ಸವಣೂರು ಗ್ರಾ. ಪಂ.ಅಧ್ಯಕ್ಷರಾಗಿ ಸುಂದರಿ ಬಿ.ಎಸ್, ಉಪಾಧ್ಯಕ್ಷರಾಗಿ ಜಯಶ್ರೀ ವಿಜಯ ಅಧಿಕಾರ ಸ್ವೀಕಾರ

0

ಸವಣೂರು: ಸವಣೂರು ಗ್ರಾ.ಪಂ.ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸುಂದರಿ ಬಿ.ಎಸ್‌ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಜಯಶ್ರೀ ವಿಜಯ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮ ಗ್ರಾ.ಪಂ.ನಲ್ಲಿ ಆ.17ರಂದು ನಡೆಯಿತು.

ನಿರ್ಗಮನ ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಹಾಗೂ ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ ಅವರು ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರನ್ನು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸಂಚಾಲಕ, ಸಹಕಾರ ರತ್ನ ಸವಣೂರು ಕೆ. ಸೀತಾರಾಮ ರೈ ಹಾಗೂ ಆಡಳಿತಾಧಿಕಾರಿ ಅಶ್ವಿನ್‌ ಎಲ್.ಶೆಟ್ಟಿ ,ವಿದ್ಯಾರಶ್ಮಿ ವಿದ್ಯಾಲಯದ ಪ್ರಾಚಾರ್ಯ ಸೀತಾರಾಮ ಕೇವಳ,ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ನಾರಾಯಣ ಮೂರ್ತಿ ಅವರು , ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್‌ ಪಿ., ಗ್ರಾ.ಪಂ.ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಪರವಾಗಿ ಲೆಕ್ಕಸಹಾಯಕ ಎ.ಮನ್ಮಥ, ಸುರೇಶ್‌ ರೈ ಸೂಡಿಮುಳ್ಳು , ಬಾಲಕೃಷ್ಣ ರೈ ದೇವಸ್ಯ, ಪ್ರಜ್ವಲ್‌ ಕೆ.ಆರ್‌ ಅವರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ,ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಕೆ.ಸೀತಾರಾಮ ರೈ ಸವಣೂರು ಅವರು, ಗ್ರಾ.ಪಂ.ವ್ಯಾಪ್ತಿಯ ಎಲ್ಲಾ ಜನರಿಗೆ ಸಮಾನ ರೀತಿಯ ಸೇವೆ ನೀಡಲಿ.ಅಗತ್ಯವಾಗಿ ಬೇಕಾಗಿರುವ ಕುಡಿಯುವ ನೀರಿಗೆ ಶಾಶ್ವತ ವ್ಯವಸ್ಥೆಯಾಗಬೇಕು.ಮಾಜಿ ಸಚಿವ ಎಸ್.ಅಂಗಾರ ಅವರ ಅವಧಿಯಲ್ಲಿ ಕುದ್ಮಾರಿನ ಶಾಂತಿಮೊಗರು ಬಳಿ ಸುಮಾರು 8 ಕೋಟಿ ರೂ.ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟಿನಿಂದ ಇದುವರೆಗೂ ಯಾವುದೇ ಗ್ರಾಮಕ್ಕೂ ನೀರು ಸರಬರಾಜು ಆಗಿಲ್ಲ. ಈಗಿನ ಪರಿಸ್ಥಿತಿಯನ್ನು ನೋಡುವಾಗ ಮುಂಬರುವ ದಿನಗಳಲ್ಲಿ ನೀರಿಗೆ ತತ್ವಾರ ಬರಲಿದೆ. ಈ ನಿಟ್ಟಿನಲ್ಲಿ ಸವಣೂರು ಗ್ರಾ.