ಸೌಜನ್ಯ ಪ್ರಕರಣ ಮರು ತನಿಖೆಗೆ ಒತ್ತಾಯಿಸಿ ಪುತ್ತೂರಿನಲ್ಲಿ ಜನಜಾಗೃತಿ ಸಭೆ

0

ಬಂದ್, ರಸ್ತೆ ತಡೆಯಿಲ್ಲದೆ ನಡೆದ ಮೆರವಣಿಗೆ, ಜಾಗೃತಿ ಸಭೆ
ದಯವಿಟ್ಟು ಬಂಧುಗಳೇ ಸತ್ಯದ ಹೋರಾಟದಲ್ಲಿ ಕೈ ಜೋಡಿಸಿ-ಮಹೇಶ್ ಶೆಟ್ಟಿ ತಿಮರೋಡಿ ಮನವಿ

ಪುತ್ತೂರು:11 ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಕು.ಸೌಜನ್ಯ ಅವರ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸುವ ಮೂಲಕ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಲು ಪ್ರಕರಣವನ್ನು ಮರುತನಿಖೆ ಮಾಡಬೇಕು ಮತ್ತು ನಿರ್ದೋಷಿ ಸಂತೋಷ್ ರಾವ್ ಅವರಿಗಾದ ನಷ್ಟವನ್ನು ಭರಿಸಿ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಪುತ್ತೂರಿನಲ್ಲಿ ಅಭಿನವ ಭಾರತ ಮಿತ್ರ ಮಂಡಳಿ ಪುತ್ತೂರು ಮತ್ತು ಪ್ರಜಾಪ್ರಭುತ್ವ ವೇದಿಕೆ ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ಆ.28ರಂದು ಜನಜಾಗೃತಿ ಸಭೆ ನಡೆಯಿತು.


ಸಂಜೆ ಪುತ್ತೂರು ದರ್ಬೆಯಿಂದ ಎಲ್ಲರೂ ಸೇರಿ ಕಾಲ್ನಡಿಗೆಯಲ್ಲಿ ಮೆರವಣಿಗೆ ಮೂಲಕ ಮುಖ್ಯರಸ್ತೆಯಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥ ಬೀದಿಯ ಮೂಲಕ ಪುತ್ತೂರು ನೆಲ್ಲಿಕಟ್ಟೆಯಲ್ಲಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಬಂದು ಸೇರಿಕೊಂಡರು.ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಅಲ್ಲಿ ಬೃಹತ್ ಜನಜಾಗೃತಿ ಸಭೆ ನಡೆಯಿತು.ಮೆರವಣಿಗೆ ಸಂದರ್ಭ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಬಾರದು ಎಂದು ದರ್ಬೆ ನಿರೀಕ್ಷಣಾ ಮಂದಿರ ಬಳಿಯಲ್ಲಿ ಎಲ್ಲರು ಸೇರಿಕೊಂಡು ಅಲ್ಲಿಂದ ದರ್ಬೆ ವೃತ್ತದಲ್ಲಿ ಕಾಲ್ನಡಿಗೆ ಮೆರವಣಿಗೆ ಜಾಥಾಕ್ಕೆ ಚಾಲನೆ ನೀಡಲಾಯಿತು. ಗೌಡ ಸಂಘದ ಬೆಂಬಲ ಘೋಷಿಸಿತ್ತು. ಮಾಜಿ ಶಾಸಕ ಸಂಜೀವ ಮಠಂದೂರು, ಚಿದಾನಂದ ಬೈಲಾಡಿ, ಶ್ರೀಕೃಷ್ಣ ಉಪಾಧ್ಯಾಯ, ಸಹಿತ ಸಾವಿರಾರು ಮಂದಿ ಉಪಸ್ಥಿತರಿದ್ದರು. ಕಾಲ್ನಡಿಗೆ ಮೆರವಣಿಗೆ ಮುಖ್ಯರಸ್ತೆಯಲ್ಲಿ ಸಾಗಿ ಪುತ್ತೂರು ಪ್ರಧಾನ ಅಂಚೆಕಚೇರಿಯ ಮುಂದೆ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ದೇವಳದ ರಥಬೀದಿಯಲ್ಲಿ ಸಾಗಿ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದಲ್ಲಿ ಸಿದ್ಧಗೊಂಡ ಜನಜಾಗೃತಿ ಸಭೆಗೆ ತೆರಳಿತು.ದೇವಳದಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯವರಿಗೆ ಶಾಲು ಹೊದಿಸಿ ಗೌರವಿಸಲಾಯಿತು.


