ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು 108ನೇ ಜನ್ಮ ದಿನಾಚರಣೆ

0

ಪುತ್ತೂರು:ತಾಲೂಕು ಆಡಳಿತ, ತಾಲೂಕು ಪಂಚಾಯತ್, ನಗರ ಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮೌನಕ್ರಾಂತಿಯ ಹರಿಕಾರ ಡಿ. ದೇವರಾಜ ಅರಸುರವರ 108ನೇ ಜನ್ಮ ದಿನಾಚರಣೆಯು ಆ.20ರಂದು ತಾ.ಪಂ ಸಭಾಂಗಣದಲ್ಲಿ ನೆರವೇರಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ರಾಜ್ಯದಲ್ಲಿ ಈ ಹಿಂದೆ ಹಲವು ಮಂದಿ ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ. ಆದರೂ ದೇವರಾಜ ಅರಸುರವರು ಉತ್ತಮ ಕೆಲಸಗಳನ್ನು ಗುರುತಿಸಿ ಅವರ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಮೈಸೂರು ಎಂದಿದ್ದ ರಾಜ್ಯ ಹೆಸರನ್ನು ಕರ್ನಾಟಕ ಬದಲಾವಣೆ ಮಾಡಿದವರು. ಭೂ ಸುಧಾರಣೆ ಕಾನೂನನ್ನು ದೇವರಾಜ ಅರಸುರವರು ಕರ್ನಾಟಕದಲ್ಲಿ ಜಾರಿಗೆ ತಂದವರು. ಎಲ್ಲರಿಗೂ ಸಮಾನ ಹಕ್ಕು ದೊರೆಯುವಂತೆ ಮಾಡಿದವರು ಎಂದರು.


ಸಂಸ್ಮರಣಾ ಜ್ಯೋತಿ ಬೆಳಗಿಸಿದ ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ಸಮಾಜದಲ್ಲಿ ಸಮಾನತೆಯನ್ನು ಸಾರಿರುವ ದೇವರಾಜ ಅರಸುರವರು ಶೋಷತರಿಗೆ ಶಕ್ತಿ ತುಂಬಿ ಮೇಲೆತ್ತಿದವರು. ಭೂ ಸುದಾರಣೆ ಕಾಯಿದೆಯ ಅನುಷ್ಠಾನ, ಹಿಂದುಳಿದ ವರ್ಗಳಿಗೆ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಿ ಸಾಧನೆ ಮಾಡಿದವರು. ಸ್ವಾತಂತ್ರ್ಯ ನಂತರದಲ್ಲಿ ಲ್ಯಾಂಡ್ ಲಾರ್ಡ್ ಗಳಿಂದ ಶೋಷಿತರಿಗೆ ಮುಕ್ತಿ ನೀಡಿದ್ದಾರೆ ಎಂದರು.


ಪ್ರಧಾನ ಉಪನ್ಯಾಸ ನೀಡಿದ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಲ ಮಾತನಾಡಿ, ದೇವರಾಜ ಅರಸು ಧಮನಿತರ ಧ್ವನಿಯಾಗಿ ಮೂಡಿಬಂದವರು. ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅವರ ಕಾಲವನ್ನು ರಾಜ್ಯದಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿಡುವಂತಾಗಿದೆ. ಉತ್ತಮ ಭೂ ಮಾಲಿಕ, ಆರ್ಥಿಕ ಸದೃಢ ಕುಟುಂಬದಿಂದ ಬೆಳೆದು ಬಂದಿರುವ ದೇವರಾಜ ಅರಸು ಸ್ವತಃ ತಾನೇ ಶೋಷಣೆಗೇ ಒಳಗಾಗದಿದ್ದರೂ ಶೋಷಿತರ ಜೀವನವನ್ನು ಅರಿತು ಅವರ ಕಲ್ಪಣೆಗೆ ಜೀವ ತುಂಬಿದವರು ಎಂದರು.ಕಾರ್ಯಕ್ರಮದಲ್ಲಿ ಸದ್ಭಾವನಾ ಪ್ರತಿಜ್ಞೆ ಕೈಗೊಳ್ಳಲಾಯಿತು. ತಹಶಿಲ್ದಾರ್ ಜೆ.ಶಿವಶಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸನ್ಮಾನ:
ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತೀ ಹೆಚ್ಚು ಅಂಕಗಳಿಂದ ಮೇಘನಾ, ನಂದೀಶ್ ಎ., ದ್ವಿತಿಯ ಪಿಯುಸಿಯಲ್ಲಿ ನಿಹಾಲ್ ಹಾಗೂ ಸಚಿತ್ರರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿ ರಾಜ್ ಗೋಪಾಲ್ ಸ್ವಾಗತಿಸಿದರು. ಸಿಬಂದಿಗಳಾದ ಯಶೋಧ, ಶೋಭಾ ಬಿ. ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿ ನಿಲಯ ಮೇಲ್ವಿಚಾರಕಿ ಪವಿತ್ರ ನಂದ್ರಾಳ ವಂದಿಸಿದರು.

LEAVE A REPLY

Please enter your comment!
Please enter your name here