ಫಿಲೋಮಿನಾ ಗಣೇಶೋತ್ಸವ 41ನೇ ವರ್ಷದ ಸಂಭ್ರಮ-ಸ್ವಯಂಪ್ರೇರಿತ ರಕ್ತದಾನ

0

ಪುತ್ತೂರು: ಸಂತ ಫಿಲೋಮಿನಾ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಮಿತ್ರರಿಂದ ಪ್ರಾರಂಭಿಸಲ್ಪಟ್ಟು ವಿದ್ಯಾರ್ಥಿ ಮಿತ್ರರಿಂದಲೇ ಅದ್ದೂರಿಯಾಗಿ ಆಚರಣೆಗೊಳ್ಳುತ್ತಿರುವ ಶ್ರೀ ಗಣೇಶೋತ್ಸವಕ್ಕೆ ಇದು ಸಂಭ್ರಮದ 41ನೇ ವರುಷ. ಈ ಕಾರ್ಯಕ್ರಮದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷ ಆ.28 ರಂದು ಪುತ್ತೂರು ರೋಟರಿ ಕ್ಲಬ್ ಆಶ್ರಯದೊಂದಿಗೆ ರೋಟರಿ ಬ್ಲಡ್ ಬ್ಯಾಂಕಿನಲ್ಲಿ ವಿದ್ಯಾರ್ಥಿ ಮಿತ್ರರಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯರವರು ಉದ್ಘಾಟಿಸಿ ಮಾತನಾಡಿ, ಪ್ರಮುಖ ದಾನಗಳಲ್ಲಿ ರಕ್ತದಾನವೂ ಶ್ರೇಷ್ಠ ದಾನವಾಗಿದೆ. ರಕ್ತದಾನ ಮಾಡುವುದರಿಂದ ನಾವು ಮತ್ತೊಬ್ಬರ ಜೀವ ಉಳಿಸುವುದರ ಜೊತೆಗೆ ನಮ್ಮ ಆರೋಗ್ಯದಲ್ಲೂ ಸದೃಢತೆ ಕಾಣುವುದು. ಫಿಲೋಮಿನಾ ವಿದ್ಯಾಸಂಸ್ಥೆಯ ಶ್ರೀ ಗಣೇಶೋತ್ಸವ ಸಮಿತಿಯು ವರ್ಷಂಪ್ರತಿ ರಕ್ತದಾನ ಶಿಬಿರವನ್ಬು ಆಯೋಜಿಸುತ್ತಾ ಬಂದಿರುವುದು ಶ್ಲಾಘನೀಯ ಎಂದರು.
ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿ ಸ್ವಾಗತಿಸಿ ಮಾತನಾಡಿ, ರೋಟರಿ ಪುತ್ತೂರು ಕ್ಲಬ್ ನ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಬ್ಲಡ್ ಬ್ಯಾಂಕ್ ಎಂಬುದು ಕೂಡ ಒಂದು. ಹಿಂದಿನ ದಿನಗಳಲ್ಲಿ ವ್ಯಕ್ತಿಗೆ ರಕ್ತದ ಅವಶ್ಯಕತೆ ಬಿದ್ದಾಗ ದೂರದ ಮಂಗಳೂರನ್ನು ಆಶ್ರಯಿಸಬೇಕಿತ್ತು. ಯಾವಾಗ ಪುತ್ತೂರಿನಲ್ಲಿ ಬ್ಲಡ್ ಬ್ಯಾಂಕ್ ಉದಯಿಸಿತೋ ಆವಾಗಿನಿಂದ ಇಂದಿನವರೆಗೆ ಮಾತ್ರವಲ್ಲ ಮುಂದಿನ ದಿನಗಳಲ್ಲೂ ಪುತ್ತೂರು ಹಾಗೂ ಆಸುಪಾಸಿನ ಜನತೆಗೆ ಇದರಿಂದ ಬಹಳ ಪ್ರಯೋಜನವಾಗಿದೆ ಎಂದರು.
ಬ್ಲಡ್ ಬ್ಯಾಂಕಿನ ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್ ರವರು ರಕ್ತದಾನದ ಮಹತ್ವ, ರಕ್ತದ ವಿಂಗಡಣೆ ಮುಂತಾದ ಕುರಿತು ಮಾತನಾಡಿದರು. ರೋಟರಿ ಕ್ಲಬ್ ಪುತ್ತೂರು ಸದಸ್ಯ ಎಂ.ಗಂಗಾಧರ್ ರೈರವರು ಸಂದರ್ಭೋಚಿತವಾಗಿ ಮಾತನಾಡಿದರು. ಶ್ರೀ ಗಣೇಶೋತ್ಸವ ಉತ್ಸವ ಸಮಿತಿ ಅಧ್ಯಕ್ಷರಾದ ವಿಕ್ರಂ ಆಳ್ವ ವಂದಿಸಿ, ಜೊತೆ ಕಾರ್ಯದರ್ಶಿ ರಕ್ಷಾ ಅಂಚನ್ ಕಾರ್ಯಕ್ರಮ ನಿರೂಪಿಸಿದರು‌.

