ಶ್ರೀಧಾಮ ಮಾಣಿಲದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತಾಚರಣೆಯ ಬೆಳ್ಳಿಹಬ್ಬ ಮಹೋತ್ಸವ

0

ವಿಟ್ಲ: ಅರ್ಪಣಾ ಭಾವದ ಸೇವೆ ಮಾಡಿದಾಗ ಕ್ಷೇತ್ರದ ಬೆಳವಣಿಗೆ ಸಾಧ್ಯ. ಶ್ರದ್ಧೆ, ಪರಿಶ್ರಮದಿಂದ ತುಂಬಿದ ಬದುಕಿನಲ್ಲಿ ಮಂಥನವಾದಾಗ ಲಕ್ಷ್ಮೀ ಒಲಿಯುತ್ತಾಳೆ. ಬದುಕಿನಲ್ಲಿ ತಾಳ್ಮೆ ಸಹನೆ ಅತೀ ಮುಖ್ಯ. ನಾವು ಮಾಡಿದ ಸತ್ಕರ್ಮಗಳು ನಮ್ಮನ್ನು ಕಾಪಾಡುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿರವರು ಹೇಳಿದರು.
ಅವರು ಶ್ರೀದಾಮ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಆ.25ರಂದು ನಡೆದ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಬೆಳ್ಳಿಹಬ್ಬ ಮಹೋತ್ಸವದ ವಿಶೇಷ ಸಂಭ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಧರ್ಮವನ್ನು ಮರೆತ ರಾಷ್ಟ್ರ ಹಾಗೂ ವ್ಯಕ್ತಿಗೆ ಅಪಾಯ ಖಂಡಿತಾ. ತ್ಯಾಗ ಮತ್ತು ಸೇವೆ ಭಾರತದ ಅಂತಸತ್ವವಾಗಿದೆ. ಆಧ್ಯಾತ್ಮದ ವಿಚಾರದಿಂದಾಗಿ ವಿಶ್ವ ಇತ್ತ ನೋಡುತ್ತಿದೆ. ಸಂಸ್ಕಾರದ ಮೂಲಕ ಬೆಳೆಯುವ ಕಾರ್ಯವಾಗಬೇಕು. ಎಲ್ಲರನ್ನು ಪ್ರೀತಿಭಾವದಿಂದ ನೋಡುವ ಮನಸ್ಸು ನಮ್ಮದಾಗಬೇಕು ಎಂದರು.
ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವರಾದ ಭಗವಂತ್ ಖೂಬರವರು ಧಾರ್ಮಿಕ ಸಭೆಯನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ ಗುರುಗಳ ತಪೋಬಲ ಕ್ಷೇತ್ರದಲ್ಲಿ ಸಾಕಾರವಾಗಿದೆ. ಸಂಸ್ಕೃತಿಯ ಉಳಿವಿಗೆ ಶ್ರೀಗಳ ಪ್ರಯತ್ನ ಅವಿಸ್ಮರಣೀಯ. ಅತ್ಯಲ್ಪ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಬಹಳಷ್ಟು ಆಗಿದೆ. ವಿಕೃತಿಯನ್ನು ಬಿಟ್ಟು ಒಳಿತನ್ನು ಬಯಸುವ ಮನಸ್ಸು ನಮ್ಮದಾಗಲಿ. ಸಂಪತ್ತಿಗಿಂತ ಮಿಗಿಲಾದುದು ಗುರುಗಳ ಸಂದೇಶ. ಧರ್ಮದ ಆಧಾರದಲ್ಲಿ ಆಡಳಿತ ನಡೆಸಿದಾಗ ಸರ್ವರ ಏಳಿಗೆ ಸಾಧ್ಯ ಎಂದರು. ಭಾರತದ ಸಂಸ್ಕೃತಿಯನ್ನು ವಿಶ್ವಕ್ಕೆ ಸಾರುವ ಕೆಲಸವಾಗಿದೆ. ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಉಳಿಸುವಲ್ಲಿ ವಿಜ್ಞಾನದ ಅಗತ್ಯತೆ ನಮಗಿದೆ. ಭಾರತ ಆಧ್ಯಾತ್ಮಿಕವಾಗಿ ಮುಂದಿದೆ. ನಾವೆಲ್ಲರೂ ಧರ್ಮ ಕಾರ್ಯದ ಪ್ರತಿಪಾದನೆಗೆ ಒಂದಾಗಿದ್ದೇವೆ ಎಂದ ಸಚಿವರು, ಭಾರತದ ಸಂಸ್ಕೃತಿ, ಸಂಸ್ಕಾರವನ್ನು ಉಳಿಸುವ ವಿಜ್ಞಾನದ ಅಗತ್ಯವಿದೆ. ದೇಶದ ಪರಂಪರೆಯ ಮಾಹಿತಿಯನ್ನು ಮುಂದಿನ ಪೀಳಿಗೆಗೆ ನೀಡುವ ಕಾರ್ಯ ನಡೆಯಬೇಕು ಎಂದರು.
