ಎಸ್‌ಸಿಡಿಸಿಸಿ ಬ್ಯಾಂಕ್ ಸಾರ್ವಕಾಲಿಕ ಗರಿಷ್ಠ 61.29 ಕೋಟಿ ರೂ.ಲಾಭ-ಮಹಾಸಭೆಯಲ್ಲಿ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಘೋಷಣೆ

0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 2022-23ನೇ ಸಾಲಿನಲ್ಲಿ ಸಾರ್ವಕಾಲಿಕ ಗರಿಷ್ಠ ರೂ.61.29 ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ಬ್ಯಾಂಕ್ ವೈವಿಧ್ಯಮಯ ಯೋಜನೆಗಳೊಂದಿಗೆ ಆಧುನಿಕ ಬ್ಯಾಂಕಿಂಗ್ ಸೇವೆಯಲ್ಲಿ ರಾಷ್ಟ್ರಕ್ಕೇ ಮಾದರಿಯಾಗಿದೆ. ಸಮಸ್ತ ರೈತಾಪಿ ವರ್ಗದ ಹಾಗೂ ಗ್ರಾಹಕರ ಸೇವೆಯಲ್ಲಿ ಜನ ಮನ್ನಣೆ ಗಳಿಸಿಕೊಂಡು ಜನಸ್ನೇಹಿ ಬ್ಯಾಂಕ್ ಎನ್ನುವ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ. ಬ್ಯಾಂಕ್ ಸಹಕಾರಿ ರಂಗದಲ್ಲಿ ವಿಶಿಷ್ಠ ವಿನೂತನ ಸಾಧನೆಯೊಂದಿಗೆ ಅಗ್ರಮಾನ್ಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆಗಿ ಜನಾನುರಾಗಿಯಾಗಿದೆ ಎಂದು, ಆ.19ರಂದು ನಡೆದ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಅವರು ಹೇಳಿದರು.

ಬ್ಯಾಂಕಿನ ಸಭಾಭವನದಲ್ಲಿ ನಡೆದ ಬ್ಯಾಂಕಿನ 109ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು, ಸಹಕಾರ ತತ್ವದ ಮೂಲ ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕ್ ಸಾಧನೆಯ 109 ವರ್ಷಗಳನ್ನು ಪೂರೈಸಿ ಅಭಿವೃದ್ಧಿಯ ಮುಂಚೂಣಿಯಲ್ಲಿದೆ. ವರದಿ ವರ್ಷದಲ್ಲಿ ಬ್ಯಾಂಕ್ ಸಾಧಿಸಿದ ಯಶಸ್ಸು ಅಭೂತಪೂರ್ವವಾದದ್ದು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ದಿನೇ ದಿನೇ ಸ್ಪರ್ಧೆಯನ್ನು ಎದುರಿಸಿಯೂ ಬ್ಯಾಂಕ್ ಅಭಿವೃದ್ಧಿಯ ಪಥವನ್ನು ಕಂಡು ದೇಶದ ಅಗ್ರಮಾನ್ಯ ಸಹಕಾರಿ ಬ್ಯಾಂಕ್ ಎನಿಸಿಕೊಂಡಿದೆ. 2022-23ನೇ ಸಾಲಿನಲ್ಲಿ ಸದಸ್ಯರಿಗೆ ಶೇ.9 ಡಿವಿಡೆಂಡ್ ಘೋಷಿಸಲಾಗಿದೆ ಎಂದರು.

