ಪಾಲ್ತಾಡಿ ಚಾಕೋಟೆತ್ತಡಿಯಲ್ಲಿ ಸಾರಕರೆ ದಿ.ಶೀನಪ್ಪ ಪೂಜಾರಿ ಬೊಳಿಯಾಲ ಇವರ 20ನೇ ವರ್ಷದ ಸ್ಮರಣಾರ್ಥ ಕೆಸಡೊಂಜಿ ದಿನ ,ಕಂಬಳ ಉತ್ಸವ ಮತ್ತು ರಕ್ತದಾನ ಶಿಬಿರ

0

ಸವಣೂರು : ಪಾಲ್ತಾಡಿ ಗ್ರಾಮದ ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದ ಗದ್ದೆಯಲ್ಲಿ ಲೋಹಿತ್ ಬಂಗೇರ ಬಾಲಯ, ಬಾಲಯ ಕಂಬಳ ತಂಡ ತಿಂಗಳಾಡಿ,ಅಮರ ಸಂಘಟನಾ ಸಮಿತಿ ಸುಳ್ಯ, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಹಾಗೂ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಪಾಲ್ತಾಡಿ ಇದರ ಸಹಕಾರದೊಂದಿಗೆ ಸಾರಕರೆ ದಿ.ಶೀನಪ್ಪ ಪೂಜಾರಿ ಬೊಳಿಯಾಲ ಇವರ 20ನೇ ವರ್ಷದ ಸ್ಮರಣಾರ್ಥ ಕೆಸಡೊಂಜಿ ದಿನ ಕಂಬಳ ಉತ್ಸವ ಮತ್ತು ರಕ್ತದಾನ ಶಿಬಿರ ಆ.13ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆ

ಬೆಳಿಗ್ಗೆ ಜಿ.ಪಂ.ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಕ್ರೀಡಾಂಗಣ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಕ್ರೀಡೆಯಲ್ಲಿ ಕೆಸರುಗದ್ದೆ ಆಟ ವಿಶೇಷ ಮಹತ್ವ ಪಡೆದಿದೆ. ಇಡೀ ದೇಹಕ್ಕೆ ಲವಲವಿಕೆ ,ಶಕ್ತಿ ಹಾಗೂ ಆರೋಗ್ಯ ದೊರೆಯಲಿದೆ. ವಿಶೇಷವಾಗಿ ಕೆಸರುಗದ್ದೆ ಕ್ರೀಡೆಯೊಂದಿಗೆ ಕಂಬಳ ಉತ್ಸವ ನಡೆಸಿದ್ದು ಐತಿಹಾಸಿಕ. ಗ್ರಾಮೀಣ ಪ್ರದೇಶದಲ್ಲಿ ಕಂಬಳ ಉತ್ಸವ ಆಯೋಜನೆ ಸುಲಭವಲ್ಲ. ಕ್ರೀಡೆಯ ಜತೆಗೆ ರಕ್ತದಾನ ಶಿಬಿರ ನಡೆಸಿದ್ದೂ ಅಭಿನಂದನೀಯ ಎಂದರು.

