ಬಲತ್ಕಾರದ ಬಂದ್, ರಸ್ತೆ ತಡೆ, ಲಂಚ, ಭ್ರಷ್ಟಾಚಾರದ ವಿರುದ್ಧ ಜನತೆಗೆ, ಸುದ್ದಿ ಆಂದೋಲನಕ್ಕೆ ಜಯ- ಸ್ವಾತಂತ್ರ್ಯದ ಕೊಡುಗೆ

0

ಶಾಸಕ ಅಶೋಕ್ ಕುಮಾರ್ ರೈಯವರಿಂದ  ಲಂಚ, ಭ್ರಷ್ಟಾಚಾರದ ವಿರುದ್ಧ ಸಮರ

ಪುತ್ತಿಲ ಪರಿವಾರದಿಂದ ಬಲತ್ಕಾರದ ಬಂದ್, ರಸ್ತೆ ತಡೆ ವಿರುದ್ಧ ಘೋಷಣೆ

ಲಂಚ, ಭ್ರಷ್ಟಾಚಾರದಿಂದ ಜನರಿಗೆ ಆಗುತ್ತಿರುವ ತೊಂದರೆಗಳನ್ನು, ಅದರ ವಿರುದ್ಧ `ಸುದ್ದಿ’ ಜನಾಂದೋಲನದ ಹೋರಾಟವನ್ನು, ಅದಕ್ಕೆ ಸಿಕ್ಕಿರುವ ಜನ ಬೆಂಬಲವನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವ ಅಶೋಕ್ ಕುಮಾರ್ ರೈಯವರು ಚುನಾವಣೆಗೆ ನಿಲ್ಲುವ ಮೊದಲೇ, ತಾನು ಅಧಿಕಾರಕ್ಕೆ ಬಂದರೆ ಪುತ್ತೂರಿನಲ್ಲಿ ಲಂಚ, ಭ್ರಷ್ಟಾಚಾರವನ್ನು ನಿಲ್ಲಿಸುವುದಾಗಿ ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ. ಚುನಾವಣಾ ಭಾಷಣಗಳಲ್ಲಿ ಭಾಷಣ ಮಾಡಿದ್ದನ್ನು ಉಳಿದ ನಾಯಕರು ಮರೆಯುವ ಸಂಪ್ರದಾಯವಿದ್ದರೂ, ಅಶೋಕ್ ರೈಯವರು ತಾನು ಗೆದ್ದ ಕೂಡಲೇ ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದ್ದಾರೆ. ಲಂಚವಾಗಿ ಅಧಿಕಾರಿಗಳು ಪಡೆದ ಹಣವನ್ನು ಜನರಿಗೆ ಹಿಂತಿರುಗಿಸುವಂತೆ ಮಾಡುವ ಮೂಲಕ `ಸುದ್ದಿ’ ಜನಾಂದೋಲನದ ಉzಶವನ್ನು ಈಡೇರಿಸಿದ್ದಾರೆ. ಜನ ಮೆಚ್ಚುಗೆ ಗಳಿಸಿದ್ದಾರೆ. ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಅದು ತಾಲೂಕಿನ ಎಲ್ಲಾ ಜನರಿಗೆ ಹರಡಬೇಕಾಗಿದೆ.


ಬಲತ್ಕಾರದ ಬಂದ್, ರಸ್ತೆ ತಡೆ ನಮ್ಮ ಊರಿನ ದೊಡ್ಡ ಪಿಡುಗಾಗಿತ್ತು. ನ್ಯಾಯದ ಹೆಸರಿನಲ್ಲಿ ಯಾವುದೇ ಹೋರಾಟ ಮಾಡುವಾಗ ಅವರಿಗೆಲ್ಲ ಮೊದಲು ಕಾಣುತ್ತಿದ್ದದ್ದು ಸುಲಭ ದಾರಿಯಾದ ಬಲತ್ಕಾರದ ಬಂದ್ ಮತ್ತು ರಸ್ತೆ ತಡೆ. ಅದರಿಂದ ಜನರಿಗೆ ತೊಂದರೆಯಾಗಿ ಬೊಬ್ಬೆ ಹೊಡೆಯುತ್ತಾರೆ. ಅವರು ತೊಂದರೆಗೆ ಒಳಗಾದಷ್ಟು ಪ್ರಚಾರ ದೊರೆಯುತ್ತದೆ. ಅಧಿಕಾರಿಗಳು, ರಾಜಕೀಯ ಪಕ್ಷಗಳು ರಸ್ತೆಗೆ ಇಳಿಯುತ್ತಾರೆ. ಅದು ಹೋರಾಟದ ಮೇಲೆ ಪರಿಣಾಮ ಬೀಳುತ್ತದೆ ಎಂಬುದು ಹೆಚ್ಚಿನ ಎಲ್ಲಾ ಪ್ರತಿಭಟನಾಕಾರರ ಅಭಿಪ್ರಾಯವಾಗಿದೆ. ಆದುದರಿಂದ ಪ್ರತಿಭಟನೆಗೆ ಬೇರೆ ಇತರ ಹಲವಾರು ದಾರಿಗಳಿದ್ದರೂ ರಸ್ತೆ ತಡೆ, ಬಂದ್‌ಗಳನ್ನು ಪ್ರಥಮ ಆಯ್ಕೆ ಮಾಡುತ್ತಾರೆ. ಆ ರೀತಿ ಮಾಡುವುದರಿಂದ ಅಪಾರ ಜನರಿಗೆ, ನಿತ್ಯ ದುಡಿಯುವವರಿಗೆ, ನಿರಪರಾಧಿಗಳಿಗೆ, ವಿಶೇಷವಾಗಿ ತುರ್ತು ಸ್ಥಿತಿಯಲ್ಲಿರುವವರಿಗೆ ಅಪಾರ ಕಷ್ಟ ನಷ್ಟಗಳು ಉಂಟಾಗುತ್ತದೆ ಎಂಬುದು ಅತ್ಯಂತ ದುಃಖದ ಸಂಗತಿ. ಸುಪ್ರೀಂ ಕೋರ್ಟ್ ಕೂಡ ಈ ಕಾರಣಕ್ಕೆ ರಸ್ತೆ ತಡೆ, ಬಂದ್‌ನ್ನು ಕಾನೂನು ಬಾಹಿರ ಎಂದು ಘೋಷಿಸಿದೆ. ರಸ್ತೆ ತಡೆ, ಬಂದ್‌ಗಳಿಂದ ಹಾನಿಯಾದವರಿಗೆ ಆ ಕರೆ ಕೊಟ್ಟವರೇ ಪರಿಹಾರ ನೀಡಬೇಕೆಂದು ತೀರ್ಪು ನೀಡಿದೆ.


