ಸರಕಾರಿ ಜಾಗ ಒತ್ತುವರಿ ತೆರವುಗೊಳಿಸದ್ದಕ್ಕೆ ಆಕ್ರೋಶ
ಉಪ್ಪಿನಂಗಡಿ: ಸರಕಾರಿ ಜಾಗ ಅತಿಕ್ರಮಣಕ್ಕೆ ಸಂಬಂಧಿಸಿ ಗ್ರಾ.ಪಂ. ಯಾವುದೇ ಕ್ರಮಕೈಗೊಂಡಿಲ್ಲ. ಸದಸ್ಯರ ಮಾತಿಗೆ ಬೆಲೆ ಇಲ್ಲವೆಂದಾದ ಮೇಲೆ ಮತ್ಯಾಕೆ ನಾವಿಲ್ಲಿ ಕುಳಿತುಕೊಳ್ಳುವುದೆಂದು ಪ್ರಶ್ನಿಸಿ ಸದಸ್ಯರೋರ್ವರು ಸಭೆಯನ್ನು ಬಹಿಷ್ಕರಿಸಲು ಮುಂದಾದ ಘಟನೆ ಆ.23ರಂದು ನಡೆದ 34 ನೆಕ್ಕಿಲಾಡಿಯ ಸಾಮಾನ್ಯ ಸಭೆಯಲ್ಲಿ ನಡೆದಿದೆ.
ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ವಿಜಯಕುಮಾರ್, ಬೀತಲಪ್ಪುವಿನಲ್ಲಿ ಉಮೇಶ್ ಎಂಬವರು ಸರಕಾರಿ ಸ್ಥಳವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ನಾನು ನಿಮ್ಮ ಗಮನಕ್ಕೆ ತಂದಿದ್ದು, ಏನು ಕ್ರಮ ಕೈಗೊಂಡಿದ್ದೀರಿ ಎಂದು ಪಿಡಿಒ ಅವರನ್ನು ಪ್ರಶ್ನಿಸಿದರು. ಇದಕ್ಕುತ್ತರಿಸಿದ ಪಿಡಿಒ ಸತೀಶ್ ಬಂಗೇರ, ನಾನು ಅವರಿಗೆ ನೊಟೀಸ್ ನೀಡಿದ್ದೇನೆ. ಅದಕ್ಕವರು ಹಿಂಬರಹ ಕೊಟ್ಟಿದ್ದಾರೆ. ಆಮೇಲೆ ಕಂದಾಯ ಇಲಾಖೆಗೆ ಗಡಿಗುರುತಿಗೆ ಬರೆದಿದ್ದೇನೆ ಎಂದರು.
ಈ ಸಂದರ್ಭ ಆಕ್ರೋಶಗೊಂಡ ಸದಸ್ಯ ವಿಜಯಕುಮಾರ್, ಅಲ್ಲಿ ಒತ್ತುವರಿ ಮಾಡಿಕೊಂಡ ಜಾಗ ನಾವು ಅಂದು ಕೊಳವೆ ಬಾವಿಗೆ ಪಾಯಿಂಟ್ ಮಾಡಿದ ಜಾಗ. ಅಲ್ಲಿ ರಸ್ತೆಯಂಚಿಗೆ ಬೇಲಿ ಹಾಕಲಾಗಿದೆಯಲ್ಲದೆ, ಚರಂಡಿಯನ್ನು ಮುಚ್ಚಲಾಗಿದೆ. ಆದರೂ ಅದನ್ನು ತೆರವು ಮಾಡಲು ಆಗಿಲ್ಲವೆಂದರೆ ಮತ್ಯಾಕೆ ನಾವು? ನಾನು ಅಂದೇ ಹೇಳಿದ್ದೇನೆ. ಒತ್ತುವರಿ ತೆರವುಗೊಳಿಸದಿದ್ದಲ್ಲಿ ಯಾವುದೇ ಸಭೆಗೆ ನಾನು ಬರುವುದಿಲ್ಲವೆಂದು. ಆದ್ದರಿಂದ ನಮ್ಮ ಮಾತಿಗೆ ಬೆಲೆ ಇಲ್ಲವೆಂದಾದ ಮೇಲೆ ಮತ್ಯಾಕೆ ನಾನು ಸಭೆಗೆ ಕುಳಿತುಕೊಳ್ಳಲಿ. ಇದು ಇತ್ಯರ್ಥವಾಗದ ಹೊರತು ಯಾವುದೇ ಸಭೆಗಳಿಗೂ ನಾನು ಹಾಜರಾಗವುದಿಲ್ಲ ಎಂದು ಸಭೆಯಿಂದ ಎದ್ದು ಹೊರನಡೆಯಲು ಅನುವಾದರು. ಆಗ ಇತರ ಸದಸ್ಯರು ಅವರ ಮನವೊಲಿಸಿ, ಅವರನ್ನು ತಡೆದರು.