ರಕ್ತದಾನ ಶಿಬಿರಕ್ಕೆ ಚಾಲನೆ

ಸಭಾ ಕಾರ್ಯಕ್ರಮ ಉದ್ಘಾಟಿಸಿದ ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ಶೆಟ್ಟಿ ಮಾತನಾಡಿ, ಇಂದು ಉದ್ಯೋಗ ಕಾರಣದಿಂದ ಹಳ್ಳಿಯಿಂದ ದೂರವಾಗಿರುವ ಜನರನ್ನು ಮತ್ತೆ ಹಳ್ಳಿಯೆಡೆಗೆ ಸೆಳೆಯುವಲ್ಲಿ ಕೆಸರುಗದ್ದೆ ಕ್ರೀಡಾಕೂಟ ಯಶಸ್ವಿಯಾಗಿದೆ. ಅದರೊಂದಿಗೆ ಕಂಬಳ ಉತ್ಸವ ನಡೆಸಿದ್ದು ಈ ನೆಲದ ಪರಂಪರೆಯನ್ನು ಮತ್ತೆ ನೆನಪಿಸಿದೆ. ಈ ನೆಲದ ಕೆಸರಿನ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸಲು ಹಾಗೂ ನಮ್ಮ ಕ್ರೀಡೆಯನ್ನು ಪೋಷಿಸಲು ಇಂತಹ ಕಾರ್ಯಕ್ರಮ ಪೂರಕ. ಕಾರ್ಯಕ್ರಮ ಆಯೋಜಿಸಿದ ಎಲ್ಲರೂ ಅಭಿನಂದನಾರ್ಹರು ಎಂದರು.

ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಂಜೀವ ಗೌಡ ಪಾಲ್ತಾಡಿ ಮಾತನಾಡಿ,ಪಾಲ್ತಾಡಿಯಲ್ಲಿ ಕೆಸರುಗದ್ದೆ ಕ್ರೀಡಾಕೂಟ ಆಯೋಜನೆ ಮಾಡಿದ ಲೋಹಿತ್ಬಂಗೇರ ಬಾಲಯ ಮತ್ತು ಬಾಲಯ ಕಂಬಳ ತಂಡ ತಿಂಗಳಾಡಿಯುವರು ಉತ್ತಮ ಕಾರ್ಯ ಮಾಡಿದ್ದಾರೆ.ಕಂಬಳ,ಕೆಸರುಗದ್ದೆ ಕ್ರೀಡೆ, ರಕ್ತದಾನ ಆಯೋಜನೆ ಮಾಡಿರುವುದು ಶ್ಲಾಘನೀಯ,ಹಿರಿಯರಾದ ದಿ.ಸಾರಕರೆ ಶೀನಪ್ಪ ಪೂಜಾರಿ ಬೊಳಿಯಾಲ ಅವರ ಪುಣ್ಯಸ್ಮರಣೆಯ ಅಂಗವಾಗಿ ಕಾರ್ಯಕ್ರಮ ಆಯೋಜನೆ ಮಾಡಿರುವುದು ಹಿರಿಯರಿಗೆ ನೀಡಿದ ಗೌರವ ಎಂದರು.

ಕ್ರೀಡಾಂಗಣ ಉದ್ಘಾಟಿಸಿ ಆಶಾ ತಿಮ್ಮಪ್ಪ ಮಾತನಾಡುತ್ತಿರುವುದು

ಅಂತರಾಷ್ಟ್ರೀಯ ಕ್ರೀಡಾಪಟು ಅಶೋಕ್ಕುಮಾರ್ರ‍ೈ ಕಣಿಯಾರು ಮಾತನಾಡಿ,ಗ್ರಾಮೀಣ ಮಟ್ಟದಲ್ಲಿ ಕ್ರೀಡೆಯಲ್ಲಿ ತೊಡಗಿ ನಿರಂತರ ಪರಿಶ್ರಮ ಮಾಡಿದರೆ ಸಾಧನೆ ಮಾಡಲು ಸಾಧ್ಯ.ನಾನು ಕೂಡ ಗ್ರಾಮೀಣ ಪ್ರದೇಶದಿಂದಲೇ ತೊಡಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತಾಗಿದೆ ಎಂದರು.

ಸವಣೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಕಿಟ್ಟಣ್ಣ ರೈ ನಡುಕೂಟೇಲು ಮಾತನಾಡಿ,ಆಧುನಿಕ ಕಾಲಘಟ್ಟದಲ್ಲಿ ಗ್ರಾಮೀಣ ಭಾಗದ ಜನತೆ ಗದ್ದೆಯ ಕೆಸರಿನಿಂದ ದೂರವಾಗಿದ್ದಾರೆ. ಈ ಹಿಂದೆ ಪಾಲ್ತಾಡಿಯಿಂದ ಮಣಿಕ್ಕರ ದೇವಸ್ಥಾನದವರೆಗೂ ವಿಶಾಲವಾದ ಗದ್ದೆಯಿತ್ತು, ಬೇಸಾಯ ,ಗದ್ದೆಕೋರಿಯಂತಹ ಕಾರ್ಯಕ್ರಮ ನಡೆಯುತ್ತಿತ್ತು. ವಾಣಿಜ್ಯ ಬೆಳೆಗಳ ಭರಾಟೆಯಿಂದ ಗದ್ದೆ ಮಾಯವಾಗಿದೆ.ಈಗ ಅದನ್ನು ಮತ್ತೆ ಜನಮಾನಸದಲ್ಲಿ ಮೂಡುವಂತೆ ದಿ.ಸಾರಕರೆ ಶೀನಪ್ಪ ಪೂಜಾರಿಯವರ ನೆನಪಿನಲ್ಲಿ ಲೋಹಿತ್ ಬಂಗೇರ ಬಾಲಯ ಹಾಗೂ ಬೊಳಿಯಾಲ ಕುಟುಂಬಸ್ಥರು ಮಾಡಿದ್ದಾರೆ. ದಿ.ಶೀನಪ್ಪ ಪೂಜಾರಿ ಅವರು ಉತ್ತಮ ಕೃಷಿಕರಾಗಿದ್ದವರು. ದಿ.ಶೀನಪ್ಪ ಪೂಜಾರಿಯವರ ಮೊಮ್ಮಕ್ಕಳು ಕೋಣಗಳನ್ನು ಸಾಕಿ ವಿಶೇಷವಾಗಿ ನಮ್ಮ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಪಾಲ್ತಾಡಿಯಲ್ಲಿ ಒಂದೇ ದಿನ ಮೂರು ಉತ್ತಮ ಕಾರ್ಯಕ್ರಮ ಆಯೋಜನೆ ಮೂಲಕ ಐತಿಹಾಸಿಕವಾಗಿ ದಾಖಲಾಗುವಂತೆ ಮಾಡಿದ್ದಾರೆ ಎಂದರು.

ಮಂಜೊಟ್ಟಿ ತಲುಪಿದ ಕೋಣಗಳು

ಸುಳ್ಯ ಅಮರ ಸಂಘಟನೆಯ ಅಧ್ಯಕ್ಷ ಪ್ರವೀಣ್ ಕುಲಾಲ್ ಮಾತನಾಡಿ, ಪಾಲ್ತಾಡಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡಿದ ಲೋಹಿತ್ ಬಂಗೇರ ಅವರಿಗೆ ವಿಶೇಷ ಕೃತಜ್ಙತೆಗಳನ್ನು ಸಲ್ಲಿಸುವುದಾಗಿ ಹೇಳಿದರು.

ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕಿನ ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್ ಮಾತನಾಡಿ,ಕ್ರೀಡಾಕೂಟದ ಜತೆಗೆ ರಕ್ತದಾನ ಶಿಬಿರ ಆಯೋಜನೆ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸವಾಗಿದೆ ಎಂದರು.

ಪಾಲ್ತಾಡಿ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ತಾರಾನಾಥ ಬೊಳಿಯಾಲ,ಮನೋಜ್ ಕುಮಾರ್ ಮಾಡಾವು,ಪಾಲ್ತಾಡಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಜಯರಾಮ ಗೌಡ ದೊಡ್ಡಮನೆ, ,ಕಾರ್ಯಕ್ರಮ ಸಂಘಟಕ ಲೋಹಿತ್ ಬಂಗೇರ ಬಾಲಯ ,ರೋಶನ್ ಬಂಗೇರ ಬಾಲಯ, ರೋಹಿತ್ ಬಂಗೇರ ಅಡೀಲು,ನಿತಿನ್ ಬಂಗೇರ ಅಭೀರ, ಪುಷ್ಪಾವತಿ ಬಾಳಪ್ಪ ಸುವರ್ಣ ಬಾಲಯ ಮೊದಲಾದವರಿದ್ದರು.

