ಪುತ್ತಿಲ ಪರಿವಾರ ಸೌಜನ್ಯ ಪ್ರಕರಣದಲ್ಲಿ ರಸ್ತೆ ತಡೆ, ಬಂದ್ ಅನಿವಾರ್ಯ ಎಂದು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದೆಂಬ ಮನವಿ

0

ಯಾಕೆಂದರೆ ಇದನ್ನು ಮೀರಬೇಕೆಂದು ಬೇರೆಯವರು ಪ್ರತಿಷ್ಠೆಯಾಗಿ ಬಯಸಿದರೆ, ಈ ಸಲದ ೧ ಗಂಟೆ ಬಂದ್, ರಸ್ತೆತಡೆ- ದಿನಗಟ್ಟಲೆ ಬಂದ್, ರಸ್ತೆ ತಡೆಗಳಾಗಿ ಪರಿಣಮಿಸಿ-ತಾಲೂಕಿಗೆ, ಜಿಲ್ಲೆಗೆ ಹರಡಿದರೆ ಅದನ್ನು ತಪ್ಪು ಎಂದು ಹೇಳುವವರು ಯಾರು ?

ನಾನು ಬರೆಯುವ ವಿಷಯವನ್ನು ಯಾರೂ ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದೆಂಬ ಉದ್ದೇಶದಿಂದ ಒಂದು ಸಣ್ಣ ಕಥೆಯಿಂದ ಪ್ರಾರಂಭಿಸುತ್ತಿದ್ದೇನೆ.
ಜನರಿಗೆ ರಸ್ತೆತಡೆ, ಬಂದ್ ತಪ್ಪು ಎಂದು ಹೇಳುವ ಶಕ್ತಿ ಬಾರದಿದ್ದರೆ ನಾನು 38 ವರ್ಷಗಳ ಕಾಲ ಪತ್ರಿಕೆಯಲ್ಲಿ ಆ ಬಗ್ಗೆ ಮಾಡಿದ ಹೋರಾಟವನ್ನು ನಿಲ್ಲಿಸುವುದು ಒಳಿತಲ್ಲವೇ ?

ಹಿಂದೆ ಒಂದು ಊರಿನಲ್ಲಿಯ ಒಂದು ವ್ಯಕ್ತಿ ಪರವೂರಿಗೆ ಅತಿಥಿಯಾಗಿ ಊಟಕ್ಕೆ ಹೋದಾಗ ಅಲ್ಲಿ ಊಟದ ತಟ್ಟೆಯ ಬದಿಯಲ್ಲಿ ಒಂದು ಸಣ್ಣ ಸುಂದರವಾದ ದೊಣ್ಣೆ ಇಟ್ಟಿರುವುದನ್ನು ನೋಡಿದನಂತೆ. ಅದನ್ನು ನೋಡಿ ಸಣ್ಣಗೆ ಹೆದರಿಕೆಯಾದರೂ ಊಟದ ನಂತರ ಅದನ್ನು ಇರಿಸಿರುವುದೇಕೆಂದು ಕುತೂಹಲದಿಂದ ಕೇಳಿದನಂತೆ. ಅದಕ್ಕೆ ಆ ಮನೆಯವರು ಅದು ಎಷ್ಟು ಖರ್ಚಾದರೂ ಪರವಾಗಿಲ್ಲ ಆ ರೀತಿಯ ದೊಣ್ಣೆಯನ್ನು ಇಡುವುದು ಸಂಪ್ರದಾಯ ಎಂದು ಹೇಳಿದರಂತೆ. ಇದರಿಂದ ಕುತೂಹಲಕ್ಕೊಳಗಾದ ಆ ವ್ಯಕ್ತಿ ಅದು ಎಲ್ಲಿಂದ ಪ್ರಾರಂಭವಾಯಿತು ಎಂದು ಹುಡುಕುತ್ತಾ ಹೋದನಂತೆ. ಅವನು ವಿಚಾರಿಸುತ್ತಾ ಹೋದಂತೆ ಅವರು ಅದನ್ನು ಇಂತಹಾ ಮನೆಯಲ್ಲಿ ನೋಡಿದ್ದೇನೆ ಎಂದು ಹೇಳಲಾರಂಭಿಸಿದರಂತೆ. ವಿಚಾರಿಸುತ್ತಾ ಹೋದಂತೆ ದೊಣ್ಣೆಯ ಸೈಜ್ ಸಣ್ಣದಾಗುತ್ತಾ ಬರಲಾರಂಭಿಸಿತಂತೆ. ಅದರ ಗಾತ್ರ ಸಣ್ಣದಾಗುತ್ತಾ ಬಂದು ಕೊನೆಯಲ್ಲಿ ಆ ಸಂಪ್ರದಾಯ ಪ್ರಾರಂಭಿಸಿದ್ದು, ಯಾರ ಮನೆಯಲ್ಲಿ ಎಂದು ವಿಚಾರಿಸಿದಾಗ ಅದು ಆ ಹುಡುಕುತ್ತಿದ್ದ ವ್ಯಕ್ತಿಯ ಮನೆಯಿಂದಲೇ ಪ್ರಾರಂಭವಾಗಿತ್ತಂತೆ. ನಾವು ಹೇಳಿದ ವ್ಯಕ್ತಿ ತಮ್ಮ ಮನೆಯಲ್ಲಿ ಊಟಕ್ಕೆ ಬಡಿಸುವಾಗ ಹಲ್ಲಿನ ಎಡೆಯಲ್ಲಿ ಸಿಕ್ಕಿಕೊಳ್ಳುವುದನ್ನು ಬಿಡಿಸಿಕೊಳ್ಳಲು ಸಣ್ಣ ಕಡ್ಡಿಯನ್ನು ಆಕರ್ಷಣೀಯವಾಗಿ ಮಾಡಿ ಇರಿಸಿದ್ದನಂತೆ, ಅದರ ಪ್ರಯೋಜನ ಉದ್ದೇಶ ಏನೆಂದು ತಿಳಿಯದೇ, ಕೇಳದೇ, ಉಳಿದವರು ತಮ್ಮ ಮನೆಯ ಕಾರ್ಯಕ್ರಮದಲ್ಲಿ ಅದಕ್ಕಿಂತ ಅಂದವಾದ ಹೆಚ್ಚು ಬೆಲೆಯ, ದೊಡ್ಡ ಗಾತ್ರದ ಕಡ್ಡಿಗಳನ್ನು ಇರಿಸುತ್ತಾ ಕೊನೆಗೆ ಅದು ದೊಣ್ಣೆಯಾಗಿ ಪರಿವರ್ತನೆಯಾಗಿತ್ತಂತೆ.


ಇದು ಯಾರನ್ನು ಅಥವಾ ಯಾವುದೇ ಪ್ರತಿಭಟನೆಯನ್ನು ಕಡಿಮೆ ಮಾಡುವ ಉದ್ದೇಶದ ಕಥೆಯಲ್ಲ. ಒಬ್ಬರು ಒಂದು ಕೆಲಸ ಮಾಡಿದರೆ ಅದಕ್ಕಿಂತ ದೊಡ್ಡ ಕೆಲಸ ತಾವು ಮಾಡಬೇಕೆಂದು ಬಯಸುವುದು ಜನರ ಸಹಜ ಗುಣ. ಸೌಜನ್ಯರ ನ್ಯಾಯಕ್ಕಾಗಿ ಪ್ರತಿಭಟನೆ ಮಾಡುವಾಗ ಊಟಕ್ಕೆ ಇಡುವ ತಟ್ಟೆಯಂತೆ ಶಕ್ತಿ ಬೇಕೇಬೇಕು. ಆದರೆ ಅಲ್ಲಿ ಇರಿಸಿದ ದೊಣ್ಣೆಯಂತೆ ರಸ್ತೆ ತಡೆ ಮತ್ತು ಬಂದ್‌ಗಳು ಪ್ರತಿಷ್ಠೆಯ ವಿಷಯವಾಗಬಾರದು. ಅಲ್ಲಿಯ ದೊಣ್ಣೆಯು ಊಟದ ಮನೆಯಲ್ಲಿ ಜಗಳ ಉಂಟಾದರೆ ಹೊಡೆದಾಟಕ್ಕೆ ಅಸ್ತ್ರವಾಗಬಹುದೇ ಖರ್ಚಿಗೆ ದಾರಿಯಾಗಬಹುದೇ ಹೊರತು ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ಅಂತೆಯೇ ಇಲ್ಲಿ ರಸ್ತೆ ತಡೆ, ಬಂದ್‌ಗಳು ನ್ಯಾಯಯುತ ಹೋರಾಟಕ್ಕೆ ಯಾವುದೇ ಪ್ರಯೋಜನ ನೀಡುವುದಿಲ್ಲ. ಅದರ ಬದಲು ಭಾಗವಹಿಸುವ ಜನರಿಗೆ ಮತ್ತು ನಿರಪರಾಧಿಗಳಿಗೆ ತೊಂದರೆಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ಮಾತ್ರ ಅದನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ.
