ನೆಲ್ಯಾಡಿ: ಇಲ್ಲಿನ ಸಂತಜಾರ್ಜ್ ವಿದ್ಯಾಸಂಸ್ಥೆಯ ಮುಂಭಾಗ, ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದ ಕೆ.ಜೆ.ಕೆ ಬಿಲ್ಡಿಂಗ್ನಲ್ಲಿರುವ ಜಗದಾಂಬಾ ಏಜೆನ್ಸಿಸ್ ಅಂಗಡಿಯಿಂದ ಆ.16ರಂದು ರಾತ್ರಿ 2 ಲಕ್ಷ ರೂ.ನಗದು ಸೇರಿ 15.07 ಲಕ್ಷ ರೂ.,ಮೌಲ್ಯದ ಸಾಮಾಗ್ರಿಗಳು ಕಳವುಗೊಂಡಿವೆ.
ರಾಜಸ್ಥಾನ ಮೂಲದ ಮನೋಹರ ಸಿಂಗ್ ಎಂಬವರ ಮಾಲಕತ್ವದ ಜಗದಾಂಬಾ ಏಜೆನ್ಸಿಯಲ್ಲಿ ಎಲೆಕ್ಟ್ರಿಕಲ್, ಪ್ಲಂಬಿಂಗ್ ಹಾಗೂ ಹಾರ್ಡ್ವೇರ್ ಟೂಲ್ಸ್ಗಳ ಹೋಲ್ಸೇಲ್ ಮಾರಾಟ ಮಾಡಲಾಗುತ್ತಿತ್ತು. ಮಾಲಕ ಮನೋಹರ ಸಿಂಗ್ ಅವರು ಆ.17ರಂದು ಸಂಜೆ ತಮ್ಮ ಊರು ರಾಜಸ್ಥಾನಕ್ಕೆ ತೆರಳಿದ್ದು ಅವರ ಸಹೋದರ ಕರಣ್ ಪಾಲ್ ಹಾಗೂ ಬಾವ ಪ್ರೇಮ್ ಸಿಂಗ್ ಅವರು ರಾತ್ರಿ ಎಂದಿನಂತೆ 8.30ರ ವೇಳೆಗೆ 2 ಲಕ್ಷ ರೂಪಾಯಿಯನ್ನು ಕ್ಯಾಶ್ ಡ್ರವರ್ನಲ್ಲಿಟ್ಟು ಅಂಗಡಿ ಬಂದ್ ಮಾಡಿ ಬಾಡಿಗೆ ಮನೆಗೆ ತೆರಳಿದ್ದರು. ಆ.17ರಂದು ಬೆಳಿಗ್ಗೆ ಪ್ರೇಮ್ ಸಿಂಗ್ರವರು ಅಂಗಡಿಯ ಬಾಗಿಲು ತೆರೆಯಲು ಹೋದಾಗ ಅಂಗಡಿಯ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಕತ್ತರಿಸಿ ಶಟರ್ ಸ್ವಲ್ಪ ಮೇಲೆ ಎತ್ತಿರುವಂತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ವಿಚಾರವನ್ನು ಕರಣ್ಪಾಲ್ರವರಿಗೆ ತಿಳಿಸಿದ್ದರು. ಕರಣ್ ಪಾಲ್ರವರು ಬಂದು ಪರಿಶೀಲನೆ ನಡೆಸಿದಾಗ ಹಣ ಹಾಗೂ ಸಾಮಾಗ್ರಿಗಳು ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.
ಬೆಲೆ ಬಾಳುವ ವಸ್ತುಗಳ ಕಳವು:
ಮುಂಭಾಗದ ಶಟರ್ನ ಲಾಕ್ ಮುರಿದು ಒಳನುಗ್ಗಿರುವ ಕಳ್ಳರು ಅಂಗಡಿಯೊಳಗಿದ್ದ ಬೆಲೆ ಬಾಳುವ ಲಕ್ಷಾಂತರ ರೂ. ಮೌಲ್ಯದ ಎಲೆಕ್ಟ್ರಿಕಲ್ ಹಾಗೂ ಇತರೇ ಸಾಮಾಗ್ರಿಗಳನ್ನು ದೋಚಿದ್ದಾರೆ. ಅಂಗಡಿಯ ಕ್ಯಾಶ್ ಡ್ರವರ್ನಲ್ಲಿದ್ದ 2 ಲಕ್ಷ ರೂ.ನಗದು ಹಾಗೂ ಎಲೆಕ್ಟ್ರಿಕ್ ಹಾಗೂ ಇತರೇ ಸಾಮಾಗ್ರಿ ಕಳ್ಳತನವಾಗಿದೆ. ಅಂಗಡಿಯೊಳಗೆ ಇದ್ದ ಸಿಸಿ ಕ್ಯಾಮರದ ಡಿವಿಆರ್ ಸಹ ದೋಚಿದ್ದಾರೆ. ನಗದು ಸೇರಿದಂತೆ ಒಟ್ಟು 15.07 ಲಕ್ಷ ರೂ.ಮೌಲ್ಯದ ಸೊತ್ತು ಕಳವಾಗಿದೆ ಎಂದು ಅಂದಾಜಿಸಲಾಗಿದೆ. ಊರಿಗೆ ತೆರಳಿದ್ದ ಮನೋಹರ ಸಿಂಗ್ ಅವರು ಆ.17ರಂದು ಬೆಳಿಗ್ಗೆ ಗೋವಾ ತಲುಪುತ್ತಿದ್ದಂತೆ ಅಂಗಡಿಯಲ್ಲಿ ಕಳ್ಳತನ ಆಗಿರುವ ವಿಚಾರ ಅವರಿಗೆ ಗೊತ್ತಾಗಿದ್ದು ಅವರು ಗೋವಾದಿಂದ ಮತ್ತೆ ನೆಲ್ಯಾಡಿಗೆ ಹಿಂತಿರುಗಿದ್ದಾರೆ.
ಶ್ವಾನ ದಳ/ ಬೆರಳಚ್ಚು ತಜ್ಞರ ಆಗಮನ:
ಮಧ್ಯಾಹ್ನದ ವೇಳೆಗೆ ಮಂಗಳೂರಿನಿಂದ ಆಗಮಿಸಿದ ಬೆರಳಚ್ಚು ಹಾಗೂ ಶ್ವಾನದಳದ ತಜ್ಞರು ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಉಪ್ಪಿನಂಗಡಿ ಸರ್ಕಲ್ ಇನ್ಸ್ಪೆಕ್ಟರ್ ರವಿ ಬಿ.ಎಸ್, ಸಬ್ ಇನ್ಸ್ಪೆಕ್ಟರ್ ರುಕ್ಮಯ ಗೌಡ, ನೆಲ್ಯಾಡಿ ಹೊರ ಠಾಣೆ ಹೆಡ್ ಕಾನ್ಸ್ಟೇಬಲ್ ಕುಶಾಲಪ್ಪ ನಾಯ್ಕ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕರಣ್ಪಾಲ್ರವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 110/2023 ಕಲಂ: IPC 1860 (U/s-380.457) ಪ್ರಕರಣ ದಾಖಲಾಗಿದೆ.