ಕಾರ್ಯಕ್ರಮದಲ್ಲಿ ಚೆನ್ನಾವರ ಶಾಲಾ ಮುಖ್ಯ ಶಿಕ್ಷಕ ಮಲ್ಲೇಶಯ್ಯ ,ಅಂಕತ್ತಡ್ಕ ಶಾಲಾ ಮುಖ್ಯಶಿಕ್ಷಕ ಗಂಗಾಧರ ನಾಯ್ಕ,ಪಾಲ್ತಾಡಿ ಶಾಲಾ ಮುಖ್ಯ ಶಿಕ್ಷಕಿ ಸುಜಾತ ರೈ , ಹಿರಿಯ ಕ್ರೀಡಾಪಟು ರಾಜೀವಿ ಗೋಳ್ಯಾಡಿ,ಸುಳ್ಯ ಅಮರ ಸಂಘಟನಾ ಸಮಿತಿಯ ಸಂಚಾಲಕ ಹರ್ಷಿತ್ ದಾತಡ್ಕ , ಹಿರಿಯ ಕಂಬಳ ಬಿಡುವವರಾದ ಗೋಪಾಲ ವೇಣೂರು,ಲತೀಫ್ ಗುರುವಾಯನಕೆರೆ,ಯುವ ಕಂಬಳ ಓಟಗಾರ ಭವಿತ್ ಮರಕ್ಕೂರು ಅವರಿಗೆ ಗೌರವಾರ್ಪಣೆ ಮಾಡಲಾಯಿತು.

ರಾಜೀವಿ ಗೋಳ್ಯಾಡಿ ಪ್ರಾರ್ಥಿಸಿದರು.ದಾಮೋದರ ಪೂಜಾರಿ ಕೆಂಗುಡೇಲು ಸ್ವಾಗತಿಸಿ ,ಪ್ರವೀಣ್ ರೈ ನಡುಕೂಟೇಲು ವಂದಿಸಿದರು. ಶಶಿಕಾಂತ್ ಉಬರಡ್ಕ ಮಿತ್ತೂರು, ಸುಶ್ಮಿತಾ ಕಡಪಳ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಅಂಗವಾಗಿ ವಿಶೇಷವಾಗಿ ಕಂಬಳ ಸ್ಪರ್ಧಾಕೂಟದ ನಡೆಯಿತು. ಸುಮಾರು 20 ಜೋಡಿ ಕೋಣಗಳು ಪಾಲ್ಗೊಂಡಿದ್ದವು. ಅಲ್ಲದೆ ಪುರುಷರಿಗೆ ವಾಲಿಬಾಲ್, ಹಗ್ಗಜಗ್ಗಾಟ, ಕಬಡ್ಡಿ, ಮಹಿಳೆಯರಿಗೆ ಹಗ್ಗಜಗ್ಗಾಟ, ಕೆಸರುಗದ್ದೆ ಓಟ, ಮಡಕೆ ಒಡೆಯುವುದು, ಮಕ್ಕಳಿಗೆ ಹಿಮ್ಮುಖ ಓಟ, ಕೆಸರುಗದ್ದೆ ಓಟ, ಹಾಳೆ ಎಳೆತ, ಡೊಂಕ ಓಟ, ನಿಧಿ ಶೋಧನೆ, ಬುಗರಿ ಓಟ ಸೇರಿದಂತೆ ಹಲವು ಕ್ರೀಡಾಕೂಟಗಳು ನಡೆಯಿತು. ಕಂಬಳ ತೀರ್ಪುಗಾರರಾಗಿ ಸುದರ್ಶನ್ ನಾಯಕ್ ಕಂಪ ಸವಣೂರು ಸಹಕರಿಸಿದರು.
ಬೆಳಿಗ್ಗೆ ಉಪಾಹಾರ ವ್ಯವಸ್ಥೆ ,ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು.ಸಾವಿರಾರು ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು.

