ಉಪ್ಪಿನಂಗಡಿ: ವಿದ್ಯಾರ್ಥಿಗಳಿಗೆ ಅನ್ನದ ನೆಲೆ ಮತ್ತು ಬೆಲೆಯನ್ನು ತಿಳಿಸುವ ಸಲುವಾಗಿ ಇಲ್ಲಿನ ವೇದಶಂಕರ ನಗರದಲ್ಲಿರುವ ಶ್ರೀರಾಮ ಶಾಲಾಡಳಿತವು ವಾರ್ಷಿಕ ಭತ್ತ ನಾಟಿಯ ಶಿಕ್ಷಣವನ್ನು ಆಯೋಜಿಸಿತು.
ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ ಉಪ್ಪಿನಂಗಡಿ ಇದರ ಸಹಯೋಗದೊಂದಿಗೆ, ಮಕ್ಕಳಿಗೆ ಭತ್ತ ಬೇಸಾಯದ ಅನುಭವ ನೀಡುವ ಉದ್ದೇಶದಿಂದ ಮುಳಿಯ ಕಲಾವತಿ ಹೆಗ್ಡೆ ರವರ ಗದ್ದೆಯಲ್ಲಿ ಭತ್ತ ನಾಟಿ ಶಿಕ್ಷಣ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಕೆಸರು ಗದ್ದೆಯಲ್ಲಿ ವಿವಿಧ ಮನೋರಂಜನಾ ಕ್ರೀಡೆಗಳನ್ನು ಆಡಿ ಬಳಿಕ ಭತ್ತದ ನಾಟಿಯನ್ನು ಮಾಡಿ ಸಂಭ್ರಮಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಸುಪ್ರೀತ್ ಲೋಬೋ ಮಾತನಾಡಿ, ಶ್ರೀ ರಾಮ ಶಾಲೆಯ ಕಲಿಕೆಯ ಹಾದಿಯು ಗುಣಾತ್ಮಕವಾದದ್ದು, ಮಕ್ಕಳ ಕಲಿಕೆಯನ್ನು ನಾಲ್ಕು ಗೋಡೆಗಳ ಮಧ್ಯೆ ಮಾತ್ರ ಮೀಸಲಿರಿಸದೆ, ಜೀವನ ಶಿಕ್ಷಣವನ್ನು ನೀಡುವ ಕೈಂಕರ್ಯ ಮಾಡುತ್ತಿದೆ. ಇಲ್ಲಿ ಕಲಿತ ಪ್ರತಿಯೊಬ್ಬ ವಿದ್ಯಾರ್ಥಿಯೂ ಎಲ್ಲಿ ಹೋದರೂ ಸಾಧಿಸಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಲಯದ ಅಧ್ಯಕ್ಷ ಸುನಿಲ್ ಅನಾವು ವಹಿಸಿದ್ದು, ಶ್ರೀ ಸಹಸ್ರಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಶಾಲಾ ಸಂಚಾಲಕರಾದ ಯು.ಜಿ.ರಾಧ, ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಅನುರಾಧ ಅರ್. ಶೆಟ್ಟಿ, ಪೋಷಕ ಸಂಘದ ಅಧ್ಯಕ್ಷರಾದ ಮೋಹನ್ ಭಟ್.ಪಿ., ಉಪಸ್ಥಿತರಿದ್ದರು.
ಪ್ರೌಢವಿಭಾಗದ ಮುಖ್ಯ ಗುರುಗಳಾದ ರಘುರಾಮ ಭಟ್ .ಸಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಚರೀಷ್ಮಾ, ಸಂರಕ್ಷಾ ಕಾರ್ಯಕ್ರಮ ನಿರೂಪಿಸಿದರು. ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ವಿಮಲ ವಂದಿಸಿದರು. ಶಿಕ್ಷಕ ಪೂವಪ್ಪ ಸಹಕರಿಸಿದರು.