕ ಮಟ್ಟದಲ್ಲಿ ರೋಟರಿ ಸಂಸ್ಥೆಯು ಅಸಾಮಾನ್ಯ ಸಾಧನೆಯನ್ನೇ ಮಾಡಿದೆ. ಯಾವುದೇ ಸ್ವಾರ್ಥವಿಲ್ಲದೆ ತಾನೂ ಸಮಾಜದಲ್ಲಿ ತೊಡಗಿಸಿಕೊಂಡು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವವರು ರೊಟೇರಿಯನ್ಸ್ ಗಳು ಎಂಬುದು ಉಲ್ಲೇಖನೀಯ ಎಂದರು.
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿ ಮಾತನಾಡಿ, ಆಟಿದ ತಿಂಗಳು ಹಿರಿಯರಿಗೆ ಕಷ್ಟದ ತಿಂಗಳಾಗಿತ್ತು. ಆದರೆ ಇಂದಿನ ಯುವ ಪೀಳಿಗೆಗೆ ಇದರ ಮಹತ್ವ ತಿಳಿಯದು. ಜೀವನ ಎನ್ನುವುದು ಎಷ್ಟೊಂದು ಕಷ್ಟಕರ ಎಂಬುದನ್ನು ಹಿರಿಯರಿಂದ ತಿಳಿಯಬೇಕಾಗಿದೆ ಮಾತ್ರವಲ್ಲ ಇದನ್ನು ಮುಂದಿನ ಪೀಳಿಗೆಗೆ ತಿಳಿಯಪಡಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಬಾಲಕಿಗೆ ನೆರವಿನಹಸ್ತ:
ಕ್ಲಬ್ ಸದಸ್ಯ ಕಿಶನ್ ಬಿ.ವಿರವರ ಸಹೋದರ ಕಿರಣ್ ಬಿ.ವಿರವರ ಪುತ್ರಿ ಅನಾರೋಗ್ಯದಿಂದ ಬಳಲುತ್ತಿರುವ ಸೋನಲ್ ರವರ ಹೆಚ್ಚಿನ ಚಿಕಿತ್ಸೆಗೆ ನೆರವಾಗಲು ಕ್ಲಬ್ ಸದಸ್ಯರಿಂದ ಸಂಗ್ರಹಿಸಿದ ರೂ.1.80 ಲಕ್ಷ ಮೌಲ್ಯದ ಚೆಕ್ ಅನ್ನು ಈ ಸಂದರ್ಭದಲ್ಲಿ ಸದಸ್ಯ ಕಿಶನ್ ಬಿ.ವಿರವರಿಗೆ ಹಸ್ತಾಂತರಿಸಲಾಯಿತು. ಕ್ಲಬ್ ಕೋಶಾಧಿಕಾರಿ ಸಂಕಪ್ಪ ರೈ ಉಪಸ್ಥಿತರಿದ್ದರು.
ಅದೃಷ್ಟಶಾಲಿ ರೊಟೇರಿಯನ್:
ಆಟಿ ಕೂಟದ ಪ್ರಯುಕ್ತ ಏರ್ಪಡಿಸಿದ ಅದೃಷ್ಟಶಾಲಿ ರೊಟೇರಿಯನ್ ಸ್ಪರ್ಧೆಯಲ್ಲಿ ಸದಸ್ಯ ಸೋಮಪ್ಪ ಗೌಡರವರು ಅದೃಷ್ಟಶಾಲಿ ವ್ಯಕ್ತಿಯಾಗಿ ಮೂಡಿಬಂದಿದ್ದು, ಅವರಿಗೆ ಕ್ಲಬ್ ಅಧ್ಯಕ್ಷ ಬಹುಮಾನ ನೀಡಿ ಗೌರವಿಸಿದರು. ಸದಸ್ಯ ಹೆರಾಲ್ಡ್ ಮಾಡ್ತಾ ಕಾರ್ಯಕ್ರಮ ನಿರ್ವಹಿಸಿದರು.