ಇಮ್ಮಿಡಿಯೇಟ್ ಪೇಮೆಂಟ್ ಸರ್ವಿಸ್, ಇಂಟರ್ ಬ್ಯಾಂಕಿಂಗ್ ಸರ್ವಿಸ್ ಶೀಘ್ರ:
ಹೊಸ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಳವಡಿಸಿ ಗ್ರಾಹಕರಿಗೆ ಉತ್ಕೃಷ್ಟ ಸೇವೆಯನ್ನು ಬ್ಯಾಂಕ್ ನೀಡುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕೋರ್ ಬ್ಯಾಂಕಿಂಗ್‌ ನಂತಹ ಉನ್ನತ ಸೇವೆಯು ಬ್ಯಾಂಕಿನ 111 ಶಾಖೆಗಳಲ್ಲಿಯೂ ದೊರೆಯುತ್ತಿದೆ. ಮೊಬೈಲ್ ಆಪ್, ಟ್ಯಾಬ್ ಬ್ಯಾಂಕಿಂಗ್‌ ನಂತಹ ವಿನೂತನ ವ್ಯವಸ್ಥೆಯನ್ನು ಬ್ಯಾಂಕ್ ಗ್ರಾಹಕರಿಗೆ ಪರಿಚಯಿಸಿದೆ. ಮುಂದಿನ ದಿನಗಳಲ್ಲಿ ಇಮ್ಮಿಡಿಯೇಟ್ ಪೇಮೆಂಟ್ ಸರ್ವಿಸ್' ಹಾಗೂಇಂಟರ್ ಬ್ಯಾಂಕಿಂಗ್’ ಸೇವೆಯನ್ನು ರೂಪಿಸಲು ಬ್ಯಾಂಕ್ ಮುಂದಾಗಿದೆ .ವರದಿ ವರ್ಷದಲ್ಲಿ ಹೊಸ ಶಾಖೆಗಳನ್ನು ತೆರೆಯುವ ಯೋಜನೆಯನ್ನು ಬ್ಯಾಂಕ್ ಹಮ್ಮಿಕೊಂಡಿದೆ ಎಂದು ಡಾ.ಎಂ.ಎನ್.ಆರ್ ಹೇಳಿದರು.

ಗುರಿ ಮೀರಿದ ಸಾಧನೆ:
ಸುದೀರ್ಘ ಕಾಲ ಸಾರ್ವಜನಿಕ ಸೇವೆಯಲ್ಲಿರುವ ಎಸ್‌ಸಿಡಿಸಿಸಿ ಬ್ಯಾಂಕ್ ವರದಿ ವರ್ಷದಲ್ಲಿ ಒಟ್ಟು ರೂ.13514.51 ಕೋಟಿ ವ್ಯವಹಾರ ಸಾಧಿಸುವ ಮೂಲಕ ಗುರಿ ಮೀರಿದ ಸಾಧನೆಗೈದಿದೆ. ವಾಜ್ಯ ಬ್ಯಾಂಕುಗಳಲ್ಲಿ ಠೇವಣಾತಿ ಸಂಗ್ರಹಣೆಯಲ್ಲಿ ಪೈಪೋಟಿ ಇದ್ದರೂ ಬ್ಯಾಂಕ್ 111 ಶಾಖೆಗಳ ಮೂಲಕ ಒಟ್ಟು ರೂ.6371.89 ಕೋಟಿ ಠೇವ ಸಂಗ್ರಹಿಸಿ, ಅತೀ ಹೆಚ್ಚು ಠೇವಣಿ ಸಂಗ್ರಹಿಸಿದ ರಾಜ್ಯದ ಪ್ರಥಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎನ್ನುವ ಕೀರ್ತಿಗೆ ಪಾತ್ರವಾಗಿದೆ ಎಂದರು. ಸ್ಪರ್ಧಾತ್ಮಕ ಆರ್ಥಿಕ ಹಿನ್ನಲೆಯಲ್ಲಿಯೂ ಬ್ಯಾಂಕ್ ಆರ್ಥಿಕ ವರ್ಷದಲ್ಲಿ ಸೇವಾ ಬದ್ಧತೆಯನ್ನು ಮೆರೆದು ರೂ.5793.40 ಕೋಟಿ ಮುಂಗಡ ಸಾಲ ನೀಡಿದೆ. 1054 ಸಹಕಾರಿ ಸಂಘಗಳು ಬ್ಯಾಂಕಿಗೆ ಸದಸ್ಯರಾಗಿದ್ದು ಪಾಲು ಬಂಡವಾಳ ರೂ.343.44 ಕೋಟಿ, ಬ್ಯಾಂಕಿನ ದುಡಿಯುವ ಬಂಡವಾಳ ರೂ.9930.69 ಕೋಟಿ, ಬ್ಯಾಂಕ್ ರೂ.240.82 ಕೋಟಿ ವಿವಿಧ ನಿಧಿಗಳನ್ನು ಹೊಂದಿರುತ್ತದೆ ಎಂದು ಅಧ್ಯಕ್ಷರು ತಿಳಿಸಿದರು.