ಪುತ್ತಿಲ ಪರಿವಾರ ಸೌಜನ್ಯಳ ನ್ಯಾಯಕ್ಕಾಗಿ ಪ್ರತಿಭಟನೆ, ಮೆರವಣಿಗೆ ಕರೆ ಕೊಟ್ಟಾಗ ಅದಕ್ಕೆ ಎಲ್ಲಾ ಜನರಂತೆ ನಾವೂ ಬೆಂಬಲ ನೀಡಿದ್ದೇವೆ. ಬಲತ್ಕಾರದ ಬಂದ್‌ಗೆ ವಿರೋಧವಾಗಿದ್ದರೂ, ಸ್ವಯಂಪ್ರೇರಿತ ಬಂದ್‌ಗೆ ಮನವಿಯಾಗಿದ್ದರಿಂದ ಅದನ್ನು ವಿರೋಧಿಸಲಿಲ್ಲ. ಆದರೆ ಜನರಿಗೆ ತೊಂದರೆ ನೀಡುವಂತಹ, ಅವರ ಸ್ವಾತಂತ್ರ್ಯವನ್ನು ಕಸಿಯುವಂತಹ ರಸ್ತೆ ತಡೆಯನ್ನು ಕೈಬಿಡಬೇಕೆಂದು ಪುತ್ತಿಲ ಪರಿವಾರಕ್ಕೆ ಮನವಿಯನ್ನು ಮಾಡಿದ್ದೆವು. ಈ ನಡುವೆ ಹಲವಾರು ಜನರು ಬಂದ್ ಮತ್ತು ರಸ್ತೆ ತಡೆಯಿಂದ ಆಗಬಹುದಾದ ತೊಂದರೆಗಳ ಬಗ್ಗೆ ಪತ್ರಿಕೆಗೆ ಹೇಳಿಕೆಗಳನ್ನು ನೀಡಿದ್ದರು. ಅದಕ್ಕೆ ಪುತ್ತಿಲ ಪರಿವಾರದ ಹಲವಾರು ಜನರು, ಉದಾ: ಶ್ರೀಕೃಷ್ಣ ಉಪಾಧ್ಯಾಯ, ಭಾಸ್ಕರ ಆಚಾರ್ ಹಿಂದಾರು ಮೊದಲಾದವರು ಸ್ಪಂದಿಸಿದ್ದರು.
ಜನತೆಯ ಅಭಿಪ್ರಾಯಕ್ಕೆ ಬೆಲೆ ನೀಡಿದ ಪುತ್ತಿಲ ಪರಿವಾರದವರು ಪ್ರತಿಭಟನಾ ಹೋರಾಟವನ್ನು ಸೋಮವಾರ ಸಂತೆಯ ದಿನವೇ ನಡೆಸಿದ್ದರೂ ಯಾರಿಗೂ ತೊಂದರೆಯಾಗದಂತೆ ಜನ ಮೆಚ್ಚುವ ರೀತಿಯಲ್ಲಿ ನಡೆಸಿದ್ದಾರೆ. ಬಲತ್ಕಾರದ ಬಂದ್‌ಗೆ ಅವಕಾಶ ನೀಡದೆ, ಸ್ವಯಂಪ್ರೇರಿತ ಬಂದ್‌ಗೆ ಜನರು ಸ್ಪಂದಿಸುವಂತೆ ಮಾಡಿದ್ದಾರೆ. ಯಾವುದೇ ರೀತಿಯಲ್ಲಿ ರಸ್ತೆ ತಡೆ ಮಾಡದೆ ವಾಹನಗಳ, ಜನರ ಸುಗಮ ಸಂಚಾರಕ್ಕೆ ಎಡೆಮಾಡಿಕೊಟ್ಟಿದ್ದಾರೆ.


