*ರೂ. 3.22 ಕೋಟಿ ನಿವ್ವಳ ಲಾಭ – ಸದಸ್ಯರಿಗೆ 15% ಡಿವಿಡೆಂಡ್ ಘೋಷಣೆ
*ಸಂಸ್ಥೆಯ ಉದ್ದೇಶ ಸಮಾಜದ ಉನ್ನತಿ: ಒಡಿಯೂರು ಶ್ರೀ
ವಿಟ್ಲ:ಆನಂದ ಮತ್ತು ಸಂತೋಷ ಎರಡು ಕಣ್ಣುಗಳಿದ್ದಂತೆ. ಸಂಸ್ಥೆಯ ಬೆಳವಣಿಗೆಯಲ್ಲಿ ವ್ಯಕ್ತಿ ದೊಡ್ಡದಲ್ಲ ಸಂಘಟನೆ ದೊಡ್ಡದು. ಸಂಸ್ಥೆಯ ಉzಶ ಸಮಾಜದ ಉನ್ನತಿ. ಅದನ್ನು ಸರಿಯಾಗಿ ಬಳಸಿಕೊಂಡಾಗ ಬೆಳವಣಿಗೆ ಸಾಧ್ಯ. ಸಹಕಾರಿಯ ಜೀವಾಳ ಗ್ರಾಹಕರು. ಸಿಬ್ಬಂದಿಗಳು ಸೇವಾ ಮನೋಭಾವದಿಂದ ತೊಡಗಿಸಿಕೊಂಡಿರುವುದರಿಂದ ಸಂಸ್ಥೆ ಏಳಿಗೆಗೆ ಪೂರಕವಾಗಿದೆ. ಆರ್ಥಿಕ ವ್ಯವಸ್ಥೆಯ ಸಂಸ್ಥೆ ಆರಂಭಗೊಂಡು 12 ವರುಷವಾಗಿದೆ. ಸಂಸ್ಥೆ ಯಶಸ್ಸಾಗಿ ನಡೆಯುತ್ತಿರುವುದು ಸಂತಸತಂದಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಆ.27ರಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 2022-23ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಾನೂನು ಬದ್ದವಾಗಿ ಸಂಸ್ಥೆಯಲ್ಲಿ ವ್ಯವಹಾರ ನಡೆಯುತ್ತಿದೆ. ಅರ್ಥ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆಯ ಅಗತ್ಯವಿದೆ. ಪಾರದರ್ಶಕತೆಯನ್ನು ಬೆಳೆಸಿದಾಗ ಸಂಸ್ಥೆಯ ಜೊತೆಗೆ ಸಮಾಜವು ಬೆಳೆಯುತ್ತದೆ. ಸವಾಲುಗಳನ್ನು ಎದುರಿಸಿಕೊಂಡು ಹೋಗುವ ಜಾಣ್ಮೆ ನಮ್ಮಲ್ಲಿರಬೇಕು. ಸವಾಲುಗಳಿಗೆ ಒಂದೇ ಉತ್ತರ ಆಧ್ಯಾತ್ಮ. ವಿಜ್ಞಾನ ಮತ್ತು ಆಧ್ಯಾತ್ಮ ಮೇಳೈಸಿದೆ. ಸೋಲು ಸೋಲಲ್ಲ ಗೆಲುವಿನ ಸೋಪಾನ. ಆತ್ಮ ವಿಶ್ವಾಸವನ್ನು ತುಂಬುವ ಕೆಲಸ ಮಾಡಿದಾಗ ಸಂಸ್ಥೆಗೆ ಯಶಸ್ಸಾಗುತ್ತದೆ. ಧರ್ಮ ಪ್ರಜ್ಞೆ ನಮ್ಮಲ್ಲಿದ್ದರೆ ಯಶಸ್ಸು ಸಾಧ್ಯ. ಯಶಸ್ಸಿನ ಕೀಲಿಕೈ ಶ್ರದ್ದೆಯಲ್ಲಿ ಅಡಗಿದೆ. ಶ್ರದ್ದೆ ಇರುವುದು ಸಂಸ್ಥೆ ಬೆಳವಣಿಗೆಗೆ ಪೂರಕ. ಸಂಸ್ಥೆಯನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆತ್ಮನಿಷ್ಟವಾದ ಸಂಸ್ಕೃತಿ ನಮ್ಮದಾಗಿರುವುದರಿಂದ ಬದುಕಿ ಬಾಳಲು ಅವಕಾಶವಿದೆ ಎಂದರು.