ವಕೀಲರು ಸಂಪ್ರದಾಯಕ್ಕೆ ಆದ್ಯತೆ ನೀಡುವುದು ವಿಶೇಷ – ಆರ್.ಪಿ.ಗೌಡ
ಪುತ್ತೂರು: ಪುತ್ತೂರು ವಕೀಲರ ಸಂಘದಿಂದ ಪುತ್ತೂರು ನ್ಯಾಯಾಲಯದ ಸಂಕೀರ್ಣದಲ್ಲಿರುವ ಪರಾಶರ ಹಾಲ್ನಲ್ಲಿ ಆ.16ರಂದು ಮಧ್ಯಾಹ್ನ ನಡೆದ ‘ಆಟಿದ ಗೌಜಿ’ ಕಾರ್ಯಕ್ರಮದಲ್ಲಿ ವಕೀಲರೇ ಮನೆಯಲ್ಲಿ ತಯಾರಿಸಿ ತಂದ ಸುಮಾರು 34 ಬಗೆಯ ಔಷಧಿಯ ಖಾದ್ಯಗಳನ್ನು ಸವಿಯುವ ಮೂಲಕ ತುಳುನಾಡಿನ ಗತ ವೈಭವವನ್ನು ಮೆಲುಕು ಹಾಕಲಾಯಿತು.
ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಎಸಿಜೆಎಂ ಆರ್.ಪಿ.ಗೌಡ ಅವರು ಆಟಿದ ಗೌಜಿ ಕಾರ್ಯಕ್ರಮ ಉದ್ಘಾಟಿಸಿದರು. ನ್ಯಾಯವಾದಿಗಳಾದ ಗೌರಿಶ್ಚಂದ್ರ ಶಾನ್ಬಾಗ್ ಮತ್ತು ದೇವಾನಂದ ಅವರು ಚೆನ್ನಮಣೆ ಆಡುವ ಮೂಲಕ ಆಟಿದ ಗೌಜಿ ಕಾರ್ಯಕ್ರಮಕ್ಕೆ ಅಧೀಕೃತ ಚಾಲನೆ ನೀಡಿದರು.
ವಕೀಲರುಗಳು ಸಂಪ್ರದಾಯಕ್ಕೆ ಆದ್ಯತೆ ನೀಡುವುದು ವಿಶೇಷ:
ಕಾರ್ಯಕ್ರಮ ಉದ್ಘಾಟಿಸಿದ ನ್ಯಾಯಾಧೀಶ ಆರ್.ಪಿ.ಗೌಡ ಅವರು ಮಾತನಾಡಿ ನಿಜಕ್ಕೂ ವಕೀಲರ ಸಂಘದಿಂದ ವಿಶಿಷ್ಟ ಅನುಭವ ಉಂಟಾಗಿದೆ. ಇದನ್ನು ನಾನು ನೋಡುವುದೇ ಮೊದಲು. ಆಟಿ ಶಬ್ದ ಬೇರೆ ಯಾವುದೋ ಭಾಷೆ ಅಂದುಕೊಂಡಿದ್ದೆ. ಆದರೆ ತುಳುವಿನ ಪದ ಎಂದು ಇತ್ತೀಚೆಗಷ್ಟೆ ತಿಳಿದುಕೊಂಡೆ ಎಂದು ಮಾತು ಆರಂಭಿಸಿದ ಅವರು ಕರ್ನಾಟಕದ ತುಳುನಾಡು ವೈಶಿಷ್ಟತೆಯಿಂದ ಕೂಡಿದ ಪ್ರದೇಶ. ಇಲ್ಲಿ ನೋಡಿದ ಪುಣ್ಯ ಕ್ಷೇತ್ರ ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ಅಷ್ಟೂ ಶಕ್ತಿ ಇರುವ ಪ್ರದೇಶ. ಅಂತಹದರಲ್ಲಿ ತುಳುನಾಡಿನ ಸಂಪ್ರದಾಯವನ್ನು ಚಾಚೂ ತಪ್ಪದೆ ಅನುಸರಿಸುತ್ತಿರುವುದು ನಮಗೆ ವಿಶಿಷ್ಟ ಅನುಭವ ಮೂಡಿಸಿದೆ. ಇಂದಿನ ಪೀಳಿಗೆ ಹಿಂದಿನ ಸಂಪ್ರದಾಯಕ್ಕೆ ಆದ್ಯತೆ ನೀಡದೆ ಹೊಸ ಸಂಪ್ರದಾಯ ಅನುಸರಿಸುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಹಿಂದಿನ ಸಂಪ್ರದಾಯಕ್ಕೆ ಮಾನ್ಯತೆ ವಕೀಲರು ಹಿಂದಿನ ಸಂಪ್ರದಾಯವನ್ನು ಚಾಚೂ ತಪ್ಪದೆ ಆಚರಿಸುವುದು ಉತ್ತಮ ವಿಚಾರ. ಇದಕ್ಕೆ ನಾವೆ ಸಾಕ್ಷಿಯಾಗಿದ್ದೇವೆ. ತುಳುನಾಡಿನ ತುಳು ಭಾಷೆ, ಸಂಸ್ಕಾರದಲ್ಲಿ ವಿಶೇಷತೆ ಇದೆ. ತುಳು ಭಾಷೆ ನಮಗೂ ತುಂಬಾ ಇಷ್ಟ. ಕಲಿಯಲು ಅವಕಾಶವಿದ್ದರೆ ಖಂಡಿತಾ ಕಲಿಯುತ್ತೇನೆ ಎಂದರು.
