ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಿಗೆ – ಕಾಂಗ್ರೆಸ್ ಮೂಲ ಮನೆಗೆ ವಾಪಸ್ಸಾದ ಸದಸ್ಯ – ಬಿಜೆಪಿಯ ಕೈತಪ್ಪಿದ ಕಳೆದ ಬಾರಿಯ ಲೆಕ್ಕಚಾರ

0

ಉಪ್ಪಿನಂಗಡಿ: ಇಲ್ಲಿನ ಗ್ರಾ.ಪಂ.ಗೆ ನಡೆದ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಬಲಿತ ಸದಸ್ಯರ ಪಾಲಾಗಿದೆ. ಅಧ್ಯಕ್ಷರಾಗಿ ಲಲಿತಾ ಹಾಗೂ ಉಪಾಧ್ಯಕ್ಷರಾಗಿ ವಿದ್ಯಾಲಕ್ಷ್ಮೀ ಪ್ರಭು ಆಯ್ಕೆಯಾಗಿದ್ದಾರೆ.


ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಲಲಿತಾ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ರುಕ್ಮಿಣಿ ಅವರು ನಾಮಪತ್ರ ಸಲ್ಲಿಸಿದ್ದು, ಚುನಾವಣೆ ನಡೆದು ಪಲಿತಾಂಶ ಪ್ರಕಟವಾದಾಗ, ಲಲಿತಾ 11 ಮತಗಳನ್ನು ಪಡೆದು, ವಿಜಯಿಯಾದರು, ರುಕ್ಮಿಣಿ 9 ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಗ್ರಾ.ಪಂ. ಚುನಾವಣೆಯ ಸಂದರ್ಭ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಗೆದ್ದು ಬಳಿಕದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಬೆಂಬಲಿತೆಯಾಗಿ ಗುರುತಿಸಿಕೊಂಡಿದ್ದ ವಿದ್ಯಾಲಕ್ಷ್ಮೀ ಪ್ರಭು ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಂತಿ ರಂಗಾಜೆ ನಾಮಪತ್ರ ಸಲ್ಲಿಸಿದ್ದು, ಚುನಾವಣೆ ನಡೆದು ಪಲಿತಾಂಶ ಪ್ರಕಟವಾದಾಗ 11 ಮತಗಳನ್ನು ಪಡೆದು ವಿದ್ಯಾಲಕ್ಷ್ಮೀ ಪ್ರಭು ವಿಜಯಿಯಾದರು. 9 ಮತಗಳನ್ನು ಪಡೆದು ಜಯಂತಿ ರಂಗಾಜೆ ಪರಾಭವಗೊಂಡರು.
20 ಸದಸ್ಯ ಬಲವನ್ನು ಹೊಂದಿರುವ ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಅನುಸೂಚಿತ ಜಾತಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಬಂದಿತ್ತು. ಇಲ್ಲಿ 10 ಮಂದಿ ಬಿಜೆಪಿ ಬೆಂಬಲಿತ ಸದಸ್ಯರಿದ್ದರೆ, ಕಾಂಗ್ರೆಸ್ ಬೆಂಬಲಿತ ಸದಸ್ಯರು ಐವರಿದ್ದರು. ನಾಲ್ಕು ಮಂದಿ ಸದಸ್ಯರು ಎಸ್‌ಡಿಪಿಐ ಬೆಂಬಲಿತ ಸದಸ್ಯರಾದರೆ, ಓರ್ವ ಬಿಜೆಪಿಯ ವಿರುದ್ಧ ಬಂಡಾಯ ನಿಂತು ಪಕ್ಷೇತರ ಸದಸ್ಯರಾಗಿ ಗೆದ್ದಿದ್ದರು.
ಕಳೆದ ಅವಧಿಯಲ್ಲಿ ಏನಾಗಿತ್ತು?: ಕಳೆದ ಬಾರಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ಸಂದರ್ಭ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಎಸ್.ಡಿ.ಪಿ.ಐ. ಬೆಂಬಲಿತರಾಗಿದ್ದ 4 ಮಂದಿ ಮತ್ತು ಬಿಜೆಪಿಯಿಂದ ಬಂಡಾಯವೆದ್ದು ಚುನಾವಣೆಯಲ್ಲಿ ಪಕ್ಷೇತರಾಗಿ ಸ್ಪರ್ಧಿಸಿ ಗೆದ್ದಿದ್ದ ಸಣ್ಣಣ್ಣ ಸೇರಿದಂತೆ ಒಟ್ಟು 5 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರ ಪರ ನಿಂತರು. ಇದರೊಂದಿಗೆ ಬಿಜೆಪಿ ಬೆಂಬಲಿತೆಯಾಗಿದ್ದ ವಿದ್ಯಾಲಕ್ಷ್ಮಿಯವರನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ಸೆಳೆದುಕೊಂಡು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಮಾಡಿ ಕಣಕ್ಕೆ ಇಳಿಸಿತ್ತು. ಕಾಂಗ್ರೆಸ್ ಬೆಂಬಲಿತ ಸದಸ್ಯರು 5 ಮತ್ತು ಕಾಂಗ್ರೆಸ್‌ಗೆ ಮತ್ತೆ ಬೆಂಬಲ ಕೊಟ್ಟ ಆರು ಸದಸ್ಯರು ಹೀಗೆ ಒಟ್ಟು 11 ಸದಸ್ಯರ ಬೆಂಬಲ ಹೊಂದಿದ ಕಾಂಗ್ರೆಸ್ ಬೆಂಬಲಿತ ಸದಸ್ಯರ ಬಣ ಉಪಾಧ್ಯಕ್ಷ ಸ್ಥಾನಕ್ಕೆ ಮುಹಮ್ಮದ್ ತೌಸೀಫ್ ಯು.ಟಿ. ಅವರನ್ನು ಕಣಕ್ಕಿಳಿಸಿ, ಈ ಬಾರಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ತಮ್ಮದೆಂಬ ರಾಜಕೀಯ ಲೆಕ್ಕಾಚಾರದಲ್ಲಿತ್ತು. ಆದರೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಸಂದರ್ಭ ತಮ್ಮ ರಾಜಕೀಯ ಲೆಕ್ಕಚಾರ ಬುಡಮೇಲಾದ ಅರಿವು ಕಾಂಗ್ರೆಸ್ ಬೆಂಬಲಿತರಿಗೆ ಬಂದಿತ್ತು. ಯಾಕೆಂದರೆ ಇತ್ತ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿ ಗ್ರಾ.ಪಂ.ಗೆ ಆಯ್ಕೆಯಾಗಿದ್ದ ವಿನಾಯಕ ಪೈ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡ ಬಿಜೆಪಿ ಬೆಂಬಲಿತ ಸದಸ್ಯರು ಉಪಾಧ್ಯಕ್ಷ ಅಭ್ಯರ್ಥಿಯನ್ನಾಗಿ ಅವರನ್ನು ಕಣಕ್ಕಿಳಿಸಿದ್ದರು. ಆಗ ಎರಡೂ ಬಣಗಳ ಬೆಂಬಲಿತರಲ್ಲಿ ಸಮಬಲ ಬರುವಂತಾಯಿತು. ಮತ್ತೆ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು, ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಬಣಗಳು ತಲಾ ಹತ್ತರಂತೆ ಸಮಮತವನ್ನು ಪಡೆದುಕೊಂಡರು. ಮತ್ತೆ ಚೀಟಿ ಎತ್ತುವಿಕೆಯ ಮೂಲಕ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ನಡೆದಾಗ ಅದೃಷ್ಟ ಲಕ್ಷ್ಮೀ ಬಿಜೆಪಿ ಬೆಂಬಲಿತ ಬಣದ ಪಾಲಾಗಿದ್ದು, ಉಷಾ ಮುಳಿಯ ಅಧ್ಯಕ್ಷರಾಗಿ ಹಾಗೂ ವಿನಾಯಕ ಪೈ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಈ ಬಾರಿಯ ಚುನಾವಣೆ ಸಂದರ್ಭ ವಿನಾಯಕ ಪೈ ಮತ್ತೆ ಕಾಂಗ್ರೆಸ್‌ಗೆ ವಾಪಸ್ಸಾಗಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯನ್ನು ಬೆಂಬಲಿಸಿದರು. ಇದರಿಂದ ಈ ಬಾರಿ ಬಿಜೆಪಿಯ ರಾಜಕೀಯ ಲೆಕ್ಕಚಾರ ಬುಡಮೇಲಾಗುವಂತಾಗಿದೆ. ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಒಲಿಯಲು ಗ್ರಾ.ಪಂ.ನಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರುಗಳಾಗಿರುವ ಯು.ಟಿ. ತೌಸೀಫ್ ಹಾಗೂ ಅಬ್ದುಲ್ ರಹ್ಮಾನ್ ಕೆ. ಅವರ ಮಾಸ್ಟರ್ ಮೈಂಡ್ ಈ ಬಾರಿ ಕೆಲಸ ಮಾಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

LEAVE A REPLY

Please enter your comment!
Please enter your name here