ಭಾರತದ ನಂಬರ್ 1 ಹಾಳೆ ತಟ್ಟೆ ರಫ್ತು ಸಂಸ್ಥೆ ʼಅಗ್ರಿಲೀಫ್ʼ ನಿಡ್ಲೆಯಲ್ಲಿ ಶುಭಾರಂಭ

0

ಹೊಸತನ ರೂಪಿಸುವ ಕಾರ್ಯ ಮಾಡಿದಾಗ ಸ್ವಾವಲಂಬಿಯಾಗಲು ಸಾಧ್ಯ – ಶರಣ ಬಸಪ್ಪ

ಪುತ್ತೂರು: ಆಧುನಿಕ ಜಗತ್ತಿನಲ್ಲಿ ಎಲ್ಲರಿಗೂ ಸರಕಾರವಾಗಲೀ ಖಾಸಗಿಯವರಾಗಲೀ ಉದ್ಯೋಗ ನೀಡಲು ಸಾಧ್ಯವಿಲ್ಲ. ಆಗ್ರಿಲೀಫ್‌ನಂತಹ ಸಂಸ್ಥೆಗಳು ಏನಾದರೂ ಭರವಸೆ ಇಟ್ಟು ಹೊಸತನ ರೂಪಿಸುವಂತಹ ಕಾರ್ಯ ಮಾಡಿದಾಗ ಸಮಾಜದಲ್ಲಿ ಉದ್ಯೋಗ ಸೃಷ್ಠಿಯಾಗಿ ಸ್ವಾವಲಂಬಿಯಾಗಲು ಸಾಧ್ಯವಾಗುತ್ತದೆ. ಗುಣಮಟ್ಟದ ಜೊತೆಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದನೆ ಮಾಡುವಂತಹ ನಿಟ್ಟಿನಲ್ಲಿ ಸಂಸ್ಥೆಗಳು ಕಾರ್ಯ ನಿರ್ವಹಿಸಿದಾಗ ಯುವ ಜನತೆಗೆ ಪ್ರೇರಣೆಯಾಗುತ್ತದೆ ಎಂದು ರಾಜ್ಯ ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆ ಖಾತೆಯ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ಬೆಳ್ತಂಗಡಿ ನಿಡ್ಲೆಯ ಬರಂಗಾಯದಲ್ಲಿ ಆರಂಭಗೊಂಡಿರುವ ಭಾರತದ ನಂಬರ್ ಒನ್ ಹಾಳೆ ತಟ್ಟೆ ರಫ್ತು ಸಂಸ್ಥೆಯಾಗಿರುವ `ಅಗ್ರಿಲೀಫ್ ಎಕ್ಸ್ಪೋರ್ಟ್ಸ್’ ಅನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಸಿಗುವಂತಹ ಕಚ್ಛಾ ವಸ್ತುಗಳನ್ನು ಯಾವ ರೀತಿ ಉಪಯೋಗ ಮಾಡಬೇಕು ಎಂಬುದನ್ನು ಆಲೋಚಿಸಿ ಯಾವ ರೀತಿಯಲ್ಲಿ ಅದಕ್ಕೆ ಮಾರುಕಟ್ಟೆ ಒದಗಿಸಬೇಕು ಎಂಬ ನಿಟ್ಟಿನಲ್ಲಿ ಈಗಾಗಲೇ ಈ ಸಂಸ್ಥೆಯನ್ನು ಆರಂಭಿಸಿದ್ದಾರೆ. ಈ ಫ್ಯಾಕ್ಟರಿ ಎಲ್ಲಾ ರೀತಿಯಲ್ಲೂ ಮಾದರಿಯಾಗಿದೆ. ನಾವು ಮಾಡುವಂತಹ ಪದಾರ್ಥಗಳು ಕೂಡ ಬಾರಿ ಗುಣಮಟ್ಟದಿಂದ ಕೂಡಿದಾಗ ಮಾತ್ರ ಅದಕ್ಕೆ ಬೇಡಿಕೆ ಸಿಗುತ್ತದೆ ಎಂದರು. ಭಾರತದ ನಂಬರ್ 1 ಹಾಳೆತಟ್ಟೆ ರಫ್ತು ಸಂಸ್ಥೆಯಾಗಿ ಅಗ್ರಿಲೀಫ್ ಬೆಳೆಯಲಿ ಎಂದು ಅವರು ಹಾರೈಸಿದರು.

