ಮಹಾಲಿಂಗೇಶ್ವರ ದೇವಸ್ಥಾನ ಕಾಮಧೇನು ಗೋ ಶಾಲೆ – ಬೆಂಗಳೂರಿನಲ್ಲಿ ನೆಲೆಸಿರುವ ಪುತ್ತೂರು ಮೂಲದ ಕುಟುಂಬದಿಂದ ಗೋ ದಾನ, ಪೋಷಣೆಗೆ ಸಹಾಯಧನ

0

ಪುತ್ತೂರು: ಹತ್ತೂರು ಬಿಟ್ಟರೂ ಪುತ್ತೂರು ಬಿಡ ಎಂಬಂತೆ ಬೆಂಗಳೂರಿನಲ್ಲಿ ನೆಲೆಸಿದ್ದರೂ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಭಕ್ತರಾಗಿರುವ ಕುಟುಂಬವೊಂದು ದೇವಳದ ಕಾಮಧೇನು ಗೋ ಶಾಲೆಗೆ ಹಸು ಮತ್ತು ಕರುವನ್ನು ದಾನ ಮಾಡಿದ್ದಲ್ಲದೆ ವರ್ಷವಿಡೀ ಗೋವಿನ ಪೋಷಣೆಗೆ ಸಹಾಯಧನ ನೀಡುವ ಮೂಲಕ ಕಾಮಧೇನು ಗೋ ಶಾಲೆಗೆ ವಿಶೇಷ ಪ್ರೋತ್ಸಾಹ ನೀಡಿದ್ದಾರೆ.
ಪುತ್ತೂರಿನವರಾಗಿದ್ದು ಕಳೆದ 50 ವರ್ಷಗಳಿಂದ ಬೆಂಗಳೂರಿನಲ್ಲಿ ಕೆನರಾ ಬ್ಯಾಂಕ್ ಉದ್ಯೋಗಿಯಾಗಿ ನಿವೃತ್ತಿ ಹೊಂದಿರುವ ಹೇಮಲತಾ ಆರ್ ರಾವ್ ಅವರು ಇಂಗ್ಲೆಂಡಿನಲ್ಲಿ ಇಂಜಿನಿಯರ್ ಆಗಿ ಅಲ್ಲಿನ ಪ್ರಜೆಯಾಗಿರುವ ಪುತ್ರಿ ಅಪರ್ಣ ಬ್ರಹ್ಮಾವರ್ ರಾವ್ ಹಾಗೂ ಅಳಿಯ ಸಾಗರ್ ಸಾಂತಪ್ಪ, ಮೊಮ್ಮಗಳು ಸಾನ್ವಿ ಸಾಗರ್ ಅವರ ಸೇವೆಯಾಗಿ ಕಾಮಧೇನು ಗೋ ಶಾಲೆಗೆ ಹಸು ಕರುವನ್ನು ಗೋದಾನ ಮಾಡಬೇಕೆಂದು ತೀರ್ಮಾನಿಸಿದಂತೆ ಹೆಣ್ಣು ಕರು ಹಾಗೂ ಹಸುವನ್ನು ಅವರು ದಾನ ಮಾಡಿದ್ದಲ್ಲದೆ ವರ್ಷವಿಡಿ ಅದರ ಪೋಷಣೆಗೆ ಸಹಾಯ ಧನವನ್ನು ನೀಡಿದವರಾಗಿದ್ದಾರೆ. ಅ.22ರಂದು ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಮಧೇನು ಗೋ ಶಾಲೆಯಲ್ಲಿ ಹಸು ಕರುವನ್ನು ಮಹಾಲಿಂಗೇಶ್ವರ ದೇವರಿಗೆ ಸಮರ್ಪಣೆ ಮಾಡಿ ಗೋ ಪೂಜೆ ಮಾಡಿದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ವೈದಿಕ ಕಾರ್ಯಕ್ರಮ ನೆರವೇರಿಸಿದರು.


33 ಕೋಟಿ ದೇವತೆಗಳನ್ನು ಪೂಜಿಸಿದ ಫಲ:
ಗೋ ಪೂಜೆಯ ಬಳಿಕ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಅವರು ಮಾತನಾಡಿ ಗೋ ದಾನ, ಗೋವಿನ ಪೋಷಣೆ ಎಲ್ಲವು 33 ಕೋಟಿ ದೇವತೆಗಳನ್ನು ಪೂಜಿಸಿದ ಫಲವನ್ನು ಸೂಚಿಸುತ್ತದೆ. ಇವತ್ತು ಗೋ ದಾನ, ಸೇವೆ ನೀಡಿದ ಕುಟುಂಬಕ್ಕೆ ದೇವರ ಸಕಲ ಬೇಡಿಕೆಗಳನ್ನು ಈಡೇರಿಸುವಂತಾಗಲಿ ಎಂದರು. ಗೋಪೂಜೆಯ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ ಮುಳಿಯ, ರಾಮದಾಸ್ ಗೌಡ, ವೀಣಾ ಬಿಕೆ ಹಾಗೂ ಗೋಶಾಲೆಯ ಮೇಲ್ವಿಚಾರಣೆ ನಡೆಸುತ್ತಿರುವ ಸಮಿತಿ ಸದಸ್ಯ ಬಿ ಐತ್ತಪ್ಪ ನಾಯ್ಕ್, ರವರು ಉಪಸ್ಥಿತರಿದ್ದರು. ದೇವಳದ ಪದ್ಮನಾಭ ಯಶವಂತ್ ಹಾಗೂ ಗೋಶಾಲೆಯ ಪರಿಚಾಲಕರು ನಿತ್ಯ ಕರಸೇವಕರು ಸಹಕರಿಸಿದರು. ಗೋ ಪೂಜೆಯ ಬಳಿಕ ಸತ್ಯ ಧರ್ಮ ನಡೆಯಲಿ ಪ್ರಾರ್ಥನೆ ಸಲ್ಲಿಸಿ ಶ್ರೀದೇವರ ಗಂಧ ಪ್ರಸಾದ ನೀಡಿ ಗೋ ದಾನಿಗಳನ್ನು ಗೌರವಿಸಲಾಯಿತು.

