ಇಂದು ಕ್ಷೇತ್ರದಲ್ಲಿ ನಾಗರಪಂಚಮಿ ,ಹುತ್ತಕ್ಕೆ ಪೂಜೆ ಸಲ್ಲುವ ಪುತ್ತೂರು ತಾಲೂಕಿನ ಏಕೈಕ ಕ್ಷೇತ್ರ
ಪುತ್ತೂರು : ಆದಿ ಸುಬ್ರಹ್ಮಣ್ಯದಲ್ಲಿ ಹುತ್ತಕ್ಕೆ ಪೂಜೆ ಸಲ್ಲುವಂತೆ ಪುತ್ತೂರು ತಾಲೂಕಿನಲ್ಲೂ ಹುತ್ತಕ್ಕೆ ಪೂಜೆ ಸಲ್ಲುವ ಏಕೈಕ ಕ್ಷೇತ್ರವಾಗಿರುವ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.21ರಂದು ನಾಗರ ಪಂಚಮಿಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.ದೇವಸ್ಥಾನದ ನಾಗನಕಟ್ಟೆಯಲ್ಲಿ ಬೆಳಿಗ್ಗೆ ಗಂಟೆ 11 ರಿಂದ ನಾಗದೇವರಿಗೆ ಹಾಲಿನ ಅಭಿಷೇಕ, ಸಿಯಾಳ ಅಭಿಷೇಕ ನಾಗತಂಬಿಲ ನಡೆಯಲಿದೆ.
ಬಳಿಕ ವಲ್ಮಿಕ ರೂಪಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಪೂಜೆ ನಡೆದ ಬಳಿಕ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾದಿಗಳು ಈ ದೇವತಾ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸಂತೋಷ್ ಕುಮಾರ್ ರೈ ನಳೀಲು ತಿಳಿಸಿದ್ದಾರೆ.
ಶ್ರೀಕ್ಷೇತ್ರದಲ್ಲಿ 2004ರ ಬ್ರಹ್ಮಕಲಶೋತ್ಸವದ ಬಳಿಕ ದೇವಸ್ಥಾನವು ವೇಗದಲ್ಲಿ ಅಭಿವೃದ್ಧಿಯನ್ನು ಕಂಡಿದೆ.ದೇವಸ್ಥಾನದಲ್ಲಿ ಅತಿಥಿ ಗೃಹ,ಅರ್ಚಕರ ಮನೆ,ದೇವಸ್ಥಾನದ ಸುತ್ತ ಇಂಟರ್‌ಲಾಕ್ ಅಳವಡಿಕೆ,ದೇವಸ್ಥಾನದ ಸುತ್ತ ಶೀಟ್ ಅಳವಡಿಕೆ ಮೊದಲಾದ ಕಾರ್ಯಗಳು ನಡೆದಿವೆ. ಇನ್ನೂ ಅನೇಕ ಅಭಿವೃದ್ದಿ ಕಾರ್ಯಗಳು ನಡೆಯುತ್ತಿದೆ.
ದೇವಸ್ಥಾನಕ್ಕೆ ತನ್ನದೇ ವಿಶೇಷ ಕಾರಣಿಕತೆ ಇದೆ.ಸಂತಾನ ಭಾಗ್ಯವಿಲ್ಲದವರಿಗೆ ಸಂತಾನ ಭಾಗ್ಯ,ವಿವಾಹವಾಗದವರಿಗೆ ಕಂಕಣ ಭಾಗ್ಯ ,ಶನಿ ದೋಷ ನಿವಾರಣೆಗೆ ,ಸರ್ಪದೋಷ ನಿವಾರಣೆಗಾಗಿ ಅಧಿಕ ಸಂಖ್ಯೆಯಲ್ಲಿ ಕ್ಷೇತ್ರದಲ್ಲಿ ಪ್ರಾರ್ಥಿಸಿ ಪೂಜೆ ಮಾಡಿಸಿಕೊಂಡು ದೇವರ ಅನುಗ್ರಹ ಪಡೆದವರು ಹಲವರು ಇದ್ದಾರೆ.
2024ರ ಫೆ.17ರಿಂದ ಫೆ.24 ರವರೆಗೆ ಬ್ರಹ್ಮಕಲಶ
ಶ್ರೀಕ್ಷೇತ್ರವು 20 ವರ್ಷಗಳ ಬಳಿಕ ಮತ್ತೆ ಬ್ರಹ್ಮಕಲಶೋತ್ಸವಕ್ಕೆ ಅಣಿಯಾಗುತ್ತಿದೆ.ಜೀರ್ಣೋದ್ದಾರ ಅಂಗವಾಗಿ ಈಗಾಗಲೇ ಜೂ.14ರಂದು ಅನುಜ್ಞಾ ಕಲಶ ನಡೆದಿದೆ.ಅಭಿವೃದ್ದಿ ಕಾರ್ಯಗಳು ವೇಗವಾಗಿ ಸಾಗುತ್ತಿದ್ದು, ಬ್ರಹ್ಮಕಲಶೋತ್ಸವವು 2024ರ ಫೆ.17ರಿಂದ ಫೆ.24 ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ತಿಳಿಸಿದ್ದಾರೆ.