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ರೈ ಮಾತನಾಡಿ, ಸಹಕಾರಿ 19 ಶಾಖೆಗಳ ಮೂಲಕ ಕಾರ್ಯ ನಿರ್ವಹಿಸುತ್ತಿದ್ದು, 2022-23ನೇ ಸಾಲಿನಲ್ಲಿ 250.01ಕೋಟಿ ಠೇವಣಿ ಹೊಂದಿ, 182.75ಕೋಟಿ ರೂ.ಗಳ ಸಾಲ ನೀಡಲಾಗಿದೆ. ವರದಿ ವರ್ಷದಲ್ಲಿ 432.76ಕೋಟಿ ವ್ಯವಹಾರವನ್ನು ನಡೆಸಿ, 3.22 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ. ಗ್ರಾಮೀಣ ಪ್ರದೇಶದ ಬಡ ಜನರು ಸ್ವಾವಲಂಬಿಗಳಾಬೇಕೆಂಬ ಪೂಜ್ಯಶ್ರೀಗಳ ಕಲ್ಪನೆಯ ಕೂಸಾದ ಗ್ರಾಮ ವಿಕಾಸ ಯೋಜನೆಯ ಎಲ್ಲಾ ಆರ್ಥಿಕ ಚಟುವಟಿಕೆಯನ್ನು ಸಹಕಾರಿಯ ಮೂಲಕ ಮಾಡಿಕೊಂಡು ಬರಲಾಗುತ್ತಿದೆ. ಸದಸ್ಯರಿಗೆ ಶೇ.15ರ ಡಿವಿಡೆಂಡ್ ನೀಡಲಾಗುವುದು ಎಂದು ತಿಳಿಸಿದರು.
ಸಾಧ್ವಿ ಮಾತಾನಂದಮಯೀ ದಿವ್ಯ ಸಾನಿಧ್ಯ ವಹಿಸಿದ್ದರು. ಸಂಘದ ನಿರ್ದೇಶಕರಾದ ವೇಣುಗೋಪಾಲ ಮಾರ್ಲ, ತಾರಾನಾಥ ಶೆಟ್ಟಿ, ಲೋಕನಾಥ ಶೆಟ್ಟಿ, ಶಾರದಾಮಣಿ, ಸರಿತಾ ಅಶೋಕ್, ಯು. ದೇವಪ್ಪ ನಾಯಕ್ ಉಪ್ಪಳಿಗೆ, ಸೋಮಪ್ಪ ನಾಕ್ ಕಡಬ, ಗಣೇಶ್ ಅತ್ತಾವರ, ಭವಾನಿಶಂಕರ್ ಶೆಟ್ಟಿ, ಅಶೋಕ್ ಕುಮಾರ್ ಯು.ಎಸ್., ಜಯಪ್ರಕಾಶ್ ರೈ. ಎನ್, ಎಂ. ಉಗ್ಗಪ್ಪ ಶೆಟ್ಟಿ, ಕರುಣಾಕರ ಜೆ. ಉಚ್ಚಿಲ, ಮೋನಪ್ಪ ಪೂಜಾರಿ ಕೆರೆಮನೆ ಕಾವು, ಚಾರ್ಟರ್ಡ್ ಅಕೌಂಟೆಂಟ್ ಬಾಲಸುಬ್ರಹ್ಮಣ್ಯ ಎನ್. ಉಪಸ್ಥಿತರಿದ್ದರು.
ಶ್ರದ್ಧಾ ಜೆ. ಶೆಟ್ಟಿ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ ಸ್ವಾಗತಿಸಿದರು. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲು ವರದಿ ವಾಚನ ನಡೆಸಿದರು. ನಿರ್ದೇಶಕ ಗಣಪತಿ ಭಟ್ ಸೇರಾಜೆ ವಂದಿಸಿದರು. ಪುತ್ತೂರು ಶಾಖಾ ವ್ಯವಸ್ಥಾಪಕಿ ಪವಿತ್ರ ಎನ್. ಕಾರ್ಯಕ್ರಮ ನಿರೂಪಿಸಿದರು.