ಕೃಷಿ ಸಾಲ ಮರುಪಾವತಿಯಲ್ಲಿ ರಾಷ್ಟ್ರೀಯ ದಾಖಲೆ:
ಬ್ಯಾಂಕ್ ವರದಿ ವರ್ಷದಲ್ಲಿ ನೀಡಿದ ಎಲ್ಲಾ ಕೃಷಿ ಸಾಲಗಳು ಶೇಕಡಾ ನೂರರ ಮರುಪಾವತಿಯನ್ನು ಕಂಡಿವೆ. ಇಂತಹ ಸಾಧನೆಯನ್ನು ಬ್ಯಾಂಕ್ ಕಳೆದ 28 ವರ್ಷಗಳಿಂದ ನಿರಂತರವಾಗಿ ಮಾಡಿರುವುದು ರಾಷ್ಟ್ರೀಯ ದಾಖಲೆಯಾಗಿದೆ. ವರದಿ ವರ್ಷದಲ್ಲಿ ಕೃಷಿಕರು ಅತ್ಯಂತ ಸಂಕಷ್ಟ ಪರಿಸ್ಥಿತಿಯಲ್ಲೂ ಕೃಷಿ ಸಾಲವನ್ನು ಮರುಪಾವತಿಸಿ ಅಭಿನಂದನೆಗೆ ಪಾತ್ರರಾಗಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ 12 ಕೃಷಿ ಪತ್ತಿನ ಸಹಕಾರಿ ಸಂಘಗಳು ಕೃಷಿ ಸಾಲ ವಸೂಲಾತಿಯಲ್ಲಿ ಶೇಕಡಾ ನೂರರ ಸಾಧನೆ ಮಾಡಿದೆ ಎಂದು ಡಾ|ರಾಜೇಂದ್ರ ಕುಮಾರ್ ತಿಳಿಸಿದರು.

ಸ್ವಸಹಾಯ ಸಂಘಟನೆಯಲ್ಲೂ ಮುಂಚೂಯಲ್ಲಿ:
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಸಹಾಯ ಗುಂಪುಗಳ ಸಂಘಟನೆಯಲ್ಲೂ ಬ್ಯಾಂಕ್ ಮುಂಚೂಯಲ್ಲಿದೆ. ಈ ಬ್ಯಾಂಕ್ ಒಟ್ಟು 34,178 ಸ್ವಸಹಾಯ ಗುಂಪುಗಳನ್ನು ವಿವಿಧ ಸಹಕಾರ ಸಂಘಗಳ ಜೋಡಣೆಯ ಮೂಲಕ ರಚಿಸಿಕೊಂಡಿದೆ. ಈ ಗುಂಪುಗಳ ಒಟ್ಟು ಉಳಿತಾಯ ರೂ.141.38 ಕೋಟಿಯಾಗಿದೆ. ಒಟ್ಟು 34,069 ಸ್ವಸಹಾಯ ಗುಂಪುಗಳಿಗೆ ಸಾಲ ಸಂಯೋಜಿಸಲಾಗಿದ್ದು, ಇದರಲ್ಲಿ ರೂ.458.86 ಕೋಟಿ ಸಾಲ ಹೊರಬಾಕಿ ಇರುತ್ತದೆ ಎಂದು ಅವರು ಮಾಹಿತಿ ನೀಡಿದರು.

ಅಪೆಕ್ಸ್/ನಬಾರ್ಡ್ ಪ್ರಶಸ್ತಿ:
ಜನಪರ ಯೋಜನೆಗಳೊಂದಿಗೆ ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ದೇಶದ ಗಮನ ಸೆಳೆದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸರ್ವಾಂಗೀಣ ನಿರ್ವಹಣೆಗೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ 20 ಬಾರಿ ದೊರೆತ್ತಿರುವುದು ಬ್ಯಾಂಕ್‌ನ ಕಾರ್ಯಸಾಧನೆಗೆ ಸಂದ ಪುರಸ್ಕಾರ. ಸ್ವಸಹಾಯ ಗುಂಪುಗಳ ನಿರ್ವಹಣೆಗೆ ಬ್ಯಾಂಕಿಗೆ 18 ಬಾರಿ ನಬಾರ್ಡ್ ಪ್ರಶಸ್ತಿ ದೊರೆತಿದೆ. ವರದಿ ವರ್ಷದಲ್ಲಿ ಅಟಲ್ ಪಿಂಚಣಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಬ್ಯಾಂಕಿಗೆ ಎಪಿವೈ ರಾಷ್ಟ್ರೀಯ ಪ್ರಶಸ್ತಿ' ಎರಡು ಬಾರಿ ಬಂದಿದೆ ಎಂದು ಡಾ|ರಾಜೇಂದ್ರ ಕುಮಾರ್ ತಿಳಿಸಿದರು.