ದಯವಿಟ್ಟು ಬಂಧುಗಳೇ ಸತ್ಯದ ಹೋರಾಟದಲ್ಲಿ ಕೈ ಜೋಡಿಸಿ:
ಜನಜಾಗೃತಿ ಸಭೆಯನ್ನು ಉದ್ಘಾಟಿಸಿ, ಭಾರತ ಮಾತೆಯ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಪ್ರಜಾಪ್ರಭುತ್ವ ವೇದಿಕೆಯ ಮಹೇಶ್ ಶೆಟ್ಟಿ ತಿಮರೋಡಿ ಅವರು ಮಾತನಾಡಿ ಸೌಜನ್ಯನಿಗೆ ಆದ ಅನ್ಯಾಯಕ್ಕೆ ನ್ಯಾಯದೊರಕಿಸಿ ಕೊಡಲು ದಯವಿಟ್ಟು ಬಂಧುಗಳೆಲ್ಲಾ ಸತ್ಯದ ಹೋರಾಟದಲ್ಲಿ ಕೈ ಜೋಡಿಸಿ.ಮುಂದಿನ ದಿನ ಪುತ್ತೂರಿನಲ್ಲಿ ಹೋರಾಟ ಪ್ರಾರಂಭ ಆಗಲಿದೆ.ತಾ.ಪಂ.,ಜಿ.ಪಂ ವ್ಯಾಪ್ತಿಯಲ್ಲಿ ಕೂಡಾ ಹೋರಾಟ ಪ್ರಾರಂಭವಾಗಲಿದೆ.ಮುಂದೆ ಸೆ.3ಕ್ಕೆ ರಾಜ್ಯದ, ರಾಷ್ಟ್ರದ ಭ್ರಷ್ಟ ವ್ಯವಸ್ಥೆಯ ಅಧಿಕಾರಿಗಳ ವಿರುದ್ದ, ನಮ್ಮ ಕೂಗು ಕೇಳಿಸದ ಪ್ರಧಾನಿ ಮೋದಿ, ಗೃಹಮಂತ್ರಿ ಅಮಿತ್ ಶಾ, ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಈಗಾಗಲೇ ನನಗೇನೂ ಗೊತ್ತಿಲ್ಲ ಎಂದು ಹೇಳಿಕೆ ನೀಡುತ್ತಿರುವ ರಾಜ್ಯ ಗೃಹಸಚಿವರ ಕಣ್ಣು ತೆರಸುವ ಕೆಲಸವನ್ನು ಮಾಡಲಿದ್ದೇವೆ ಎಂದು ಹೇಳಿದರು.ಇವತ್ತು ಆರೋಪಿಗಳ ತಪ್ಪು ನೂರು ದಾಟಿದೆ.ಇನ್ನು ಅವಕಾಶವಿಲ್ಲ.ಇನ್ನು ಮುಂದೆ ಏನು ಮಾಡಿದರೂ ಅವರ ವಿರುದ್ಧವೇ ನಡೆಯುವುದು ಹೊರತು ಅವರ ಪರವಾಗಿ ದೇವರುಗಳೂ ನಿಲ್ಲುವುದಿಲ್ಲ.ಯಾಕೆಂದರೆ ಈ ಶಕ್ತಿವಂತರ,ನ್ಯಾಯವಂತರ ಕಣ್ಣೀರ ಶಾಪ ಅವರನ್ನು ಬಿಡುವುದಿಲ್ಲ.ಯಾಕೆಂದರೆ ಇದು ಸತ್ಯದ ಹೋರಾಟ.ನಾನು ಇವತ್ತು ಹೋರಾಟ ಮಾಡಲು ಸೌಜನ್ಯ ಕಾರಣ.ಇವತ್ತು ಕೇವಲ ಒಂದು ಹೆಣ್ಣಿಗೆ ನ್ಯಾಯವಲ್ಲ. ಇನ್ನು ಬೇರೆ ಹೆಣ್ಣುಮಕ್ಕಳಿಗೂ ಅನ್ಯಾಯವಾಗಬಾರದು.ಶೇ.40 ಧರ್ಮ, ಶೇ.60 ಅಧರ್ಮ ಆಗಿದೆ.ನಮಗೆ ಧರ್ಮ ಹಾಳು ಮಾಡುವ ಚಿಂತನೆ ಇಲ್ಲ.ನ್ಯಾಯಪೀಠದಲ್ಲಿ ನ್ಯಾಯ ಸಿಗಬೇಕು. ಧರ್ಮಪೀಠದಲ್ಲಿ ಧರ್ಮ ಉಳಿಯಬೇಕು. ಇದರೊಂದಿಗೆ ತಾಯಿಗೆ ನ್ಯಾಯ ಸಿಗಬೇಕು.ಸೌಜನ್ಯ ಅತ್ಯಾಚಾರ, ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು.ಅದರ ಹಿಂದಿರುವ ಕಾಮಾಂಧರಿಗೂ ಪೂರ್ಣ ಶಿಕ್ಷೆ ಆಗಬೇಕೆಂದು ಒಕ್ಕೊರಳ ಬೇಡಿಕೆಯಿದೆ ಎಂದರು.


