ಉಪ್ಪಿನಂಗಡಿ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯವರ ಅವಾಂತರಗಳಿಂದಾಗಿ ಹಲವರಿಗೆ ಒಂದಲ್ಲ ಒಂದು ತೊಂದರೆಗಳಾಗುತ್ತಿವೆ. ಮಠ ಎಂಬಲ್ಲಿ ಇದ್ದ ಚರಂಡಿಯನ್ನು ಮುಚ್ಚಿದ್ದರಿಂದ ರಸ್ತೆಯ ನೀರೆಲ್ಲಾ ಬಂದು ಮನೆಯ ಅಂಗಳಕ್ಕೆ ನುಗ್ಗುತ್ತಿದೆ. ಇದರಿಂದಾಗಿ ಅಂಗಳದಲ್ಲಿನ ಕುಡಿಯುವ ನೀರಿನ ಬಾವಿಯೂ ಜರಿಯುತ್ತಿದ್ದು, ಕೆಸರು ನೀರು ಬಾವಿಗೆ ಹರಿಯುವಂತಾಗಿದೆ. ಇದನ್ನು ಕಳೆದ ಸಭೆಯಲ್ಲಿ ಪ್ರಸ್ತಾಪಿಸಿದ್ದರೂ ಈ ಬಗ್ಗೆ ಯಾವುದೇ ಕ್ರಮವಾಗಿಲ್ಲ ಎಂದು ಉಪ್ಪಿನಂಗಡಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯ ಅಬ್ದುರ್ರಹ್ಮಾನ್ ಕೆ. ಆಕ್ರೋಶ ವ್ಯಕ್ತಪಡಿಸಿದರು.
ಗ್ರಾ.ಪಂ. ಅಧ್ಯಕ್ಷೆ ಲಲಿತಾ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಈ ಬಗ್ಗೆ ಕಳೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಅದಕ್ಕೆ ಈವರೆಗೆ ಸ್ಪಂದನೆ ವ್ಯಕ್ತವಾಗಿಲ್ಲ ಎಂದರು. ಈ ಸಂದರ್ಭ ಗ್ರಾ.ಪಂ. ಪಿಡಿಒ ವಿಲ್ಫ್ರೇಡ್ ಲಾರೆನ್ಸ್ ರೊಡ್ರಿಗಸ್ ಮಾತನಾಡಿ, ಈ ಬಗ್ಗೆ ಕಳೆದ ಸಾಮಾನ್ಯ ಸಭೆಯಲ ನಿರ್ಣಯದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಬರೆದುಕೊಳ್ಳಲಾಗಿದೆ ಎಂದರು. ಆಗ ಅಬ್ದುರ್ರಹ್ಮಾನ್ ಕೆ. ಮಾತನಾಡಿ, ಕೇವಲ ನಿರ್ಣಯ ತೆಗೆದುಕೊಂಡರೆ ಮಾತ್ರ ಸಾಲದು. ಅದು ಕಾರ್ಯರೂಪಕ್ಕೆ ಬರಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಂದ ಜನರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಕೂಟೇಲು ಸೇತುವೆಯ ಹತ್ತಿರ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕುರುಚಲು ಗಿಡಗಳು ಬೆಳೆದು ಎದುರಿನಿಂದ ಬರುವ ವಾಹನಗಳು ಕಾಣದಂತಾಗಿದೆ ಇದರ ತೆರವಿಗೂ ಕೂಡಾ ಹೆದ್ದಾರಿ ಪ್ರಾಧಿಕಾರಕ್ಕೆ ಬರೆಯಿರಿ ಎಂದರು.