ಅದಕ್ಕೆಲ್ಲಕ್ಕಿಂತ ಮುಖ್ಯವಾಗಿ ಅರುಣ್ ಕುಮಾರ್ ಪುತ್ತಿಲರು ಪ್ರತಿಭಟನಾ ನಂತರದ ಹೇಳಿಕೆಯಲ್ಲಿ ಸೌಜನ್ಯಳ ನ್ಯಾಯಕ್ಕಾಗಿ ಹೋರಾಡುವಾಗ ಸೌಜನ್ಯಳ ಪರಿಸ್ಥಿತಿ ತಮ್ಮ ಮನೆಯವರಿಗೆ, ನೆರೆಯವರಿಗೆ ಬಂದರೆ ಹೇಗಿದ್ದೀತು ಎಂಬ ಯೋಚನೆಯೇ ನಮ್ಮ ಈ ಹೋರಾಟಕ್ಕೆ ಕಾರಣವಾಗಿದೆ ಎಂದು ಹೇಳುತ್ತಾ, ಆದರೂ ತಾನು ಯಾವುದೇ ನ್ಯಾಯಯುತ ಹೋರಾಟದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವಂತಹ ಬಲತ್ಕಾರದ ಬಂದ್ ಮತ್ತು ರಸ್ತೆ ತಡೆಗಳನ್ನು ಮಾಡುವುದಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿದ್ದಾರೆ. ಅವರ ಈ ಹೇಳಿಕೆ ವ್ಯಾಪಕ ಪ್ರಚಾರ ಪಡೆದಿದೆ ಎಂದರೆ ಅದಕ್ಕಿರುವ ಪ್ರಾಮುಖ್ಯತೆ ಅರಿವಾಗುತ್ತದೆ.


ಈ ಮೇಲಿನ ವಿಷಯಗಳ ಹಿನೆಲೆಯಲ್ಲಿ ಪುತ್ತೂರಿನ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು, ಸಂಘ ಸಂಸ್ಥೆಗಳು, ಲಯನ್ಸ್, ಜೆಸಿಐ, ರೋಟರಿಯಂತಹ ಸೇವಾ ಸಂಸ್ಥೆಗಳು, ಜಾತಿ ಸಂಘಟನೆಗಳು, ವಿಶೇಷವಾಗಿ ವರ್ತಕರ ಸಂಘದವರು ಲಂಚ, ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಶಾಸಕ ಅಶೋಕ್ ರೈಯವರಿಗೆ, ಬಲತ್ಕಾರದ ಬಂದ್, ರಸ್ತೆ ತಡೆಯ ವಿರುದ್ಧ ಘೋಷಣೆ ಮಾಡಿರುವ ಅರುಣ್ ಕುಮಾರ್ ಪುತ್ತಿಲ ಬಳಗದವರಿಗೆ ಅಭಿನಂದನೆಯನ್ನು ಸಲ್ಲಿಸಬೇಕು ಎಂದು ಹೇಳಲು ಇಚ್ಚಿಸುತ್ತೇನೆ.
ಪುತ್ತೂರಿನಲ್ಲಿ ಲಂಚ, ಭ್ರಷ್ಟಾಚಾರದ ವಿರೋಧದ ವಿಷಯದ ಜವಾಬ್ದಾರಿಯನ್ನು ಶಾಸಕ ಅಶೋಕ್ ರೈ ವಹಿಸಿಕೊಂಡಿರುವುದರಿಂದ ಮತ್ತು ರಸ್ತೆ ತಡೆ, ಬಂದ್, ಜನರಿಗೆ ಆಗುವ ತೊಂದರೆಯ ವಿರೋಧವನ್ನು ಅರುಣ್ ಕುಮಾರ್ ಪುತ್ತಿಲ ಬಳಗ ವಹಿಸಿಕೊಂಡಿರುವುದರಿಂದ `ಸುದ್ದಿ ಜನಾಂದೋಲನ ವೇದಿಕೆ’ ಆ ವಿಷಯವನ್ನು ಅವರಿಗೆ ಬಿಟ್ಟು ಉಳಿದ ತಾಲೂಕುಗಳಲ್ಲಿ ತಮ್ಮ ಹೋರಾಟವನ್ನು ಎತ್ತಿಕೊಳ್ಳಲಿದೆ ಎಂದು ತಿಳಿಸಲು ಸಂತೋಷ ಪಡುತ್ತಿದ್ದೇನೆ.

LEAVE A REPLY

Please enter your comment!
Please enter your name here