ಇನ್ನು ತನಿಖೆ ಮಾಡುವುದು ನಾವು :
ಸೌಜನ್ಯ ನಾಪತ್ತೆಯಾದಾಗ ಪೊಲೀಸ್ ಅಧಿಕಾರಿ ಯೋಗೀಶ್ ಅವರ ಜೊತೆಯಲ್ಲಿದ್ದ, ಪುತ್ತೂರಿನವರೇ ಆಗಿರುವ ಒಬ್ಬ ಪೊಲೀಸ್ ಮೊನ್ನೆ ಮೊನ್ನೆ ಜೂ.16ರ ಬಳಿಕ ನಮ್ಮ ಹುಡುಗನಲ್ಲಿ ಸಂತೊಷ್ ರಾವ್ ಅವರೇ ಕೊಲೆ ಮಾಡಿರುವುದು.ಅಲ್ಲಿ ಅವತ್ತು ಮಳೆಯೂ ಇರಲಿಲ್ಲ.ನೀರು ಕೂಡಾ ಇರಲಿಲ್ಲ ಎಂದು ಫೋನ್ ಮಾಡಿ ತಿಳಿಸಿದ್ದಾರೆ.ಹಾಗಾದರೆ ಸಿಬಿಐ ತನಿಖೆಯಲ್ಲಿರುವ ಮಳೆ ಬಂದಿರುವ ವರದಿ ಸುಳ್ಳಾಗಿದೆ ಎಂದಾಯಿತು.ಪೊಲೀಸ್ ಈ ರೀತಿ ಮಾತನಾಡಿರುವುದರಿಂದ ನಮಗೆ ಸಂಶಯ ಕಾಡುತ್ತದೆ.ಅವರು ನಾಲ್ಕು ಮಂದಿಯ ವಿಚಾರವನ್ನು ತಾಳೆ ಮಾಡುವಾಗ ಆರೋಪಿಗಳು ಇಲ್ಲೇ ಇದ್ದಾರೆ ಎಂಬುದು ಸ್ಪಷ್ಟವಾಗಿದೆ.ಆರೋಪಿಗಳು ನಮ್ಮ ಮಧ್ಯೆ ಇದ್ದಾರೆ. ಹಾಗಾಗಿ ಇನ್ನು ತನಿಖೆ ಮಾಡುವುದು ನಾವು.ಬಳಿಕ ಆ ಪಾಪಿಗಳನ್ನು ಪೋಸ್ಟ್ ಮಾರ್ಟಂ ಮಾಡುವುದು.ಯಾಕೆಂದರೆ ಸೌಜನ್ಯ ಮಗುವನ್ನು ಕೊಂದ ಪಾಪಿಗಳಿಗೆ ಈ ದೇಶದ ಕಾನೂನು ಶಿಕ್ಷೆ ಕೊಡುವುದಿಲ್ಲ ಎಂದು ಅನಿಸುತ್ತಿದೆ.ಅದರಲ್ಲಿದ್ದ ಎಲ್ಲಾ ಸಾಕ್ಷಿಗಳನ್ನು ಒಂದು ಪಾಯಿಂಟ್ ಇಲ್ಲದೆ ಪೂರ್ತಿ ನಾಶಪಡಿಸಲಾಗಿದೆ ಎಂದು ತಿಮರೋಡಿ ಹೇಳಿದರು.


