ಡಿಸಿಸಿ ಬ್ಯಾಂಕ್‍ಗೆ ಮರುಪಾವತಿಯಾಗದ ಸಾಲ: ಹರಾಜಾಗಿದ್ದ ಬಹುಮಹಡಿ ಕಟ್ಟಡ ಸಂಪೂರ್ಣ ಸ್ವಾಧೀನ-ವಿಜಯೀ ಬಿಡ್ಡುದಾರ ಸಂಸ್ಥೆಗೆ ಹಸ್ತಾಂತರ

0

ಎಸ್‍ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ನೇತೃತ್ವ | ಪೊಲೀಸ್ ಬಂದೋಬಸ್ತ್‍ನೊಂದಿಗೆ ಸ್ವಾಧೀನತೆ ಪ್ರಕ್ರಿಯೆ ಪೂರ್ಣ

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸದ ಕಾರಣಕ್ಕಾಗಿ ಮೆ|ಸಹದ್ ರೆಂಟಲ್ ಪ್ರೈ ಲಿ.ಫೋರಂ ಹೈಟ್ಸ್ ಕಟ್ಟಡವನ್ನು ಬಹಿರಂಗ ಹರಾಜು ಮಾಡಿ ವಿಜೇತ ಬಿಡ್ಡುದಾರ ಸಂಸ್ಥೆಯ ಹೆಸರಲ್ಲಿ ನೋಂದಣಿ ಕೂಡಾ ಆಗಿತ್ತು.ಆದರೆ ಕಟ್ಟಡವನ್ನು ಸ್ವಾಧೀನಪಡಿಸಿಕೊಳ್ಳುವ ಸಂದರ್ಭ ಅದರಲ್ಲಿದ್ದ ಮನೆಯೊಂದಕ್ಕೆ ಸಂಬಂಧಿಸಿದವರು ರಾಜ್ಯ ಹೈಕೋರ್ಟ್‍ನಿಂದ ಮಧ್ಯಂತರ ತಡೆಯಾಜ್ಞೆ ತಂದಿದ್ದರು.ಇದೀಗ ತಡೆಯಾಜ್ಞೆ ತೆರವಾಗಿದ್ದು ಸಂಪೂರ್ಣ ಕಟ್ಟಡವನ್ನು ಪೊಲೀಸರ ಬಂದೋಬಸ್ತ್ ನೊಂದಿಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ

  • ಶಶಿ ಕುಮಾರ್ ರೈ ಬಾಲ್ಯೊಟ್ಟು
    ನಿರ್ದೇಶಕರು, ಎಸ್‍ಸಿಡಿಸಿಸಿ ಬ್ಯಾಂಕ್
  • ಪುತ್ತೂರು:ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನಿಂದ ಪಡೆದ ಸಾಲವನ್ನು ಮರುಪಾವತಿಸದ ಕಾರಣಕ್ಕೆ ಬಹಿರಂಗ ಹರಾಜು ಮಾಡಲಾಗಿದ್ದ ಪುತ್ತೂರು ಪೇಟೆಯ ಬಹುಮಹಡಿ ಕಟ್ಟಡವೊಂದನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರ ನೇತೃತ್ವದಲ್ಲಿ ಪೊಲೀಸ್‍ಬಂದೋಬಸ್ತ್‍ನೊಂದಿಗೆ ಸಂಪೂರ್ಣ ಸ್ವಾಧೀನಪಡಿಸಿಕೊಂಡು ಕಟ್ಟಡದ ಬಿಡ್ಡುದಾರ ಸಂಸ್ಥೆಯವರಿಗೆ ಹಸ್ತಾಂತರಿಸಿರುವ ಘಟನೆ ಆ.23ರಂದು ನಡೆದಿದೆ.