ಈ ಸಂದರ್ಭ ಪಿಡಿಒ ಉತ್ತರಿಸಿ, ಅಲ್ಲಿ ಗಡಿಗುರುತು ಆಗದ ಹೊರತು ನೇರವಾಗಿ ನಾನು ಹೋಗಿ ಒತ್ತುವರಿ ತೆರವು ನಡೆಸಲು ಆಗುವುದಿಲ್ಲ. ನಿಯಮಾನುಸಾರವೇ ನಾನು ಹೋಗಬೇಕಾಗುತ್ತದೆ ಎಂದರು. ಈ ಬಗ್ಗೆ ಸದಸ್ಯರೊಳಗೆ ಸಮಗ್ರ ಚರ್ಚೆ ನಡೆದು ಒತ್ತುವರಿ ತೆರವಿನ ಕೆಲಸ ಬೇಗನೇ ಆಗಬೇಕು. ಹಾಗಾಗಿ ಅಲ್ಲಿ ಚರಂಡಿ ನಿರ್ಮಾಣ ಮಾಡೋಣ. ಆಗ ಆ ಬೇಲಿಯನ್ನು ತೆರವು ಮಾಡೋಣ ಎಂದರು. ಆಗ ಪಿಡಿಒ ಅವರು ಚರಂಡಿ ನಿರ್ಮಾಣಕ್ಕೆ ಕ್ರಿಯಾಯೋಜನೆ ಮಾಡಬೇಕು. ಎಂಜಿನಿಯರ್ ಅವರ ಎಸ್ಟಿಮೇಟ್ ಹೋಗಬೇಕು. ಬಳಿಕವಷ್ಟೇ ಕೆಲಸ ಮಾಡಲು ಸಾಧ್ಯ ಎಂದರು. ಈ ಬಗ್ಗೆ ಸದಸ್ಯರೊಳಗೆ ಮತ್ತಷ್ಟು ಚರ್ಚೆ ನಡೆದು, ಹಳೆ ಬಾಕಿ ಇತ್ಯರ್ಥವನ್ನು ಸಾಮಾಜಿಕ ನ್ಯಾಯ ಸಮಿತಿಯ ಮೂಲಕ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದೆಂದು ಈ ಸಭೆಯಲ್ಲಿ ನಿರ್ಣಯ ಅಂಗೀಕರಿಸಿ, ಹಿಂದಿನ ಸಾಮಾಜಿಕ ನ್ಯಾಯ ಸಮಿತಿಯನ್ನು ಊರ್ಜಿತದಲ್ಲಿರಿಸಿ ಆ.೨೮ರಂದು ಸಾಮಾಜಿಕ ನ್ಯಾಯ ಸಮಿತಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದೆಂದು ನಿರ್ಣಯ ಅಂಗೀಕರಿಸಲಾಯಿತು.
ಸ್ವಚ್ಚತಾ ಶುಲ್ಕ ಸರಿಯಾಗಿ ವಸೂಲಾತಿಯಾಗುತ್ತಿಲ್ಲ. ಕೆಲವರು ಕೊಡುವುದೇ ಇಲ್ಲವೆಂದು ಪಟ್ಟು ಹಿಡಿಯುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. ಈ ಸಂದರ್ಭ ಪಿಡಿಒ ಅವರು ಮಾತನಾಡಿ ಕೆಲವರು ತಮ್ಮ ಅಗತ್ಯ ಕೆಲಸಕ್ಕೆ ಗ್ರಾ.ಪಂ.ಗೆ ಬರುವಾಗ ಅವರ ಸ್ವಚ್ಚತಾ ಶುಲ್ಕವನ್ನು ವಸೂಲು ಮಾಡಲಾಗುತ್ತದೆ. ಆದರೂ ಇನ್ನೂ ಹಲವರು ಸ್ವಚ್ಛತಾ ಶುಲ್ಕ ಬಾಕಿ ಇರಿಸಿದ್ದಾರೆ ಎಂದರು. ಈ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿ ಸ್ವಚ್ಛತಾ ಶುಲ್ಕ ಪಾವತಿ ಮಾಡದವರಿಗೆ ನೊಟೀಸ್ ನೀಡಲು ನಿರ್ಧರಿಸಲಾಯಿತು. ಗ್ರಾ.ಪಂ.ನಲ್ಲಿ ಸೆ.೭ರಂದು ಜಮಾಬಂಧಿ ಹಾಗೂ ಸೆ.೨೦ರಂದು ಗ್ರಾಮ ಸಭೆಯನ್ನು ನಡೆಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಹರೀಶ್ ಡಿ., ಸದಸ್ಯರಾದ ರತ್ನಾವತಿ, ಪ್ರಶಾಂತ್ ಎನ್., ಗೀತಾ, ಸ್ವಪ್ನ, ವೇದಾವತಿ, ತುಳಸಿ, ಹರೀಶ ಕೆ., ರಮೇಶ ನಾಯ್ಕ ಉಪಸ್ಥಿತರಿದ್ದು, ಸಲಹೆ ಸೂಚನೆ ನೀಡಿದರು. ಪಿಡಿಒ ಸತೀಶ ಬಂಗೇರ ಸ್ವಾಗತಿಸಿ, ವಂದಿಸಿದರು.