ಅಗ್ರಿಲೀಫ್ ಸಂಸ್ಥೆಯ ಉತ್ಪಾದನೆ ಅಂತಾರಾಷ್ಟ್ರೀಯ ಮಟ್ಟಕ್ಕೆ ರಫ್ತಾಗುವುದು ನಮಗೆ ಹೆಮ್ಮೆ- ಹರೀಶ್ ಪೂಂಜ:
ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ, ಒಂದು ಉದ್ಯಮ ಪ್ರಾರಂಭ ಮಾಡಬೇಕಾದರೆ ಅದರ ಹಿಂದೆ ಪಟ್ಟಂತಹ ಶ್ರಮವನ್ನು ಮತ್ತು ಅವರ ಇಚ್ಛಾಶಕ್ತಿಯನ್ನು ನಾವು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬೇಕು. ಒಂದು ಉದ್ಯಮವನ್ನು ಪ್ರಾರಂಭ ಮಾಡಬೇಕಾದರೆ ಮೊದಲು ನಾನು ಇದನ್ನು ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಇರಬೇಕು. ಆಗ ಮಾತ್ರ ಯಶಸ್ವಿ ಉದ್ಯಮಿಯಾಗಿ ಬೆಳೆಯಲು ಸಾಧ್ಯ. ಅಂತಹ ಯಶಸ್ವಿ ಉದ್ಯಮಿಗಳ ಪಟ್ಟಿಯಲ್ಲಿ ಇವತ್ತು ಅಗ್ರಿಲೀಫ್ ಸಂಸ್ಥೆ ಮುಂಚೂಣಿಯಲ್ಲಿದೆ. ಈ ಹಳ್ಳಿಯಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ ರಫ್ತಾಗುವುದು ನಮಗೆ ಹೆಮ್ಮೆ ತಂದಿದೆ ಎಂದರು. ನನ್ನ ಉತ್ಪನ್ನ ಮೊದಲ ಸರದಿಯಲ್ಲಿ ಗ್ರಾಹಕರಿಗೆ ತಲುಪಬೇಕೆಂಬ ನಿಟ್ಟಿನಲ್ಲಿ ಈ ಸಂಸ್ಥೆ ಕೆಲಸ ಮಾಡುತ್ತದೆ ಎಂದು ಸಂಸ್ಥಾಪಕ ಅವಿನಾಶ್ ರಾವ್ ಹೇಳಿದ್ದಾರೆ, ಇಡೀ ದೇಶದಲ್ಲಿ 600, 700 ಸಂಸ್ಥೆಗಳಿವೆ. ಇಲ್ಲಿಯ ಉತ್ಪನ್ನಗಳು ಯಾವುದೇ ಕಾರಣಕ್ಕೂ ವಾಪಸ್ ಬಂದಿಲ್ಲ. ನಮ್ಮ ಕ್ವಾಲಿಟಿಯಲ್ಲಿ ನಾವು ಇಂಪೋರ್ಟ್ ಮಾಡುವ ಉತ್ಪನ್ನ ಆರು ಸಂಸ್ಥೆಯಲ್ಲಿ ನಮ್ಮ ಅಗ್ರಲೀಫ್ ಸಂಸ್ಥೆ ಒಂದು ಎಂದು ಮೈಕಲ್ ಡಿ. ವರ್ಕ್ ಕೂಡಾ ನನ್ನಲ್ಲಿ ಹೇಳಿದ್ದಾರೆ. ಇದು ಅತ್ಯುತ್ತಮ ಸಂಸ್ಥೆಯಾಗಲಿ. ದೇಶದಲ್ಲಿ ನಂ.1 ಸಂಸ್ಥೆಯಾಗಿ ಬೆಳೆಯಲಿ, ಈ ಸಂಸ್ಥೆಯಲ್ಲಿ 200ಕ್ಕಿಂತ ಹೆಚ್ಚು ನೌಕರರು, ಸಿಬ್ಬಂದಿಗಳು ಇದ್ದಾರೆ. ಮುಂದಿನ ದಿನದಲ್ಲಿ ಈ ಸಂಸ್ಥೆಯಲ್ಲಿ ಸಾವಿರಾರು ಮಂದಿಗೆ ಉದ್ಯೋಗ ಕೊಡುವಂತಹ ಸಂಸ್ಥೆಯಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದ ಅವರು ಉಜಿರೆಯಲ್ಲಿ ಕೈಗಾರಿಕಾ ವಲಯಕ್ಕೆ 100 ಎಕ್ರೆ ಜಾಗ ಮಂಜೂರು ಮಾಡಲು ಈಗಾಗಲೇ ಸಣ್ಣ ಕೈಗಾರಿಕಾ ಸಚಿವರಿಗೆ ಮನವಿ ಮಾಡಿದ್ದೇನೆ. ಉಜಿರೆಯಲ್ಲಿ ಸಣ್ಣ ಕೈಗಾರಿಕಾ ವಲಯಕ್ಕೆ ಜಾಗವನ್ನು ಕಾಯ್ದಿರಿಸಲಾಗಿದೆ. ಇದರ ಪ್ರಕ್ರಿಯೆ ಆಗಿದೆ. ಇದರಿಂದ ಸಾವಿರಾರು ಮಂದಿಗೆ ಉದ್ಯೋಗ ಸಿಗುವಂತಾಗಲಿ. ಹೊಸ ಉದ್ಯಮಗಳಿಗೆ ಶಕ್ತಿಯಾಗಲಿ ಸಣ್ಣ ಕೈಗಾರಿಕೆ ವಲಯ ಆಗಬೇಕು. ಸಚಿವರು ತಕ್ಷಣ ಉಜಿರೆಯಲ್ಲಿ ಒಂದು ಸಣ್ಣ ಕೈಗಾರಿಕೆ ವಲಯ ಪ್ರದೇಶವನ್ನು ನಿರ್ಮಾಣ ಮಾಡಲು ಸಹಕಾರ ಮತ್ತು ಭರವಸೆಯನ್ನು ನೀಡಿದ್ದಾರೆ ಎಂದರು.