ಶಾಸಕ ಯಶ್‌ಪಾಲ್ ಸುವರ್ಣರಿಗೆ ಸಹಕಾರಿಗಳ ಸನ್ಮಾನ:
ದಕ್ಷಿಣ ಕನ್ನಡ ಮೀನು ಮಾರಾಟ ಸಹಕಾರ ಮಹಾಮಂಡಳ ಹಾಗೂ ಮಹಾಲಕ್ಷ್ಮೀ ಕೋ-ಅಪರೇಟಿವ್ ಬ್ಯಾಂಕಿನ ಅಧ್ಯಕ್ಷರಾಗಿರುವ ಯಶ್‌ಪಾಲ್ ಸುವರ್ಣರವರು ಉಡುಪಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಚುನಾಯಿತರಾಗಿರುವ ಹಿನ್ನೆಲೆಯಲ್ಲಿ ಅವರನ್ನು ಬ್ಯಾಂಕಿನ ಮಹಾಸಭೆಯಲ್ಲಿ ಸಮಸ್ತ ಸಹಕಾರಿಗಳ ಪರವಾಗಿ ಸನ್ಮಾನಿಸಲಾಯಿತು.

ಪ್ರಶಸ್ತಿ ಪುರಸ್ಕಾರ:
ಈ ಸಂದರ್ಭದಲ್ಲಿ 2022-23ನೇ ಸಾಲಿನಲ್ಲಿ ಸಾಲ ವಸೂಲಾತಿಯಲ್ಲಿ ಶೇ.100ರ ಸಾಧನೆಗೈದ 12 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಗೌರವಾರ್ಪಣೆ ಮಾಡಲಾಯಿತು.ಲೆಕ್ಕ ಪರಿಶೋಧನಾಎ’ ವರ್ಗ ಮತ್ತು `ಬಿ’ ವರ್ಗದ ಅತ್ಯುತ್ತಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಆಯ್ದ ತಲಾ 3 ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಽಕಾರಿಗಳಿಗೆ 2022-23ನೇ ಸಾಲಿನ ಜಿಲ್ಲಾ ಬ್ಯಾಂಕಿನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಿವೃತ್ತಿ ಹೊಂದಿದ ಸಿಬ್ಬಂದಿಗಳಿಗೆ ಗೌರವಾರ್ಪಣೆ:
ವರದಿ ವರ್ಷದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ 9 ಸಿಬ್ಬಂದಿಗಳು ಹಾಗೂ ಪ್ರಾಥಮಿಕ ಸಹಕಾರಿ ಸಂಘಗಳ 13 ಮಂದಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನಿವೃತ್ತಿಯನ್ನು ಹೊಂದಿದ್ದು ಇವರಿಗೆ ಬ್ಯಾಂಕಿನಿಂದ ತಲಾ 50,000ವನ್ನು ನೀಡಿ ಗೌರವಿಸಲಾಯಿತು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಶಶಿ ಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ.ಜಯರಾಮ ರೈ ಬಳಜ್ಜ, ಬಿ.ನಿರಂಜನ್, ಭಾಸ್ಕರ್ ಎಸ್.ಕೋಟ್ಯಾನ್, ದೇವಿಪ್ರಸಾದ್ ಶೆಟ್ಟಿ ಬೆಳಪು, ಎಂ.ವಾದಿರಾಜ ಶೆಟ್ಟಿ, ರಾಜು ಪೂಜಾರಿ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ.ಹರಿಶ್ಚಂದ್ರ, ಎಂ.ಮಹೇಶ್ ಹೆಗ್ಡೆ, ಕೆ. ಜೈರಾಜ್ ಬಿ.ರೈ, ಬಿ.ಅಶೋಕ್ ಕುಮಾರ್ ಶೆಟ್ಟಿ, ಸದಾಶಿವ ಉಳ್ಳಾಲ್, ಬಿ.ರಾಜೇಶ್ ರಾವ್, ಉಭಯ ಜಿಲ್ಲೆಗಳ ಸಹಕಾರಿ ಸಂಘಗಳ ಉಪನಿಬಂಧಕರಾದ ರಮೇಶ್ ಹೆಚ್.ಎನ್., ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಕೆ.ಪಿ., ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಽಕಾರಿ ಎಂ.ಗೋಪಾಲಕೃಷ್ಣ ಭಟ್, ಮಹಾ ಪ್ರಬಂಧಕರಾದ ಅಶೋಕ್ ಕುಮಾರ್ ಕೆ. ಹಾಗೂ ಬ್ಯಾಂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.ಬ್ಯಾಂಕಿನ ನಿರ್ದೇಶಕ ಟಿ.ಜಿ. ರಾಜಾರಾಮ್ ಭಟ್ ಸ್ವಾಗತಿಸಿದರು. ಬ್ಯಾಂಕಿನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಽಕಾರಿ ಎಂ.ಗೋಪಾಲಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.ಮಹಾ ಪ್ರಬಂಧಕರಾದ ಅಶೋಕ್ ಕುಮಾರ್ ಕೆ. ವಂದಿಸಿದರು.

