ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮತ್ತು ಸಮಸ್ಯೆ ಪರಿಸಹರಿಸುವಂತೆ ಆಗ್ರಹಿಸಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘವು ಆ.23 ಮತ್ತು 24ರಂದು ‘ಶಾಲೆ ತೊರೆಯುವ ಅಭಿಯಾನ’ ನಡೆಸಲು ನಿರ್ಧರಿಸಿದೆ.
ಕಳೆದ 11-12 ವರ್ಷಗಳಿಂದ ಕಡಿಮೆ ವೇತನ, ಸೇವಾ ಭದ್ರತೆ, ಕೃಪಾಂಕ ಸೇರಿ ಯಾವುದೇ ರೀತಿಯ ಸೌಲಭ್ಯಗಳಿಲ್ಲದೆ ಸಂಘದ ಸದಸ್ಯರು ಪ್ರಾಮಾಣಿಕವಾಗಿ ಶೈಕ್ಷಣಿಕವಾಗಿ ಬದುಕು ಕಟ್ಟಿಕೊಳ್ಳುವಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ವಿಚಾರವಾಗಿ ಕಳೆದ ತಿಂಗಳು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಹೋರಾಟ ಮಾಡಿದ್ದೇವು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು.
ಆದರೆ, ಸಮಸ್ಯೆಗಳನ್ನು ಬಗೆಹರಿಸುವ ಯಾವುದೇ ಆದೇಶಗಳು ಸರ್ಕಾರದಿಂದ ಪ್ರಕಟವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಾಮೂಹಿಕವಾಗಿ ಮತ್ತು ಸಾಂಕೇತಿಕವಾಗಿ ರಾಜ್ಯಾದ್ಯಂತ 2 ದಿನಗಳ ಕಾಲ ಎಲ್ಲ ಅತಿಥಿ ಶಿಕ್ಷಕರು ‘ಶಾಲೆ ತೊರೆಯುವ ಅಭಿಯಾನ’ ಕೈಗೊಂಡಿದ್ದೇವೆ ಎಂದು ಸಂಘದ ಅಧ್ಯಕ್ಷ ಹನುಮಂತ ಎನ್.ಎಚ್. ತಿಳಿಸಿದ್ದಾರೆ.
ಪ್ರಮುಖ ಬೇಡಿಕೆಗಳು
1. ಅತಿಥಿ ಶಿಕ್ಷಕರಿಗೆ ಸೇವಾ ಹಿರಿತನ ಪರಿಗಣಿಸಿ ನೇಮಕಾತಿ ಮಾಡುವುದು, ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕಾಯಂ ಹುದ್ದೆಗಳು ಭರ್ತಿಯಾದಲ್ಲಿ ನಮ್ಮನ್ನು ಬಿಡುಗಡೆಗೊಳಿಸದಿರುವುದು
2. ಪ್ರತಿ ತಿಂಗಳು ಸರಿಯಾಗಿ ವೇತನ ನೀಡುವುದು, ಶೇ.5 ಕೃಪಾಂಕ ನೀಡುವುದು, ಕಾಯಂ ಶಿಕ್ಷಕರ ಹಾಜರಾತಿಯಲ್ಲಿ ಅತಿಥಿ ಶಿಕ್ಷಕರನ್ನು ವಿಲೀನಗೊಳಿಸುವುದು
3. ಇಲಾಖೆಯ ವಿವಿಧ ತರಬೇತಿಗಳಿಗೆ ಅವಕಾಶ ನೀಡಬೇಕು. ಇಎಲ್, ಸಿಎಲ್, ಮಹಿಳೆಯರಿಗೆ ಹೆರಿಗೆ ರಜೆ ನೀಡಬೇಕು
4. ದೆಹಲಿ, ಪಂಜಾಬ್, ಹರಿಯಾಣ ಮಾದರಿಯಲ್ಲಿ ರಾಜ್ಯದಲ್ಲಿಯೂ ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಲು ಸೂಕ್ತ ಕಾನೂನು ರೂಪಿಸಬೇಕು