ದ.ಕ. ಸಂಸದ ನಳೀನ್ ಕುಮಾರ್ ಕಟೀಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಬಿಳ್ಳಿಪ್ಪಾಡಿ ರಮಾನಾಥ ರೈ, ನಾಗರಾಜ ಶೆಟ್ಟಿ, ಕೃಷ್ಣ ಜೆ. ಪಾಲೆಮಾರ್, ಮಾಜಿ ಶಾಸಕ ಸಂಜೀವ ಮಠಂದೂರು, ಪದ್ಮನಾಭ ಕೊಟ್ಟಾರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಮಂಗಳೂರು ಸಾಗರ್ ಕನ್‌ಸ್ಟ್ರಕ್ಷನ್ ನ ಮಾಲಕ ಗಿರಿಧರ ಶೆಟ್ಟಿ, ಉದ್ಯಮಿ ಗುಬ್ಯ ಮೇಗಿನ ಮನೆ ರಂಜಿತ್ ಶೆಟ್ಟಿ, ಮುಂಬೈಯ ಉದ್ಯಮಿ ರಂಜಿತ್ ಗೋಯಕೋ, ಮಹಾರಾಷ್ಟ್ರ ಏರ್ಟೆಲ್ ನ ಮುಖ್ಯಸ್ಥ ರಾಕೇಶ್ ಪಗಾರೆ, ರವೀಂದ್ರ ಶೆಟ್ಟಿ ಮುಳಿದೊಟ್ಟು, ಉದಮಿ ಯಾದವ ಕೊಟ್ಯಾನ್, ಧಾರ್ಮಿಕ ಕಾರ್ಯಕರ್ತ ದೇವಪ್ಪ ಕುಲಾಲ್ ಪಂಜಿಕಲ್ಲು, ಉದ್ಯಮಿ ಸುರೇಶ್ ಪತಾರೆ, ನಿತಿನ್ ಅಡ್ಸಾಲ್ , ಲಿಬೇಷ್ ನಾಯರ್, ಸಂದೀಪ್ ಪತಾರೆ, ಭಾಸ್ಕರ ಶೆಟ್ಟಿ ಪುಣೆ, ರಂಜಿತ್ ಕಾಂಚನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮಹಿಳಾ ಸಮಿತಿ ಗೌರವಾಧ್ಯಕ್ಷರಾದ ರೇವತಿ ಪೆರ್ನೆ, ಅಧ್ಯಕ್ಷರಾದ ವನಿತಾ ವಿ. ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯಕ್ಷಗಾನ ಕ್ಷೇತ್ರದ ಸಾಧಕ ಸತೀಶ್ ಶೆಟ್ಟಿ ಪಟ್ಲ, ಧಾರ್ಮಿಕ ಕ್ಷೇತ್ರದ ಸಾಧಕ ಯಾದವ ಕೊಟ್ಯಾನ್ ಪೆರ್ಮುದೆ, ಶೈಕ್ಷಣಿಕ ಹಾಗೂ ಸಾಮಾಜಿಕ ರಂಗದ ಸಾಧಕ ಸೌಂದರ್ಯ ರಮೇಶ್, ಆರ್ಥಿಕ ಸ್ವಾವಲಂಬನೆ ಮಾಡಿದ ಸಿ.