ಇಲ್ಲಿನ ದರ್ಬೆಯಲ್ಲಿರುವ ಮೆ|ಸಹದ್ ರೆಂಟಲ್ ಪ್ರೈ. ಲಿ.ಫೋರಂ ಹೈಟ್ಸ್ ಇವರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪುತ್ತೂರು ಮುಖ್ಯ ಶಾಖೆಯಿಂದ ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿಸದೆ ಸುಸ್ತಿದಾರರಾಗಿದ್ದ ಕಾರಣ ಸದ್ರಿ ಸಾಲದ ಸ್ಥಿರಾಸ್ತಿಯಾಗಿರುವ ಫೋರಂ ಕಂಫರ್ಟ್ ಕಟ್ಟಡವನ್ನು 2022ರ ಅಕ್ಟೋಬರ್ 28ರಂದು ಬಹಿರಂಗವಾಗಿ ಹರಾಜು ಮಾಡಲಾಗಿತ್ತು.ಯಶಸ್ವಿ ಬಿಡ್ಡುದಾರರಾದ ಮೆ|ಮಂಗಳೂರು ರಿಯಲ್ ಎಸ್ಟೇಟ್ ಆ್ಯಂಡ್ ಡೆವಲಪರ್ಸ್ ಪ್ರೈ.ಲಿ.ಪಂಪ್‍ವೆಲ್ ಮಂಗಳೂರು ಇವರು 13.5 ಕೋಟಿ ರೂ.ಗಳಿಗೆ ಹರಾಜಿನಲ್ಲಿ ಪಡೆದುಕೊಂಡಿದ್ದರು. ಈ ಸಂಬಂಧ 2022ರ ಡಿಸೆಂಬರ್ 22ರಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಮತ್ತು ವಸೂಲಾತಿ ಅಧಿಕಾರಿಗಳ ನ್ಯಾಯಾಲಯದಲ್ಲಿ ಮಾರಾಟ ಸ್ಥಿರೀಕರಣ ಆದೇಶ ನೀಡಲಾಗಿತ್ತು.ಡಿಸೆಂಬರ್ 26ರಂದು ಪುತ್ತೂರು ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ಕಟ್ಟಡವನ್ನು ಮಂಗಳೂರು ರಿಯಲ್ ಎಸ್ಟೇಟ್ ಆ್ಯಂಡ್ ಡೆವೆಲಪರ್ಸ್ ಸಂಸ್ಥೆ ಹೆಸರಿಗೆ ನೋಂದಣಿ ಮಾಡಲಾಗಿತ್ತು.