ನನ್ನ ಹೇಳಿಕೆಯಲ್ಲಿ ತಪ್ಪಿದ್ದರೆ ನೋವಾಗಿದ್ದರೆ ಕ್ಷಮಿಸಿ, ಅದರ ಹಿಂದಿನ ಒಳ್ಳೆಯ ಉದ್ದೇಶವನ್ನು ಮಾತ್ರ ಅರ್ಥಮಾಡಿಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತಿದ್ದೇನೆ. ನಿಮಗೆ ಸಂಶಯವಿದ್ದರೆ ನಿಮಗೆ ಗೊತ್ತಿರುವ ರಿಕ್ಷಾ ಚಾಲಕರನ್ನು, ದಿನಕೂಲಿಯವರನ್ನು, ಸಣ್ಣ ಸಣ್ಣ ವ್ಯಾಪಾರಿಗಳನ್ನು, ಸಂತೆಗೆ ಮಾರಲು, ಖರೀದಿಸಲು ಬಂದವರನ್ನು, ಬಂದ್ ರಸ್ತೆ ತಡೆಯಿಂದಾಗಿ ಮನೆಗೆ, ಕೆಲಸಕ್ಕೆ ಹೋಗಲು ಸಾಧ್ಯವಾಗದೇ ದಾರಿಯಲ್ಲಿಯೇ ಉಳಿದವರನ್ನು ವಿಚಾರಿಸಿ ನೋಡಿ.
ನೀವು ಪ್ರತಿಭಟನೆ ಮಾಡುವಾಗ ನಿಮ್ಮ ಪ್ರತಿಭಟನೆಗೆ ಬಂದವರಿಗೆ ಅಲ್ಲಿ ಸೇರಿರುವವರಿಗೆ ಉತ್ತಮ ವ್ಯವಸ್ಥೆ ಮಾಡಿಕೊಟ್ಟು ಊಟಕ್ಕೆ, ಕುಡಿಯುವ ನೀರಿಗೆ ವಾಪಾಸ್ಸು ಹೋಗಲು ತೊಂದರೆಯಾಗದಂತೆ ನೋಡಿಕೊಳ್ಳುತ್ತೀರಿ ಎಂಬ ನಂಬಿಕೆ ನನಗಿದೆ. ಅದರಂತೆ ನಿಮ್ಮ ರಸ್ತೆ ತಡೆ ಮತ್ತು ಬಂದ್‌ನಿಂದ ತೊಂದರೆಗೊಳಗಾಗಿರುವ ಜನರಿಗೆ ದೂರ-ದೂರ ಹೋಗುವವರಿಗೆ, ವ್ಯಾಪಾರ ವ್ಯವಹಾರ ಕಳೆದುಕೊಂಡವರಿಗೆ ಬೇಕಾದ ವ್ಯವಸ್ಥೆಯನ್ನು ಏರ್ಪಡಿಸಿ ಅವರನ್ನು ಮನೆಗೆ ಮುಟ್ಟಿಸುವಂತೆ ಮಾಡುವ ಜವಾಬ್ದಾರಿ, ಕೆಲವರಿಗೆ ಆರ್ಥಿಕ ಸಹಾಯ ಮಾಡಬೇಕಾದಂತ ಪರಿಸ್ಥಿತಿ ನಿಮಗೆ ಬರಬಹುದು. ಅದು ಎಷ್ಟು ಜನರಿಗೆ ಎಂಬುವುದು ರಸ್ತೆ ತಡೆ, ಬಂದ್ ಎಷ್ಟು ಸಮಯ ನಡೆಯುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ ಎಂದು ನಿಮಗೆ ಹೇಳಬೇಕಾಗಿಲ್ಲ.