ಸದಸ್ಯೆ ಉಷಾ ಮುಳಿಯ ಮಾತನಾಡಿ, ತಾನು ಅಧ್ಯಕ್ಷ ಸ್ಥಾನದಲ್ಲಿದಾಗ ಬ್ಯಾಂಕ್ ರಸ್ತೆಯಲ್ಲಿ ವಾಹನಗಳಲ್ಲಿ ಅನಧಿಕೃತ ವ್ಯಾಪಾರ ನಡೆಸುತ್ತಿದ್ದರು. ಆದರೆ ಅಧ್ಯಕ್ಷ ಹುದ್ದೆ ಬದಲಾಗುತ್ತಿದ್ದಂತೆಯೇ ವಾಹನದಲ್ಲಿ ವ್ಯಾಪಾರವನ್ನು ಪ್ಲಾಸ್ಟಿಕ್ ಹೊದಿಕೆಯನ್ನು ಹಾಕಿ ಅಲ್ಲೇ ಅನಧಿಕೃತ ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ಪಾದಚಾರಿಗಳಿಗೆ ನಡೆದಾಡಲು ಕಷ್ಟವಾಗುತ್ತಿದೆ. ಈ ಬಗ್ಗೆ ಕ್ರಮ ಜರಗಿಸಬೇಕು ಎಂದರು. ಈ ಸಂದರ್ಭ ಸದಸ್ಯ ಅಬ್ದುರ್ರಹ್ಮಾನ್ ಕೆ. ಮಾತನಾಡಿ, ಅಧಿಕಾರ ಬದಲಾವಣೆಯಾದರೂ ಸರ್ವ ಸದಸ್ಯರ ಸಹಕಾರ ಸಿಕ್ಕಿದರೆ ಯಾವುದೇ ಕ್ರಮಕ್ಕೂ ಹಿಂದೇಟು ಹಾಕುವ ಪ್ರಶ್ನೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಸದಸ್ಯ ಸುರೇಶ್ ಅತ್ರೆಮಜಲು ಮಾತನಾಡಿ, ಹಳೆ ಬಸ್ ನಿಲ್ದಾಣದ ಸಮೀಪ ನೇತ್ರಾವತಿ ನದಿ ಬಳಿಯ ವಸತಿ ಸಮುಚ್ಛಯದ ತ್ಯಾಜ್ಯ ನೀರನ್ನು ನೇರವಾಗಿ ನದಿಗೆ ಬಿಡಲಾಗುತ್ತಿದೆ. ಇದರಿಂದ ನದಿ ಮಲೀನವಾಗುತ್ತಿದೆ ಎಂದರು. ಸದಸ್ಯ ಸಣ್ಣಣ್ಣ ಮಾತನಾಡಿ, 9(11)ಗೆ ಬಂದ ಅರ್ಜಿಯನ್ನು ಕ್ರಮ ಪ್ರಕಾರವಾಗಿ ವಿಲೇವಾರಿ ಮಾಡಲಾಗುತ್ತಿಲ್ಲ. ಹಿಂದಿನ ಅರ್ಜಿಗಳನ್ನು ಕೆಲವೊಮ್ಮೆ ಬಾಕಿ ಇರಿಸಿಕೊಂಡು ಆ ಮೇಲೆ ಬಂದ ಅರ್ಜಿಗಳನ್ನು ವಿಲೇವಾರಿ ಮಾಡಿದಂತಹ ಉದಾಹರಣೆಗಳು ಇವೆ ಎಂದರು. ಇದಕ್ಕೆ ಉತ್ತರ ನೀಡಿದ ಪಿಡಿಒ ವಿಲ್ಫ್ರೇಡ್ ಲಾರೆನ್ಸ್ ರೊಡ್ರಿಗಸ್ ಅವರು, ಈ ರೀತಿ ಆಗಲು ಕೆಲವು ಸದಸ್ಯರ ಒತ್ತಡವೇ ಕಾರಣ. ಅರ್ಜಂಟ್ ಇದೆ. ಅದನ್ನು ತುರ್ತಾಗಿ ಮಾಡಿಕೊಡಬೇಕು ಅನ್ನೋದು ನೀವೇ. ಹಾಗಾಗಿ ಹಾಗೆ ನೀಡಲಾಗುತ್ತದೆ. ಇನ್ನು ಮುಂದಕ್ಕೆ ಕ್ರಮ ಪ್ರಕಾರವಾಗಿಯೇ ಕೊಡುವುದು ಎಂದು ನೀವೇ ನಿರ್ಣಯ ಮಾಡಿ. ಆ ನಿಯಮವನ್ನೇ ಪಾಲಿಸೋಣ ಎಂದರು.
