ಪುತ್ತೂರು: ಎಚ್.ಪಿ.ಗ್ಯಾಸ್ ಏಜೆನ್ಸಿಗಳಿಂದ ತೈಲಕಂಪೆನಿಯ ನಿರ್ದೇಶಾನುಸಾರ ಅನಿಲ ಸುರಕ್ಷತೆಯ ತಪಾಸಣೆಯನ್ನು ಗ್ರಾಹಕರ ಸುರಕ್ಷತಾ ದೃಷ್ಟಿಯಿಂದ ಕಡ್ಡಾಯಗೊಳಿಸಲಾಗಿದೆ. ಆದರೆ ಗ್ರಾಹಕರ ಮನೆಗೆ ಬಂದು ಅಡುಗೆ ಅನಿಲ ತಪಾಸಣೆ ಕಡ್ಡಾಯವಲ್ಲ ಎಂದು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಪಷ್ಟಪಡಿಸಿದ್ದಾರೆ.
ಪೆಟ್ರೋಲಿಯಮ್ ಕಂಪೆನಿಯ ಗುರುತು ಚೀಟಿ ಹೊಂದಿರುವ ವ್ಯಕ್ತಿಗಳು ತೆರಳಿ ಅಡುಗೆ ಕೋಣೆಯಲ್ಲಿ ಗ್ಯಾಸ್ ಅನ್ನು ಪರಿಶೀಲಿಸಿ, ಪರಿಶೀಲಿಸಿರುವುದಕ್ಕೆ ಸೇವಾ ಶುಲ್ಕವಾಗಿ ರೂ.236 ಅನ್ನು ತೆರಬೇಕೆಂದೂ, ರಬ್ಬರ್ ಟ್ಯೂಬ್, ಬದಲಾಯಿಸಬೇಕಾದಲ್ಲಿ ರೂ.190 ಅನ್ನು ನೀಡಬೇಕೆಂಬುದಾಗಿ ತಿಳಿಸಲಾಗಿರುತ್ತದೆ. ಆದರೆ, ಈ ರೀತಿಯ ಅನಿಲ ಸುರಕ್ಷತೆಯ ತಪಾಸಣೆಯು ಗ್ರಾಹಕರಿಗೆ ಕಡ್ಡಾಯವಾಗಿರುವುದಿಲ್ಲ, ಗ್ಯಾಸ್ ಏಜೆನ್ಸಿಯವರು ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡಿ ಗ್ರಾಹಕರು ಬಯಸಿದ್ದೇ ಆದಲ್ಲಿ ಅವರ ಅನುಮತಿ ಮೇರೆಗೆ ಮಾತ್ರ ಗ್ರಾಹಕರ ಮನೆಯೊಳಗೆ ಹೋಗಿ ಅನಿಲ ತಪಾಸಣೆಯನ್ನು ಕೈಗೊಳ್ಳಬಹುದಾಗಿರುತ್ತದೆ. ಸಾರ್ವಜನಿಕರು ತಮ್ಮ ಸುರಕ್ಷತೆಗಾಗಿ ಅಡುಗೆ ಅನಿಲ ತಪಾಸಣೆಯನ್ನು ಕೈಗೊಳ್ಳಬೇಕಾಗಿದ್ದಲ್ಲಿ ತಮ್ಮ ಗ್ಯಾಸ್ ಏಜೆನ್ಸಿಗೆ ಕರೆ ಮಾಡಿ ತಪಾಸಣೆಯನ್ನು ಕೈಗೊಳ್ಳಬಹುದಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಹಕರು ಬಯಸಿದಲ್ಲಿ ಮಾತ್ರ ಮನೆಯೊಳಗೆ ಅನಿಲ ತಪಾಸಣೆ-ಡಿಸಿ