ಮೃತರಾದ ಸೌಜನ್ಯಳೇ ಆಗಿರಲಿ, ಅವರ ಮನೆಯವರೇ ಆಗಿರಲಿ, ಯಾರೇ ಅನ್ಯಾಯಕ್ಕೆ ಒಳಗಾದವರೇ ಆಗಿರಲಿ ಅವರ ಪರ ಹೋರಾಟ ಮಾಡುವ ನೀವೇ ಆಗಿರಲಿ, ತಮ್ಮ ಪರ ನ್ಯಾಯಕ್ಕಾಗಿ ಹೋರಾಡುವಾಗ ಇತರರಿಗೆ ತೊಂದರೆಯಾಗಬಾರದೆಂದೇ ಬಯಸುತ್ತೀರಿ. ತಮ್ಮ ಕಾರಣಕ್ಕೆ ಇನ್ನೊಬ್ಬರಿಗೆ ಅನ್ಯಾಯವಾಗಬೇಕು ಎಂದು ಖಂಡಿತಾ ಬಯಸಲಾರಿರಿ ಅಲ್ಲವೇ?
ನಾನು 38 ವರ್ಷಗಳ ಹಿಂದೆ ಲಂಚ, ಭ್ರಷ್ಟಾಚಾರದ ವಿರುದ್ಧ ಮತ್ತು ರಸ್ತೆ ತಡೆ, ಬಂದ್ ಮುಂತಾದ ವಿಷಯಗಳ ವಿರುದ್ಧ ಪ್ರತಿಭಟನೆಯಾಗಿ ಪತ್ರಿಕೆ ಪ್ರಾರಂಭಿಸಿದ್ದೇನೆ. ಅದಲ್ಲದೆ ಹಳ್ಳಿಯಿಂದ ಡೆಲ್ಲಿಗೆ ಆಡಳಿತ ಪ್ರಾರಂಭವಾಗಬೇಕು, ಮತದಾರರ ಜಾಗೃತಿಯಾಗಬೇಕು ಎಂಬ ಕಾರಣಕ್ಕೆ ಅದರ ಪ್ರಚಾರಕ್ಕಾಗಿ ಪ್ರಧಾನಿ ಮೋದಿಯವರ, ರಾಹುಲ್ ಗಾಂಧಿಯವರ, ಬೊಮ್ಮಾಯಿಯವರ, ಸಿದ್ಧರಾಮಯ್ಯರವರ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸಿದ್ದೆ. 1985ರಲ್ಲಿ ವೀರಪ್ಪ ಮೋಯ್ಲಿ, ಬಂಗಾರಪ್ಪ, ರಾಮಕೃಷ್ಣ ಹೆಗ್ಗಡೆ ವಿರುದ್ಧವೂ ಸ್ಪರ್ಧಿಸಿದ್ದೆ. ಪತ್ರಿಕೆ ಪ್ರಾರಂಭವಾದಲ್ಲಿಂದ ಆ ಹೋರಾಟವನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ರಸ್ತೆ ತಡೆ, ಬಂದ್ ವಿರುದ್ಧದ ನಮ್ಮ ಹೋರಾಟಗಳನ್ನು ತಪ್ಪಾಗಿ ಅರ್ಥೈಸಿಕೊಂಡ ಜನರಿಂದ, ಕೆಲವರ ಉದ್ದೇಶಪೂರ್ವಕ ಕ್ರಿಯೆಯಿಂದ, ಅಪಪ್ರಚಾರದಿಂದ ಅಪಾರ ತೊಂದರೆಗಳನ್ನು, ಕಷ್ಟ ನಷ್ಟಗಳನ್ನು ಅನುಭವಿಸಿದ್ದೇನೆ. ಕೇಸುಗಳನ್ನು ನಮ್ಮವರು ಎದುರಿಸುತ್ತಿದ್ದಾರೆ. ಪತ್ರಿಕೆಯನ್ನು ಸ್ಥಗಿತಗೊಳಿಸಿ ಜನಬೆಂಬಲ ಪಡೆದು ಪುನಃ ಪ್ರಾರಂಭ ಮಾಡುವ ಕೆಲಸ ಮಾಡಿದ್ದೇವೆ. ಆ ತೊಂದರೆಗಳನ್ನು ಇಲ್ಲಿ ವಿವರಿಸಲು ಹೋಗುವುದಿಲ್ಲ. ಆದರೆ ಜನರು ನಮ್ಮ ನಿಲುವುಗಳನ್ನು ಒಪ್ಪಿದ್ದಾರೆ, ನಮ್ಮ ಬೆಂಬಲಕ್ಕೆ ನಿಂತಿದ್ದಾರೆ, ಅಂದು ವಿರೋಧಿಸುತ್ತಿದ್ದ ಬಹುತೇಕ ಜನರು ಇಂದು ಬೆಂಬಲಿಸುತ್ತಿದ್ದಾರೆ ಎಂಬ ಸಂತೋಷ ನಮ್ಮಲ್ಲಿದೆ. ಅಳಿದು ಉಳಿದ ಕೆಲವರು ಇನ್ನೂ ವಿರೋಧಿಸುತ್ತಲೇ ಇದ್ದಾರೆ. ಅವರು ನಮ್ಮನ್ನು ಸದಾ ಜಾಗೃತಿಯಲ್ಲಿಡುತ್ತಾರೆ ಎಂಬ ಕಾರಣಕ್ಕೆ ಅವರಿಗೆ ಕೃತಜ್ಞತೆಯನ್ನು ಅರ್ಪಿಸುತ್ತಿದ್ದೇನೆ.
