ಪಟ್ರಮೆ ಮೀಸಲು ಅರಣ್ಯದಲ್ಲಿ ಕಡವೆ ಬೇಟೆ-ಮೂವರ ಬಂಧನ; ಓರ್ವ ಪರಾರಿ

0

ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ದಡಂತಮಲೆ ಮೀಸಲು ಅರಣ್ಯ ಪ್ರದೇಶದಲ್ಲಿ ಕಡವೆ ಬೇಟೆಯಾಡಿದ ಆರೋಪದಲ್ಲಿ ಮೂವರನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಬಂಧಿಸಿ ಕೋವಿ ಹಾಗೂ ಕಡವೆಯ ಮೃತದೇಹ ವಶಪಡಿಸಿಕೊಂಡಿರುವ ಘಟನೆ ಆ.೨೩ರಂದು ಬೆಳಿಗ್ಗೆ ನಡೆದಿದೆ. ಓರ್ವ ಆರೋಪಿ ಪರಾರಿಯಾಗಿರುವುದಾಗಿ ವರದಿಯಾಗಿದೆ.


ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಸಂಕೇಶ ನಿವಾಸಿ ಕೊಟ್ಯಪ್ಪ ಗೌಡ, ಪುನೀತ್ ಮಣಿಯೇರು, ಎಸ್.ಜೆ.ಸಂದೇಶ ಸಂಕೇಶ ಬಂಧಿತ ಆರೋಪಿಗಳಾಗಿದ್ದಾರೆ. ಲೋಕೇಶ್ ಸಂಕೇಶ ಎಂಬಾತ ಕಾಡಿನಲ್ಲಿ ಪರಾರಿಯಾಗಿರುವುದಾಗಿ ವರದಿಯಾಗಿದೆ. ಆರೋಪಿಗಳು ಕಡವೆ ಬೇಟೆಯಾಡಿ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳಿಂದ ಕಡವೆಯ ಮೃತದೇಹ ಮತ್ತು ಸಿಂಗಲ್ ಬ್ಯಾರೆಲ್ ಬ್ರೀಚ್ ಲೋಡರ್ ಕೋವಿಯನ್ನು ವಶಕ್ಕೆ ಪಡೆಯಲಾಗಿದೆ. ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ಜಯಪ್ರಕಾಶ್‌ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಲೋಕೇಶ್, ಅಶೋಕ್, ರಾವುತಪ್ಪ ಬಿರಾದಾರ್, ಅರಣ್ಯಾಧಿಕಾರಿ ವಿನಯಚಂದ್ರ, ಪ್ರಶಾಂತ್, ವಾಹನ ಚಾಲಕ ಕಿಶೋರ್ ಪಾಲ್ಗೊಂಡಿದ್ದರು.


ಸುಮಾರು ಎರಡು ಕ್ವಿಂಟಾಲ್ ತೂಕ ಇರುವ ಕಡವೆ ಗುಂಡೇಟಿಗೆ ಸಾವನ್ನಪ್ಪಿದ್ದು, ಈ ಕಡವೆಯನ್ನು ಬೆಳ್ತಂಗಡಿ ಪಶು ಇಲಾಖೆಯ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿದ ಬಳಿಕ ನೆಲ್ಯಾಡಿಯ ಮಣ್ಣಗುಂಡಿ ಅರಣ್ಯ ಇಲಾಖೆಯ ಮರದ ಡೀಪೋದ ಜಾಗದಲ್ಲಿ ದಫನ ನಡೆಸಲಾಗಿದೆ.ಉಪ್ಪಿನಂಗಡಿ ಅರಣ್ಯ ಇಲಾಖೆಯಲ್ಲಿ ವನ್ಯಜೀವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

LEAVE A REPLY

Please enter your comment!
Please enter your name here