ಉಪ್ಪಿನಂಗಡಿ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧರೋರ್ವರ ನಡಿಗೆಗೆ ಜೊತೆಯಾಗಿ ಅವರಲ್ಲಿ ಮಾತನಾಡುತ್ತಲೇ ಅವರಿಗೆ ಮಂಕು ಬೂದಿ ಎರಚಿದ ಅಪರಿಚಿತನೋರ್ವ ಅವರ ಕುತ್ತಿಗೆಯಲ್ಲಿದ್ದ 14 ಗ್ರಾಂ ತೂಕದ ಚಿನ್ನದ ಸರವನ್ನು ಪಡೆದು ಪರಾರಿಯಾದ ಘಟನೆ ಆ.23ರಂದು ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ಕೋಟೆ ನಿವಾಸಿ ಗಂಗಾಧರ ಟೈಲರ್ (70) ಚಿನ್ನದ ಸರ ಕಳೆದುಕೊಂಡ ವ್ಯಕ್ತಿ. ಇವರು ಬೆಳಗ್ಗೆ 7.30ರ ಸುಮಾರಿಗೆ ಹೊಟೇಲೊಂದಕ್ಕೆ ಹೋಗುತ್ತಿದ್ದಾಗ ದಾರಿ ಮಧ್ಯೆ ಭೇಟಿಯಾದ ಅಪರಿಚತನೋರ್ವ ಅವರೊಂದಿಗೆ ನಡೆಯುತ್ತಲೇ ಬಂದು ಅವರನ್ನು ಮಾತಿಗೆಳೆದಿದ್ದ. ಬಳಿಕ ಅವರಿಗೆ ಅರಿವಿಲ್ಲದಂತೆಯೇ ಅವರೇ ತನ್ನ ಕೈಯಾರೆ ತನ್ನ ಕುತ್ತಿಗೆಯಲ್ಲಿದ್ದ 14 ಗ್ರಾಂ ತೂಕದ ಚಿನ್ನದ ಸರವನ್ನು ಆತನ ಕೈಗಿತ್ತಿದ್ದು, ಬ್ಯಾಂಕ್‌ಗೆ ಹೋಗಿ ಠಸೆ ಪೇಪರ್ ತನ್ನಿ ಎಂಬ ಆತನ ಸೂಚನೆಯನ್ನು ಪಾಲಿಸಿ ಬ್ಯಾಂಕಿನತ್ತ ಸಾಗಿದ ಅವರಿಗೆ ತುಸು ದೂರ ಹೋದಾಗ, ತಾನ್ಯಾಕೆ ಆತನಿಗೆ ಚಿನ್ನದ ಸರವನ್ನು ನೀಡಿದೆ? ತಾನ್ಯಾಕೆ ಈ ಹೊತ್ತಲ್ಲಿ ಬ್ಯಾಂಕಿನತ್ತ ಹೋಗುತ್ತಿದ್ದೇನೆ ಎಂಬ ಅರಿವು ಉಂಟಾಗಿದೆ. ಬಳಿಕ ಅವರು ಚಿನ್ನದ ಸರ ಹಸ್ತಾಂತರಿಸಿದ ಸ್ಥಳಕ್ಕೆ ಬಂದಾಗ ಈ ಅಪರಿಚಿತ ಅಲ್ಲಿಂದ ನಾಪತ್ತೆಯಾಗಿದ್ದ. ಆಗ ಅವರಿಗೆ ತನಗೇನೋ ಮಾಡಿ ತನ್ನನ್ನು ವಂಚಿಸಲಾಗಿದೆ ಎಂಬ ಅರಿವಾಗುತ್ತಲೇ ಅವನಿಗಾಗಿ ಅವರು ಬೀದಿ ಬೀದಿ ಅಲೆದಾಡಿ ಆತನಿಗಾಗಿ ಹುಡುಕಾಟ ನಡೆಸಿದರಾದರೂ, ಅತನ ಪತ್ತೆಯಾಗಿಲ್ಲ. ಬಳಿಕ ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದರು.
ಉಪ್ಪಿನಂಗಡಿ ಪೊಲೀಸರು ಪರಿಸರದ ಸಿ ಸಿ ಕ್ಯಾಮಾರಾ ದೃಶ್ಯಾವಳಿಯ ಆಧಾರದಲ್ಲಿ ಆರೋಪಿಯ ಪತ್ತೆಗೆ ಶ್ರಮಿಸುತ್ತಿದ್ದಾರೆ. ಮಾತಿನ ಮೂಲಕವೇ ಜನರನ್ನು ಮರಳು ಮಾಡಿ ಹಣ, ಚಿನ್ನ ದೋಚಿದ ಘಟನೆಯು ಈ ಹಿಂದೆಯೂ ಉಪ್ಪಿನಂಗಡಿಯಲ್ಲಿ ನಡೆದಿರುವುದನ್ನು ಇಲ್ಲಿ ನೆನಪಿಸಬಹುದು.