ಹಸಿರು ಕ್ರಾಂತಿಗೆ ಕೈ ಜೋಡಿಸೋಣ: ಡಾ.ಚೂಂತಾರು
ವಿಟ್ಲ: ವಿಟ್ಲ ಘಟಕದ ವತಿಯಿಂದ ವನಮಹೋತ್ಸವ ಕಾರ್ಯಕ್ರಮವು ವಿಟ್ಲ ಸಮೀಪದ ಸರ್ಕಾರಿ ಜೂನಿಯರ್ ಕಾಲೇಜು ವಿಟ್ಲ ಇದರ ಆವರಣದಲ್ಲಿ ಆ.20ರಂದು ನಡೆಯಿತು.
ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟ ಡಾ. ಮುರಲೀ ಮೋಹನ್ ಚೂಂತಾರು ಚಾಲನೆ ನೀಡಿ ಮಾತನಾಡಿ, ನಿರಂತರವಾಗಿ ಪರಿಸರದ ಮೇಲಿನ ದೌರ್ಜನ್ಯದಿಂದಾಗಿ ಕಾಡು ಬರಿದಾಗಿ, ಕಾಂಕ್ರೀಟ್ ಕಾಡು ದಿನೇ ದಿನೇ ಬೆಳೆಯುತ್ತಿದೆ. ಪರಿಸರ ಮಾಲಿನ್ಯ ಹೆಚ್ಚುತ್ತಲೇ ಇದೆ. ಇದೇ ರೀತಿ ಮುಂದುವರಿದರೆ ಮುಂದೆ ಹನಿಹನಿ ನೀರಿಗೂ ತತ್ವಾರ ಬರಬಹುದು. ಶುದ್ಧವಾದ ಆಮ್ಲಜನಕಯುಕ್ತ ಗಾಳಿಗಾಗಿ ಆಕ್ಸಿಜನ್ ಸಿಲಿಂಡರ್ ಬೆನ್ನ ಮೇಲೆ ನೇತಾಡಿಸಿಕೊಂಡು ಓಡಾಡುವ ಕಾಲ ಬರಬಹುದು. ಈ ನಿಟ್ಟಿನಲ್ಲಿ ನಾವೆಲ್ಲರೂ ಈಗಲೇ ಎಚ್ಚೆತ್ತುಕೊಂಡು ಗಿಡ ನೆಟ್ಟು ಪೋಷಿಸಿ, ಕಾಡು ಉಳಿಸಬೇಕು. ಪರಿಸರದ ಅಸಮತೋಲನವಾಗದಂತೆ ನೋಡಿಕೊಳ್ಳಬೇಕು. ಹಸಿರು ಕ್ರಾಂತಿಗೆ (ಗ್ರೀನ್ ರಿವಲ್ಯೂಷನ್) ಎಲ್ಲಾ ಗೃಹರಕ್ಷಕರು ಕಟಿಬದ್ಧರಾಗಬೇಕು. ಪ್ರತಿ ಗೃಹರಕ್ಷಕರು ವರ್ಷದಲ್ಲಿ ಕನಿಷ್ಟ ಒಂದು ಗಿಡವನ್ನಾದರೂ ನೆಟ್ಟು ಬೆಳೆಸಿ ಪೋಷಿಸಬೇಕು. ಹಾಗಾದಲ್ಲಿ ಪರಿಸರದ ಸಮತೋಲನ ಉಂಟಾಗಿ, ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಬಹುದು ಎಂದರು.
ಈ ಸಂದರ್ಭದಲ್ಲಿ ವಿಟ್ಲ ಘಟಕಾಧಿಕಾರಿ ಸಂಜೀವ, ಶಾಲೆ ದೈಹಿಕ ಶಿಕ್ಷಕ ಶ್ರೀನಿವಾಸ ಮಂಗಳೂರು ಘಟಕದ ಸುನಿಲ್, ದಿವಾಕರ್ ಸಂದೇಶ ಹಾಗೂ ಇತರ ಗೃಹರಕ್ಷಕ, ಗೃಹರಕ್ಷಕಿಯರು ಉಪಸ್ಥಿತರಿದ್ದರು.