ಕೇವಲ ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಪ್ರಾಬಲ್ಯವಾಗಿಲ್ಲ – ಸುದರ್ಶನ್ ಮೂಡಬಿದ್ರೆ
ರಾಷ್ಟ್ರಭಕ್ತ ಭಾರತ ನಮ್ಮದು – ಸಂಜೀವ ಮಠಂದೂರು
ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರ ನಗರ ಮತ್ತು ಗ್ರಾಮಾಂತರ ಮಂಡಲಗಳ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರಪ್ರೇಮದ ದ್ಯೋತಕವಾಗಿ ‘ತಿರಂಗಾ ಯಾತ್ರೆ’ ಯು ಆ.18ರಂದು ಸಂಜೆ ಪುತ್ತೂರಿನಲ್ಲಿ ನಡೆಯಿತು. ತಿರಂಗ ಯಾತ್ರೆಯು ಸಂಜೆ ಪುತ್ತೂರು ಅಮರ್ ಜವಾನ್ ಜ್ಯೋತಿ ಸ್ಮಾರಕ ಬಳಿಯಿಂದ ಹೊರಟು ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್‌ನಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಆರಂಭದಲ್ಲಿ ಅಮರ್ ಜವಾನ್ ಜ್ಯೋತಿಸ್ಮಾರಕದಲ್ಲಿ ಪುಷ್ಪಾರ್ಚನೆ ಮಾಡಲಾಯಿತು. ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜಿ.ಪಂ ಮಾಜಿ ಅಧ್ಯಕ್ಷರಾದ ಅಶಾ ತಿಮ್ಮಪ್ಪ ಗೌಡ, ಮೀನಾಕ್ಷಿ ಶಾಂತಿಗೋಡು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ರಾಜ್ಯ ಪ್ರಕೋಷ್ಠದ ನಿಕಟಪೂರ್ವ ಸಹಪ್ರಭಾರಿ ವಿಶ್ವೇಶ್ವರ ಭಟ್ ಬಂಗಾರಡ್ಕ, ಹಿರಿಯರಾದ ಎಸ್ ಅಪ್ಪಯ್ಯ ಮಣಿಯಾಣಿ, ಬಿಜೆಪಿ ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಚಂದ್ರಶೇಖರ್ ರಾವ್ ಬಪ್ಪಳಿಗೆ ಸಹಿತ ಬಿಜೆಪಿಯ ಪ್ರಮುಖರು, ಕಾರ್ಯಕರ್ತರು ಯಾತ್ರೆಯಲ್ಲಿ ಪಾಲ್ಗೊಂಡರು. ತಿರಂಗಯಾತ್ರೆಯುದ್ದಕ್ಕೂ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದವರಿಗೆ ಜೈಕಾರ ಹಾಕಲಾಯಿತು. ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ನೆಹರುನಗರ ನಿವಾಸಿ ಸೂರಜ್ ಮತ್ತು ನವೀನ್ ರೈ ಅವರನ್ನು ಸನ್ಮಾನಿಸಲಾಯಿತು.
ಕೇವಲ ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಲಭ್ಯವಾಗಿಲ್ಲ :
ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ತಿರಂಗ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಬಿಜೆಪಿ ಜಿಲ್ಲಾಧ್ಯಕಷ ಸುದರ್ಶನ್ ಮೂಡಬಿದ್ರೆಯವರು ಮಾತನಾಡಿ ಕೇವಲ ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಲಭ್ಯವಾಗಿಲ್ಲ. ಸಾವಿರಾರು ಕ್ರಾಂತಿಕಾರಿಗಳ ಹೋರಾಟದ ಪರಿಣಾಮವಾಗಿ ಸ್ವಾತಂತ್ರ್ಯ ಲಭಿಸಿದೆ. ಸ್ವಾತಂತ್ರ್ಯ ಪ್ರಾಪ್ತಿಗೆ ಅನೇಕ ಹೋರಾಟಗಳು ನಡೆದಿದೆ. ಆದರೆ ಕಾಂಗ್ರೆಸ್ ಸುಳ್ಳು ಇತಿಹಾಸ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಅಹಿಂಸೆಯ ಹೋರಾಟದ ಮೂಲಕ ಸ್ವಾತಂತ್ರ್ಯ ಲಭಿಸಿಲ್ಲ. ನಿಜವಾದ ವಿಚಾರ ಜನತೆ ತಿಳಿಯಬೇಕೆಂದರು. ದೇಶದ ಜನರಲ್ಲಿ ರಾಷ್ಟ್ರಭಕ್ತಿ ಉದ್ದೀಪನವಾಗಬೇಕೆಂಬ ಉದ್ದೇಶದಿಂದ ಕಳೆದ ವರ್ಷ ಮತ್ತು ಈ ವರ್ಷ ಹರ್ ಘರ್ ತಿರಂಗಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದರು. ಇವತ್ತು ಜಗತ್ತಿನಲ್ಲಿ ತ್ರಿವರ್ಣ ಧ್ವಜ ಹಾರುತ್ತಿದೆ ಎಂದರೆ ಜಗತ್ತು ಭಾರತವನ್ನು ಸ್ವೀಕಾರ ಮಾಡುತ್ತಿದೆ ಎಂದರ್ಥವಾಗಿದೆ. ಈ ಭೂಮಿಯನ್ನು ಮಾತೃ ಸ್ವರೂಪದಲ್ಲಿ ನೋಡುವ ದೇಶ ಭಾರತ ಮಾತ್ರ. ಜಗತ್ತಿಗೆ ಅನೇಕ ಮೊದಲುಗಳನ್ನು ಕೊಟ್ಟ ದೇಶ ಭಾರತ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಂಸ್ಕೃತಿಗಳನ್ನು ಕೊಟ್ಟ ಭಾರತ ಒಂದು ಸಂದರ್ಭದಲ್ಲಿ ಗುಲಾಮಗಿರಿಯನ್ನು ಒಪ್ಪಿಕೊಳ್ಳುವ ಸ್ಥಿತಿ ಬಂತಾದರೂ ಸಾವಿರಾರು ವರ್ಷದ ಹೋರಾಟದ ಫಲವಾಗಿ ಸ್ವಾತಂತ್ರ್ಯ ಲಭಿಸಿತು. ಜಗತ್ತಿನ ಹಲವು ದೇಶಗಳಲ್ಲಿ ದಾಳಿ ನಡೆದಾಗ ಸಂಪತ್ತಿನ ಜೊತೆಗೆ ಅಲ್ಲಿನ ಸಂಸ್ಕೃತಿಯೂ ನಾಶವಾಗುತ್ತಿತ್ತು. ಆದರೆ ಭಾರತದಲ್ಲಿ ಮಾತ್ರ ಸಂಸ್ಕೃತಿಯ ನಾಶವಾಗಿಲ್ಲ. ಬದಲಾಗಿ ಇವತ್ತು ಜಗತ್ತಿಗೆ ಸಂಸ್ಕೃತಿಯನ್ನು ನೀಡುವ ಮೂಲಕ ಯವ ಗುರಿಯನ್ನು ಮುಟ್ಟಬೇಕೋ ಅದನ್ನು ಭಾರತ ಮುಟ್ಟಿದೆ. ಆದರೆ ನಮಗೆ ಸ್ವಾತಂತ್ರ್ಯದ ಪ್ರಾಪ್ತಿಗೆ ಅನೇಕ ಕ್ರಾಂತಿಕಾರಿ ಹೋರಾಟ ಮಾಡಬೇಕಾಯಿತು. ಕೇವಲ ಅಹಿಂಸೆಯ ಮೂಲಕ ಮಾತ್ರ ಸ್ವಾತಂತ್ರ್ಯ ಲಭಿಸಿಲ್ಲ ಎಂದರು. ಇವತ್ತು ಜಗತ್ತಿನ ಉಳಿವಿಗಾಗಿ ಭಾರತ ಉಳಿಯಬೇಕಾಗಿದೆ. ಕೆಲವೆ ದಿನದಲ್ಲಿ ಭಾರತ ಮತ್ತೊಮ್ಮೆ ಜಗತ್ತಿಗೆ ಗುರುವಾಗಲಿದೆ. ಈ ನಿಟ್ಟಿನಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಜಗತ್ತಿನ ಮೂರನೇ ಪ್ರಬಲ ಆರ್ಥಿಕ ದೇಶವನ್ನಾಗಿ ಭಾರತವನ್ನು ಮಾಡುವ ಸಂಕಲ್ಪ ಮಾಡಿದ್ದಾರೆ ಎಂದರು. ವಿಟ್ಲದಲ್ಲಿ ಸ್ವಾತಂತ್ರ್ಯದ ಸಂದರ್ಭದಲ್ಲಿ ವಿದ್ಯಾರ್ಥಿಗಳು ವೀರ ಸಾವರ್ಕರಿಗೆ ಜೈಕಾರ ಹಾಕಿರುವ ವಿಚಾರದಲ್ಲಿ ಶಾಲಾ ಶಿಕ್ಷಕಿಗೆ ಮತಾಂದ ವ್ಯಕ್ತಿಗಳು ಬೆದರಿಸಿರುವುದನ್ನು ಬಿಜೆಪಿ ಪ್ರಬಲವಾಗಿ ಖಂಡಿಸುತ್ತದೆ. ಸ್ವಾತಂತ್ರ್ಯ ಹೋರಾಟಗಾರರ ಹೆಸರಿರುವವರ ಪೈಕಿ ವೀರ ಎಂಬ ಆರಂಭದ ಪದ ಇರುವ ಏಕೈಕ ವ್ಯಕ್ತಿ ಸಾವರ್ಕರ್ ಮಾತ್ರ. ಹಾಗಾಗಿ ಅವರು ವೀರ ಸಾವರ್ಕರ್ ಆಗಿದ್ದಾರೆ ಎಂದರು.