ಪಂ.ಆಡಳಿತದಿಂದ ನೂತನ ಶಾಸಕರ ಮೂಲಕ ಗ್ರಾಮ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು. ಗ್ರಾ.ಪಂ.ಗೆ ನಮ್ಮಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ನಿರ್ಗಮನ ಅಧ್ಯಕ್ಷೆ ರಾಜೀವಿ ಶೆಟ್ಟಿ ಮಾತನಾಡಿ, 2.5 ವರ್ಷದ ಮೊದಲ ಅವಧಿಯಲ್ಲಿ ಎಲ್ಲಾ ಸದಸ್ಯರ, ಸಾರ್ವಜನಿಕರ,ಹಾಗೂ ಅಧಿಕಾರಿ, ಸಿಬ್ಬಂದಿ ವರ್ಗದವರ ಸಹಕಾರದಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ಇದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಸರಕಾರದಿಂದ ಅಮೃತ ಗ್ರಾಮ ಯೋಜನೆಗೆ ಸವಣೂರು ಗ್ರಾ.ಪಂ.ಆಯ್ಕೆಯಾಗಿತ್ತು. ಅದರಂತೆ ಪುಣ್ಚಪ್ಪಾಡಿ ಗ್ರಾಮದಲ್ಲಿ ಅಮೃತ ಉದ್ಯಾನವನ ಮಕ್ಕಳ ಪಾರ್ಕ್‌, ಕೊಂಬಕೆರೆಯನ್ನು ಅಮೃತ ಸರೋವರವಾಗಿ ಅಭಿವೃದ್ದಿ ಮಾಡಲಾಗಿದೆ.ಅಲ್ಲದೆ ಸೋಲಾರ್‌ ದೀಪ ಅಳವಡಿಕೆ ಮಾಡಲಾಗಿದೆ.ತನ್ನ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ ಮಾತನಾಡಿ, ತಾನು ಮೊದಲ ಬಾರಿ ಸದಸ್ಯರಾಗಿ ಆಯ್ಕೆಯಾಗಲು ನಾನು ಕೆಲಸ ಮಾಡಿಕೊಂಡಿದ್ದ ಸಂಘಟನೆ ಅವಕಾಶ ಮಾಡಿದೆ.ಅದರಂತೆ ಉಪಾಧ್ಯಕ್ಷನಾಗುವ ಅವಕಾಶವೂ ದೊರೆಯಿತು. ನಮ್ಮ ಆಡಳಿತ ಅವಧಿಯ ಮೊದಲ ವರ್ಷ ಕೊರೊನಾ ಕಾರಣದಿಂದ ಅಭಿವೃದ್ದಿಗೆ ಹಿನ್ನಡೆಯಾಗಿತ್ತು. ಕೊರೊನಾ ನಿರ್ಮೂಲನೆ ನಿಟ್ಟಿನಲ್ಲಿ ಗ್ರಾ.ಪಂ.ಆಡಳಿತ ಗಮನಹರಿಸಿ ಆರೋಗ್ಯದ ಸೇವೆ ಮಾಡಿದೆ. ಅಲ್ಲದೆ ಬಳಿಕದ ದಿನಗಳಲ್ಲಿ ಅಭಿವೃದ್ದಿಗೆ ಶ್ರಮಿಸಲಾಗಿದೆ. ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಅಭಿವೃದ್ದಿಯಲ್ಲಿ ಸದಸ್ಯರ ಜತೆಗೆ ಸಿಬಂದಿಗಳೂ ಉತ್ತಮ ಸಹಕಾರ ನೀಡಿದ್ದಾರೆ. ಅಮೃತ ಗ್ರಾಮ ಯೋಜನೆಯಲ್ಲಿಯೂ ಅಭಿವೃದ್ದಿಯಾಗಿದೆ. ವಿಶೇಷವಾಗಿ ಸವಣೂರು ಪೇಟೆಗೆ ಸೀತಾರಾಮ ರೈ ಅವರು 75ನೇ ಜನ್ಮದಿನದ ಅಂಗವಾಗಿ ಸ್ವಚ್ಚರಶ್ಮಿ, ಶೌಚಾಲಯ, ಸ್ನಾನಗೃಹವನ್ನು ಕೊಡುಗೆಯಾಗಿ ನೀಡಿದ್ದಾರೆ. ಅಭಿವೃದ್ದಿಯಲ್ಲಿ ಸಾರ್ವಜನಿಕರ ಸಹಕಾರವೂ ಮುಖ್ಯ. ಮಂದಿನ ದಿನಗಳಲ್ಲಿ ಗ್ರಾ.ಪಂ.ಗೆ ಹೊಸಕಟ್ಟಡಗಳೂ ಆಗಬೇಕಿದೆ. ಈಗಿರುವ ಕಟ್ಟಡ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ತೆರವಾಗುವ ಸಾಧ್ಯತೆ ಇದ್ದು,ಸಂಸದರ, ಶಾಸಕರ, ಸರಕಾರದ ಸಹಕಾರದಲ್ಲಿ ಈ ಕಾರ್ಯ ನಡೆಯುವ ವಿಶ್ವಾಸವಿದೆ ಎಂದರು.

ನೂತನ ಅಧ್ಯಕ್ಷೆ ಸುಂದರಿ ಬಿ.ಎಸ್‌ ಮಾತನಾಡಿ,2ನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವಲ್ಲಿ ಗ್ರಾ.ಪಂ.ಸದಸ್ಯರು, ಬಿಜೆಪಿ ಮಂಡಲ ಸಮಿತಿ ಹಾಗೂ ಕಾರ್ಯಕರ್ತರ ಸಹಕಾರ ಇದೆ. ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ ಅವರು ನಿರಂತರವಾಗಿ ಪ್ರೋತ್ಸಾಹ ನೀಡಿದ್ದಾರೆ. ಈ ಹಿಂದಿನ ಅಧ್ಯಕ್ಷರು ಮಾಡಿರುವ ಯೋಜನೆಯನ್ನು ಮುಂದುವರಿಸಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು. ನೂತನ ಉಪಾಧ್ಯಕ್ಷೆ ಜಯಶ್ರೀ ವಿಜಯ ಮಾತನಾಡಿ, ಮುಂದಿನ 2.5 ವರ್ಷಗಳ ಅವಧಿಯಲ್ಲಿ ಯಾವುದೇ ರೀತಿಯ ಕಪ್ಪು ಚುಕ್ಕೆ ಬಾರದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ. ಈ ಅವಕಾಶ ಸಿಗಲು ಬಿಜೆಪಿ ಪಕ್ಷದ ಕಾರ್ಯಕರ್ತರ ಹಾಗೂ ಹಿರಿಯರಾದ ಗಿರಿಶಂಕರ ಸುಲಾಯ ಅವರ ಮಾರ್ಗದರ್ಶನ ಸಹಕಾರ ಕಾರಣವಾಗಿದೆ.ಎಲ್ಲರ ಸಹಕಾರ ಮುಂದೆಯೂ ಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ, ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ., ಸದಸ್ಯರಾದ ಅಬ್ದುಲ್‌ ರಝಾಕ್‌ ಕೆನರಾ, ಗಿರಿಶಂಕರ ಸುಲಾಯ, ತೀರ್ಥರಾಮ ಕೆಡೆಂಜಿ,ಬಾಬು ಎನ್.‌, ಹಾಗೂ ಗ್ರಾ.ಪಂ.ಸಿಬ್ಬಂದಿಗಳಾದ ಪ್ರಮೋದ್‌ ಕುಮಾರ್‌, ದಯಾನಂದ ಮಾಲೆತ್ತಾರು, ಜಯಶ್ರೀ, ಜಯಾ ಕೆ, ಶಾರದಾ, ಯತೀಶ್‌ ಕುಮಾರ್‌, ದೀಪಿಕಾ ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ನೂತನ ಅಧ್ಯಕ್ಷೆ ಸುಂದರಿ ಬಿ.ಎಸ್‌,ಉಪಾಧ್ಯಕ್ಷೆ ಜಯಶ್ರೀ ವಿಜಯ ಅವರಿಗೆ ಸುದ್ದಿ ಜನಾಂದೋಲನ ವೇದಿಕೆಯ ಲಂಚ, ಭ್ರಷ್ಟಾಚಾರ ವಿರೋಧಿ ಫಲಕ ನೀಡಲಾಯಿತು.

LEAVE A REPLY

Please enter your comment!
Please enter your name here