ಎಲ್ಲಾ ಸೇವೆ ಸುಕೋ ಸಹಕಾರಿ ಸಂಘದಲ್ಲಿದೆ – ಮನೋಹರ್ ಮಸ್ಕಿ:
ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಸ್‌ಸ್‌ಯುಸಿಒ ಬ್ಯಾಂಕ್ ಅಧ್ಯಕ್ಷ ಮನೋಹರ್ ಮಸ್ಕಿ ಮಾತನಾಡಿ, ಕಳೆದ 30 ವರ್ಷದಲ್ಲಿ ವಾಣಿಜ್ಯ ಬ್ಯಾಂಕ್ ನೀಡುವ ಎಲ್ಲಾ ಸೇವೆ ಸುಕೋ ಸಹಕಾರಿ ಸಂಘದಲ್ಲಿದೆ. ನಮ್ಮ ಸಹಕಾರಿಯಲ್ಲಿ ಸಂಜೆ 6 ಗಂಟೆವರೆಗೂ ಹಣ ಪಡೆಯಬಹುದು. ರೈತರೊಟ್ಟಿಗೆ ನಿಂತು ಸಹಕಾರ ನೀಡಿದ್ದೇವೆ. ಕೆರೆ ತೋಡಲು ಮತ್ತು ಮೀನು ಸಾಕಲೂ ಸಾಲ ನೀಡಿದ್ದೇವೆ. ಹಾಳೆ ತಟ್ಟೆ ಸಂಗ್ರಹಕ್ಕೂ ಸಾಲ ನೀಡಿದ್ದೇವೆ ಎಂದರು. ಮುಖ್ಯ ಅತಿಥಿಗಳಾಗಿದ್ದ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಶುಭ ಹಾರೈಸಿದರು.