41ರ ಸಂಭ್ರಮ..41 ಮಂದಿ ರಕ್ತದಾನ..
ಶ್ರೀ ಗಣೇಶೋತ್ಸವದ ಪ್ರಯುಕ್ತ ವರ್ಷಂಪ್ರತಿ ನಡೆಯುವ ರಕ್ತದಾನ ಶಿಬಿರದಂತೆ ಈ ಬಾರಿಯೂ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಸುಮಾರು 75 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ 41 ಮಂದಿ ವಿದ್ಯಾರ್ಥಿ ಮಿತ್ರರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಶಿಬಿರದ ಕಳೆಯನ್ನು ಹೆಚ್ಚಿಸಿದ್ದರು. ವಿಶೇಷ ಏನೆಂದರೆ ಶ್ರೀ ಗಣೇಶೋತ್ಸವಕ್ಕೆ 41ರ ಸಂಭ್ರಮವಾಗಿದ್ದು 41 ಮಂದಿ ಉತ್ಸಾಹಿ ಯುವಕರು ರಕ್ತದಾನ ಮಾಡಿರುವುದು ಕಾಕತಾಳೀಯವೆನಿಸಿದೆ.

ರಕ್ತದಾನ ಶಿಬಿರ ಯಶಸ್ವಿ..
ದರ್ಬೆ ವಿನಾಯಕ ನಗರದಲ್ಲಿ ವರ್ಷಂಪ್ರತಿ ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿರುವ ಫಿಲೋಮಿನಾ ಶ್ರೀ ಗಣೇಶೋತ್ಸವಕ್ಕೆ ಕಳೆದ 40 ವರ್ಷಗಳಿಂದಲೂ ಭಕ್ತರು, ಫಿಲೋಮಿನಾ ಶ್ರೀ ಗಣೇಶೋತ್ಸವ ಟ್ರಸ್ಟ್ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಪ್ರಸಕ್ತ ವಿದ್ಯಾರ್ಥಿಗಳು ಪ್ರೋತ್ಸಾಹಿಸಿಕೊಂಡು ಬಂದಿರುವುದು ಶ್ಲಾಘನೀಯ. ಇದೀಗ ಗಣೇಶೋತ್ಸವದ ಪ್ರಯುಕ್ತ ಹಮ್ಮಿಕೊಂಡ ರಕ್ತದಾನ ಶಿಬಿರವೂ ಕೂಡ ಯಶ್ವಸ್ವಿಯಾಗಿ ಆಗಿರುವುದು ಖುಶಿ ತಂದಿದೆ. ಮುಂದಿನ ದಿನಗಳಲ್ಲಿ ನಡೆಯುವ ವಿಘ್ನ ವಿನಾಯಕನ ಹಬ್ಬವನ್ನು ಯಶಸ್ವಿಯಾಗಿ ಆಚರಿಸಲು ಸರ್ವರ ಸಹಕಾರ ಕೋರುತ್ತೇನೆ.
-ಪ್ರಕಾಶ್ ಮುಕ್ರಂಪಾಡಿ,
ಗೌರವಾಧ್ಯಕ್ಷರು,
ಶ್ರೀ ಗಣೇಶೋತ್ಸವ ಸಮಿತಿ

LEAVE A REPLY

Please enter your comment!
Please enter your name here