ಇಷ್ಟೆಲ್ಲಾ ಆಗಿದ್ದರೂ ನಮಗೆ ಎಷ್ಟೇ ತೊಂದರೆಯಾಗಿದ್ದರೂ ಆ ಬಗ್ಗೆ ನಮಗೆ ಚಿಂತೆಯಿಲ್ಲ ಆದರೆ ರಸ್ತೆ ತಡೆ, ಬಂದ್‌ಗಳ ವಿಷಯದಲ್ಲಿ ಜನರು ಇನ್ನೂ ಪೂರ್ಣ ಜಾಗೃತರಾಗಲಿಲ್ಲ, ವಿರೋಧಿಸುತ್ತಿಲ್ಲವಲ್ಲ?. ರಸ್ತೆ ತಡೆ, ಬಂದ್‌ಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳುತ್ತಾರಲ್ಲಾ ಎಂಬ ಬೇಸರ ನನ್ನಲ್ಲಿದೆ. ಕಾನೂನು ಪ್ರಕಾರ ಪೊಲೀಸರನ್ನು ಉಪಯೋಗಿಸಿ ರಸ್ತೆ ತಡೆ, ಬಂದ್‌ಗಳನ್ನು ವಿರೋಧಿಸುವುದಕ್ಕಿಂತಲೂ ಜನರು ಅರ್ಥ ಮಾಡಿಕೊಂಡು ಅದನ್ನು ನಿಲ್ಲಿಸಬೇಕು ಎಂಬ ಉದ್ದೇಶ ನಮ್ಮದು. ಪುತ್ತಿಲ ಪರಿವಾರದ ಹೆಚ್ಚಿನ ಎಲ್ಲರೂ ನಮ್ಮ ಪತ್ರಿಕೆಯ ಅಭಿಮಾನಿಗಳೇ ಆಗಿದ್ದಾರೆ. ಅವರನ್ನು ಕನ್ವಿನ್ಸ್ ಮಾಡುವಲ್ಲಿ ನಾನು ವಿಫಲನಾಗಿದ್ದೇನೆ ಎಂಬ ನೋವು ನನಗಿದೆ. ಆ ಕಾರಣಕ್ಕೆ ಇನ್ನು ಮುಂದೆ ಆ ಬಗೆಗಿನ ಪ್ರಯತ್ನವನ್ನು ಪತ್ರಿಕೆಯಲ್ಲಿ ಮುಂದುವರಿಸುವುದನ್ನು, ಬರೆಯುವುದನ್ನು ನಿಲ್ಲಿಸಿ ಬೇರೆ ಅರ್ಥಪೂರ್ಣವಾದ ವಿಷಯಗಳ ಬಗ್ಗೆ ಗಮನಹರಿಸಬೇಕೆಂದಿದ್ದೇನೆ. ಅದಕ್ಕಾಗಿ ಸಮಯ ಉಪಯೋಗಿಸಬೇಕೆಂದು ಯೋಚಿಸುತ್ತಿದ್ದೇನೆ. ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತೀರಿ ಎಂದು ನಂಬಿದ್ದೇನೆ.

LEAVE A REPLY

Please enter your comment!
Please enter your name here