ಕ್ಲಬ್ ನಿಕಟಪೂರ್ವ ಅಧ್ಯಕ್ಷ ಉಮಾನಾಥ್ ಪಿ.ಬಿ, ನಿಯೋಜಿತ ಅಧ್ಯಕ್ಷ ಡಾ.ಶ್ರೀಪತಿ ರಾವ್, ಕ್ಲಬ್ ಸರ್ವಿಸ್ ನಿರ್ದೇಶಕ ಡಾ.ಶ್ರೀಪ್ರಕಾಶ್ ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ ಸದಸ್ಯ ಹರೀಶ್ ಶಾಂತಿ ಪ್ರಾರ್ಥಿಸಿದರು. ಸಂಪನ್ಮೂಲ ವ್ಯಕ್ತಿಯ ಪರಿಚಯವನ್ನು ಸುದ್ದಿ ಮೀಡಿಯಾದ ನಿರೂಪಕಿ ಹೇಮಾ ಜಯರಾಂರವರು ನೀಡಿದರು. ಕ್ಲಬ್ ಕಾರ್ಯದರ್ಶಿ ಸುಜಿತ್ ರೈ ವರದಿ ಮಂಡಿಸಿದರು. ಸುಬ್ಬಪ್ಪ ಕೈಕಂಬ ಕಾರ್ಯಕ್ರಮ ನಿರೂಪಿಸಿದರು.
ರಂಜಿಸಿದ ಆಟಿ ಕಳೆಂಜ..
ಕಾರ್ಯಕ್ರಮದ ಆರಂಭದಲ್ಲಿ ಮಾರಿ ಓಡಿಸುವ ಆಟಿ ಕಳೆಂಜನ ಆಗಮನ ಎಲ್ಲರ ಗಮನ ಸೆಳೆಯಿತು. ಆನೆಟ್ ಕು.ಸಾಧ್ವಿರವರ ನಲಿಕೆಯೊಂದಿಗೆ ಕ್ಲಬ್ ಸದಸ್ಯರಾದ ಎಂ.ಜಿ ರೈಯವರ ಪಾಡ್ದನದಲ್ಲಿ ಪ್ರೇಮಾನಂದರವರು ಆಟಿ ಕಳೆಂಜನ ವೇಷಭೂಷಣ ಧರಿಸಿ ಸಭೆಗೆ ಆಗಮಿಸಿರುವುದು ಸಭಿಕರಿಗೆ ರಸದೌತಣ ನೀಡಿದರು.
ಆಟಿದ ಗಮ್ಮತ್ತ್ ಆಟಿಲ್..
ಆಟಿದ ಗಮತ್ತ್ ಆಟಿಲ್ ನಲ್ಲಿ ವೆಲ್ಕಂ ಡ್ರಿಂಕ್ ಮತ್ತು ಸ್ನ್ಯಾಕ್ಸ್, ಸೇಮಿಗೆ ರಸಾಯನ, ದೊಣ್ಣೆ ಮೆಣಸು ಪೋಡಿ, ಪುಂಡಿ ಗಸಿ, ಹೆಸರುಬೇಳೆ ಪಾಯಸ, ಹುರುಳಿ ಚಟ್ನಿ, ಲಡ್ಡು, ಗುಂಡಿಯಪ್ಪ, ಖಾರ ಅವಲಕ್ಕಿ, ಹಲಸಿನ ಹಣ್ಣಿನ ಗಟ್ಟಿ, ಬಾಳೆದಿಂಡು ಪಲ್ಯ, ಮಿಕ್ಸೆಡ್ ಸಲಾಡ್, ಕಣಿಲೆ ಪುಳಿ ಕಜಿಪು, ತಜಂಕ್, ಪೆಲತ್ತರಿ ಪಲ್ಯ, ಪತ್ರೋಡೆ, ಹಾಗಲಕಾಯಿ ಪಲ್ಯ, ಸೇಮಿಗೆ ಪಾಯಸ, ಉಪ್ಪಡ್ ಪಚ್ಚಿಲ್, ಅತ್ರಾಸ್, ಮಣ್ಣಿ, ಚೇವುದ ಇರೆತ ಚಟ್ಟಂಬಡೆ, ಬಾರೆದ ಪಂರ್ದ್, ದೂದ್ ಪೇಡ, ಪಾಯಸ, ಕಡಲೆ ಪಾಯಸ, ಘರ್ಜಿಕಾಯಿ(ಸ್ವೀಟ್), ನಾಟಿಕೋಳಿ ಸುಕ್ಕ, ಮೊಟ್ಟೆ ಗಸಿ, ಕಡ್ಲೆ ಬಲ್ಯಾರ್, ಮೀನು ಸಾರು, ಗಂಜಿ ಎಟ್ಟಿದ ಚಟ್ನಿ, ಕಲ್ತಪ, ಪಜೆ ಮಡಿಕೆ ಹೀಗೆ ಸುಮಾರು 40ಕ್ಕೂ ಮಿಕ್ಕಿ ತಿನಸುಗಳನ್ನು ರೊಟೇರಿಯನ್ಸ್ ಗಳೇ ಮಾಡಿ ತಂದಿದ್ದರು.