ನನ್ನ ಸಂಕಲ್ಪ ಈಡೇರಿತು:
ಗೋ ದಾನ ಮಾಡುವ ಕುರಿತು ಬಹಳ ವರ್ಷಗಳಿಂದ ನನ್ನ ಸಂಕಲ್ಪವಿತ್ತು. ಅದು ಕೂಡಾ ನನ್ನದೇ ಊರಿನಲ್ಲಿ ಮಾಡಬೇಕೆಂದಿತ್ತು. ಅದು ಈಡೇರಿದೆ. ಅದೇ ನನಗೆ ಖುಷಿ. ಪ್ರಸ್ತುತ ನಾವು ಬೆಂಗಳೂರಿನಲ್ಲಿ ನೆಲೆಸಿದ್ದರೂ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಾಗೆ ಬರುತ್ತಿದ್ದೇವೆ.
ಹೇಮಲತಾ ಆರ್ ರಾವ್
ಬೆಂಗಳೂರು,
ನಿವೃತ್ತ ಬ್ಯಾಂಕ್ ಉದ್ಯೋಗಿ


ಭಕ್ತರ ಸಹಕಾರದಿಂದ ಗೋವಿನ ಪೋಷಣೆ
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾಮಧೇನು ಗೋ ಶಾಲೆಯಲ್ಲಿ ಭಕ್ತರ ಸಹಕಾರದಿಂದ ಗೋವಿನ ಪೋಷಣೆ ನಡೆಯುತ್ತಿದೆ. ಗೋ ಗ್ರಾಸಕ್ಕೆ ಭಕ್ತರು ಸಹಕಾರ ನೀಡುತ್ತಿದ್ದಾರೆ ಅದೇ ರೀತಿ ಗೋ ದಾನಕ್ಕೂ ಅವಕಾಶವಿದೆ. ಈಗಾಗಲೇ ಎರಡುಮೂರು ಗೋವುಗಳು ದಾನ ರೂಪದಲ್ಲಿ ಬಂದಿವೆ. ಗೋವಿನ ಮೌಲ್ಯವನ್ನು ಭಕ್ತರು ನೀಡುವ ಮೂಲಕ ಗೋ ದಾನ ನಡೆಯುತ್ತಿದೆ. ಇದರ ಜೋತೆಯಲ್ಲಿ ಗೋವನ್ನು ಸಾಕಾಣಿಕೆಗೆ ಒಂದು ವರ್ಷದ ಪರ್ಯಂತ ಗೋಗ್ರಾಸಕ್ಕೆ ಹಣವನ್ನು ಅವರು ನೀಡುತ್ತಾರೆ. ಬೆಂಗಳೂರಿನ ಹೇಮಲತಾ ಅವರು ಒಂದು ವರ್ಷದ ಗೋವಿನ ಪೋಷಣೆಗೆ ರೂ.20ಸಾವಿರವನ್ನು ನೀಡಿರುತ್ತಾರೆ ಮಾತ್ರವಲ್ಲದೆ ಹೇಮಲತಾ ಅವರ ಮೊಮ್ಮಗಳು ಸಾನ್ವಿ ಸಾಗರ್ ಅವರ ಇದೇ ಆ.31ರಂದು ಹುಟ್ಟು ಹಬ್ಬದ ಆಚರಿಸಲಿದ್ದು, ದೇವಳ ದಲ್ಲಿ ಅನ್ನದಾನಕ್ಕಾಗಿ ರೂ.5ಸಾವಿರ ನೀಡಿರುತ್ತಾರೆ. ಇವರೊಂದಿಗೆ ಮೊಮ್ಮಗ ಆರ್ಯನ್ ಶಾಮ್ ಪ್ರಸಾದ್ ಜೊತೆಯಲಿದ್ದು ಸೇವಾ ಕಾರ್ಯದಲ್ಲಿ ಸಹಕರಿಸಿರುತ್ತಾರೆ.
ಬಿ.ಐತ್ತಪ್ಪ ನಾಯ್ಕ್,
ಮೇಲ್ವಿಚಾರಕರು, ಕಾಮಧೇನು ಗೋ ಶಾಲೆ,
ವ್ಯವಸ್ಥಾಪನಾ ಸಮಿತಿ ಸದಸ್ಯರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ

LEAVE A REPLY

Please enter your comment!
Please enter your name here