ಎ.ಸುಧೀರ್ ಶೆಟ್ಟಿ ಎಣ್ಮಕಜೆ, ಸಮಾಜ ಸೇವೆಗಾಗಿ ಗಣೇಶ್ ಕುಲಾಲ್, ದೈವಾರಾಧನೆ ಕ್ಷೇತ್ರ ಕೊರಗಪ್ಪ ಪೂಜಾರಿ ಬಾಳೆಕಲ್ಲು, ಧಾರ್ಮಿಕ ಕ್ಷೇತ್ರದ ದೇವಪ್ಪ ಕುಲಾಲ್ ಪಂಜಿಕಲ್ಲುರವರನ್ನು ಸನ್ಮಾನಿಸಲಾಯಿತು.
ಶ್ರೇಯ, ನಿರೀಕ್ಷ ಪ್ರಾರ್ಥಿಸಿದರು.
ಶ್ರೀಧಾಮ ಮಾಣಿಲ ಶ್ರೀ ವರಮಹಾಲಕ್ಷ್ಮೀ ವೃತಾಚಾರಣೆ ಬೆಳ್ಳಿಹಬ್ಬ ಮಹೋತ್ಸವ ಸಮಿತಿ ಅಧ್ಯಕ್ಷ ಮೋನಪ್ಪ ಭಂಡಾರಿ ಸ್ವಾಗತಿಸಿದರು. ಗೀತಾಪುರುಷೋತ್ತಮ, ನವೀನ್ ಕುಲಾಲ್, ವಸಂತಿ, ಅಭಿಜಿತ್ ಪದಂಗಡಿ, ಸುಧೀರ್ ಶೆಟ್ಟಿ, ಉಮಾವತಿ ಚಂದ್ರಶೇಖರ್, ರೇಶ್ಮಾ ಮನೋಹರ್, ಎಚ್. ಕೆ. ನಯನಾಡು ಸನ್ಮಾನ ಪತ್ರ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
ವೈದಿಕ ಕಾರ್ಯಕ್ರಮ: ಆ.25ರಂದು ಬೆಳಗ್ಗೆ 12ಕಾಯಿ ಗಣಪತಿ ಯಾಗ, ತ್ರಿಕಾಲ ಪೂಜೆ ಪ್ರಾರಂಭಗೊಂಡಿತು, ಬಳಿಕ ಸಾಮೂಹಿಕ ಕುಂಕುಮಾರ್ಚನೆ, ವನದುರ್ಗಾಪರಮೇಶ್ವರೀ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಸ್ವಯಂವರ ಪಾರ್ವತಿ ಪೂಜೆ, ತ್ರಿಕಾಲ ಪೂಜೆ, ಹೋಮ, ಅಷ್ಟಾವಧಾನ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಿತು. ಊರಪರವೂರ ನೂರಾರು ಭಕಾದಿಗಳು ಪಾಲ್ಗೊಂಡರು.