ಜೆಜೆಎಂನವರು ಪೈಪ್‌ಲೈನ್ ಹಾಕ್ಲಿಕ್ಕೆ ಗ್ರಾ.ಪಂ. ಕಟ್ಟಡದ ಆವರಣದ ಇಂಟರ್‌ಲಾಕ್ ಅನ್ನು ತೆಗೆದಿದ್ದಾರೆ. ಆದರೆ ಬಳಿಕ ಅದನ್ನು ಗ್ರಾ.ಪಂ.ನ 8,950 ರೂ. ಖರ್ಚು ಮಾಡಿ ಹಾಕಿದೆ. ಜೆಜೆಎಂನವರು ಅಗೆದಿರುವುದನ್ನು ಅವರೇ ಸರಿ ಮಾಡಿಕೊಡಬೇಕಲ್ಲವೇ ಎಂದು ಸದಸ್ಯರು ಪ್ರಶ್ನಿಸಿದರು. ಇದಕ್ಕೆ ಪಿಡಿಒ ಉತ್ತರಿಸಿ, ಅವರು ಹಾಕಿ ಕೊಡುವುದಿಲ್ಲ ಎಂದಿದ್ದಕ್ಕೆ ಅದನ್ನು ಗ್ರಾ.ಪಂ.ನ ದುಡ್ಡಿನಲ್ಲಿ ಹಾಕಲಾಗಿದೆ ಎಂದರು. ಆಗ ಅಬ್ದುರ್ರಹ್ಮಾನ್ ಕೆ. ಮಾತನಾಡಿ, ಈ ಕಾಮಗಾರಿ ಕೂಡಾ ಸರಿಯಾಗಿಲ್ಲ. ಇಂಟರ್‌ಲಾಕ್ ಮೇಲೆ ಗಾಡಿ ಹೋಗುವಾಗ ಅದು ಅಲ್ಲಾಡುತ್ತಿದೆ ಎಂದರು. ಈ ಬಗ್ಗೆ ಚರ್ಚೆಯಾಗಿ ಇನ್ನು ಮುಂದೆ ಪ್ರತಿ ಕಾಮಗಾರಿಯ ಬಿಲ್ ಮಾಡುವಾಗ ಆ ವಾರ್ಡ್‌ನ ಸದಸ್ಯರ ಗಮನಕ್ಕೆ ತರಬೇಕು ಎಂದು ಸದಸ್ಯರು ಪಿಡಿಒ ಅವರಿಗೆ ತಿಳಿಸಿದರು. ಮನೆಮನೆಗೆ ಶುದ್ಧ ಕುಡಿಯುವ ನೀರಿನ ಗುತ್ತಿಗೆ ಪಡೆದ ಜೆಜೆಎಂನ ಗುತ್ತಿಗೆದಾರರು ಎಲ್ಲಾ ವಾರ್ಡ್‌ಗಳಲ್ಲಿ ಅರ್ಧಂಬರ್ಧ ಕಾಮಗಾರಿ ನಡೆಸಿದ್ದಾರೆ. ತಕ್ಷಣ ಕಾಮಗಾರಿ ಮುಂದುವರಿಸಲು ಇವರಿಗೆ ತಿಳಿಸಲು ಸದಸ್ಯರು ಆಗ್ರಹಿಸಿದರು.
ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹೊಸಬರಾಗಿದ್ದು, ಅವರಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಾಗೂ ಪರಿಶೀಲಿಸಲು 5 ಜನರ ಕೋರ್‌ಕಮಿಟಿಯನ್ನು ರಚಿಸುವುದಾಗಿ ಸದಸ್ಯ ಮುಹಮ್ಮದ್ ತೌಸೀಫ್ ತಿಳಿಸಿದರು ಹಾಗೂ ಇನ್ನು ಮುಂದೆ ಸರಕಾರಿ ಸುತ್ತೋಲೆಗಳು ಬಂದಾಗ ಅದರ ಒಂದು ಪ್ರತಿಯನ್ನು ಅಧ್ಯಕ್ಷರ ಕೊಠಡಿಯಲ್ಲಿಡಲು ಅಬ್ದುರ್ರಹ್ಮಾನ್ ಕೆ. ಸಲಹೆ ನೀಡಿದರು. ಇತ್ತೀಚೆಗೆ ನಿಧನರಾದ ಗ್ರಾ.ಪಂ. ಮಾಜಿ ಸದಸ್ಯ ಹಾಜಿ ಮುಸ್ತಾಫ ಕೆಂಪಿ ಅವರಿಗೆ ಸಭೆಯ ಆರಂಭದಲ್ಲಿ ಸಂತಾಪ ಸೂಚಿಸಿ, ಒಂದು ನಿಮಿಷದ ಮೌನ ಪ್ರಾರ್ಥನೆ ನಡೆಸಲಾಯಿತು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ಉಷಾ ನಾಯ್ಕ, ರುಕ್ಮಿಣಿ, ವಿನಾಯಕ ಪೈ, ಧನಂಜಯ ಕುಮಾರ್, ಶೋಭಾ, ಇಬ್ರಾಹೀಂ ಯು.ಕೆ., ಮೈಸೀದ್ ಇಬ್ರಾಹೀಂ, ಜಯಂತಿ, ಅಬ್ದುಲ್ ರಶೀದ್, ವನಿತಾ, ನೆಬಿಸಾ, ಸೌಧ ಉಪಸ್ಥಿತರಿದ್ದು, ಸಲಹೆ ಸೂಚನೆ ನೀಡಿದರು. ಕಾರ್ಯದರ್ಶಿ ದಿನೇಶ ಸ್ವಾಗತಿಸಿ, ವಂದಿಸಿದರು.