30 ಕೋಟಿ ಹಾಳೆ ತಟ್ಟೆ ಉತ್ಪಾದಿಸುವ ಗುರಿ – ಅವಿನಾಶ್ ರಾವ್:
ಅಗ್ರಿಲೀಪ್ ಸಂಸ್ಥೆಯ ಸಂಸ್ಥಾಪಕ ಅವಿನಾಶ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಗ್ರಾಮದಲ್ಲಿ ನನಗಿಂತ ಜಾಸ್ತಿ ನನ್ನ ತಂದೆಯವರ ಪರಿಚಯ ಇದೆ. ನೂತನ ಸಂಸ್ಥೆ ಭಾರತದಲ್ಲಿ ನಂಬರ್ 1 ಆಗಿ ಬೆಳೆಯಲು ಇದರಲ್ಲಿ ಎಲ್ಲರ ಪಾತ್ರವಿದೆ. ಈ ಹಳ್ಳಿಗೆ ಹೈ ಟೆನ್ಶನ್ ವಿದ್ಯುತ್ ಬರಲು ಧರ್ಮಸ್ಥಳದ ಹರ್ಷೇಂದ್ರ ಕುಮಾರ್‌ರವರು, ಶಾಸಕ ಹರೀಶ್ ಪೂಂಜರವರು ಕಾರಣ ಎಂದರು. ವಿದೇಶದಿಂದ ಆಗಮಿಸಿದ ಗ್ರಾಹಕ ಮೈಕಲ್ ಡಿ ವರ್ಕ್ ಕಳೆದ 3 ವರ್ಷದಿಂದ ನಮ್ಮೊಟ್ಟಿಗೆ ಇದ್ದುದರಿಂದ ನಮ್ಮ ಸಂಸ್ಥೆ ನಂಬರ್ 1 ಆಗಿ ಬೆಳೆಯಲು ಸಾಧ್ಯವಾಯಿತು. ಗ್ರಾಹಕ ಒಂದು ಸಂಸ್ಥೆಯಲ್ಲಿ ಹತ್ತಾರು ಜನರು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಆ ಸಂಸ್ಥೆ ಚೆನ್ನಾಗಿ ಬೆಳೆಯಲು ಸಾಧ್ಯ, ಇದಕ್ಕೆ ನಮ್ಮ ಸಂಸ್ಥೆಯೇ ಸಾಕ್ಷಿ. ಈಗ 4.50 ಕೋಟಿ ಹಾಳೆ ತಟ್ಟೆ ಉತ್ಪಾದಿಸಲಾಗುತ್ತದೆ. ಈಗ ಅಳವಡಿಸಿದ ಮೆಷಿನ್‌ನಿಂದ ಮುಂದಿನ ದಿನದಲ್ಲಿ 20ರಿಂದ 30 ಕೋಟಿ ಉತ್ಪಾದಿಸುವ ಗುರಿ ಹೊಂದಿದ್ದೇವೆ ಎಂದರು. ಟೀಮ್ ವರ್ಕ್ ಹಾಗೂ ಧೈರ್ಯದಿಂದ ಕೆಲಸ ಮಾಡುವ ಸಿಬಂದಿ ವರ್ಗ ಇದಕ್ಕೆ ಕಾರಣ ಎಂದು ಅವರು ಹೇಳಿದರು.