134 ಸಹಕಾರಿ ಸಂಘಗಳಿಗೆ ಪ್ರಶಸ್ತಿ:

ಪುತ್ತೂರು, ಕಡಬ ಸಹಿತ ಅವಿಭಜಿತ ದ.ಕ.ಜಿಲ್ಲೆಯ 134 ಸಹಕಾರಿ ಸಂಘಗಳಿಗೆ 2022-23ನೇ ಸಾಲಿನ ಜಿಲ್ಲಾ ಬ್ಯಾಂಕಿನ ಪ್ರೋತ್ಸಾಹಕ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸೇರಿದಂತೆ 10 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ 2021-22ನೇ ಸಾಲಿನ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. 2022-23ನೇ ಸಾಲಿನ ಪತ್ತಿನ ಸಹಕಾರಿ ಸಂಘ ಪ್ರಶಸ್ತಿಯನ್ನು 11 ಪತ್ತಿನ ಸಹಕಾರಿ ಸಂಘಗಳಿಗೆ ಮತ್ತು ಪಟ್ಟಣ ಸಹಕಾರಿ ಬ್ಯಾಂಕುಗಳಿಗೆ ನೀಡುವ ಪ್ರಶಸ್ತಿಯನ್ನು 4 ಪಟ್ಟಣ ಸಹಕಾರಿ ಬ್ಯಾಂಕುಗಳಿಗೆ, ಹಾಲು ಉತ್ಪಾದಕರ ಸಹಕಾರಿ ಸಂಘಗಳ ಪ್ರಶಸ್ತಿಗೆ ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘ ಸೇರಿದಂತೆ ದ.ಕ.ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಿಂದ ಆಯ್ಕೆಯಾಗಿದ್ದ ತಲಾ 6 ಸಂಘಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಭಯ ಜಿಲ್ಲೆಯ 8 ಟಿಎಪಿಸಿಎಂಎಸ್‌ಗಳಿಗೆ ಪ್ರಶಸ್ತಿ, ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘಗಳ ಪೈಕಿ ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಿಂದ ತಲಾ 3 ಸಂಘಗಳಿಗೆ ಹಾಗೂ ವಿವಿಧೋದ್ದೇಶ ಸಹಕಾರ ಸಂಘಗಳಿಗೆ ನೀಡುವ ಪ್ರಶಸ್ತಿಯನ್ನು 30 ಸಹಕಾರಿ ಸಂಘಗಳಿಗೆ ನೀಡಲಾಯಿತು.

LEAVE A REPLY

Please enter your comment!
Please enter your name here