ದಿ.ಸಾರಕರೆ ಶೀನಪ್ಪ ಪೂಜಾರಿ

ದಿ.ಸಾರಕರೆ ಶೀನಪ್ಪ ಪೂಜಾರಿಯವರ ೨೦ನೇ ಪುಣ್ಯಸ್ಮರಣೆಯ ಅಂಗವಾಗಿ ಲೋಹಿತ್ ಬಂಗೇರ ಬಾಲಯ, ಬಾಲಯ ಕಂಬಳ ತಂಡ ತಿಂಗಳಾಡಿ ಅವರ ನೇತೃತ್ವದಲ್ಲಿನಡೆದ ಕೆಸಡೊಂಜಿ ದಿನ ,ಕಂಬಳ ಉತ್ಸವ ಮತ್ತು ರಕ್ತದಾನ ಶಿಬಿರದಲ್ಲಿ ನಗರದ ಜನ ಒಂದು ದಿನ ಬಿಡುವು ಮಾಡಿ ಕೆಸರಿನಲ್ಲಿ ಆಟವಾಡಿ ಮೈಮರೆಯುವುದಕ್ಕೆ ಕೆಸರಿಗಿಳಿದರು. ಈ ಕೆಸರು ಗದ್ದೆಯ ಕ್ರೀಡೆಗೆ ವಿಶೇಷ ನಂಬಿಕೆ ಕೂಡಾ ಜನರಲ್ಲಿದೆ. ವರ್ಷಕ್ಕೊಮ್ಮೆ ಕೆಸರುಗದ್ದೆಯಲ್ಲಿ ಕುಣಿದು ಕುಪ್ಪಳಿಸುವುದರಿಂದ ಮಣ್ಣಿನಲ್ಲಿರುವ ಔಷಧೀಯ ಗುಣಗಳು ದೇಹಕ್ಕೆ ಸ್ಪರ್ಶಿಸುತ್ತದೆ. ಇದರಿಂದ ಚರ್ಮ ವ್ಯಾಧಿಗಳು ಗುಣವಾಗುತ್ತದೆ ಎಂಬ ನಂಬಿಕೆ ಈ ಕ್ರೀಡೆಗೆ ಇನ್ನಷ್ಟು ಮಹತ್ವ ನೀಡಿದೆ.

ಪಾರಂಪರಿಕವಾಗಿ ಬೆಳೆದು ಬಂದ ಹಳ್ಳಿ , ಜನಪದ ಕ್ರೀಡೆಗಳು ಇಂದಿನ ಕಂಪ್ಯೂಟರ್ ಯುಗದಲ್ಲಿ ಮೂಲೆ ಗುಂಪಾಗುತ್ತಿವೆ. ಈ ನಿಟ್ಟಿನಲ್ಲಿ ಕೆಸರುಗದ್ದೆ ಜನಪದ ಕ್ರೀಡೆಯನ್ನು ಉಳಿಸುವ ಉದ್ದೇಶದಿಂದ ಈ ಕೆಸರುಗದ್ದೆ ಕ್ರೀಡಾಕೂಟ ಹಾಗೂ ಕಂಬಳ ಉತ್ಸವ ಆಯೋಜಿಸಲಾಗಿದೆ.

ಊರಿನ ,ಪರವೂರಿನ ಜನರು ಪರಸ್ಪರ ಕೆಸರೆರೆಚಿಕೊಂಡು ಸಂಭ್ರಮಿಸಬೇಕು ಎಂಬ ನಿಟ್ಟಿನಲ್ಲಿ ಲೋಹಿತ್ ಬಂಗೇರ ಬಾಲಯ ಹಾಗೂ ಬಾಲಯ ಕಂಬಳ ತಂಡ ತಿಂಗಳಾಡಿ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.

ಬಾಕ್ಸ್

LEAVE A REPLY

Please enter your comment!
Please enter your name here