ಟಿ.ನಾರಾಯಣ ಭಟ್ ರಾಮಕುಂಜರವರ ‘ಬೆಳಕು ಬೆಳದಿಂಗಳು’ ಕೃತಿ ಬಿಡುಗಡೆ

0

ಪ್ರೇರಣಾ ಕೃತಿ: ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ

ರಾಮಕುಂಜ: ಸಾಹಿತಿ, ಲೇಖಕ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಟಿ.ನಾರಾಯಣ ಭಟ್ ರಾಮಕುಂಜ ಅವರು ಬರೆದಿರುವ ‘ಬೆಳಕು ಬೆಳದಿಂಗಳು’ ಕೃತಿಯನ್ನು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಸುಬ್ರಹ್ಮಣ್ಯದಲ್ಲಿ ಬಿಡುಗಡೆಗೊಳಿಸಿದರು.


ಬಳಿಕ ಆಶೀರ್ವಚನ ನೀಡಿದ ಸ್ವಾಮೀಜಿಯವರು, ಶಿಕ್ಷಣ ತಜ್ಞರು, ಉತ್ತಮ ಲೇಖಕರೂ ಆಗಿ ಜನಾನುರಾಗಿಯಾಗಿರುವ ಟಿ. ನಾರಾಯಣ ಭಟ್ ರಾಮಕುಂಜರವರು ಶಿಕ್ಷಣಕ್ಕೆ ಸಂಬಂಧಿಸಿ ಬರೆದ ಅನೇಕ ಪುಸ್ತಕಗಳು ಹಲವು ಬಾರಿ ಮುದ್ರಣ ಹೊಂದುವಷ್ಟು ಆಕರ್ಷಕವಾಗಿದೆ. ಅವರ ಒಡನಾಡಿಗಳ ವ್ಯಕ್ತಿ ಪರಿಚಯವಿರುವ ಲೇಖನ ಸಂಗ್ರಹದ ಕೃತಿ ‘ ಬೆಳಕು ಬೆಳದಿಂಗಳು’ ತುಂಬಾ ಅರ್ಥಪೂರ್ಣವಾಗಿದೆ. ಇದೊಂದು ಪ್ರೇರಣಾ ಕೃತಿ ಎಂದರು.

ನಮ್ಮ ನಾಡಿನ ಬಹಳಷ್ಟು ಮಂದಿ ಅನ್ಯಾನ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿದ್ದಾರೆ. ಅವರು ಎಲ್ಲೂ ಹೇಳುತ್ತಾ ಪ್ರಚಾರಗಿಟ್ಟಿಸಿಕೊಂಡವರಲ್ಲ. ಈ ಪರಿಚಯ ಲೇಖನ ಅವರಿಗಷ್ಟೇ ಆನಂದ ಕೊಡುವುದಲ್ಲ, ಅವರ ಬದುಕಿನಿಂದ ಕಿರಿಯರು ಪ್ರೇರಣೆಗೊಂಡು ಮಹತ್ತರ ಸಾಧನೆಗೆ ಸ್ಫೂರ್ತಿ ಪಡೆಯುವರು. ಸ್ವಾತಂತ್ರ್ಯ ಪಡೆದು 75 ವರ್ಷಗಳಾಗುವಷ್ಟರಲ್ಲಿ ಆ ಕಾಲದಲ್ಲಿದ್ದ 47 ಮಹನೀಯರ ಸಾಧನೆ ಬಿಂಬಿಸುವ ಈ ಲೇಖನಗಳ ಮಾಲೆಯನ್ನು ತಮ್ಮ ಆಪ್ತರಾದ ಟಿ.ನಾರಾಯಣ ಭಟ್‌ರವರು ಅತ್ಯಾಕರ್ಷವಾಗಿ ಬರೆದಿದ್ದಾರೆ. ಇವುಗಳನ್ನು ಸಂಗ್ರಹಿಸುವುದು ಅಷ್ಟೇನೂ ಸುಲಭದ ಕೆಲಸವಲ್ಲ. ಅವರ ಅದಮ್ಯ ಉತ್ಸಾಹ ಇದನ್ನು ಬರೆಸಿತು ಎಂದು ಹೇಳಿ ಶುಭ ಹಾರೈಸಿದರು. ಸಮಾರಂಭದಲ್ಲಿ ಯುವ ಉದ್ಯಮಿ ಶಿವಪ್ರಸಾದ್ ಇಜ್ಜಾವು, ಸುಬ್ರಹ್ಮಣ್ಯ ಮಠದ ದಿವಾನರಾದ ಸುದರ್ಶನ ಜೋಯಿಸ್, ಸುಬ್ರಹ್ಮಣ್ಯ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಶ್ರೀಕೃಷ್ಣ ಶರ್ಮಾ, ಶಶಾಂಕ್ ಡಿ.ಎಚ್, ಪತ್ರಕರ್ತ ಲೋಕೇಶ್ ಬಿ.ಎನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here