ನಮ್ಮ ಧಾರವಾಡ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು – ಹರ್ಷೇಂದ್ರ ಕುಮಾರ್
ಶ್ರೀ ಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಮಾತನಾಡಿ ಹಲವು ವರ್ಷಗಳ ಹಿಂದೆ ನಾವು ಕ್ಷೇತ್ರದಲ್ಲಿ ಊಟಕ್ಕೆ ಹಾಳೆಯನ್ನು ಉಪಯೋಗಿಸುತ್ತಿದ್ದೇವೆ. ಆ ಸಮಯದಲ್ಲಿ ನಿಡ್ಲೆಯಲ್ಲಿ ಸೇತುವೆ ಇರಲಿಲ್ಲ. ಅರಸಿನಮಕ್ಕಿ, ಕೊಕ್ಕಡ, ರೆಖ್ಯ, ಶಿಶಿಲದಿಂದ ಉಗ್ರಾಣಕ್ಕೆ ಅಡಿಕೆ ಹಾಳೆಯನ್ನು ಸಂಗ್ರಹಿಸಿ ತರುತ್ತಿದ್ದೆವು. ಆಗ ಒಂದು ಅಡಿಕೆ ಹಾಳೆಗೆ 20 ಪೈಸೆ ಇತ್ತು. ಜೂನ್, ಜುಲೈಯಲ್ಲಿ ಮಳೆಗಾಲವಾದ್ದರಿಂದ ಹಾಳೆ ಸಂಗ್ರಹಿಸಿ ಇಡುತ್ತಿದ್ದರು. ಆಗ ಹಾಳೆ ತಟ್ಟೆ ಮಾಡುವವರು ಇರಲಿಲ್ಲ. ಜನಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ ನಾವು ಊಟಕ್ಕೆ ಎಲೆ ಬಳಕೆ ಮಾಡಿದ್ದೇವೆ. ಈಗ ಯುವಕರು ಸೇರಿ ಒಂದು ಸಂಸ್ಥೆಯನ್ನು ಇಲ್ಲಿ ಸ್ಥಾಪಿಸಿದ್ದಾರೆ. ಇವರು ಧಾರಾವಾಡದಲ್ಲಿ ನಮ್ಮ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಕಲಿತವರು. ಇಂದು ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ಯಾವುದೇ ಸಂಸ್ಥೆ ಆರಂಭಿಸುವಾಗ ಸಲಹೆ ಕೇಳಿದರೆ ನೆಗೆಟಿವ್ ಹೇಳುತ್ತಾರೆ. ನಾವು ಹೇಳುವ ಸಲಹೆ ಉಚಿತ, ಸಮಸ್ಯೆ ಖಚಿತ ಎಂದು ಸಂಸ್ಥೆ ದೊಡ್ಡದಿದೆ ಎನ್ನುತ್ತಾರೆ. ಆದರೆ ಅದರ ಹಿಂದಿನ ಸಮಸ್ಯೆ ಸಂಸ್ಥೆ ಆರಂಭಿಸಿದವನಿಗೆ ಮಾತ್ರ ಗೊತ್ತು. ಸಂಸ್ಥೆಯಲ್ಲಿ ದುಡಿಯುವ ನೌಕರರೇ ಶಕ್ತಿ. ನೌಕರರು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮಾತ್ರ ಸಂಸ್ಥೆ ಬೆಳೆಯುತ್ತದೆ ಎಂದು ಹೇಳಿದರು.

100 ಕೋಟಿ ರೂ ವ್ಯವಹಾರ ನಡೆಸಲಿ – ಶಶಿಧರ ಶೆಟ್ಟಿ
ಬರೋಡದ ಉದ್ಯಮಿ ಶಶಿಧರ ಶೆಟ್ಟಿ ಮಾತನಾಡಿ, ಈ ಸಂಸ್ಥೆ ಅಭಿವೃದ್ಧಿಯಾಗಬೇಕಾದರೆ ತಾವುಗಳು ಇದು ತಮ್ಮದೇ ಸಂಸ್ಥೆ ಎಂದು ತಿಳಿದುಕೊಳ್ಳಬೇಕು. ಆಗ ಸಂಸ್ಥೆ ಬೆಳಗುತ್ತದೆ. ಸುಮಾರು 200 ಜನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೈಕಲ್ ಡಿ.ವರ್ಕ್ರವರ ಶ್ರಮ ಇಲ್ಲಿ ಸ್ಮರಿಸಬೇಕಾಗುತ್ತದೆ. ಒಂದು ಸಂಸ್ಥೆ ಬೆಳೆಯಲು ಅದಕ್ಕೆ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರ ಶ್ರಮ ಅಗತ್ಯ. ನಾವು ಸಂಸ್ಥೆಗೆ ಉತ್ತಮ ಸಹಕಾರ ಕೊಡಬೇಕು. ಅದರ ಜೊತೆಗೆ ಸಂಸ್ಥೆಗೆ ಯಾವುದೇ ಕೆಟ್ಟ ಹೆಸರು ಬಾರದ ಹಾಗೆ ಸಹಕಾರ ನೀಡುವುದು ಜನರ ಕರ್ತವ್ಯವಾಗಿದೆ. ಇವತ್ತು ಈ ಸಂಸ್ಥೆ 20 ಕೋಟಿ ರೂ ವ್ಯವಹಾರ ಮಾಡಿದೆ. ಮುಂದಿನ ದಿನಗಳಲ್ಲಿ 100 ಕೋಟಿ ವ್ಯವಹಾರ ಮಾಡಲಿ ಎಂದರು.

LEAVE A REPLY

Please enter your comment!
Please enter your name here