ಸಾಂಸ್ಕೃತಿಕ ಕಾರ್ಯಕ್ರಮ: ಮಧ್ಯಾಹ್ನ 2.30ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪಂಡಿತ್ ಆನಂದ್ ಜೋಷಿ ಹುಬ್ಬಳ್ಳಿ ಇವರಿಂದ ‘ಸಂತವಾಣಿ – ದೇವಿ ಭಜನೆ’ ನಡೆಯಿತು. ಸಾಯಂಕಾಲ ‘ನಾಟ್ಯನಿಲಯಂ’ ಮಂಜೇಶ್ವರ ಇಲ್ಲಿನ ಡಾ.ಬಾಲಕೃಷ್ಣ ಮಾಸ್ಟರ್ ಇವರ ಶಿಷ್ಯರಿಂದ ‘ನೃತ್ಯವೈಭವ’ ನಡೆಯಿತು.

*ಮಾಣಿಲ ಶ್ರೀಗಳ ತಪೋಬಲ ಕ್ಷೇತ್ರದಲ್ಲಿ ಸಾಕಾರವಾಗಿದೆ: ಭಗವಂತ್ ಖೂಬ
*ಅರ್ಪಣಾ ಭಾವದ ಸೇವೆ ಮಾಡಿದಾಗ ಕ್ಷೇತ್ರದ ಬೆಳವಣಿಗೆ ಸಾಧ್ಯ: ಒಡಿಯೂರು ಶ್ರೀ
*ಮಕ್ಕಳನ್ನು ದುಶ್ಚಟ ಮುಕ್ತರನ್ನಾಗಿ ಮಾಡುವ ಕೆಲಸವಾಗಬೇಕು: ಮಾಣಿಲ ಶ್ರೀ

ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಮಾನವೀಯತೆಯನ್ನು ಮೇಳೈಸುವ ಕೆಲಸವಾಗಬೇಕು. ಧರ್ಮ ಪ್ರಜ್ಞೆ ನಮ್ಮಲ್ಲಿದ್ದಾಗ ಯಾವುದೇ ಕಾರ್ಯ ಯಶಸ್ಸಾಗಲು ಸಾಧ್ಯ. ನಮ್ಮ ಮಕ್ಕಳಲ್ಲಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕೆಲಸವಾಗಬೇಕು. ದೇಶದ ಸಂಸ್ಕೃತಿ, ಪರಂಪರೆಯಲ್ಲಿ ವೃತಾಚರಣೆಯ ಮಹತ್ವ ಬಹಳಷ್ಟಿದೆ. ಕೃಷಿ, ಋಷಿ ಪರಂಪರೆಯ ಮೇಲೆ ದೇಶ ನಿಂತಿದೆ. ನಮ್ಮಲ್ಲಿ ರಾಕ್ಷಸೀ ಪ್ರವೃತ್ತಿ ದೂರವಾಗಿ ಮಾನವೀಯ ಮೌಲ್ಯ ಬೆಳೆಯಬೇಕು. ಮಕ್ಕಳನ್ನು ದುಶ್ಚಟ ಮುಕ್ತರನ್ನಾಗಿ ಮಾಡುವ ಕೆಲಸ ನಮ್ಮೆಲ್ಲರಿಂದ ಆಗಬೇಕು. ನೈತಿಕ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಕೆಲಸವಾಗಬೇಕು ಎಂದರು.
ಇಂದು ಕ್ಷೇತ್ರದಲ್ಲಿ ಮಾತೃ ಶಕ್ತಿ ಸಮಾವೇಶ
ಆ.26ರಂದು ಬೆಳಗ್ಗೆ ಸೌಭಾಗ್ಯ ಲಕ್ಷ್ಮೀ ಹೋಮ, ಸೌಭಾಗ್ಯ ಲಕ್ಷ್ಮೀ ಪೂಜೆ ನಡೆಯಲಿದೆ. ಬಳಿಕ ಭಜನಾ ಸಂಕೀರ್ತನೆ ನಡೆಯಲಿದೆ. ಬಳಿಕ ಮಾತೃಶಕ್ತಿ ಸಮಾವೇಶ ಉದ್ಘಾಟನೆಗೊಳ್ಳಲಿದೆ.

LEAVE A REPLY

Please enter your comment!
Please enter your name here