ರಾಷ್ಟ್ರಭಕ್ತ ಭಾರತ ನಮ್ಮದು:
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ನಾವೆಲ್ಲ ಇತಿಹಾಸ ಪುಸ್ತಕದಲ್ಲಿರುವ ಸ್ವಾತಂತ್ರ್ಯ ಹೋರಾಟ ಮಾತ್ರ ನೋಡಿದ್ದೇವೆ. ನಿಜವಾದ ಹೋರಾಟವನ್ನು ಅರ್ಥ ಮಾಡಬೇಕಾಗಿದೆ. ಸ್ವಾತಂತ್ರ್ಯದ ಬಳಿಕ ಅಖಂಡ ಭಾರತ ತ್ರಿಖಂಡ ಭಾರತವಾಗಿರುವುದು ದುಖಃದ ವಿಚಾರ. ಸ್ವಾತಂತ್ರ್ಯದ ಬಳಿಕ ಪ್ರಧಾನಿಯಾದ ಲಾಲ್ ಬಹದ್ದೂರು ಶಾಸ್ತ್ರಿಯವರು ದೇಶದ ಸೈನಿಕರಿಗೆ, ಕೃಷಿಕರಿಗಾಗಿ ಜೈ ಜವಾನ್, ಜೈ ಕಿಸಾನ್ ಎಂದು ಘೋಷಣೆ ಕೂಗಿದರು. ಆದರೆ ಅಟಲ್ ಬಿಹಾರಿ ವಾಜಪೇಯಿವರು ಪ್ರಧಾನಿಯಾದ ಸಂದರ್ಭದಲ್ಲಿ ಜೈ ಜವಾನ್, ಜೈ ಕಿಸಾನ್ ಜೊತೆಗೆ ಜೈ ವಿಜ್ಞಾನ್ ಎಂದು ಘೋಷಣೆ ಮಾಡಿದ್ದು ಮಾತ್ರವಲ್ಲ ದೇಶವನ್ನು ಪ್ರಬಲ ದೇಶವನ್ನಾಗಿ ಮಾಡಿದರು. ಹಾಗಾಗಿ ರಾಷ್ಟ್ರಭಕ್ತ ಭಾರತ ನಮ್ಮದು. ಪ್ರಜಾಪ್ರಭುತ್ವವನ್ನು ನಾವು ಇಲ್ಲಿ ಉಳಿಸಬೇಕು ಎಂದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಜಿ.ಪಂ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಬಿಜೆಪಿ ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ಉಪಸ್ಥಿತರಿದ್ದರು. ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿದರು. ಜಿಲ್ಲಾ ಕಾರ್ಯಕಾರಿಣಿ ಸದಸ್ಯೆ ಗೌರಿ ಬನ್ನೂರು ಪ್ರಾರ್ಥಿಸಿದರು. ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ ವಂದಿಸಿದರು. ನಿತೀಶ್ ಕುಮಾರ್ ಶಾಂತಿವನ ವಂದಿಸಿದರು. ಪುರುಷೋತ್ತಮ ಮುಂಗ್ಲಿಮನೆ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.