ಪುತ್ತೂರು: ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೆ ಗೋಳಿತೊಟ್ಟು ಗ್ರಾಮ ಸಭೆಯಲ್ಲಿ ಮಾನಸಿಕ ಒತ್ತಡ ಮತ್ತು ಹಿಂಸೆ ನೀಡಿದ ಇಬ್ಬರು ಗ್ರಾಮಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ ಕಡಬ ತಾಲೂಕು ಪೊಲೀಸ್ ನಿರೀಕ್ಷಕರಿಗೆ ಮನವಿ ಸಲ್ಲಿಸಿದೆ. ಆ.9 ರಂದು ನಡೆದ ಗೋಳಿತೊಟ್ಟು ಗ್ರಾಮ ಸಭೆಯಲ್ಲಿ ನೆಲ್ಯಾಡಿ ಆರೋಗ್ಯ ಕೇಂದ್ರದ ವೈದ್ಯೆ ಡಾ. ಶಿಶಿರ ಭಾಗವಹಿಸಿದ್ದರು.
ಗ್ರಾಮಸ್ಥರಾದ ಡೀಕಯ್ಯ ಪೂಜಾರಿ ಮತ್ತು ಗಣೇಶ್ ಎಂಬವರು ವಿದ್ಯಾರ್ಥಿನಿ ಸಾವಿನ ಬಗ್ಗೆ ಪ್ರಸ್ತಾಪಿಸಿದ ವಿಷಯದ ಕುರಿತು ಇಲಾಖೆಗೆ ಸಂಬಂಧಿಸಿದ ಮಾಹಿತಿ ನೀಡುವ ವೇಳೆ, ಕುಡಿದ ಮತ್ತಿನಲ್ಲಿದ್ದ ಇವರಿಬ್ಬರು ಪದೇಪದೇ ಕೇಳಿದ ಪ್ರಶ್ನೆಯನ್ನೇ ಕೇಳಿ ಸುಮಾರು 40 ನಿಮಿಷಗಳ ವರೆಗೆ ಗರ್ಭಿಣಿಯಾಗಿದ್ದ ವೈದ್ಯಾಧಿಕಾರಿಯನ್ನು ವೇದಿಕೆಯಲ್ಲಿ ನಿಲ್ಲುವಂತೆ ಮಾಡಿದ್ದಲ್ಲದೇ ವೈದ್ಯರೇ ವಿದ್ಯಾರ್ಥಿನಿಯನ್ನು ಸಾಯಿಸಿದ ರೀತಿಯಲ್ಲಿ ಮಾನಸಿಕ ಒತ್ತಡ ಮತ್ತು ಹಿಂಸೆ ನೀಡಿದ್ದಾರೆ. ಇದರಿಂದಾಗಿ ವೈದ್ಯೆ ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ಗ್ರಾಮ ಸಭೆಯ ನಿಯಂತ್ರಣಾಧಿಕಾರಿ ಸಮ್ಮುಖದಲ್ಲಿ ಈ ಘಟನೆ ನಡೆದಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ.
ಆರೋಗ್ಯ ಕೇಂದ್ರದ ಸಿಬ್ಬಂದಿಗಳು ವೈದ್ಯರನ್ನು ತಕ್ಷಣ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಡಾ.ಶಿಶಿರ ಅವರನ್ನು ಪರೀಕ್ಷಿಸಿದ ವೈದ್ಯರು ಗರ್ಭಾಪಾತವಾಗಿರುವುದನ್ನು ದೃಢಪಡಿಸಿ ತುರ್ತು ಶಸ್ತ್ರಚಿಕಿತ್ಸೆ ನಡೆಸಿರುತ್ತಾರೆ. ಆ.10 ರಂದು ಡಾ.ಶಿಶಿರ ಅವರ ಆರೋಗ್ಯ ಸ್ಥಿತಿ ಗಂಭೀರಗೊಂಡು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತೆಗೆ ದಾಖಲಿಸಲಾಗಿದೆ. ಸದ್ಯ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದ್ದು ಡಾ.ಶಿಶಿರ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಸಾರ್ವಜನಿಕವಾಗಿ ಉತ್ತಮ ವೈದ್ಯಕೀಯ ಸೇವೆ ನೀಡುತ್ತಾ ಗ್ರಾಮಸ್ಥರೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಇಲಾಖೆಯ ಸೇವೆಯನ್ನು ನೀಡುತ್ತಾ ಬಂದ ವೈದ್ಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಹೇಳಿರುವ ಜಿಲ್ಲಾ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ದೀಪಕ್ ರೈ, ಡಾ.ಶಿಶಿರ ಅವರಿಗೆ ಮಾನಸಿಕ ಒತ್ತಡ ಮತ್ತು ಹಿಂಸೆ ನೀಡಿದ ಡೀಕಯ್ಯ ಪೂಜಾರಿ ಹಾಗೂ ಗಣೇಶ್ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ.