ಸುಳ್ಯ: ತಾಲೂಕು ಮಟ್ಟದ ಸ್ವಾತಂತ್ರ್ಯೋತ್ಸವ

0

ಕಟ್ಟ ಕಡೆಯ ವ್ಯಕ್ತಿಯೂ ತಲೆ ಎತ್ತಿ ಬದುಕಬೇಕು- ಭಾಗೀರಥಿ ಮುರುಳ್ಯ

ಕಾಣಿಯೂರು: ಬ್ರಿಟಿಷರ ಆಳ್ವಿಕೆಯಲ್ಲಿದ್ದ ನಮಗೆ ಅವರಿಂದ ಸ್ವಾತಂತ್ರ್ಯ ದೊರೆಯಲು ನಮ್ಮ ಹಿರಿಯರು ಹೋರಾಟ ನಡೆಸಿದ್ದಾರೆ. ಅವರ ಹೋರಾಟದಿಂದ ನಮಗೆ ಇಂದು ಸ್ವಾತಂತ್ರ್ಯ ದೊರೆತ್ತಿದ್ದು, ಅಂದಿನ ಹೋರಾಟಗಾರರ ತ್ಯಾಗ, ಬಲಿದಾನ ನಮಗೆ ಪ್ರೇರಣೆಯಾಗಿದೆ ಎಂದು ಸುಳ್ಯ ತಹಶೀಲ್ದಾರ್ ಎಂ.ಮಂಜುನಾಥ್ ಹೇಳಿದರು.

ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಸುಳ್ಯ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಧ್ವಜ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಯುವಜನತೆ ರಾಷ್ಟ್ರ ಪ್ರೇಮ ಮೈಗೂಡಿಸಿಕೊಂಡು ಮುಂದುವರಿಯಬೇಕು ಎಂದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಸಭಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಟ್ಟಡ ಕಡೆಯ ವ್ಯಕ್ತಿಯೂ ತಲೆ ಎತ್ತಿ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಬೇಕು. ಶ್ರೀಮಂತ ದೇಶವಾಗಿದ್ದ ಭಾರತ ಹಲವಾರು ದಾಳಿಗೆ ತುತ್ತಾಗಿದೆ. ಶಿಕ್ಷಣ, ಆರೋಗ್ಯ, ಪರಿಸರ, ಸ್ವಚ್ಚತೆ ಬಗ್ಗೆ ನಾವೆಲ್ಲ ಕಾಳಜಿ ವಹಿಸಬೇಕಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ನನ್ನನ್ನು ಇಲ್ಲಿ ನಿಲ್ಲಿಸಿದೆ ಎಂದ ದೇಶದಲ್ಲಿಂದು ಸಮರ್ಥ ನಾಯಕನಿಂದ ದೇಶಕ್ಕೆ ಗೌರವ ಸಿಗುತ್ತಿದೆ. ಜನಸಂಖ್ಯಾ ಸ್ಪೋಟದ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಕೃಷಿಯನ್ನು ಮೇಲ್ದರ್ಜೆಗೇರಿಸುವ ಅನಿವಾರ್ಯತೆ ಇದೆ ಎಂದರು.
ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ನ.ಪಂ. ಸದಸ್ಯರಾದ ವಿನಯ ಕುಮಾರ್ ಕಂದಡ್ಕ, ಎಂ.ವೆಂಕಪ್ಪ ಗೌಡ, ಕಿಶೋರಿ ಶೇಟ್, ಸರೋಜಿನಿ ಪೆಲ್ತಡ್ಕ, ಪೂಜಿತಾ ಕೆ.ಯು., ಸುಶೀಲ ಜಿನ್ನಪ್ಪ, ಶಿಲ್ಪಾಸುದೇವ್, ಪ್ರವಿತಾ ಪ್ರಶಾಂತ್, ಶೀಲಾ ಕುರುಂಜಿ, ಶಶಿಕಲಾ ನೀರಬಿದಿರೆ, ನ.ಪಂ. ಮುಖ್ಯಾಧಿಕಾರಿ ಸುಧಾಕರ್, ತೋಟಗಾರಿಕಾ ಹಿರಿಯ ನಿರ್ದೇಶಕ ರಮೇಶ್, ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಸುಳ್ಯ ಸ.ಪ.ಪೂ.ಕಾಲೇಜಿನ ಪ್ರಾಂಶುಪಾಲ ಮೋಹನ ಗೌಡ, ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ ಮತ್ತಿತರರು ಉಪಸ್ಥಿತರಿದ್ದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಈ.ರಮೇಶ್ ವಂದಿಸಿದರು. ಶಿಕ್ಷಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು.
ಪಥಸಂಚಲನ – ಸಮ್ಮಾನ:
ಧ್ವಜಾರೋಹಣ ಬಳಿಕ ಸುಳ್ಯ ಎಸ್‌ ಐ ನೇತೃತ್ವದಲ್ಲಿ ವಿವಿಧ ಘಟಕಗಳ ವತಿಯಿಂದ ಆಕರ್ಷಕ ಪಥಸಂಚಲನ ನಡೆಯಿತು. ನಿವೃತ್ತ ಯೋಧ ಐವರ್ನಾಡಿನ ಕೊಯಿಲ ವೀರಪ್ಪ ಗೌಡ ಅವರನ್ನು ಸಮ್ಮಾನಿಸಲಾಯಿತು. ನನ್ನ ಮಣ್ಣು-ನನ್ನ ದೇಶ ವಿಷಯದಲ್ಲಿ ನಡೆಸಲಾದ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ ಸಾಧಕರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here