ನ್ಯಾಯ ಕೊಡಿಸುವಂತೆ ಕೈ ಮುಗಿದು ಕೇಳುತ್ತೇನೆ:
ಸೌಜನ್ಯ ಅವರ ತಾಯಿ ಕುಸುಮಾವತಿ ಅವರು ಮಾತನಾಡಿ ನಾನು ನನ್ನ ಮಗಳಿಗೆ ನ್ಯಾಯ ಕೊಡಿಸಬೇಕೆಂದು ನಿಮ್ಮಲ್ಲಿ ಕೈ ಮುಗಿದು ಕೇಳುತ್ತೇನೆ ಎಂದು ಹೇಳಿ, ಇವತ್ತು ನನ್ನ ಮಗಳಿಗೆ ಆದ ಅನ್ಯಾಯ ಇನ್ಯಾವ ಹೆಣ್ಣು ಮಕ್ಕಳಿಗೂ ಆಗದಿರಲಿ ಎಂದು ನಾನು ಹೋರಾಟಕ್ಕೆ ಬಂದಿದ್ದೇನೆ.ನಿನ್ನೆ ನಡೆದ ಬಿಜೆಪಿಯ ಪ್ರತಿಭಟನೆಗೂ ನಾನು ಹೋಗಿದ್ದೆ.ಅಲ್ಲಿ ಭಾಷಣದಲ್ಲಿ ಈ ಹಿಂದೆಯೂ ನಿಮ್ಮಲ್ಲಿ ನ್ಯಾಯ ಕೇಳಿದ್ದೆ.ಆದರೆ ನನಗೆ ಬೆಂಬಲ ಸಿಗಲಿಲ್ಲ.ನಿಮಗೆ ತಾಕತ್ತಿದ್ದರೆ ನನ್ನನ್ನು ಮೋದಿಯವರ ಬಳಿಗೆ ಕರೆದುಕೊಂಡು ಹೋಗಿ ಎಂದು ಹೇಳಿದ್ದೆ.ಅದಕ್ಕೆ ಕರೆದುಕೊಂಡು ಹೋಗಲು ಅವರು ಒಪ್ಪಿಕೊಂಡಿದ್ದಾರೆ ಎಂದರು.ತಮ್ಮ ಇಬ್ಬರು ಪುತ್ರಿಯರು ಹಾಗೂ ಪುತ್ರನೊಂದಿಗೆ ವೇದಿಕೆಯಲ್ಲಿದ್ದ ಅವರು ತಮಗೆ ನ್ಯಾಯ ಕೊಡಿಸುವಂತೆ ಕೈಮುಗಿದು ಕೇಳಿಕೊಂಡರು.

ಸನ್ಮಾನ:
ಸೌಜನ್ಯ ಪ್ರಕರಣದಲ್ಲಿ ಸಂತೋಷ್ ರಾವ್ ಅವರ ಕೇಸ್ ನಡೆಸಿರುವ ನ್ಯಾಯವಾದಿಗಳಾದ ನವೀನ್ ಪದ್ಯಾಣ, ಮೋಹಿತ್ ಅವರನ್ನು ಅಭಿನವ ಭಾರತ ಮಿತ್ರ ಮಂಡಳಿಯಿಂದ ಗೌರವಿಸಲಾಯಿತು.


ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ, ಹಿಂದು ಜಾಗಣರ ವೇದಿಕೆ ತಾಲೂಕು ಸಂಚಾಲಕ ದಿನೇಶ್ ಪಂಜಿಗ, ಹಿಂದು ಜನ ಜಾಗೃತಿ ಸಮಿತಿಯ ಹರಿಪ್ರಸಾದ್ ನೆಲ್ಲಿಕಟ್ಟೆ, ಯುವ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ವಲಯ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ, ಮೋಹಿನಿ ರೈ ಅತಿಥಿಗಳನ್ನು ಗೌರವಿಸಿದರು.ಶಿಲ್ಪಾಶ್ರೀ ಪ್ರಾರ್ಥಿಸಿದರು.ಅಭಿನವ ಭಾರತ ಮಿತ್ರ ಮಂಡಳಿಯ ಪ್ರವರ್ತಕ ಧನ್ಯ ಕುಮಾರ್ ಬೆಳಂದೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಮೆರವಣಿಗೆಯುದ್ದಕ್ಕೂ ಮನ್ಮಥ ಶೆಟ್ಟಿ ತೆರದ ವಾಹನದಲ್ಲಿ ಉದ್ಘೋಷಕರಾಗಿ ಸಹಕರಿಸಿದರು. ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು.


`ನಮ್ಮ ಪ್ರಶ್ನೆಗಳಿಗೆ ತನಿಖಾಧಿಕಾರಿಗಳಿಂದ ಉತ್ತರವಿಲ್ಲ’
ಸೌಜನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ಪರ ವಕಾಲತ್ತು ಮಾಡಿ, ಆತ ನಿರ್ದೋಷಿಯೆಂದು ಬಿಡುಗಡೆಯಾಗಲು ಕಾರಣಕರ್ತರಾದ ನ್ಯಾಯವಾದಿ ಮೋಹಿತ್ ಕುಮಾರ್ ಅವರು ಮಾತನಾಡಿ, ನ್ಯಾಯಾಲಯದಲ್ಲಿ ನಮ್ಮ ಪ್ರಶ್ನೆಗೆ ತನಿಖಾಧಿಕಾರಿಗಳಿಂದ ಉತ್ತರವೇ ಇಲ್ಲ.ಈ ಕುರಿತು ನ್ಯಾಯಾಧೀಶರು 143 ಪ್ಯಾರಾದಲ್ಲಿ ಜಡ್ಜ್ ಮೆಂಟ್ ಬರೆದಿದ್ದಾರೆ.ಅದನ್ನು 2 ಪ್ಯಾರಾದಲ್ಲಿ ಬ್ರೀಫ್ ಆಗಿ ಕೊಟ್ಟಿದ್ದಾರೆ.ಮುಂದೆ ಹೈಕೋರ್ಟ್ ನಿರ್ದೇಶನದಂತೆ ರಿಟ್ ಅಪೀಲು ಹಾಕಬೇಕು.ಆದರೆ ಸಂತೋಷ್ ರಾವ್ ಅವರಿಗೆ ಪರಿಹಾರ ಒದಗಿಸಬೇಕಾದರೆ ಬೇರೆ ಆರೋಪಿ ಸಿಗಬೇಕು.ಹೀಗೆ 2016ರಿಂದ 23ರ ತನಕ ಸಂತೋಷ್ ರಾವ್ ಅವರ ಪರವಾಗಿ ಕೆಲಸ ಮಾಡುವ ಮೂಲಕ ಮಹೇಶ್ ಶೆಟ್ಟಿಯವರ ಜೊತೆ ಅಳಿಲ ಸೇವೆ ಮಾಡಲು ಅವಕಾಶ ದೊರಕಿದೆ ಎಂದರು.

