ಇಡಾಳ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ, ಸ್ಮಾರ್ಟ್‌ಕ್ಲಾಸ್ ಉದ್ಘಾಟನೆ, ಅಭಿನಂದನೆ

0

ಪುತ್ತೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇಡಾಳದಲ್ಲಿ ದೇಶದ ೭೭ನೇ ಸ್ವಾತಂತ್ರ್ಯೋತ್ಸವದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರಶೇಖರ ಐ. ಧ್ವಜಾರೋಹಣ ನೆರವೇರಿಸಿದರು.


ಕಾರ್ಯಕ್ರಮದಲ್ಲಿ ಬೆಂಗಳೂರಿನ ಮೆಂಡಾ ಫೌಂಡೇಶನ್, ಎಸ್ ಆಂಡ್ ಬಿ ಗ್ಲೋಬಲ್ ಹಾಗೂ ಸೆಲ್ಕೋ ಫೌಂಡೇಶನ್ ಸಹ ಭಾಗಿತ್ವದೊಂದಿಗೆ ರೂ.1,75,000ರೂ ವೆಚ್ಚದಲ್ಲಿ ಶಾಲೆಯಲ್ಲಿ ಅಳವಡಿಸಲಾದ ಸೋಲಾರ್ ಆಧಾರಿತ ಸ್ಮಾರ್ಟ್‌ಕ್ಲಾಸ್‌ನ ಉದ್ಘಾಟಿಸಲಾಯಿತು. ಆಲಂಕಾರು ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಬಿ. ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ, ಸೆಲ್ಕೋ ಸೋಲಾರ್ ಸಂಸ್ಥೆಯವರಿಗೆ ಇಲಾಖೆಯ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿದರು. ಸೆಲ್ಕೋ ಸೋಲಾರ್ ಸಂಸ್ಥೆಯ ಏರಿಯಾ ಮ್ಯಾನೇಜರ್ ಪ್ರಸಾದ್ ಬಿ. ಸ್ಮಾರ್ಟ್‌ಕ್ಲಾಸ್‌ನ ಪ್ರಯೋಜನಗಳ ಬಗ್ಗೆ ವಿವರಿಸಿದರು.
ಊರಿನ ಹಿರಿಯರಾದ ಧರ್ಣಪ್ಪ ಗೌಡ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪೆರಾಬೆ ಗ್ರಾ. ಪಂ. ಸದಸ್ಯ ಸದಾನಂದ ಕೆ., ಆಲಂಕಾರು ಜೇಸಿಐ ಅಧ್ಯಕ್ಷ ಲಕ್ಷ್ಮೀನಾರಾಯಣ ಅಲೆಪ್ಪಾಡಿ, ಸೆಲ್ಕೋ ಪುತ್ತೂರು ಶಾಖಾ ವ್ಯವಸ್ಥಾಪಕ ಸುಧಾಕರ್ ಆಳ್ವ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಗೂ ಭಾಷಣದ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ʼಕಾಮಿಡಿ ಕಿಲಾಡಿ ಷೋʼ ನಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದ ಸಂಸ್ಥೆಯ ಹಿರಿಯ ವಿದ್ಯಾರ್ಥಿ ದೀಕ್ಷಿತ್ ಕುಮಾರ್‌ರವರನ್ನು ಸನ್ಮಾನಿಸಲಾಯಿತು. ಕೆದ್ದೋಟೆ ಶ್ರೀ ರಾಮ ಭಜನಾ ಮಂಡಳಿ ಅಧ್ಯಕ್ಷ ಚಂದ್ರಶೇಖರ, ಇಡಾಳ ಸಂಗಮ ಯುವಕ ಮಂಡಲದ ಅಧ್ಯಕ್ಷ ಚಿದಾನಂದ ಕೆ.ಎಸ್., ಇಡಾಳ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹರಿಣಾಕಿ, ವಿಶ್ವನಾಥ ಗೌಡ ಇಡಾಳ ಹಾಗೂ ಕರಿಯಪ್ಪ ಗೌಡ ಶಾಲಾ ಎಸ್.ಡಿ.ಎಂ.ಸಿ ಸದಸ್ಯರು, ಸ್ತ್ರೀ ಶಕ್ತಿ ಸಂಘಗಳ ಸದಸ್ಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ಪೋಷಕರು, ವಿದ್ಯಾಭಿಮಾನಿಗಳು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಗೌರವ ಶಿಕ್ಷಕಿ ಪುಲಕಿತ ವಂದಿಸಿದರು. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ಪಾಲಕರು ಸಹಕರಿಸಿದರು.

LEAVE A REPLY

Please enter your comment!
Please enter your name here