  • ಮಾತಿನ ಚಕಮಕಿ: ಆ ಬಳಿಕ ಕಟ್ಟಡವನ್ನು ಸ್ವಾಧೀನತೆ ಮಾಡುವ ನಿಟ್ಟನಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‍ನೊಂದಿಗೆ ಸ್ಥಳಕ್ಕೆ ಆಗಮಿಸಿದ್ದ ಸಂದರ್ಭ ಕಟ್ಟಡಕ್ಕೆ ಸಂಬಂಧಿಸಿದವರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು.ಆದರೆ ಬ್ಯಾಂಕ್ ಅಧಿಕಾರಿಗಳು, 7 ದಿನದೊಳಗೆ ಕಟ್ಟಡ ತೆರವು ಮಾಡುವಂತೆ ಅದರಲ್ಲಿದ್ದ ಕಟ್ಟಡದ ಗೋಡೆಗಳಿಗೆ ನೋಟಿಸ್ ಅಂಟಿಸಿದ್ದರು.
  • ಮನೆಯವರಿಂದ ಹೈಕೋರ್ಟ್‍ನಲ್ಲಿ ರಿಟ್: ಸಾಲ ಮರುಪಾವತಿಸದ ಕಾರಣಕ್ಕಾಗಿ ಬಹಿರಂಗ ಹರಾಜು ಮಾಡಲಾಗಿದ್ದ ಕಟ್ಟಡವನ್ನು 2023ರ ಜನವರಿ 3ರಂದು ಸ್ವಾಧೀನಪಡಿಸಿಕೊಳ್ಳುವ ಸಮಯ ಅದೇ ಕಟ್ಟಡದ ಮೂರನೇ ಮಹಡಿಯ ಮನೆಯನ್ನು ವಶಪಡಿಸಿಕೊಳ್ಳುವುದರ ವಿರುದ್ಧ ಜಾಮೀನುದಾರರಾದ, ಸುಲೈಮಾನ್ ಕೆ.ಎಂಬವರ ಪತ್ನಿ ಶ್ರೀಮತಿ ಮಮ್ತಾಜ್ ಪಿ.ಅವರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿ ಮನೆ ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಮಧ್ಯಂತರ ತಡೆಯಾಜ್ಞೆ ತಂದಿದ್ದರಿಂದ ಪ್ರಕ್ರಿಯೆ ಬಾಕಿಯಾಗಿತ್ತು.ಇದೀಗ ಹೈಕೋರ್ಟ್‍ನಲ್ಲಿ ಮಧ್ಯಂತರ ತಡೆಯಾಜ್ಞೆ ತೆರವಾಗಿರುವುದರಿಂದ ಆ.23ರಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಹಾಗೂ ಬ್ಯಾಂಕಿನ ಅಧಿಕಾರಿ ವರ್ಗದವರು ಪುತ್ತೂರು ನಗರ ಠಾಣೆಯ ಪೊಲೀಸರ ಬಂದೋಬಸ್ತ್‍ನೊಂದಿಗೆ ಸಂಪೂರ್ಣ ಕಟ್ಟಡವನ್ನು ಸ್ವಾಧೀನ ಪಡಿಸಿಕೊಂಡು ಮೆ|ಮಂಗಳೂರು ರಿಯಲ್ ಎಸ್ಟೇಟ್ ಆ್ಯಂಡ್ ಡೆವೆಲಪರ್ಸ್‍ನವರಿಗೆ ಕೀ ಹಸ್ತಾಂತರಿಸಿದರು.ಬಿಲ್ಡಿಂಗ್‍ನಲ್ಲಿದ್ದ ಜನರು ಹಾಗೂ ಮಳಿಗೆಗಳಲ್ಲಿದ್ದವರನ್ನು ಮತ್ತು ಅವರ ಸಾಮಗ್ರಿಗಳನ್ನು ಹೊರಗಿಡಲು ಸೂಚಿಸಿ ಬಳಿಕ ಕಟ್ಟಡದ ಕೆಲ ಮಳಿಗೆಗೆ ಬೀಗ ಹಾಕಲಾಯಿತು.

  • ಪೊಲೀಸ್ ಬಂದೋಬಸ್ತ್: ಕಟ್ಟಡ ಸ್ವಾಧೀನಪಡಿಸಿಕೊಳ್ಳುವ ಸಂದರ್ಭ ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಾರಾಟಾಧಿಕಾರಿಯವರು ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಕೋರಿಕೆ ಸಲ್ಲಿಸಿದ್ದರು.ಅದರಂತೆ ಓರ್ವ ಪಿ.ಎಸ್.ಐ.,ಮೂವರು ಕಾನ್‍ಸ್ಟೇಬಲ್‍ಗಳು, ಮೂವರು ಮಹಿಳಾ ಕಾನ್‍ಸ್ಟೇಬಲ್‍ಗಳನ್ನು ಬಂದೋಬಸ್ತ್ ಗೆ ನೇಮಿಸಿ ಸಹಕರಿಸುವಂತೆ ಎಸ್ಪಿಯವರು ಪುತ್ತೂರು ನಗರ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಅವರಿಗೆ ನಿರ್ದೇಶನ ನೀಡಿದ್ದರು.ಪೊಲೀಸ್ ಬಂದೋಬ‌ಸ್ತ್ ನಲ್ಲಿ ಕಟ್ಟಡ ಸ್ವಾಧೀನಪಡಿಸಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here