ಆಳುವವರು ಮಾಡಿದ ದೊಡ್ಡ ಅನಾಹುತ
ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿದ ಮಹೇಶ್ ಶೆಟ್ಟಿ ತಿಮರೋಡಿ ಅವರು, ರಾಜಕೀಯದವರ ಶಕ್ತಿಯಿಂದಲೇ 11 ವರ್ಷ ಈ ಪ್ರಕರಣವನ್ನು ಜಠಿಲ ರೀತಿಗೆ ತರಲಾಗಿದೆ.ಇದು ಆಳುವವರು ಮಾಡಿದ ದೊಡ್ಡ ಅನಾಹುತ.ಪ್ರಕರಣವನ್ನು ಮುಚ್ಚಿಸಲು ನೋಡಿದ್ದು ರಾಜಕೀಯದವರು.ನಾವು ಅವರಲ್ಲಿ ಬೇಡುವುದು ಇಷ್ಟೆ. ನಿಮ್ಮ ಕೈಯಿಂದಲೇ ಮುಚ್ಚಿಸಲು ನೋಡಿದ್ದ ಪ್ರಕರಣ ನಿಮ್ಮ ಕೈಯಿಂದಲೇ ಓಪನ್ ಆಗಬೇಕು.ಪ್ರಜೆಯೇ ದೇವರು ಎಂದು ಓಟಿಗಾಗುವಾಗ ಮಾತ್ರ ಹೇಳುವುದಲ್ಲ.ಪ್ರತಿ ಸಂದರ್ಭದಲ್ಲೂ ಪ್ರಜೆಗಳು ದೇವರು.ಇವತ್ತು ದಕ್ಷಿಣ ಕನ್ನಡ ಮಾತ್ರವಲ್ಲ ಇಡೀ ದೇಶದಲ್ಲಿ ಇದರ ವ್ಯವಸ್ಥೆ ಆಗುತ್ತಿದೆ.ರಾಜಕೀಯಕ್ಕೆ 5 ವರ್ಷ ಮಾತ್ರ ಶಕ್ತಿ.ಜನರಿಗೆ ನಿರಂತರ ಶಕ್ತಿ ಇದೆ.ಅಪ್ರಾಪ್ತ ಬಾಲಕಿಯ ಅತ್ಯಾಚಾರ,ಕೊಲೆ ಪ್ರಕರಣಕ್ಕೆ ನ್ಯಾಯಪೀಠದಲ್ಲಿ ನ್ಯಾಯ ಸಿಗದಿದ್ದರೆ ಸನಾತನ ಹಿಂದು ಧರ್ಮ ನಾಶವಾಗಿ ಹೋಗುತ್ತದೆ.ದೊಡ್ಡ ದೊಡ್ಡ ಮಾಧ್ಯಮಗಳು ಇನ್ನೂ ಕೂಡಾ ನಿದ್ದೆ ಮಾಡುತ್ತಿವೆ.ಸತ್ಯವನ್ನು ಬರೆಯಿರಿ ಸಮಾಜದ ಕಣ್ಣು ತೆರೆಸಿ. ಮೊನ್ನೆ ಮೊನ್ನೆ ಕುಂದಾಪುರದಲ್ಲಿ ಆದ ಸಭೆಯ ವರದಿ ದೊಡ್ಡ ದೊಡ್ಡ ಮಾಧ್ಯಮದಲ್ಲಿ ಇಲ್ಲವೇ ಇಲ್ಲ.ಯಾಕೆ ನೀವೆಲ್ಲ ಬಕೆಟ್‌ಗಳ ಎಂದು ಪ್ರಶ್ನಿಸಿದರಲ್ಲದೆ, ನಮಗೆ ಸಣ್ಣ ಸಣ್ಣ ಮಾಧ್ಯಮದವರೇ ಸಾಕು ರಾಷ್ಟ್ರವನ್ನೇ ಎದ್ದೇಳಿಸಲು.ನಮ್ಮದು ತಪ್ಪಿದ್ದರೆ ಅದನ್ನೂ ಬರೆಯಿರಿ ಎಂದರು.

ನ್ಯಾಯವಾದಿ ಮೋಹಿತ್ ಕುಮಾರ್

ಸಂತೋಷ್ ರಾವ್ ಪರ ವಾದಿಸಿದ್ದ ನ್ಯಾಯವಾದಿ ಮೋಹಿತ್ ಕುಮಾರ್ ನ್ಯಾಯವಾದಿ ಮೋಹಿತ್ ಕುಮಾರ್ ಅವರು ಮಾಡಿರುವ ಭಾಷಣದ ಸಂಪೂರ್ಣ ವೀಡಿಯೋ ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್‌ನಲ್ಲಿದೆ.

LEAVE A REPLY

Please enter your comment!
Please enter your name here