ಆಟಿ ಖಾದ್ಯಕ್ಕೆ ಗೂಗಲ್ಗೆ ಮೊರೆ ಯಾಕೆ:
ಸುಳ್ಯದ ಹಿರಿಯ ವಕೀಲ ಜಗದೀಶ ಹುದೇರಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ತುಳುನಾಡಿನ ಅಟಿಯಲ್ಲಿ ಬರುವ ದಾರ್ಮಿಕ ಮತ್ತು ಔಷಧೀಯ ವಿಚಾರಗಳ ಕುರಿತು ಮಾಹಿತಿ ನೀಡಿದ ಅವರು ಇಲ್ಲಿ ಜಾತಿ ಧರ್ಮ ಇಲ್ಲದೆ ಆಟಿ ಆಚರಣೆ ನಡೆಯುತ್ತದೆ. ಎಲ್ಲಾ ಧರ್ಮದವರು ನೆಲೆ ನಿಂತ ಸಾಂಸ್ಕೃತಿಕ ಕುಟುಂಬ ನಮ್ಮ ಜಿಲ್ಲೆ. ಇವತ್ತು ಹಿಂದಿನ ಕಾಲದ ಕಷ್ಟದ ಸಮಯದ ಆಟಿ ತಿನಿಸು ಇವತ್ತು ಸಂಭ್ರಮವಾಗತೊಡಗಿದೆ. ಆದರೆ ಆಟಿ ತಿನಿಸಿಗೂ ಗೂಗಲ್ ಮೊರೆ ಹೋಗುವ ಮೂಲಕ ಅಸಡ್ಡೆ ಮಾಡುತ್ತಿದ್ದೇವೆ ಎಂದರು.
34 ಬಗೆಯ ಖಾದ್ಯಗಳನ್ನು ವಕೀಲರೇ ಮಾಡಿದ್ದು:
ಅಧ್ಯಕ್ಷತೆ ವಹಿಸಿದ ಮನೋಹರ್ ಕೆ ವಿ ಅವರು ಮಾತನಾಡಿ ಆಟಿ ಕಾರ್ಯಕ್ರಮ ವರ್ಷದಲ್ಲಿ ಒಮ್ಮೆ ನಮ್ಮ ಸಂಘದ ಮೂಲಕ ನಡೆಯುತ್ತದೆ. ಈ ಭಾರಿ ವಕೀಲರು ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ಅವರವರ ಮನೆಯಿಂದ ಮಾಡಿದ ಆಟಿ ತಿನಿಸನ್ನು ತರುವ ಮೂಲಕ ಸುಮಾರು 34 ಬಗೆಯ ತಿನಿಸು ಸಿದ್ಧಗೊಂಡಿರುವುದು ವಿಶೇಷ ಎಂದರು.
ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜೆಎಂಎಫ್ಸಿ ಪ್ರೀಯಾ ರವಿ ಜೊಗ್ಲೇಕರ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್ಸಿ ಶಿವಣ್ಣ ಎಚ್.ಆರ್, 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್ಸಿ ಯೋಗೇಂದ್ರ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಕಕ್ವೆ ಕೃಷ್ಣಪ್ಪ ಗೌಡ ಅತಿಥಿಗಳಿಗೆ ತಾಂಬೂಲ ನೀಡಿ ಗೌರವಿಸಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ಮಯ ರೈ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಸೀಮಾ ನಾಗರಾಜ್ ವಂದಿಸಿದರು. ವಕೀಲರಾದ ಮಮತಾ ಸುವರ್ಣ, ವನಿತಾ, ಸಾಹಿರ ಜುಬೈರ್ ತುಳು ಜನಪ ಶೈಲಿಯಲ್ಲಿ ಪ್ರಾರ್ಥಿಸಿದರು. ವಕೀಲರ ಸಂಘದ ಸದಸ್ಯ ನ್ಯಾಯವಾದಿ ತೇಜಸ್, ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.