ಪಾಣಾಜೆ: ಆರಾಧನಾ ಕೇಂದ್ರದಲ್ಲಿ ಪೂಜೆ ಮಾಡದಂತೆ ಅಡ್ಡಿ ಆರೋಪ – ಸತ್ಯನಾರಾಯಣ ಶರ್ಮ ಎಂಬವರ ವಿರುದ್ದ ದೂರು ದಾಖಲು

0

ಪಾಣಾಜೆ: ಹಲವು ವರ್ಷಗಳಿಂದ ಆರಾಧಿಸಿಕೊಂಡು ಬರುತ್ತಿದ್ದ ದೈವಗಳ ಆರಾಧನಾ ಕೇಂದ್ರದಲ್ಲಿ ಪೂಜೆ ಮಾಡದಂತೆ ಅಡ್ಡಿಪಡಿಸಿ ತೊಂದರೆಕೊಟ್ಟಿರುವ ಬಗ್ಗೆ ಆರೋಪಿಸಿ ಪೊಲೀಸ್‌ ದೂರು ದಾಖಲಿಸಿರುವ ಘಟನೆ ಪಾಣಾಜೆಯಿಂದ ವರದಿಯಾಗಿದೆ.
ಪಾಣಾಜೆ ದೇವತಲಡ್ಕ ರಕ್ತೇಶ್ವರಿ, ಭೈರವ, ಗುಳಿಗ ಪರಿವಾರ ದೈವಗಳ ಸಾನ್ನಿಧ್ಯವಿರುವ ಜಮೀನು ಸ್ವಾಧೀನದಲ್ಲಿರುವ ವೆಂಕಟ್ರಮಣ ಭಟ್‌ ಎಂಬವರು ಪೂಜೆಗೆ ಅಡ್ಡಿಪಡಿಸಿರುವ ನೆರೆಯ ಜಮೀನಿನ ಸತ್ಯನಾರಾಯಣ ಶರ್ಮ ಎಂಬವರ ವಿರುದ್ದ ದೂರು ದಾಖಲಿಸಿದ್ದಾರೆ.
ತಮ್ಮ ಜಾಗದಲ್ಲಿ ಹಿಂದಿನಿಂದಲೂ ಆರಾಧಿಸಿಕೊಂಡು ಬರುತ್ತಿದ್ದ ದೇವತಲಡ್ಕ ರಕ್ತೇಶ್ವರಿ, ಭೈರವ, ಗುಳಿಗ ಪರಿವಾರ ಬನದ ಜಾಗದಲ್ಲಿ ಆ.17ರಂದು ಸಂಜೆ ಪೂಜೆ ಮಾಡುತ್ತಿರುವಾಗ ನೆರೆಯ ಜಾಗದ ಮಾಲಕರಾದ ಆರೋಪಿ ಸತ್ಯನಾರಾಯಣ ಶರ್ಮ ನನ್ನ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ಧಗಳಿಂದ ಬೈದು ಜೀವ ಬೆದರಿಕೆ ಹಾಕಿ, ಜಾಗದ ಬೇಲಿಯನ್ನು ಕೆಡವಿ, ಸುಮಾರು 500ರೂ. ನಷ್ಟವನ್ನುಂಟು ಮಾಡಿರುತ್ತಾರೆʼ ಎಂದು ವೆಂಕಟರಮಣ ಭಟ್‌ರವರು ದೂರು ದಾಖಲಿಸಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 79-2023 ಕಲಂ: 447,341, 504,506,427  IPC ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

40 ವರ್ಷಗಳಿಂದ ಆರಾಧನಾ ಸ್ಥಗಿತಗೊಂಡಿದ್ದ ಸಾನ್ನಿಧ್ಯವು ಊರ ಪರವೂರ ಭಕ್ತರ ಸಹಕಾರದಲ್ಲಿ 2019ರಲ್ಲಿ ಪುನರ್‌ಪ್ರತಿಷ್ಠಾಪನೆಗೊಂಡು ಧಾರ್ಮಿಕ ಆರಾಧನೆಗಳು ಆರಂಭವಾಗಿತ್ತು. ಪ್ರತೀ ವರ್ಷ ಪತ್ತನಾಜೆ, ದೀಪಾವಳಿ, ಪ್ರತಿಷ್ಠಾ ದಿನದಂದು ವಿಶೇಷ ಪೂಜೆ, ತಂಬಿಲ ಸೇವೆಗಳು ನಡೆದು ಬರುತ್ತಿವೆ. ಪುರಾತನ ಕಾಲದಿಂದಲೇ ಇಲ್ಲಿ ಆರಾಧನೆ ಇದ್ದುದರಿಂದ ಸ್ಥಳೀಯರಿಗೆ ಇದು ಅತ್ಯಂತ ಪಾವಿತ್ರ್ಯ ಮತ್ತು ಶ್ರದ್ಧಾಭಕ್ತಿಯ ಕೇಂದ್ರವಾಗಿ ಪರಿಣಮಿಸಿದೆ. ವೆಂಕಟ್ರಮಣ ಭಟ್‌ ಎಂಬವರ ಜಮೀನಿನ ಕುಮ್ಕಿ ಜಮೀನಿನಲ್ಲಿ ಬರುವ ಈ ಸಾನ್ನಿಧ್ಯವನ್ನು ಇದೀಗ ಸತ್ಯನಾರಾಯಣ ಶರ್ಮರವರು ತನ್ನ ಜಾಗವೆಂದು ಅತಿಕ್ರಮಿಸಿ ಬೇಲಿ ಹಾಕಿರುವುದರಿಂದರ ನಿತ್ಯ ಆರಾಧನೆಗೆ ಅಡ್ಡಿಯಾಗಿದೆ. ಕಾನೂನು, ಕೋರ್ಟ್‌ ಎಂದು ಅಲೆದಾಡಲು ನಾವು ಬಡವರಾಗಿದ್ದೇವೆ. ಹಾಗಾಗಿ ಧಾರ್ಮಿಕ ನಂಬಿಕೆ ಮತ್ತು ಶ್ರದ್ಧಾಕೇಂದ್ರದಲ್ಲಿ ಈ ಹಿಂದಿನಂತೆ ಆರಾಧನೆ ನಡೆಸಿಕೊಂಡು ಬರಲು ಅಡ್ಡಿಪಡಿಸಿದಂತೆ ಸತ್ಯನಾರಾಯಣ ಶರ್ಮರವರ ವಿರುದ್ದ ಕ್ರಮ ಕೈಗೊಳ್ಳಬೇಕುʼ ಎಂದು ಇಲ್ಲಿನ ಸಾರ್ವಜನಿಕರೂ ಆಗ್ರಹ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here