ಫಿಲೋಮಿನಾ : ಆಂಗ್ಲ ಉಪನ್ಯಾಸಕರ ಜಿಲ್ಲಾಮಟ್ಟದ ಶೈಕ್ಷಣಿಕ ಕಾರ್ಯಗಾರ

0

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಇಂಗ್ಲಿಷ್ ಉಪನ್ಯಾಸಕರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಮಂಗಳೂರು ಹಾಗೂ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು ಪುತ್ತೂರು ಇವುಗಳ ಸಹಯೋಗದಲ್ಲಿ ‘ಪರಿಣಾಮಕಾರಿ ಇಂಗ್ಲಿಷ್ ಬೋಧನೆ’ ಕುರಿತು ಒಂದು ದಿನದ ಶೈಕ್ಷಣಿಕ ಕಾರ್ಯಗಾರವು ಆಗಸ್ಟ್ 22ರಂದು ಸಂತ ಫಿಲೋಮಿನಾ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ರೆ.ಫಾ. ಸ್ಟ್ಯಾನಿ ಪಿಂಟೋ ಅವರು, ಇಂಗ್ಲಿಷ್ ಇಂದು ವ್ಯವಹಾರಿಕ ಭಾಷೆಯಾಗಿ ಅತ್ಯಂತ ಅವಶ್ಯಕವಾಗಿದ್ದು, ವಿದ್ಯಾರ್ಥಿ ದೆಸೆಯಲ್ಲಿ ಭಾಷಾ ಜ್ಞಾನವನ್ನು ಹೊಂದುವುದರಿಂದ ಮುಂದೆ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದಾಗಿದೆ. ನಾವು ಕಾಲೇಜು ಪ್ರಾಧ್ಯಾಪಕರಿಗೆ ಕೂಡ ಇಂಗ್ಲಿಷ್ ಭಾಷೆಯ ಕಡೆಗೆ ಪ್ರೀತಿಯನ್ನು ಅಳವಡಿಸಿಕೊಳ್ಳಲು ಸಾಕಷ್ಟು ಅವಕಾಶವನ್ನು ಕೊಡುತ್ತೇವೆ ಎಂದು ತಿಳಿಸಿದರು .

ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ. ಡಿ. ಜಯಣ್ಣ , ಜಿಲ್ಲೆಯ ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಪ್ರತಿಯೊಬ್ಬ ಶಿಕ್ಷಕ ಕೂಡ ತನ್ನ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿದಲ್ಲಿ ವಿದ್ಯಾರ್ಥಿಯ ಬಾಳು ಉಜ್ವಲವಾಗುತ್ತದೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ ವಿದ್ಯಾರ್ಥಿಗಳ ಮೇಲೆ ಇಂಗ್ಲಿಷ್ ಭಾಷೆ ಬೀರುವ ಪರಿಣಾಮವನ್ನು ವಿವರಿಸಿ, ಪ್ರತಿಯೊಬ್ಬ ಶಿಕ್ಷಕನೂ ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಜವಾಬ್ದಾರಿಯನ್ನು ಹೊಂದಿದ್ದಾನೆ ಎಂದು ನೆನಪಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಶ್ರೀ ಗಂಗಾಧರ ಆಳ್ವ ಮಾತನಾಡಿ, ಇಂಗ್ಲಿಷ್ ಭಾಷೆ ಅತ್ಯಂತ ಉಪಯುಕ್ತವಾದ ಭಾಷೆಯಾಗಿದ್ದು ಇಂಗ್ಲಿಷ್ ಕಲಿಯುವುದರಿಂದ ವಿದ್ಯಾರ್ಥಿಗಳ ಮನಸ್ಸು ವಿಕಸಿತಗೊಳ್ಳುತ್ತದೆ. ಅಷ್ಟೇ ಅಲ್ಲದೆ ಇಂಗ್ಲಿಷ್ ಭಾಷಾ ಜ್ಞಾನವು ವಿದ್ಯಾರ್ಥಿಗಳಿಗೆ ನೌಕರಿ ಕೊಡಿಸುವಲ್ಲಿಯೂ ಸಹಾಯ ಮಾಡುತ್ತದೆ ಎಂದರು. ಕಾರ್ಯಕ್ರಮವನ್ನು ಆಯೋಜಿಸಿದ ಉಪನ್ಯಾಸಕರುಗಳ ಶ್ರಮವನ್ನು ಅವರು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರನ್ನು ಮತ್ತು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಉಪನ್ಯಾಸಕರಾದ ರಾಧೇಶ್ ತೋಳ್ಪಾಡಿ, ಶೀನಾ ನಾಡೋಳಿ, ಸೋಮಶೇಖರ್ ನಾಯಕ್ ಹಾಗೂ ಬಾಲಕೃಷ್ಣ ಬೇರಿಕೆ ಇವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಚಿಕ್ಕಮಗಳೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರಾದ ಮಧು ಜಿ. ಎಂ., ತರೀಕೆರೆ ಮಹಿಳಾ ಸರ್ಕಾರಿ ಪದವಿಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರಾದ ಓಂಕಾರಮೂರ್ತಿ ಜಿ.ಟಿ., ಬೆಂಜನಪದವು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕವಿತಾ, ಕೆನರಾ ಪಿಯು ಕಾಲೇಜು ಮಂಗಳೂರು ಇಲ್ಲಿನ ಇಂಗ್ಲಿಷ್ ಉಪನ್ಯಾಸಕರಾದ ಸುಜಾತ ಪಿ. ವಿ., ಸೈಂಟ್ ಜೋಸೆಫ್ ಯೂನಿವರ್ಸಿಟಿ ಬೆಂಗಳೂರಿನ ವಿಶ್ರಾಂತ ಇಂಗ್ಲಿಷ್ ಪ್ರಾಧ್ಯಾಪಕ ಡಾ. ಯೋಗಾನಂದ ರಾವ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡರು. ಉಪನ್ಯಾಸಕರಾದ ರಾಧೇಶ್ ತೋಳ್ಪಾಡಿ, ಪುರುಷೋತ್ತಮ ಶೆಟ್ಟಿ ಮತ್ತು ಸಿಂಥಿಯಾ ಅವಿಟ ಡಿಸೋಜ ವಿವಿಧ ತರಬೇತಿ ಗೋಷ್ಠಿಗಳನ್ನು ನಿರ್ವಹಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಇಂಗ್ಲಿಷ್ ಉಪನ್ಯಾಸಕರ ಸಂಘದ ಅಧ್ಯಕ್ಷ ಸೋಮಶೇಖರ್ ನಾಯಕ್, ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ, ಖಜಾಂಜಿ ಸಿಂಥಿಯಾ ಅವಿಟ ಡಿಸೋಜ, ತರಬೇತಿ ಸಂಯೋಜಕರಾದ ಅನುರಾಧ ಕೆ. ರಾವ್, ಕಾರ್ಯಕ್ರಮ ಸಂಯೋಜಕರಾದ ಅಬ್ದುಲ್ ಸಮದ್ ಎನ್. ಹಾಗೂ ಬಾಲಕೃಷ್ಣ ಬೇರಿಕೆ, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಾಲೇಜಿನ ಪ್ರಾಂಶುಪಾಲರುಗಳು ಹಾಗೂ ಇಂಗ್ಲಿಷ್ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸುಳ್ಯ ಗಾಂಧಿನಗರ ಸರಕಾರಿ ಪದವಿಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರಾದ ಅಬ್ದುಲ್ ಸಮದ್ ಎನ್. ಅತಿಥಿಗಳನ್ನು ಸ್ವಾಗತಿಸಿ, ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕಿ ಸತ್ಯಲತಾ ಎಂ. ರೈ ವಂದಿಸಿದರು. ಬೆಳ್ತಂಗಡಿ ವಾಣಿ ಪದವಿಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕಿ ಅನುರಾಧ ಕೆ. ರಾವ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here